ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಪತ್ರ ಬಳಕೆಗೆ ಒಲವು ತೋರದ ಸುಪ್ರೀಂ ಕೋರ್ಟ್‌

Published 16 ಏಪ್ರಿಲ್ 2024, 15:40 IST
Last Updated 16 ಏಪ್ರಿಲ್ 2024, 15:40 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆಗಳಲ್ಲಿ ಮತಪತ್ರಗಳ ಬಳಕೆಯನ್ನು ಮತ್ತೆ ಆರಂಭಿಸುವ ಅಥವಾ ಎಲ್ಲ ಮತಗಟ್ಟೆಗಳ ವಿವಿ–ಪ್ಯಾಟ್‌ (ಮತದಾನ ದೃಢೀಕರಣ ರಸೀದಿ ಯಂತ್ರ) ರಸೀದಿ ತಾಳೆ ಮಾಡುವ ಸಾಧ್ಯತೆಯ ಬಗ್ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಅನುಮಾನ ವ್ಯಕ್ತಪಡಿಸಿದೆ.

ಭಾರತದಲ್ಲಿ ಮತದಾನ ಪ್ರಕ್ರಿಯೆಯ ನಿರ್ವಹಣೆಯು ಬಹಳ ದೊಡ್ಡ ಕೆಲಸ, ಇದನ್ನು ಯುರೋಪಿನ ಯಾವುದೇ ದೇಶದಲ್ಲಿ ಅಳವಡಿಸಿಕೊಂಡಿರುವ ಮಾದರಿಗಳ ಜೊತೆ ಹೋಲಿಸಿ ನೋಡಲಾಗದು ಎಂದು ಕೂಡ ಕೋರ್ಟ್ ಹೇಳಿದೆ.

‘ಹಿಂದೆ ಆಗಿರುವುದನ್ನು ನಾವು ಮರೆತಿಲ್ಲ. ಮತಪತ್ರಗಳ ಬಳಕೆ ಇದ್ದಾಗ ಏನಾಗಿದೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ನೀವು ಅದನ್ನೆಲ್ಲ ಮರೆತಿರಬಹುದು. ಆದರೆ ನಾವು ಮರೆತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತ ಅವರು ಇದ್ದ ಪೀಠ ಹೇಳಿತು.

ಮತಗಟ್ಟೆಗಳನ್ನು ವಶಪಡಿಸಿಕೊಳ್ಳುತ್ತಿದ್ದ ಘಟನೆಗಳ ಬಗ್ಗೆ ಪೀಠ ಹೇಳುತ್ತಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ನ ಪರವಾಗಿ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದರು. ಆದರೆ, ತಾನು ಇನ್ನೂ ಹೆಚ್ಚಿನ ವ್ಯಾಪ್ತಿ ಹೊಂದಿರುವ ವಿಚಾರಗಳ ಬಗ್ಗೆ ಮಾತನಾಡಿರುವುದಾಗಿ ಪೀಠ ತಿಳಿಸಿತು. ‘ಮತಪತ್ರಗಳ ಬಳಕೆಯಲ್ಲಿ ಇರುವ ಲೋಪಗಳು ನಮಗೆಲ್ಲ ಗೊತ್ತಿವೆ’ ಎಂದು ಕೂಡ ಪೀಠವು ಹೇಳಿತು.

ಮತದಾರರಲ್ಲಿ ಹೆಚ್ಚಿನವರು ಇವಿಎಂ ಬಗ್ಗೆ ನಂಬಿಕೆ ಹೊಂದಿಲ್ಲ ಎಂದು ಭೂಷಣ್ ಹೇಳಿದರು. ಇವಿಎಂಗಳಲ್ಲಿ ಬಳಕೆಯಾಗಿರುವ ಚಿಪ್‌ಗಳಲ್ಲಿ ಇರುವ ಸೋರ್ಸ್ ಕೋಡ್ ತೋರಿಸಿಲ್ಲದ ಕಾರಣ ಇವಿಎಂಗಳ ಬಗ್ಗೆ ಅನುಮಾನ ಹೆಚ್ಚಾಗಿದೆ ಎಂದು ಭೂಷಣ್ ತಿಳಿಸಿದರು.

ಜರ್ಮನಿಯಲ್ಲಿ ಇವಿಎಂ ಬಳಕೆಯನ್ನು ಕೈಬಿಟ್ಟು, ಮತಪತ್ರಗಳ ಬಳಕೆಗೆ ಅಲ್ಲಿನ ಸಾಂವಿಧಾನಿಕ ನ್ಯಾಯಾಲಯವೊಂದು ಹೇಳಿರುವುದನ್ನು ಭೂಷಣ್ ಉಲ್ಲೇಖಿಸಿದರು. ಸುಬ್ರಮಣಿಯನ್ ಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ವಿವಿ–ಪ್ಯಾಟ್ ಬಳಕೆಗೆ ಒತ್ತು ನೀಡಿರುವುದನ್ನು ಕೂಡ ಉಲ್ಲೇಖಿಸಿದರು.

‘ಜರ್ಮನಿಯ ಜನಸಂಖ್ಯೆ ಎಷ್ಟು? ಯುರೋಪಿನ ಯಾವುದೇ ದೇಶದ ಜೊತೆ ನಮ್ಮ ದೇಶವನ್ನು ಹೋಲಿಸಲಾಗದು. ನನ್ನ ರಾಜ್ಯ ಪಶ್ಚಿಮ ಬಂಗಾಳದ ಜನಸಂಖ್ಯೆಯೇ ಯುರೋಪಿನ ಯಾವುದೇ ದೇಶದ ಜನಸಂಖ್ಯೆಗಿಂತ ಹೆಚ್ಚಿದೆ. ಯಾರಾದರೂ ಒಬ್ಬರ ಮೇಲೆ ನಾವು ವಿಶ್ವಾಸ ಇರಿಸಬೇಕಾಗುತ್ತದೆ. ಇಂತಹ ವ್ಯವಸ್ಥೆಯನ್ನು ಅಡಿಮೇಲು ಮಾಡುವ ಯತ್ನ ಬೇಡ’ ಎಂದು ನ್ಯಾಯಮೂರ್ತಿ ದತ್ತ ಹೇಳಿದರು. ವಿಚಾರಣೆಯು ಗುರುವಾರ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT