ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview | ಹಣ, ಮದ್ಯ ಹಂಚದೇ ಚುನಾವಣೆ, ಇದು ನಮ್ಮ ವಾಗ್ದಾನ: ರವಿಕೃಷ್ಣಾ ರೆಡ್ಡಿ

ಕರ್ನಾಟಕ ರಾಷ್ಟ್ರ ಸಮಿತಿ ಪ‍ಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರ ಸಂದರ್ಶನ
Published 26 ಏಪ್ರಿಲ್ 2023, 4:07 IST
Last Updated 26 ಏಪ್ರಿಲ್ 2023, 4:07 IST
ಅಕ್ಷರ ಗಾತ್ರ
ರಾಷ್ಟ್ರೀಯ ಪಕ್ಷಗಳಲ್ಲಿ ಉನ್ನತ ಸ್ಥಾನಮಾನ ಅನುಭವಿಸಿದ್ದ ನಾಯಕರು ಅಲ್ಲಿ ವ್ಯತ್ಯಾಸಗಳಾದಾಗ ಸಿಡಿದೆದ್ದು, ಹೊರಬಂದು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದ್ದಾರೆ. ಸಾಮಾನ್ಯ ಜನರ ಆಶಯಗಳಿಗಾಗಿ ಕಟ್ಟಲಿಲ್ಲ. ಹಾಗಾಗಿ, ಅಂತಹ ಪಕ್ಷಗಳು ಯಶಸ್ಸು ಕಂಡಿಲ್ಲ ಎನ್ನುವುದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್‌ಪಿ) ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರ ಪ್ರತಿಪಾದನೆ. ಭ್ರಷ್ಟಾಚಾರದ ಜತೆ ರಾಜಿಮಾಡಿಕೊಳ್ಳದೆ ಆದರ್ಶಗಳನ್ನು ಇಟ್ಟುಕೊಂಡು ಕೆಆರ್‌ಎಸ್‌ಪಿ ಕಟ್ಟಿರುವ, ರಾಜ್ಯದ 199 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ಅವರ ಜತೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಸಂಕ್ಷಿಪ್ತ ರೂಪ ಇಲ್ಲಿದೆ.
ಪ್ರ

ರಾಜಕೀಯ ಪಕ್ಷ ಕಟ್ಟುವ ಆಲೋಚನೆ ಏಕೆ ಬಂತು?

ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ವೃತ್ತಿಗೆ ವಿದಾಯ ಹೇಳಿ ರಾಜ್ಯದಲ್ಲಿ ಸಮಾಜಸೇವೆ ಮಾಡುವ ಹಂಬಲದಿಂದ ಮರಳಿ ಬಂದೆ. ಇಲ್ಲಿಗೆ ಬಂದ ನಂತರ ರಾಜಕೀಯ ಭ್ರಷ್ಟಾಚಾರ, ಅವ್ಯವಸ್ಥೆ ಕಂಡು ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಿಗೆ ಪರ್ಯಾಯವಾಗಿ ರಾಜಕೀಯ ಮಾಡುವ ನಿರ್ಧಾರ ಮಾಡಿದೆ. 2013 ಲೋಕಸತ್ತಾ ಪಕ್ಷದಿಂದ, 2018ರಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದೆ. ನಂತರ ಎರಡೂವರೆ ವರ್ಷ ಎಎಪಿಯಲ್ಲಿ ಕೆಲಸ ಮಾಡಿದೆ. ಅಲ್ಲಿಂದ ಹೊರಬಂದ ನಂತರ ರಾಜಕೀಯ ನಿಷ್ಕ್ರಿಯತೆ ಹೋಗಲಾಡಿಸಲು ಕೆಆರ್‌ಎಸ್‌ ಪಕ್ಷ ಕಟ್ಟಿದೆ. 

ಪ್ರ

ಸೀಟಿ ಊದುವ ವ್ಯಕ್ತಿಯ ಚಿಹ್ನೆ ಕೈತಪ್ಪಿದ್ದೇಕೆ?

ನಿಯಮಗಳಿಗೆ ಅನುಗುಣವಾಗಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೆವು. ಪ್ರಕ್ರಿಯೆಗಳು ಪೂರ್ಣಗೊಳ್ಳುವುದರ ಒಳಗೆ ಬೇರೆ ಪಕ್ಷಕ್ಕೆ ಆ ಚಿಹ್ನೆ ಹೋಗಿತ್ತು. ಹಾಗಾಗಿ, ‘ಟಾರ್ಚ್‌’ ಆಯ್ಕೆ ಮಾಡಿಕೊಂಡೆವು. ಈ ಟಾರ್ಚ್‌ ‘ಭ್ರಷ್ಟಾಚಾರದ ಅಂಧಕಾರದಲ್ಲಿ ಮುಳುಗಿರುವ ಕರ್ನಾಟಕಕ್ಕೆ ಭರವಸೆಯ ಬೆಳಕು’ ತರಲಿದೆ.

ಪ್ರ

ಕೆಆರ್‌ಎಸ್‌ಪಿ ಆಮ್‌ಆದ್ಮಿ ಪಕ್ಷದ ನೆರಳಾ?

ಖಂಡಿತಾ ಅಲ್ಲ, ಆಮ್‌ ಆದ್ಮಿ ಪಕ್ಷ ಬೇರೆ ರಾಜ್ಯಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕಾರಣದಿಂದ ರಾಜ್ಯದ ಜನರು ಗುರುತಿಸುತ್ತಿದ್ದಾರೆ ಅಷ್ಟೆ. ಅವರಿಗೆ ಸಂಪನ್ಮೂಲವೂ ಇದೆ. ಕೆಆರ್‌ಎಸ್‌ಪಿ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತಿದೆ. ಪರಿಣಾಮಕಾರಿ ಹೋರಾಟಗಳನ್ನು ಹಮ್ಮಿಕೊಂಡಿದೆ. ರಚನಾತ್ಮಕ ಕೆಲಸಗಳ ಮೂಲಕ ರಾಜ್ಯದ ಮೂಲೆಮೂಲೆ ತಲುಪಿದೆ. ಅವಕಾಶ ಸಿಗದ ಶ್ರೀಮಂತರು, ಸಚ್ಚಾರಿತ್ರ್ಯ ಇಲ್ಲದ ರಾಜಕಾರಣಗಳು ಇತರೆ ರಾಜಕೀಯ ಪಕ್ಷ ಸೇರಿದಂತೆ ಎಎಪಿಯನ್ನೂ ಸೇರುತ್ತಿದ್ದಾರೆ. ಅಭ್ಯರ್ಥಿಗಳು ಹಲವು ಕಡೆ ಮತದಾರರಿಗೆ ಆಮಿಷ ಒಡ್ಡಿದ ಆರೋಪಗಳೂ ಕೇಳಿ ಬಂದಿವೆ. ಆ ಪಕ್ಷದಲ್ಲಿ ಮೊದಲಿದ್ದ ಶೀಲ, ಪಾವಿತ್ರ್ಯ ಉಳಿದಿಲ್ಲ.

ಪ್ರ

ಚುನಾವಣಾ ವೆಚ್ಚ ಹೇಗೆ ನಿಭಾಯಿಸುತ್ತಿದ್ದೀರಾ?

ಮತದಾರರಿಗೆ ಹಣ, ಮದ್ಯ ಇತರೆ ಆಮಿಷ ಒಡ್ಡದೆ ಚುನಾವಣೆ ನಡೆಸಿದರೆ ಚುನಾವಣಾ ಆಯೋಗ ನಿಗದಿ ಮಾಡಿದ ಹಣಕ್ಕಿಂತ ಕಡಿಮೆ ಮೊತ್ತದಲ್ಲೇ ಚುನಾವಣೆ ಮಾಡಬಹುದು. ಜನರು ಪಕ್ಷಕ್ಕೆ ಸಣ್ಣಸಣ್ಣ ಮೊತ್ತದ ದೇಣಿಗೆ ನೀಡುತ್ತಿದ್ದಾರೆ. ಹಣ, ಮದ್ಯ ಹಂಚದೇ ಚುನಾವಣೆ ಮಾಡುವ ವಾಗ್ದಾನವನ್ನು ನಮ್ಮ ಅಭ್ಯರ್ಥಿಗಳೂ ನೀಡಿದ್ದಾರೆ. 

ಪ್ರ

ಜನರೂ ಭ್ರಷ್ಟಾಚಾರದ ಜತೆ ರಾಜಿ ಮಾಡಿಕೊಂಡಿದ್ದಾರಾ?

ಇಲ್ಲ, ರಾಜಕೀಯ ಪಕ್ಷಗಳ ವರ್ತನೆ, ಮೋಸದಿಂದ ಜನರು ಭ್ರಮನಿರಸನಗೊಂಡಿದ್ದಾರೆ. ಹಾಗಾಗಿ, ಭ್ರಷ್ಟಾಚಾರದ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇರಬಹುದು. ಯಾರು ಗೆದ್ದರೂ ಅಷ್ಟೆ ಎನ್ನುವ ನಿರಾಶಾದಾಯಕ ಸ್ಥಿತಿಗೆ ಬಂದಿದ್ದಾರೆ. ಅನಿವಾರ್ಯವಾಗಿ ಸಹಿಸಿಕೊಳ್ಳುತ್ತಿದ್ದಾರೆ. ಆಯ್ಕೆಗಳಿಲ್ಲದ ಕಾರಣ ಇರುವವರಲ್ಲೇ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 

ಪ್ರ

ಬಿಜೆಪಿ ವಿರೋಧ ಪಕ್ಷಗಳನ್ನು ಹತ್ತಿಕ್ಕುತ್ತಿದೆಯಲ್ಲ?

ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಅದಕ್ಕೆ ವಿರೋಧ ಪಕ್ಷಗಳ ದೌರ್ಬಲ್ಯವೂ ಕಾರಣ. ಪ್ರಾಮಾಣಿಕ, ಮೌಲ್ಯಾಧಾರಿತ ರಾಜಕಾರಣ ಮಾಡಿದರೆ ಯಾರೂ ಬಗ್ಗುಬಡಿಯಲು ಸಾಧ್ಯವಾಗದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT