ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ 2023: ಸಮೀಕ್ಷೆ ಸಾರ, ಅಧಿಕಾರ ‘ಕೈ’ಗೆ ಹತ್ತಿರ

ಸಣ್ಣಪುಟ್ಟ ಘರ್ಷಣೆ ಬಿಟ್ಟರೆ ಮತದಾನ ಶಾಂತಿಯುತ
Published 10 ಮೇ 2023, 19:35 IST
Last Updated 10 ಮೇ 2023, 19:35 IST
ಅಕ್ಷರ ಗಾತ್ರ

ಬೆಂಗಳೂರು: ಮತಚಲಾವಣೆಯ ಅವಧಿ ಮುಗಿಯುತ್ತಿದ್ದಂತೆ ವಿವಿಧ ವಿದ್ಯುನ್ಮಾನ ಮಾಧ್ಯಮಗಳು ಸಂಸ್ಥೆಗಳೊಂದಿಗೆ ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದ್ದು, ರಾಜ್ಯದ ಮತದಾರರು ಕಾಂಗ್ರೆಸ್‌ ಪಕ್ಷವನ್ನು ಗದ್ದುಗೆಯ ಸನಿಹಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎಂದೇ ಹೇಳಿವೆ.

ಲೋಕಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ನಡೆದ ಕರ್ನಾಟಕದ ಚುನಾವಣೆಯನ್ನು ಎರಡು ರಾಷ್ಟ್ರೀಯ ಪಕ್ಷಗಳು ಹಾಗೂ ಜೆಡಿಎಸ್‌ ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದ್ದವು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರೆಲ್ಲ ತಮ್ಮದೇ ಚುನಾವಣೆಯಂತೆ ಅದ್ದೂರಿ ಪ್ರಚಾರವನ್ನೂ ನಡೆಸಿದ್ದರು. ರಾಜ್ಯದ ಪ್ರಮುಖ ನಾಯಕರು ಅವರಿಗೆ ಜತೆಯಾಗಿದ್ದರು.

10ಕ್ಕೂ ಹೆಚ್ಚು ಸಂಸ್ಥೆಗಳು ಮತಗಟ್ಟೆ ಸಮೀಕ್ಷೆಯನ್ನು ಆಧರಿಸಿದ ಸಂಭಾವ್ಯ ಫಲಿತಾಂಶವನ್ನು ಪ್ರಕಟಿಸಿದವು. ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂಬುದು ಬಹುತೇಕ ಸಮೀಕ್ಷೆಗಳು ಹೇಳಿವೆ. ಒಂದೆರಡು ಸಮೀಕ್ಷೆಗಳು ಬಿಜೆಪಿಯನ್ನು 117ರ ಗಡಿಗೆ ಮುಟ್ಟಿಸಿವೆ. ಈ ಸಮೀಕ್ಷೆಗಳು ಕೂಡ ಕಾಂಗ್ರೆಸ್‌ನ ಸಾಧನೆಯನ್ನು 100ರ ಅಂಚಿನಿಂದ ಕೆಳಗೆ ಇಳಿಸಿಲ್ಲ. 

ಎಲ್ಲ ಸಮೀಕ್ಷೆಗಳು ಜೆಡಿಎಸ್‌ ಸಾಧನೆ ಒಂದೇ ರೀತಿ ಇರುವುದಾಗಿ ಹೇಳಿವೆ. 20–32 ಸ್ಥಾನಗಳನ್ನು ಜೆಡಿಎಸ್ ಗೆಲ್ಲಬಹುದು ಎಂದು ಉಲ್ಲೇಖಿಸಿವೆ. ಹೀಗಾದಲ್ಲಿ ಅತಂತ್ರಕ್ಕಿಂತ ಸ್ವತಂತ್ರ್ಯ ಸರ್ಕಾರ ಬರುವ ಸಾಧ್ಯತೆಯನ್ನು ಸಮೀಕ್ಷೆಗಳು ನಿಚ್ಚಳವಾಗಿ ಅಲ್ಲಗಳೆದಿವೆ.

ಮತದಾರರ ನಿರಾಸಕ್ತಿ: ಮತದಾರರನ್ನು ಮತಗಟ್ಟೆಗೆ ಕರೆತರಲು ಚುನಾವಣಾ ಆಯೋಗ, ರಾಜಕೀಯ ಪಕ್ಷಗಳು ಶತಾಯಗತಾಯ ಪ್ರಯತ್ನ ಪಟ್ಟರೂ ಮತ ಚಲಾವಣೆಯ ಪ್ರಮಾಣ ಶೇ 70ರ ಆಸುಪಾಸಿಗೆ ಸೀಮಿತವಾಗಿದೆ. ಕರ್ನಾಟಕದ ಮತದಾರರು ಚುನಾವಣೆ ರಾಜಕೀಯದ ಬಗ್ಗೆ ಅಷ್ಟಾಗಿ ಒಲವು ತೋರಿಸಿಲ್ಲ.

ರಾಜ್ಯದಾದ್ಯಂತ ಶೇ 70.44 ರಷ್ಟು ಮತದಾನವಾಗಿದೆ ಎನ್ನುವುದು ಪ್ರಾಥಮಿಕ ಲೆಕ್ಕಾಚಾರವಾಗಿದೆ. ಆ ಬಳಿಕ ನಡೆದ ಮತದಾನದ ಪ್ರಮಾಣವನ್ನು ಚುನಾವಣಾ ಆಯೋಗ ತಡ ರಾತ್ರಿವೇಳೆಗೆ ಪ್ರಕಟಿಸುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ 2018 ರಂತೆ ಈ ಬಾರಿಯೂ ಮತದಾನ ಪ್ರಮಾಣ ಇಳಿಕೆಯಾಗಿದ್ದು, ಶೇ 54.53 ರಷ್ಟು ಮತದಾನವಾಗಿದೆ.

ಕೆಲವು ಕಡೆಗಳಲ್ಲಿ ಸಣ್ಣಪುಟ್ಟ ಘರ್ಷಣೆ, ಹಲ್ಲೆ ನಡೆದ ಪ್ರಕರಣಗಳು, ಗುಂಪು ಘರ್ಷಣೆ ತಪ್ಪಿಸಲು ಲಾಠಿ ಚಾರ್ಜ್‌ ವರದಿಯಾಗಿವೆ. ವಿದ್ಯುನ್ಮಾನ ಮತಯಂತ್ರ ಕೈ ಕೊಟ್ಟಿರುವ ಕಾರಣಕ್ಕೆ ಮತ ಚಲಾವಣೆ ವಿಳಂಬ, ಮತಯಂತ್ರಗಳನ್ನು ಧ್ವಂಸ ಮಾಡಿದ ಪ್ರಕರಣಗಳನ್ನು ಬಿಟ್ಟರೆ  ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತ ಚಲಾವಣೆಯಾಗಿದೆ.

ಮತದಾನೋತ್ತರ ಸಮೀಕ್ಷೆ ಶೇ 100ರಷ್ಟು ಸರಿಯಾಗಿ ಆಗುವುದಿಲ್ಲ. ಮೇ 13ರವರೆಗೆ ಕಾಯೋಣ. ನಮಗೇ ಸಂಪೂರ್ಣ ಬಹುಮತ ಬರಲಿದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಭ್ರಷ್ಟ ಬಿಜೆಪಿ ಸರ್ಕಾರದಿಂದ ಕಳಂಕ ಬಂದಿತ್ತು. ಅದು ತೊಲಗುವ ಸಮಯ ಬಂದಿದೆ. ನಮಗೆ ಬಹುಮತ ಸಿಗುವುದು ನಿಶ್ಚಿತವಾಗಿದೆ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ನಿರೀಕ್ಷಿತ ಮಟ್ಟದಲ್ಲಿ ಹಣ ಸಂಗ್ರಹವಾಗದೆ, ಕೊರತೆಯಾಗಿ 25 ಕ್ಷೇತ್ರಗಳಲ್ಲಿ ಹಿನ್ನಡೆಯಾಗಲಿದೆ. ಗೆಲ್ಲುವ ಕ್ಷೇತ್ರಗಳಲ್ಲಿ ಪೆಟ್ಟು ತಿಂದಿದ್ದೇವೆ.
–ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT