ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನಿ ಮೋದಿಯ ಸಾವು ಬಯಸುವಷ್ಟು ನೀಚ‌ಮಟ್ಟಕ್ಕೆ‌ ಇಳಿದ ಕಾಂಗ್ರೆಸ್: ಬೊಮ್ಮಾಯಿ

Published 2 ಮೇ 2024, 13:33 IST
Last Updated 2 ಮೇ 2024, 13:33 IST
ಅಕ್ಷರ ಗಾತ್ರ

ಹಾವೇರಿ: ‘ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾವು ಬಯಸುವಷ್ಟು ನೀಚ‌ಮಟ್ಟಕ್ಕೆ‌ ಕಾಂಗ್ರೆಸ್‌ ಇಳಿದಿದೆ. ಯಾರೇ ಪ್ರತಿಸ್ಪರ್ಧಿ ಇದ್ದರೂ ಸಾವನ್ನು ಬಯಸಬಾರದು. ಕೀಳು ಮಟ್ಟದ ಟೀಕೆ ಮಾಡಿದಷ್ಟೂ ಮೋದಿ ದೊಡ್ಡವರಾಗುತ್ತಲೇ ಬಂದಿದ್ದಾರೆ. ಮತ್ತೆ ಮತ್ತೆ ಗೆದ್ದು ಬಂದಿದ್ದಾರೆ. ಮೋದಿಯವರ ಆಯಸ್ಸು ಹೆಚ್ಚಾಗುತ್ತದೆ’ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ತಾಲ್ಲೂಕಿನ ಕೋಣನತಂಬಿಗಿ ಗ್ರಾಮದಲ್ಲಿ ಗುರುವಾರ ಚುನಾವಣಾ ಪ್ರಚಾರದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಪ್ರಧಾನಿ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗಲ್ಲ’ ಎಂಬ ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿಕೆಯನ್ನು ಬೊಮ್ಮಾಯಿ ತೀವ್ರವಾಗಿ ಖಂಡಿಸಿದರು. ಮೋದಿ ಅಲೆ ಸುನಾಮಿಯಾಗಿ ಪರಿವರ್ತನೆ ಆಗಿದೆ. ಮೋದಿ ಅಲೆಯಲ್ಲಿ ಇವರು ಕೊಚ್ಚಿ ಹೋಗುತ್ತಾರೆ ಎಂದು ಕಿಡಿಕಾರಿದರು.

‘ಬಿಜೆಪಿ ಸಂವಿಧಾನ ಬದಲಾವಣೆ ಮಾಡಲು ಹೊರಟಿದೆ’ ಎಂಬ ಮಾಜಿ ಶಾಸಕ ನೆಹರು ಓಲೇಕಾರ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನೆಹರೂ ಓಲೇಕಾರ ಮೊದಲು ನಮ್ಮ ಪಕ್ಷದಲ್ಲಿ ಇದ್ದರು. ಆಗ ಸಂವಿಧಾನ ಬದಲಾಗಿತ್ತಾ? ಸಂವಿಧಾನ ಬದಲಾವಣೆ ಆಗುವ ಪ್ರಶ್ನೆಯೇ ಇಲ್ಲ. ನಾವು ಮೀಸಲಾತಿ ಹೆಚ್ಚು ಮಾಡಿದ್ದೇವೆ. ಹಾವೇರಿ ಅಭಿವೃದ್ಧಿಗೆ ಬೊಮ್ಮಾಯಿ ಏನೂ ಕೊಟ್ಟಿಲ್ಲ ಅಂತ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಹಾವೇರಿ ಜಿಲ್ಲೆಗೆ ಮೆಗಾ ಡೇರಿ, ಮೆಡಿಕಲ್ ಕಾಲೇಜು ತಂದಿದ್ದೇನೆ. ಮೆಗಾ ಮಾರ್ಕೆಟ್‌ ತಂದವರು, ಲಾ ಕಾಲೇಜು, ತೋಟಗಾರಿಕೆ ಕಾಲೇಜು ತಂದವರು ಯಾರು? ಎಲ್ಲಾ ಜನರ ಮುಂದೆ ಇದೆ. ಯಾರನ್ನು ಆಯ್ಕೆ ಮಾಡಬೇಕೆಂದು ಜನ ತೀರ್ಮಾನ ಮಾಡುತ್ತಾರೆ’ ಎಂದರು.‌

‘ಅನ್ನ, ನೀರು ಕೊಡದ ದರಿದ್ರ ಸರ್ಕಾರ’

ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಬರ ಬಿದ್ದಿದ್ದು ಈ ಸರ್ಕಾರ ರೈತರಿಗೆ ತನ್ನ ಖಜಾನೆಯಿಂದ ನಯಾಪೈಸೆ ನೀಡದೆ ಕೇಂದ್ರ ಸರ್ಕಾರದ ಕಡೆಗೆ ಬೆರಳು ಮಾಡಿ ತೋರಿಸುತ್ತದೆ. ಇದೊಂದು ಅನ್ನ, ನೀರು ಕೊಡದ ದರಿದ್ರ ಸರ್ಕಾರ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಮಂತ್ರಿಗಳೇ ನಿಮ್ಮ ಒಂದು ವರ್ಷದ ಸಾಧನೆ ಏನು? ರಾಜ್ಯ ಸರ್ಕಾರದ ಖಜಾನೆಯಿಂದ ಎಷ್ಟು ರೂಪಾಯಿ ಬರ ಪರಿಹಾರ ಕೊಟ್ಟಿದ್ದೀರಿ? ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಕಳೆದ ಹತ್ತು ತಿಂಗಳಿಂದ ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ನಡೆದಿಲ್ಲ. ಅಭಿವೃದ್ಧಿ ಮಾಡುವ ಉದ್ದೇಶ ಇವರಿಗಿಲ್ಲ. ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಗೆ ರಾಜ್ಯ ಸರ್ಕಾರದಿಂದ ಕೊಡುತ್ತಿದ್ದ ₹4 ಸಾವಿರ ಸ್ಥಗಿತಗೊಳಿಸಿದ್ದಾರೆ. ರೈತರ ಮಕ್ಕಳಿಗೆ ‘ವಿದ್ಯಾನಿಧಿ’ ಮಾಡಿದೆ. ಅದನ್ನು‌ ನಿಲ್ಲಿಸಿದರು. ಯಶಸ್ವಿನಿ ನಿಲ್ಲಿಸಿದರು. ಇವರಿಗೆ ರೈತರೆಂದರೆ ಅಲರ್ಜಿ, ಈ ರೈತ ವಿರೋಧಿ ಸರ್ಕಾರವನ್ನು ತೊಲಗಿಸಬೇಕು ಎಂದು ಹೇಳಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT