ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕವಾಗಿ ನಾನು ಸೋತಿದ್ದೇನೆ, ಆದರೆ..ಮಗನ ಸೋಲಿನ ಬಗ್ಗೆ ಆನಂದ್‌ ಸಿಂಗ್‌ ಹೇಳಿಕೆ

Published 13 ಮೇ 2023, 10:34 IST
Last Updated 13 ಮೇ 2023, 10:34 IST
ಅಕ್ಷರ ಗಾತ್ರ

ಹೊಸಪೇಟೆ: ‘ಈ ಚುನಾವಣೆಯಲ್ಲಿ ತಾಂತ್ರಿಕವಾಗಿ ನಾನು ಸೋತಿದ್ದೇನೆ. ಇದು ನನ್ನ ಮಗನ ಸೋಲಲ್ಲ. ಆದರೆ, ಜನರ ತೀರ್ಪನ್ನು ನಾನು ಗೌರವಿಸುತ್ತೇನೆ’ ಎಂದು ಮಾಜಿಸಚಿವ ಆನಂದ್‌ ಸಿಂಗ್‌ ಹೇಳಿದರು.

ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರ ಮಗ ಸಿದ್ದಾರ್ಥ ಸಿಂಗ್‌ ಚುನಾವಣೆಯಲ್ಲಿ ಸೋಲು ಕಂಡ ನಂತರ ನಗರದಲ್ಲಿ ಶನಿವಾರ ಮಗನೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಎಚ್‌.ಆರ್‌. ಗವಿಯಪ್ಪ ಅವರಿಗೆ ಜನ ಆಶೀರ್ವಾದ ಮಾಡಿದ್ದಾರೆ. ಅವರಿಗೆ ನಮ್ಮ ಕಡೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ವಿರೋಧ ಪಕ್ಷವಾಗಿ ಸಕಾರಾತ್ಮಕವಾಗಿ ಕೆಲಸ ಮಾಡಲಾಗುವುದು. ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡುವೆ. ನಾವು ಲೇಔಟ್‌ ಮಾಡುತ್ತಿದ್ದೇವೆ ಎಂದು ಟೀಕಿಸುತ್ತಿದ್ದರು. ಅವರ ಅವಧಿಯಲ್ಲಿ ಎಷ್ಟು ಲೇಔಟ್‌ಗಳಾಗುತ್ತವೆ ನೋಡುತ್ತೇವೆ ಎಂದು ಹೇಳಿದರು.

ಶುದ್ಧ ಕುಡಿಯುವ ನೀರು ಪೂರೈಕೆ, ಒಳಚರಂಡಿ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಶ್ರಮ ವಹಿಸಲಾಗಿದೆ. ಆದರೆ, ಕೆಲವು ಕಡೆ ಹೆಚ್ಚು ಕಮ್ಮಿ ಆಗಿದೆ. ಈಗ ಗವಿಯಪ್ಪ ಅವರು ಯಾವ ರೀತಿ ಕೆಲಸ ಮಾಡುತ್ತಾರೆ ಎನ್ನುವುದನ್ನು ನಾವು ಎದುರು ನೋಡುತ್ತೇವೆ ಎಂದರು.

ವರ್ಷಕ್ಕೆ ಮೂರು ತಿಂಗಳು ಗ್ರಾಮ ವಾಸ

ಸಿದ್ದಾರ್ಥ ಸಿಂಗ್‌ ಮಾತನಾಡಿ, ವರ್ಷದಲ್ಲಿ ಮೂರು ತಿಂಗಳು ಗ್ರಾಮ ವಾಸ ಮಾಡಿ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಆನಂದ್‌ ಸಿಂಗ್‌ ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನ ನನಗೆ 70 ಸಾವಿರದ ಸಮೀಪ ಮತಗಳನ್ನು ಹಾಕಿದ್ದಾರೆ. ಸೋತರೂ ಕೂಡ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುವೆ. ಜನರಿಗಾಗಿ ನಮ್ಮ ಪಕ್ಷದ ಕಚೇರಿ, ರಾಣಿಪೇಟೆ ಕಚೇರಿಯ ಬಾಗಿಲುಗಳು ಸದಾ ತೆರೆದಿರುತ್ತವೆ. ಪಕ್ಷದ ಸಂಘಟನೆ ಜೊತೆಗೆ ವಕೀಲಿ ವೃತ್ತಿ ಕೂಡ ಮುಂದುವರೆಸುವೆ. ಸದಾ ಜನರೊಂದಿಗೆ ಸಂಪರ್ಕದಲ್ಲಿರುವೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪೆ ಅಂತಿಮ. ಜನರ ತೀರ್ಪು ಗೌರವಿಸುತ್ತೇನೆ. ಸೋಲು–ಗೆಲುವು ಸಹಜ. ನನ್ನ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತೇನೆ. ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಹೇಳುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT