ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮನಹುಂಡಿ ಪಾಕಿಸ್ತಾನದಲ್ಲಿದೆಯಾ? - ಈಶ್ವರಪ್ಪ

ಸಿದ್ದರಾಮಯ್ಯ ವಿರುದ್ಧ ಶಾಸಕ ಕೆ.ಎಸ್‌.ಈಶ್ವರಪ್ಪ ವಾಗ್ದಾಳಿ
Published 30 ಏಪ್ರಿಲ್ 2023, 14:16 IST
Last Updated 30 ಏಪ್ರಿಲ್ 2023, 14:16 IST
ಅಕ್ಷರ ಗಾತ್ರ

ಮೈಸೂರು: ‘ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ. ಆ ಗ್ರಾಮ ಪಾಕಿಸ್ತಾನದಲ್ಲಿದೆಯಾ’ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ರೋಡ್‌ ಶೋನಲ್ಲಿ ಭಾಗವಹಿಸಲು ನಗರಕ್ಕೆ ಭಾನುವಾರ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವರುಣ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರಕ್ಕೆ ಅಡ್ಡಿಪಡಿಸುವ ಗೂಂಡಾಗಿರಿಯನ್ನು ಕಾಂಗ್ರೆಸ್‌ ಮಾಡುತ್ತಿದೆ. ಗೂಂಡಾಗಿರಿಯಿದ್ದ ಕಡೆ ಪಕ್ಷವು ಗೆದ್ದಿದೆ’ ಎಂದರು. 

‘ವರುಣ ಕ್ಷೇತ್ರವನ್ನು ಸಿದ್ದರಾಮಯ್ಯ ಬಿಟ್ಟು ಬರುತ್ತಿಲ್ಲ. ಚಾಮುಂಡೇಶ್ವರಿ, ವರುಣ ಅವರ ಸ್ವಂತ ಆಸ್ತಿ ಆಗಿತ್ತು. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋತರು. ಈ ಬಾರಿ ವರುಣದಲ್ಲಿ ಸೋಲಲಿದ್ದಾರೆ. 28ರಲ್ಲಿ 1 ಸ್ಥಾನ ಗೆಲ್ಲುವುದಿಲ್ಲವೆಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ಹೇಳಿದ್ದರು. ಆದರೆ, ಅವರು ಗೆದ್ದಿದ್ದು ಒಂದೇ ಸ್ಥಾನ ಮಾತ್ರ’ ಎಂದು ವ್ಯಂಗ್ಯವಾಡಿದರು.

‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಜಾತಿವಾದಿಗಳು. ಜಾತಿ ಹೆಸರಿನಲ್ಲೇ ಮತ ಕೇಳುತ್ತಾರೆ. ರಾಷ್ಟ್ರೀಯವಾದವೇ ಈಶ್ವರಪ್ಪಗೆ ಉಸಿರು. ಹಿಂದುತ್ವ– ರಾಷ್ಟ್ರೀಯವಾದ ವಿರುದ್ಧ ಮಾತನಾಡಿದರೆ ನನ್ನ ಬಾಯಿ ಬಿಗಿ ಮಾಡಲು ಯಾರಿಂದಲೂ ಆಗದು’ ಎಂದರು.

‘ನರೇಂದ್ರ ಮೋದಿ, ಅಮಿತ್ ಶಾ ಜೋಡೆತ್ತಿನಂತೆ ರಾಜ್ಯದಾದ್ಯಂತ ದೂಳೆಬ್ಬಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಿಂದ ಮೋದಿ ಪ್ರಖ್ಯಾತಿ ಗಳಿಸಿದ್ದು, ಅವರ ದರ್ಶನಕ್ಕಾಗಿ ಹಾಗೂ ಮಾತುಗಳನ್ನು ಕೇಳುವುದಕ್ಕಾಗಿ ಜನರು ಕಾದಿದ್ದಾರೆ’ ಎಂದು ತಿಳಿಸಿದರು.

‘ಉತ್ತರ ಪ್ರದೇಶದಲ್ಲಿ ಮೋದಿ ಹೋಗಿರುವೆಡೆ ಬಿಜೆಪಿ ಅಮೋಘ ಜಯ ದಾಖಲಿಸಿದ್ದಾರೆ. ರಾಹುಲ್‌ ಗಾಂಧಿ ಪ್ರಚಾರ ನಡೆಸಿದ ಸ್ಥಳಗಳಲ್ಲಿ ಕಾಂಗ್ರೆಸ್‌ ನೆಲಕಚ್ಚಿದೆ. ಜನಸಾಮಾನ್ಯರ ಹೃದಯದಲ್ಲಿ ನರೇಂದ್ರ ಮೋದಿ ನೆಲೆಸಿದ್ದಾರೆ’ ಎಂದು ಬಣ್ಣಿಸಿದರು.

‘ಬಿಜೆಪಿಯ ವರಿಷ್ಠರು ನಮಗಿಂತ ಬುದ್ಧಿವಂತರು. ಅವರ ತೀರ್ಮಾನಗಳನ್ನು ಶಿಸ್ತಿನ ಸಿಪಾಯಿಗಳಂತೆ ಪಾಲಿಸುವುದು ನಮ್ಮ ಕರ್ತವ್ಯ. ಶಿಸ್ತು ಪಾಲಿಸದವರು ಅನುಭವಿಸಲಿದ್ದಾರೆ’ ಎಂದು ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿ ಹೆಸರು ಹೇಳದೆ ಹರಿಹಾಯ್ದರು.

‘ವಿ.ಸೋಮಣ್ಣ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ರಾಜಕಾರಣದಲ್ಲಿ ಎಲ್ಲವೂ ಇದ್ದಿದ್ದೆ. ‌ಎಲ್ಲವನ್ನೂ ಎದುರಿಸಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಧರ್ಮ ವಿರೋಧಿಗಳಿರುವ ತಮಿಳುನಾಡಿನಲ್ಲೇ ಪ್ರಧಾನಿ ನರೇಂದ್ರ ಮೋದಿ 4 ಸ್ಥಾನ ಗೆಲ್ಲಿಸಿದರು. ರಾಜ್ಯದಲ್ಲೂ ಬಹುಮತ ಸಿಗಲಿದೆ.
ಕೆ.ಎಸ್‌.ಈಶ್ವರಪ್ಪ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT