ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತಕ್ಕಾಗಿ ಇನ್ನು ತೆರೆಮರೆ ‘ಸಮರ’: ಗೆಲುವಿಗೆ ಕೊನೆಕ್ಷಣದ ಕಾರ್ಯತಂತ್ರ

ಬಹಿರಂಗಕ್ಕೆ ತೆರೆ–ಅಂತರಂಗಕ್ಕೆ ಮೊರೆ
Published 8 ಮೇ 2023, 19:33 IST
Last Updated 8 ಮೇ 2023, 19:33 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ಸೇರಿದಂತೆ ಕೇಂದ್ರ ಸರ್ಕಾರದ ಅತಿರಥ ಮಹಾರಥರು, ಎಐಸಿಸಿ ಅಧ್ಯಕ್ಷರೂ ಸೇರಿಕೊಂಡಂತೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು, ಜೆಡಿಎಸ್‌ನ ಪ್ರಮುಖರ ಆವಾಸಸ್ಥಾನವಾಗಿದ್ದ ಕರ್ನಾಟಕ, ಚುನಾವಣಾ ಪ್ರಚಾರದ ಮಹಾ ಅಖಾಡವಾಗಿತ್ತು.

ಸೋಮವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮತದಾರರ ‘ಅಂತರಂಗ’ಕ್ಕೆ ಮೊರೆ ಹೋಗಲು 24ಗಂಟೆಯಷ್ಟೇ ಬಾಕಿ ಉಳಿದಿದೆ. ಇಲ್ಲಿಯಯವರೆಗೆ ಪ್ರಚಾರಕ್ಕೆ ಸೀಮಿತವಾಗಿದ್ದ ರಾಜಕೀಯ ರಂಗ, ಮತದಾರರನ್ನು ದೊಡ್ಡ ಮಟ್ಟದಲ್ಲಿ ಸೆಳೆಯುವ ’ಕಾರ್ಯತಂತ್ರ’ಕ್ಕೆ, ಖರೀದಿಯ ಭರಾಟೆಗೆ ತೆರೆದುಕೊಳ್ಳಲಿದೆ. 

ಮಂಗಳವಾರ ಮನೆ, ಮನೆ ಪ್ರಚಾರಕ್ಕಷ್ಟೇ ಅವಕಾಶವಿದೆ. ಇಲ್ಲಿಯವರೆಗೆ  ಕೊನೆಯ ಕ್ಷಣಗಳಲ್ಲಿ ಆಮಿಷವೊಡ್ಡಿ ಮತದಾರರನ್ನು ಸೆಳೆಯುವ ಪ್ರಯತ್ನ ಚುರುಕಾಗಲಿದೆ. ತೀವ್ರ ಸ್ಪರ್ಧೆ ಇರುವ ಕ್ಷಣಗಳಲ್ಲಿ ಮತ ಖರೀದಿಯ ಮೂಲಕವೇ ಗೆಲುವನ್ನು ದಕ್ಕಿಸಿಕೊಳ್ಳಲು ರಾಜಕೀಯ ನಾಯಕರು ಪೈಪೋಟಿಗೆ ಇಳಿದಿದ್ದಾರೆ ಎಂಬ ಮಾಹಿತಿ ವಿವಿಧ ಕ್ಷೇತ್ರಗಳಿಂದ ಲಭ್ಯವಾಗಿದೆ. 

ರಾಜಕೀಯ ಪಕ್ಷಗಳು ಕೆಲವು ತಿಂಗಳ ಹಿಂದಿನಿಂದಲೇ ಚುನಾವಣಾ ತಯಾರಿಗೆ ಇಳಿದಿದ್ದವು. ಜನಸಂಕಲ್ಪ ಯಾತ್ರೆ, ಪ್ರಜಾಧ್ವನಿ ಯಾತ್ರೆ, ಪಂಚರತ್ನ ಯಾತ್ರೆಗಳ ಮೂಲಕ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮೂರೂ ಪಕ್ಷಗಳು ಮತದಾರರನ್ನು ತಲುಪುವ ಪ್ರಯತ್ನ ಆರಂಭಿಸಿದ್ದವು. ಕರ್ನಾಟಕ ರಾಷ್ಟ್ರ ಸಮಿತಿ, ಆಮ್‌ ಆದ್ಮಿ ಪಕ್ಷ (ಆಪ್‌) ಕೂಡ ವಿಭಿನ್ನ ಮಾದರಿಯಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದ್ದವು.

ಮಾರ್ಚ್‌ 29ರಂದು ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬಳಿಕ ಘಟಾನುಘಟಿ ನಾಯಕರ ರಂಗಪ್ರವೇಶದೊಂದಿಗೆ ಚುನಾವಣಾ ಕಣ ರಂಗೇರಿತ್ತು. ಪ್ರಧಾನಿ ಸೇರಿದಂತೆ ಕೇಂದ್ರದ ಸಂಪುಟದ ಬಹುತೇಕ ಸದಸ್ಯರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎಬ್ಬಿಸುವ ಪ್ರಯತ್ನ ಮಾಡಿದ್ದರು. ಎಐಸಿಸಿ ಪ್ರಮುಖರ ಇಡೀ ತಂಡ, ಕಾಂಗ್ರೆಸ್‌ ಅಧಿಕಾರದಲ್ಲಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ‘ಕೈ’ ಪರ ಮತದಾರರನ್ನು ಸೆಳೆಯಲು ಯತ್ನಿಸಿದ್ದರು. ಜೆಡಿಎಸ್‌ ವರಿಷ್ಠರ ಕುಟುಂಬದ ಬಹುತೇಕರು ಎಡೆಬಿಡದ ಪ್ರಚಾರದಲ್ಲಿ ನಿರತರಾಗಿದ್ದರು.

ಹಲವು ತಿಂಗಳುಗಳಿಂದ ಚುನಾವಣಾ ಕಾರ್ಯತಂತ್ರ ರೂಪಿಸುವುದರಲ್ಲಿ ಮಗ್ನವಾಗಿದ್ದ ಕಾಂಗ್ರೆಸ್‌ ಮತ್ತು ಬಿಜೆಪಿಯ ಚುನಾವಣಾ ‘ವಾರ್‌ ರೂಂ’ಗಳು ಪ್ರಚಾರದ ಕೊನೆಯ ಹಂತದಲ್ಲಿ ಮತದಾರರ ಮನ ಬದಲಿಸಲು ಹೊಸ ಹೊಸ ದಾಳಗಳನ್ನು ಉರುಳಿಸಿದವು.

ಆಮಿಷದ ಆತಂಕ: ಈ ಬಾರಿ ಮತದಾರರಿಗೆ ಆಮಿಷ ಒಡ್ಡಲು ಚುನಾವಣೆ ಘೋಷಣೆಗೂ ಮುನ್ನವೇ ಹಲವರು ತಯಾರಿ ಆರಂಭಿಸಿದ್ದರು. ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ರಾಜ್ಯದ ವಿವಿಧೆಡೆ ಕುಕ್ಕರ್‌, ತವಾ, ಸೀರೆ, ಟಿ.ವಿ, ಆಹಾರ ಪದಾರ್ಥಗಳ ಕಿಟ್‌, ನಗದು ವಶಪಡಿಸಿಕೊಳ್ಳಲಾಗಿತ್ತು.

ನೀತಿಸಂಹಿತೆ ಜಾರಿಯಾದ ಬಳಿಕ ಜಾಗೃತ ದಳಗಳು ಚುರುಕಾಗಿದ್ದವು. ಹಿಂದಿನ ಎಲ್ಲ ಚುನಾವಣೆಗಳಿಗೆ ಹೋಲಿಸಿದರೆ ಚುನಾವಣಾ ಅಕ್ರಮ ತಡೆ ಕಾರ್ಯಾಚರಣೆಯಲ್ಲಿ ಈ ಬಾರಿ ದಾಖಲೆ ಪ್ರಮಾಣದ ನಗದು, ಚಿನ್ನ, ಬೆಳ್ಳಿ, ಮದ್ಯ, ಮಾದಕವಸ್ತು ಮತ್ತು ಉಚಿತ ಕೊಡುಗೆಗೆ ಬಳಸುವ ವಿವಿಧ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಧ ಇಲಾಖೆಗಳು ಮತ್ತು ಜಾಗೃತ ದಳಗಳ ತೀವ್ರ ಕಣ್ಗಾವಲಿನ ನಡುವೆಯೂ ಕೊನೆಯ ಕ್ಷಣಗಳಲ್ಲಿ ಹಣ, ಮದ್ಯ, ಕುಕ್ಕರ್‌ ಮತ್ತಿತರ ಆಮಿಷವೊಡ್ಡಿ ‘ಮತ ಖರೀದಿ’ ಪ್ರಯತ್ನ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಜೋರಾಗಿಯೇ ನಡೆಯಬಹುದು ಎಂಬ ಆತಂಕ ಇದೆ.

ಮತ ಖರೀದಿಗೆ ಭಾರಿ ಸಿದ್ಧತೆ ಮಾಡಿಕೊಂಡಿರುವ ಕುರಿತು ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ವಲಯದಲ್ಲಿ ಚರ್ಚೆ ಬಿರುಸಾಗಿದೆ. ಸೋಲು–ಗೆಲುವಿನ ಲೆಕ್ಕಾಚಾರ ಆಧರಿಸಿ ಮತದಾನದ ಮುನ್ನಾ ದಿನವಾದ ಮಂಗಳವಾರ ಬೃಹತ್‌ ಮೊತ್ತ ವ್ಯಯಿಸಲು ಹಲವು ಅಭ್ಯರ್ಥಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಕೊನೆಯ ಕ್ಷಣದಲ್ಲಿನ ‘ಖರೀದಿ ಆಟ’ವೇ ಕೆಲವು ಕ್ಷೇತ್ರಗಳ ಫಲಿತಾಂಶ ಬದಲಿಸುವ ಸಾಧ್ಯತೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT