ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತಿಕ ಸಂಕಷ್ಟ | ಮೋದಿ ನಾಯಕತ್ವವೇ ಸೂಕ್ತ: ಜೈಶಂಕರ್

Published 15 ಏಪ್ರಿಲ್ 2024, 16:06 IST
Last Updated 15 ಏಪ್ರಿಲ್ 2024, 16:06 IST
ಅಕ್ಷರ ಗಾತ್ರ

ಬೆಂಗಳೂರು: ಭಯೋತ್ಪಾದನೆ ಮತ್ತು ಯುದ್ಧಗಳಿಂದಾಗಿ ಇಡೀ ವಿಶ್ವವೇ ಅತ್ಯಂತ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿಕೊಂಡಿದೆ. ಹಲವು ರಾಷ್ಟ್ರಗಳು ತೀವ್ರ ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿವೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ಭಾರತಕ್ಕೆ ನರೇಂದ್ರ ಮೋದಿ ಅವರ ನಾಯಕತ್ವ ಅತ್ಯಗತ್ಯ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಪ್ರತಿಪಾದಿಸಿದರು.

ಭಯೋತ್ಪಾದನೆ ಮತ್ತು ಯುದ್ಧಗಳಿಂದ ತತ್ತರಿಸುತ್ತಿರುವ ಭಾರತವನ್ನು ಅತ್ಯಂತ ಸುರಕ್ಷಿತವಾಗಿ ಮುನ್ನಡೆಸುತ್ತಿದ್ದಾರೆ. ಅಲ್ಲದೇ, ಆರ್ಥಿಕವಾಗಿಯೂ ಪುಟಿದೆದ್ದಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2014ಕ್ಕೂ ಹಿಂದೆ ದೇಶದ ಸ್ಥಿತಿ ಹೇಗಿತ್ತು? ಆಗ ಭಯೋತ್ಪಾದಕರು ಪದೇ ಪದೇ ಬಂದು ದಾಳಿ ನಡೆಸಿದರೂ ಅದಕ್ಕೆ ತಿರುಗೇಟು ನೀಡುವ ಅಥವಾ ತಡೆಯುವ ಯಾವುದೇ ಪ್ರಯತ್ನ ಮಾಡದೇ ಮೃದು ಧೋರಣೆ ಅನುಸರಿಸಲಾಗುತ್ತಿತ್ತು. ಮುಂಬೈ ಮೇಲೆ ದಾಳಿ ನಡೆದ ಸಂದರ್ಭದಲ್ಲಂತೂ, ಭಾರತ ಅಸಹಾಯಕ ಸ್ಥಿತಿಯಲ್ಲಿತ್ತು. ಮೋದಿಯವರು ಪ್ರಧಾನಿ ಆದ ಬಳಿಕ ದೇಶದಲ್ಲಿ ಭಯೋತ್ಪಾದಕರ ಆಟ ನಡೆಯುತ್ತಿಲ್ಲ ಎಂದು ಹೇಳಿದರು.

ಭಯೋತ್ಪಾದನೆ ನಿಗ್ರಹದ ಜತೆ ದೇಶದ ಎಲ್ಲ ಭಾಗಗಳಲ್ಲೂ ಗಡಿಗಳನ್ನು ಭದ್ರಗೊಳಿಸಲಾಗಿದೆ. ಈಗ ಇರುವ ಸವಾಲುಗಳೆಂದರೆ, ಸೈಬರ್‌ ಭದ್ರತೆ ಮತ್ತು ಸಾಗರೋತ್ತರ ಭದ್ರತೆ. ಇತ್ತೀಚೆಗೆ ಕೆಂಪು ಸಮುದ್ರ ಭಾಗದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಗೊತ್ತೇ ಇದೆ. ಇವೆಲ್ಲವನ್ನು ಗಮನದಲ್ಲಿಟ್ಟು ವಿದೇಶಾಂಗ ನೀತಿ ಮತ್ತು ಕಾರ್ಯತಂತ್ರವನ್ನು ನಿರ್ಧರಿಸಲಾಗುತ್ತದೆ ಎಂದರು.

ರಷ್ಯಾ ಮತ್ತು ಉಕ್ರೇನ್‌ ಯುದ್ಧದಲ್ಲಿ ನಮ್ಮ ದೇಶದ ಹಿತ ಕಾಪಾಡುವ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. ರಿಯಾಯ್ತಿ ದರದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಂಡಿದ್ದರಿಂದ ದೇಶೀಯ ಮಾರುಕಟ್ಟೆಯಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯವಾಯಿತು. ಇಲ್ಲವಾಗಿದ್ದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆ ವಿಪರೀತವಾಗಿ ಏರುತ್ತಿತ್ತು. ಇದೇ ಸಂದರ್ಭದಲ್ಲಿ ಬೇರೆ ದೇಶಗಳಲ್ಲಿ ಇಂಧನ ದರ ಎಷ್ಟಿತ್ತು ಎಂಬುದನ್ನು ಗಮನಿಸುವುದು ಸೂಕ್ತ ಎಂದು ಪ್ರಶ್ನೆಯೊಂದಕ್ಕೆ ಜೈಶಂಕರ್‌ ಉತ್ತರಿಸಿದರು.

ಎಚ್‌ಎಎಲ್‌ ಷೇರು ದರ ಏರಿಕೆ:

ಕಳೆದ ಲೋಕಸಭಾ ಚುನಾವಣೆ ವೇಳೆಯಲ್ಲಿ ರಾಹುಲ್‌ಗಾಂಧಿ ಎಚ್‌ಎಎಲ್‌ ಕುರಿತು ಅಪ ಪ್ರಚಾರ ಮಾಡಿದರು. ಆದರೆ, ಎಚ್‌ಎಎಲ್‌ ಲಾಭದಾಯಕವಾಗಿ ಕಾರ್ಯನಿರ್ವಹಿಸುತ್ತಿರುವುದು ಮಾತ್ರವಲ್ಲದೆ, ಈಗ ಅದರ ಷೇರು ದರ ₹3,000ರಷ್ಟಿದೆ ಎಂದು ಹೇಳಿದರು.

‘ದೂತಾವಾಸದ ಜತೆ ಸಂಪರ್ಕದಲ್ಲಿರಿ’
‘ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳು ದೂತಾವಾಸದ ಜತೆ ಸಂಪರ್ಕದಲ್ಲಿರಬೇಕು. ಯಾವುದೇ ರೀತಿಯ ತೊಂದರೆ ಆದಲ್ಲಿ ದೂತಾವಾಸದ ಗಮನಕ್ಕೆ ತರಬೇಕು’ ಎಂದು ಜೈಶಂಕರ್ ಮನವಿ ಮಾಡಿದರು. ಅಮೆರಿಕ ಕೆನಡಾ ಮತ್ತಿತರ ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಹತ್ಯೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ದೂತಾವಾಸದ ಸಿಬ್ಬಂದಿಗೂ ಭಾರತೀಯ ವಿದ್ಯಾರ್ಥಿಗಳ ಜತೆ ಸಂಪರ್ಕದಲ್ಲಿ ಇರಲು ಸೂಚನೆ ನೀಡಲಾಗಿದೆ ಎಂದರು.
ಶೀಘ್ರವೇ ಯುಎಸ್‌ ಕಾನ್ಸುಲೇಟ್ ಕಚೇರಿ ಬೆಂಗಳೂರಿನಲ್ಲಿ
ಅಮೆರಿಕಾದ ಕಾನ್ಸುಲೇಟ್‌ ಕಚೇರಿ ಆದಷ್ಟು ಶೀಘ್ರವೇ ಆರಂಭವಾಗಲಿದೆ ಎಂದು ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಜೂನ್‌ನಲ್ಲಿ ಅಮೆರಿಕ ಶ್ವೇತಭವನ ಈ ವಿಷಯ ಪ್ರಕಟಿಸಿತ್ತು. ಭಾರತದ ಜತೆ ಬಾಂಧವ್ಯವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ. ಅಲ್ಲದೇ ದಕ್ಷಿಣ ಭಾರತದಲ್ಲಿ ಬೆಂಗಳೂರಿನಿಂದ ಅತಿ ಹೆಚ್ಚು ಜನ ಅಮೆರಿಕಾಗೆ ಪ್ರಯಾಣಿಸುತ್ತಾರೆ. ಅವರಿಗೆ ಇದರಿಂದ ಹೆಚ್ಚಿನ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT