ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಹಿತಕ್ಕಿಂತ ಸ್ವಹಿತವೇ ಮುಖ್ಯ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ
Last Updated 31 ಮಾರ್ಚ್ 2019, 14:45 IST
ಅಕ್ಷರ ಗಾತ್ರ

ಕೋಲಾರ: ‘ಕ್ಷೇತ್ರದ ಸಂಸದ ಕೆ.ಎಚ್.ಮುನಿಯಪ್ಪ ರಾಜ್ಯ ಸಮ್ಮಿಶ್ರ ಸರ್ಕಾರದ ರೋಲ್‌ ಮಾಡಲ್. ಇವರಿಗೆ ಜನ ಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿದೆ’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀವ್ರ ವಾಗ್ದಾಳಿ ನಡೆಸಿದರು.

ಇಲ್ಲಿ ಭಾನುವಾರ ನಡೆದ ಬಿಜೆಪಿಯ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ‘ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದರೂ ಹರಿದ ಬಟ್ಟೆ ಹಾಕಿಕೊಂಡು ತಾವು ಹೀಗೆ ಇರುವುದೆಂದು ಹೇಳಿಕೊಳ್ಳುತ್ತಾರೆ. ಆದರೆ, ಅವರ ಆಸ್ತಿ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ’ ಎಂದು ಆರೋಪಿಸಿದರು.

‘ಮುನಿಯಪ್ಪ 7 ಬಾರಿ ಸಂಸದರಾದರೂ ಜಿಲ್ಲೆಯ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಜಾತಿ- ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಗಲಭೆ ಸೃಷ್ಟಿಸಿದ್ದಾರೆ. ಕೇಂದ್ರ ಸಚಿವರಾಗಿದ್ದರೂ ಜಿಲ್ಲೆಗೆ ಕೈಗಾರಿಕೆಗಳನ್ನು ತಂದು ನಿರುದ್ಯೋಗ ಸಮಸ್ಯೆ ನಿವಾರಿಸಿಲ್ಲ. ಇಂತಹ ವ್ಯಕ್ತಿಯನ್ನು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸಲು ಮತದಾರರು ಕಮಲಕ್ಕೆ ಮತ ಹಾಕಬೇಕು’ ಎಂದರು.

‘ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಧಿಕಾರ ಸಿಕ್ಕಿದ್ದರೂ ಸ್ವತಂತ್ರವಾಗಿ ಆಡಳಿತ ನಡೆಸಲು ಅನುಮತಿ ಸಿಕ್ಕಿಲ್ಲ. ತಾನು ರಿಮೋಟ್ ಕಂಟ್ರೋಲ್‌ ನಿಯಂತ್ರಣದಲ್ಲಿದ್ದೇನೆ ಎಂದು ಅವರು ಹೋದ ಕಡೆಯಲೆಲ್ಲಾ ಕಣ್ಣೀರು ಹಾಕುತ್ತಾರೆ. ಕಣ್ಣೀರು ಸುರಿಸುವುದು ಬಿಟ್ಟರೆ ಅಭಿವೃದ್ಧಿ ಹೇಗೆ ಮಾಡಬೇಕೆಂಬ ಅರಿವಿಲ್ಲ’ ಎಂದು ಟೀಕಿಸಿದರು.

‘ಹಿಂದಿನ ಯುಪಿಎ ಸರ್ಕಾರಕ್ಕೆ ಮಹಿಳೆಯರ ಸಮಸ್ಯೆಗಳು ಕಾಣಲಿಲ್ಲ. ಕಾಂಗ್ರೆಸ್ ಮುಖಂಡರು ಮನೆಗಳಲ್ಲಿ ಮೃಷ್ಟಾನ್ನ ಭೋಜನ ಮಾಡುತ್ತಿದ್ದರೆ ಮಹಿಳೆಯರು ಒಲೆ ಊದುತ್ತಾ ಕಷ್ಟ ಪಡುತ್ತಿದ್ದರೂ ಸಮಸ್ಯೆ ನಿವಾರಣೆಗೆ ಮನಸ್ಸು ಬರಲಿಲ್ಲ. ಆದರೆ, ಮೋದಿ ಸರ್ಕಾರ ಮಹಿಳೆಯರನ್ನು ಹೊಗೆ ಗೂಡಿನಿಂದ ಮುಕ್ತ ಮಾಡಲು ಉಜ್ವಲ ಯೋಜನೆಯಡಿ 30 ಲಕ್ಷ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದೆ’ ಎಂದು ವಿವರಿಸಿದರು.

ಭ್ರಷ್ಟರ ಪೋಷಣೆ: ‘ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರು ಐ.ಟಿ ದಾಳಿ ನಡೆದರೆ ಒಟ್ಟಿಗೆ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಐ.ಟಿ ಅಧಿಕಾರಿಗಳು ಭ್ರಷ್ಟ ಗುತ್ತಿಗೆದಾರರು ಹಾಗೂ ಎಂಜಿನಿಯರ್‌ಗಳ ಮೇಲೆ ದಾಳಿ ನಡೆಸುತ್ತಾರೆ. ಇಂತಹ ಭ್ರಷ್ಟರನ್ನು ಪೋಷಿಸುವುದೇ ಸಮ್ಮಿಶ್ರ ಸರ್ಕಾರದ ಉದ್ದೇಶ. ಕಾಂಗ್ರೆಸ್, ಜೆಡಿಎಸ್ ನಾಯಕರ ಬಳಿ ಅಕ್ರಮ ಆಸ್ತಿ ಇರುವುದರಿಂದ ಬೀದಿಗಿಳಿದು ಧರಣಿ ನಡೆಸಿದ್ದಾರೆ’ ಎಂದು ಆರೋಪಿಸಿದರು.

‘ಆಯೋಧ್ಯೆಗೆ ಹೋಗುವ ಕಾಂಗ್ರೆಸ್ ಮುಖಂಡರು ರಾಮಮಂದಿರಕ್ಕೆ ಹೋಗುವುದಿಲ್ಲ. ಅವರಿಗೆ ಅಲ್ಪಸಂಖ್ಯಾತರ ಮತಗಳು ಕೈತಪ್ಪುತ್ತವೆ ಎಂಬ ಭಯ. ಮತ ಗಳಿಕೆಗಾಗಿ ಕಾಂಗ್ರೆಸ್‌ ದುರುಪಯೋಗಪಡಿಸಿಕೊಂಡಿದೆ. ರಾಮನೇ ಇಲ್ಲ ಎಂದು ಕೋರ್ಟ್‌ಗ ಪ್ರಮಾಣಪತ್ರ ಸಲ್ಲಿಸಿರುವ ಕಾಂಗ್ರೆಸ್‌ನವರು ಈಗ ಗಲ್ಲಿ ಗಲ್ಲಿಯಲ್ಲೂ ರಾಮ ಜಪ ಮಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಸ್ವಾಭಿಮಾನದ ಬದುಕು: ‘ಕೇಂದ್ರವು ರಾಜ್ಯದಲ್ಲಿ 1.40 ಲಕ್ಷ ಜನಧನ ಖಾತೆ ಆರಂಭಕ್ಕೆ ಅವಕಾಶ ನೀಡಿದೆ. ಮುದ್ರಾ ಯೋಜನೆಯಡಿ 1.30 ಲಕ್ಷ ಯುವಕರಿಗೆ ₹ 56 ಸಾವಿರ ಕೋಟಿ ಅನುದಾನ ನೀಡಿ ಉದ್ಯೋಗಾವಕಾಶ ಕಲ್ಪಿಸಿದೆ. ಜತೆಗೆ ರಾಜ್ಯದಲ್ಲಿ 49 ಲಕ್ಷ ಮನೆಗಳಿಗೆ ಶೌಚಾಲಯ ಕಟ್ಟಿಸಿಕೊಟ್ಟು ಮಹಿಳೆಯರ ಮಾನ ರಕ್ಷಣೆ ಮಾಡಿದೆ. ಆ ಮೂಲಕ ಎಲ್ಲಾ ವರ್ಗದ ಜನರು ಸ್ವಾಭಿಮಾನದಿಂದ ಬದುಕುವಂತೆ ಮಾಡಿದೆ’ ಎಂದು ಹೇಳಿದರು.

‘ಕೇಂದ್ರವು ರೈತರಿಗಾಗಿ ಕಿಸಾನ್ ಆರೋಗ್ಯ ಕಾರ್ಡ್ ವಿತರಿಸಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ. 12 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ತಲಾ ₹ 6 ಸಾವಿರ ಪರಿಹಾರ ನೀಡಲು ಕ್ರಮ ಕೈಗೊಂಡಿದೆ. ಆದರೆ, ರಾಜ್ಯ ಸರ್ಕಾರ ಈವರೆಗೂ ಫಲಾನುಭವಿ ರೈತರ ಪಟ್ಟಿ ಸಲ್ಲಿಸಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT