ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆ ಮಗಳು ನಾನು; ಸಂಸತ್ತಿನಲ್ಲಿ ಧ್ವನಿಯಾಗುವೆ: ಸುನೀತಾ ದೇವಾನಂದ ಚವ್ಹಾಣ ಮನದಾಳ

ಜೆಡಿಎಸ್ ಅಭ್ಯರ್ಥಿ
Last Updated 30 ಏಪ್ರಿಲ್ 2019, 16:04 IST
ಅಕ್ಷರ ಗಾತ್ರ

ವಿಜಯಪುರ:ವಿಜಯಪುರ ಪರಿಶಿಷ್ಟ ಜಾತಿಯ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಪ್ರಚಾರದ ಅಬ್ಬರ ಹೆಚ್ಚಿದೆ. ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೆ ಅಭ್ಯರ್ಥಿಗಳು ಅಹೋರಾತ್ರಿ ಬೆವರು ಸುರಿಸುತ್ತಿದ್ದಾರೆ.

ಬಿಡುವಿಲ್ಲದ ಪ್ರಚಾರದ ನಡುವೆಯೂ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಡಾ.ಸುನೀತಾ ದೇವಾನಂದ ಚವ್ಹಾಣ ‘ಪ್ರಜಾವಾಣಿ’ ಜತೆ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದರು.

* ನೇರವಾಗಿ ಸಂಸತ್ತಿಗೆ ಸ್ಪರ್ಧೆ ಮಾಡಿದ್ದೀರಿ. ಚುನಾವಣಾ ಸಿದ್ಧತೆ ಹೇಗಿದೆ ?

ನಮ್ಮದು ರಾಜಕೀಯ ಮನೆತನ. ಪತಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ, ಶಾಸಕರಾಗಿಯೂ ಆಯ್ಕೆಯಾದವರು. ರಾಜಕೀಯದ ನಂಟಿದೆ. ಆಳ–ಅಗಲ ಗೊತ್ತಿದೆ. ಹಾಲಿ ಸಂಸದರು ಯಾವೊಂದು ಸಂದರ್ಭದಲ್ಲೂ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಇದರಿಂದ ಬೇಸರಗೊಂಡು ಸ್ಪರ್ಧೆಗೆ ಧುಮುಕಿದೆ.

* ರಾಜಕೀಯ ಪ್ರವೇಶ ಆಕಸ್ಮಿಕವೋ ?

ನಾಗಠಾಣ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಬೇಕು ಎಂದು ಬಯಸಿದ್ದೆ. ಈ ಹಿಂದೆಯೇ ಜಿಲ್ಲಾ ಪಂಚಾಯ್ತಿಗೆ ಸ್ಪರ್ಧಿಸಲು ಎಚ್‌.ಡಿ.ಕುಮಾರಸ್ವಾಮಿ, ಎಂ.ಬಿ.ಪಾಟೀಲ ಕೋರಿದ್ದರು. ಪತಿಗೆ ಸ್ಥಾನಮಾನ ಸಿಗಲಿ ಎಂದಷ್ಟೇ ಸುಮ್ಮನಿದ್ದೆ. ನನ್ನ ನಿರೀಕ್ಷೆ ನಿಜವಾಯ್ತು. ಅದರ ಬೆನ್ನಿಗೆ ಅಖಾಡಕ್ಕಿಳಿದೆ.

* ಕುಟುಂಬ ರಾಜಕಾರಣದ ಕರಿನೆರಳಿನಲ್ಲೇ ಇರ್ತಿರಾ ?

ಭಾರತೀಯ ಸಂಸ್ಕೃತಿ ಪಾಲಿಸುವಾಕೆ ನಾನು. ಪತಿ ದೇವೋಭವ ಎಂದುಕೊಂಡಿರುವೆ. ಅವರನ್ನು ಗೌರವಿಸುವೆ. ಆದರೆ ನನ್ನ ವಿಷಯದಲ್ಲಿ ನಾನು ಸ್ವತಂತ್ರಳು. ಆಡಳಿತವನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವುಳ್ಳವಳು. ಯಾರ ಹಸ್ತಕ್ಷೇಪಕ್ಕೂ ಅವಕಾಶ ಕೊಡಲ್ಲ.

* ನಿಮಗೆ ಏಕೆ ಮತ ಹಾಕಬೇಕು ?

ನಾನು ಪದವೀಧರ ಮಹಿಳೆಯಿದ್ದೇನೆ. ಸಂಸತ್ತಿನಲ್ಲಿ ಜನರ ಧ್ವನಿಯಾಗುವೆ. ಆ ಸಾಮರ್ಥ್ಯ ನನ್ನಲ್ಲಿದೆ. ಜನರೇ ವೋಟ್‌ ಹಾಕಲು ಮುಂದಾಗಿದ್ದಾರೆ.

* ಪ್ರಚಾರದಲ್ಲಿ ಟೀಕೆಗಳೇ ಹೆಚ್ಚಿವೆಯಲ್ಲ ?

ಟೀಕೆ ಮಾಡೋದು ನಮ್ಮ ಸಂಸ್ಕೃತಿಯಲ್ಲ. ಪ್ರತಿಸ್ಪರ್ಧಿಯಾಗಿರುವ ಹಿರಿಯರ ಬಗ್ಗೆ ಗೌರವವಿದೆ. ಆದರೆ ಜನರೇ ಬಿಜೆಪಿ ಅಭ್ಯರ್ಥಿಗೆ ಬಯ್ಯುತ್ತಿದ್ದಾರೆ. ಟೀಕಿಸುತ್ತಾರೆ. ಇಷ್ಟು ದಿನ ಎಲ್ಲಿ ಹೋಗಿದ್ದೀ. ನಿನ್ನ ಮುಖ ತೋರಿಸಿಲ್ಲ. ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಮತದಾರರೇ ಪ್ರಶ್ನಿಸುತ್ತಿದ್ದಾರೆ.

* ಜೆಡಿಎಸ್‌ ಕ್ಷೇತ್ರವನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲವಲ್ಲ ?

ಇದು ಸುಳ್ಳು. ಮಹಿಳೆಗೆ ಆದ್ಯತೆ ನೀಡಿದ್ದಾರೆ. ಮೊದಲ ಹಂತದ ಚುನಾವಣೆ ಏ.18ರಂದು ಮುಗಿಯಲಿದ್ದು, ಬಳಿಕ ಇಲ್ಲಿಗೆ ಬರಲಿದ್ದಾರೆ. ದೇವೇಗೌಡರು, ಕುಮಾರಣ್ಣ, ಬಸವರಾಜ ಹೊರಟ್ಟಿ, ಎಚ್‌.ಎನ್‌.ಕೋನರಡ್ಡಿ ಸೇರಿದಂತೆ ಇನ್ನಿತರರು ಸಾಥ್‌ ನೀಡಿದ್ದಾರೆ. ಸ್ಥಳೀಯರ ಬೆಂಬಲ ಬೆನ್ನಿಗಿದೆ.

* ಬೆಂಗಳೂರಿಗೆ ರೈಲು–ಬಸ್ಸಿಲ್ಲವಲ್ಲ ?

ಹಾಲಿ ಸಂಸದರ ವಿಫಲತೆ. ಮಲಗಿದ್ದರೆ ಕೆಲಸ ಹೇಗಾಗುತ್ತವೆ. ನಮ್ಮ ನೆರೆಯ ಕಲಬುರ್ಗಿಯನ್ನು ಒಮ್ಮೆ ನೋಡಿ. ಅಲ್ಲಿ ಯಾವ ರೀತಿ ಅಭಿವೃದ್ಧಿ ನಡೆದಿದೆ. ನಮ್ಮಲ್ಲಿ ಹೇಗಿದೆ. ಇದಕ್ಕೆ ಸಂಸದರೇ ಕಾರಣ. ಹೊಣೆಗಾರರು ಕೂಡ. ಮನೆ ಮುಂದೆ ರಸ್ತೆ ನಿರ್ಮಿಸಿಕೊಳ್ಳಲಾಗದವರು ಇನ್ನೇನು ಮಾಡ್ತಾರೆ ನೀವೇ ಹೇಳ್ರೀ.

* ತೋಟಗಾರಿಕೆ, ಕೈಗಾರಿಕೆ ಕುರಿತು ?

ದ್ರಾಕ್ಷಿ, ದಾಳಿಂಬೆ, ನಿಂಬೆಯ ಕಣಜವಿದು. ವಿದೇಶಕ್ಕೆ ನೇರ ರಫ್ತಾಗುವಂತೆ ವ್ಯವಸ್ಥೆ ರೂಪಿಸಲಾಗುವುದು. ಇದಕ್ಕೆ ಪೂರಕವಾದ ಕೈಗಾರಿಕೆ ಸ್ಥಾಪನೆಗೆ ಯತ್ನಿಸುವೆ. ಈ ಕುರಿತಂತೆ ಕೇಂದ್ರದಲ್ಲಿ ಧ್ವನಿ ಎತ್ತುವೆ. ಸ್ಥಳೀಯರಿಗೆ ಅನುಕೂಲ ಕಲ್ಪಿಸಿಕೊಡಲು ಶತ ಪ್ರಯತ್ನ ನಡೆಸುವೆ.

* ಮತದಾರರಿಗೆ ಯಾವ ಮಾತು ನೀಡ್ತೀರಿ ?

ಮನೆ ಮಗಳು ನಾನು. ಸಂಸಾರದ ಸಮಸ್ಯೆ ಸಹಜವಾಗಿಯೇ ಸ್ತ್ರೀಗೆ ಅರಿವಿರುವಂತೆ ಸಮಾಜದ ಸಮಸ್ಯೆಯೂ ಅರಿವಿರಲಿದೆ. ಮಹಿಳೆಯರಿಗೆ ಮೂಲ ಸೌಕರ್ಯ ಒದಗಿಸಿಕೊಡುವೆ. ಕ್ಷೇತ್ರದ ಮತದಾರರ ಧ್ವನಿಯಾಗಿರುವೆ.

* ಮೊದಲ ಸಂಸದನ ಕನಸೇ ಇಂದಿಗೂ ಈಡೇರಿಲ್ಲವಲ್ಲ ?

ಸುಳ್ಳು ಹೇಳಿ ಸಂಸದರಾಗಿ ಆಯ್ಕೆಯಾದ ಪುಣ್ಯಾತ್ಮರ ಫಲವಿದು. ಎಚ್ಚರವಿರದ, ಕನಸು ಕಾಣದ ಸಂಸದರ ವಿಫಲತೆಯಿದು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ನನ್ನ ಮೊದಲ ಆದ್ಯತೆ. ಕೇಂದ್ರ, ರಾಜ್ಯ ಸರ್ಕಾರದ ಸಹಕಾರದೊಂದಿಗೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT