ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

MLC Election Results | ಈಶಾನ್ಯ ‌ಪದವೀಧರ ಕ್ಷೇತ್ರದ ಮತ ಎಣಿಕೆ: ಕಾಂಗ್ರೆಸ್ ಅಭ್ಯರ್ಥಿ ಜಯ ಖಚಿತ

Published 6 ಜೂನ್ 2024, 2:57 IST
Last Updated 7 ಜೂನ್ 2024, 6:31 IST
ಅಕ್ಷರ ಗಾತ್ರ
02:5706 Jun 2024

ವಿಧಾನ ಪರಿಷತ್ ಚುನಾವಣೆ: ಮತಎಣಿಕೆ ಆರಂಭ

ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ ಆರು ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದೆ. ಮೈಸೂರು, ಬೆಂಗಳೂರು ಮತ್ತು ಕಲಬುರಗಿಯಲ್ಲಿ ಮತ ಎಣಿಕೆ ನಡೆಯುತ್ತಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರರ ಕ್ಷೇತ್ರಗಳ ಮತ ಎಣಿಕೆ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ನಡೆಯುತ್ತಿದೆ. ಬೆಂಗಳೂರು ಪದವೀಧರರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯುತ್ತಿದೆ. ಈಶಾನ್ಯ ಪದವೀಧರರ ಕ್ಷೇತ್ರದ ಮತ ಎಣಿಕೆ ಕಲಬುರಗಿ ನಗರದ ಗುಲ್ಬರ್ಗ ವಿಶ್ವವಿದ್ಯಾಲಯದ ಹೇಮರೆಡ್ಡಿ ಮಲ್ಲಮ್ಮ ಕಟ್ಟಡದಲ್ಲಿ ಆರಂಭವಾಗಿದೆ.

02:5906 Jun 2024

ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ಆರಂಭ

ವಿಧಾನಪರಿಷತ್ ದಕ್ಷಿಣ ‌ಶಿಕ್ಷಕರ, ನೈರುತ್ಯ ‌ಪದವೀಧರರ ಹಾಗೂ ನೈರುತ್ಯ‌‌‌ ಶಿಕ್ಷಕರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಗುರುವಾರ ಬೆಳಿಗ್ಗೆ ಇಲ್ಲಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಆರಂಭಗೊಂಡಿದೆ.

ಮತಪೆಟ್ಟಿಗೆಗಳನ್ನು ಇಟ್ಟಿರುವ ಭದ್ರತಾ ಕೊಠಡಿಗಳನ್ನು ‌ಚುನಾವಣಾ ಅಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್‌ ಹಾಗೂ ಚುನಾವಣೆ ವೀಕ್ಷಕ ರವಿಶಂಕರ್ ಜೆ. ಅವರ ಸಮ್ಮುಖದಲ್ಲಿ ತೆರೆಯಲಾಯಿತು.

ಮತಪತ್ರಗಳನ್ನು ತಲಾ 25ರ ಬಂಡಲ್‌ಗಳನ್ನು ಮಾಡುವ ಕಾರ್ಯ ಮೊದಲಿಗೆ ನಡೆಯಲಿದೆ. ನಂತರ ಎಣಿಕೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಪ್ರಾಶಸ್ತ್ಯದ ಮತದಾನ ಆಗಿರುವುದರಿಂದ ಎಣಿಕೆ ಕಾರ್ಯಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 11 ಮಂದಿ ಕಣದಲ್ಲಿದ್ದಾರೆ. ಮರಿತಿಬ್ಬೇಗೌಡ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು, 5ನೇ ಬಾರಿ ಆಯ್ಕೆ ಬಯಸಿದ್ದಾರೆ. ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ರಿಯಲ್ ಎಸ್ಟೇಟ್ ಉದ್ಯಮಿ ಕೆ.ವಿವೇಕಾನಂದ ಇದೇ‌ ಮೊದಲಿಗೆ ಸ್ಪರ್ಧಿಸಿದ್ದಾರೆ. ಇವರಲ್ಲದೇ, ವಿಧಾನಪರಿಷತ್ ‌ಮಾಜಿ‌ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಸೇರಿ ಒಂಬತ್ತು ಮಂದಿ ಸ್ಪರ್ಧಿಸಿದ್ದಾರೆ. ಮತದಾರರ ಒಲವು ಯಾರಿಗೆ ವ್ಯಕ್ತವಾಗಿದೆ ಎಂಬುದು ಮತ ಎಣಿಕೆ ನಂತರ ತಿಳಿದುಬರಲಿದೆ.

05:0106 Jun 2024

ಈಶಾನ್ಯ ಪದವೀಧರ ಕ್ಷೇತ್ರ: ಮತ ಎಣಿಕೆ ಆರಂಭ

ಕಲಬುರಗಿ: ಈಶಾನ್ಯ ‌ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅಧ್ಯಯನ ಪೀಠದ ಸಭಾಂಗಣದಲ್ಲಿ ನಡೆಯುತ್ತಿದೆ‌.

ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ನೇತೃತ್ವದಲ್ಲಿ ಸ್ಟ್ರಾಂಗ್ ರೂಮ್ ತೆರೆಯಲಾಯಿತು.

14 ಮತ ಎಣಿಕೆ ಟೇಬಲ್ ಗಳನ್ನು ಅಳವಡಿಸಲಾಗಿದೆ.

ಕಾಂಗ್ರೆಸ್ ನಿಂದ ಚಂದ್ರಶೇಖರ ಪಾಟೀಲ ಹುಮನಾಬಾದ್, ಬಿಜೆಪಿಯಿಂದ ಅಮರನಾಥ ಪಾಟೀಲ, ಪಕ್ಷೇತರ ಅಭ್ಯರ್ಥಿ ಎನ್. ಪ್ರತಾಪರೆಡ್ಡಿ ಸೇರಿದಂತೆ 19 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

06:1606 Jun 2024

ಮತ ಎಣಿಕೆ ಪ್ರಕ್ರಿಯೆ ಪರಿಶೀಲನೆ

ಗುಲಬರ್ಗಾ ವಿಶ್ವವಿದ್ಯಾಲಯದ ಸಾಧ್ವಿ ಹೇಮತಡ್ಡಿ ಮಲ್ಲಮ್ಮ ಅಧ್ಯಯನ ಪೀಠದ ಆವರಣದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಕ್ರಿಯೆಯನ್ನು ಸಹಾಯಕ ಚುನಾವಣಾಧಿಕಾರಿ ಫೌಜಿಯಾ ತರನ್ನುಮ್ ಪರಿಶೀಲಿಸಿದರು

ಮತ ಎಣಿಕೆ ಕೇಂದ್ರದಲ್ಲಿ ಕಾಯ್ದು ಕುಳಿತ ಅಭ್ಯರ್ಥಿಗಳು

ಕಲಬುರಗಿ: ಈಶಾನ್ಯ ‌ಕರ್ನಾಟಕ ಪದವೀಧರ ಕ್ಷೇತ್ರದ ಮತ ಎಣಿಕೆಗೆ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಸಿದ್ಧತೆ ನಡೆದಿದ್ದು,‌ ವಿವಿಧ ಜಿಲ್ಲೆಗಳ ಮತ ಪೆಟ್ಟಿಗೆಗಳನ್ನು ತೆರೆಯುವ ಕಾರ್ಯ ಪ್ರಗತಿಯಲ್ಲಿದೆ.

ಮತ ಎಣಿಕೆ ಯಾವಾಗ ನಡೆಯಲಿದೆ ‌ಎಂಬ ನಿರೀಕ್ಷೆಯಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಎನ್. ಪ್ರತಾಪ್ ರೆಡ್ಡಿ, ಶರಣು ಐ.ಟಿ. ಅವರು ಮತ ಎಣಿಕೆ ಕೇಂದ್ರದಲ್ಲಿ ಕಾಯ್ದು ಕುಳಿತಿದ್ದಾರೆ.

ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರು ಮತ ಎಣಿಕೆ ಕೇಂದ್ರದ ಬಳಿ ಬಂದು ವೀಕ್ಷಿಸಿದರು.

07:2506 Jun 2024

ದಕ್ಷಿಣ ಶಿಕ್ಷಕರ ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ ಮುನ್ನಡೆ

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ವಿವೇಕಾನಂದ ಅವರು ಮುನ್ನಡೆ ಸಾಧಿಸಿದ್ದಾರೆ.

ಮೊದಲ ಸುತ್ತಿನ ಎಣಿಕೆ ಮುಕ್ತಾಯವಾಗಿದ್ದು,ಜೆಡಿಎಸ್ ಅಭ್ಯರ್ಥಿ ವಿವೇಕಾನಂದ ಅವರಿಗೆ 1,396 ಮತಗಳ ಮುನ್ನಡೆ ಪಡೆದಿದ್ದಾರೆ. ಅವರು, 3,686 ಮತಗಳನ್ನು ಗಳಿಸಿದ್ದಾರೆ.‌

ಕಾಂಗ್ರೆಸ್‌ನ ಮರಿತಿಬ್ಬೇಗೌಡ ಅವರಿಗೆ 2,290 ಮತಗಳು ದೊರೆತಿವೆ. ಮೊದಲ ಸುತ್ತಿನಲ್ಲಿ 7,000 ಮತಗಳನ್ನು ಎಣಿಕೆ ಮಾಡಲಾಗಿದೆ.

ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಆರಂಭಿಕ ಮುನ್ನಡೆ‌ 

ದಕ್ಷಿಣ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಪ್ರಗತಿಯಲ್ಲಿದ್ದು, ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಆರಂಭಿಕ ಮುನ್ನಡೆ‌ ಗಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರು ಹಿನ್ನಡೆ ಅನುಭವಿಸಿದ್ದಾರೆ.

09:0206 Jun 2024

ಬೆಂಗಳೂರು: ಅಗ್ನೇಯ ಶಿಕ್ಷಕರ ಕ್ಷೇತ್ರ ಹಾಗೂ ಬೆಂಗಳೂರು ಪದವೀಧರ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಧ್ಯಾಹ್ನದ ನಂತರ ಆರಂಭವಾಗಿದೆ.

ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಭೋಜೇಗೌಡಗೆ 1642 ಮತಗಳ ಮುನ್ನಡೆ

ಮೈಸೂರು: ವಿಧಾನಪರಿಷತ್ ನೈರು ಶಿಕ್ಷಕರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮುಕ್ತಾಯದ ವೇಳೆಗೆ ಜೆಡಿಎಸ್‌ನ ಎಸ್.ಎಲ್. ಭೋಜೇಗೌಡ 1,642 ಮತಗಳಿಂದ ಮುನ್ನಡೆ ಗಳಿಸಿದ್ದಾರೆ.

ಅವರು 3,309 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌ನ ಕೆ.ಕೆ. ಮಂಜುನಾಥ್‌ಕುಮಾರ್ ‌1,667

ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಹರೀಶ್ ಆಚಾರ್ಯ 708 ಮತಗಳನ್ನು ಪಡೆದಿದ್ದಾರೆ.

ಈ ಸುತ್ತಿನಲ್ಲಿ 288 ಮತಗಳು ಕುಲಗೆಟ್ಟ ಮತಗಳಾಗಿವೆ ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ

ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರ: ವಿವೇಕಾನಂದಗೆ 1,278 ಮತಗಳ ಮುನ್ನಡೆ

ಮೈಸೂರು: ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನ ಮುಕ್ತಾಯದ ವೇಳೆಗೆ ಜೆಡಿಎಸ್‌ನ ಕೆ.ವಿವೇಕಾನಂದ 1,278 ಮತಗಳಿಂದ ಮುನ್ನಡೆ ಗಳಿಸಿದ್ದಾರೆ.

ಅವರು 3757 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌ನ ಮರಿತಿಬ್ಬೇಗೌಡ ‌2,479 ಮತಗಳನ್ನು ಪಡೆದಿದ್ದಾರೆ.

ಮೊದಲ ಸುತ್ತಿನಲ್ಲಿ 7000 ಮತಗಳ ಎಣಿಕೆ ನಡೆದಿದೆ. ಮಾಜಿ ಶಾಸಕ 36, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ 11 ಮತಗಳನ್ನಷ್ಟೆ ಪಡೆದಿದ್ದಾರೆ. ನಿವೃತ್ತ ಡಿಡಿಪಿಯು ನಾಗಮಲ್ಲೇಶ್ 165 ಹಾಗೂ ಹ.ರ.ಮಹೇಶ್ 114 ಮತಗಳನ್ನು ಗಳಿಸಿ ಗಮನಸೆಳೆದಿದ್ದಾರೆ.

ಈ ಸುತ್ತಿನಲ್ಲಿ 401 ಮತಗಳು ಕುಲಗೆಟ್ಟ ಮತಗಳಾಗಿವೆ ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ

10:2606 Jun 2024

ಆಗ್ನೇಯ ಶಿಕ್ಷಕರ ಕ್ಷೇತ್ರ: ಕಾಂಗ್ರೆಸ್‌ನ ಶ್ರೀನಿವಾಸ್‌ಗೆ ಮುನ್ನಡೆ

ಬೆಂಗಳೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು ಕಾಂಗ್ರೆಸ್‌ನ  ಡಿ.ಟಿ. ಶ್ರೀನಿವಾಸ್‌ 317 ಮತಗಳ ಮುನ್ನಡೆ ಪಡೆದಿದ್ದಾರೆ. 

ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಕರ್ನಾಟಕ ರಾಷ್ಟ್ರ ಸಮಿತಿಯ ಕಿಶನ್‌ ಎಂ.ಜಿ ಹಾಗೂ ಪಕ್ಷೇತರರು ಸೇರಿ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ

ದಕ್ಷಿಣ ‌ಶಿಕ್ಷಕರ ಕ್ಷೇತ್ರ: ವಿವೇಕಾನಂದಗೆ 3,258 ಮತಗಳ ಮುನ್ನಡೆ

ಮೈಸೂರು: ವಿಧಾನಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, 2ನೇ ಸುತ್ತಿನ ಮುಕ್ತಾಯದ ವೇಳೆಗೆ ಜೆಡಿಎಸ್‌ನ ಕೆ.ವಿವೇಕಾನಂದ 3,258 ಮತಗಳಿಂದ ಮುನ್ನಡೆ ಗಳಿಸಿದ್ದಾರೆ.

ಅವರು 7,916 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌ನ ಮರಿತಿಬ್ಬೇಗೌಡ ‌4,658 ಮತಗಳನ್ನು ಪಡೆದಿದ್ದಾರೆ.

ಎರಡು ಸುತ್ತು ಸೇರಿ 14,000 ಮತಗಳ ಎಣಿಕೆ ನಡೆದಿದೆ. ಮಾಜಿ ಶಾಸಕ ವಾಟಾಳ್ ನಾಗರಾಜ್ 66, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ 17 ಮತಗಳನ್ನಷ್ಟೆ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ

ನಿವೃತ್ತ ಡಿಡಿಪಿಯು ನಾಗಮಲ್ಲೇಶ್ 216 ಹಾಗೂ ಹ.ರ.ಮಹೇಶ್ 338 ಮತಗಳನ್ನು ಗಳಿಸಿ ಗಮನಸೆಳೆದಿದ್ದಾರೆ.

ಈವರೆಗೆ ಎಣಿಕೆಯಾದ ಮತಗಳಲ್ಲಿ 737 ಮತಗಳು ಕುಲಗೆಟ್ಟ ಮತಗಳಾಗಿವೆ ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ.

11:0806 Jun 2024

ಪದವೀಧರ ಕ್ಷೇತ್ರ: ರಾಮೋಜಿಗೌಡರಿಗೆ ಮುನ್ನಡೆ

ಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್‌ನ ರಾಮೋಜಿ ಗೌಡ ಬಿಜೆಪಿ ಅಭ್ಯರ್ಥಿ ಅ. ದೇವೇಗೌಡರಿಗಿಂತ 760 ಮತಗಳ ಮುನ್ನಡೆ ಸಾಧಿಸಿದ್ದಾರೆ

ನೈರುತ್ಯ ಶಿಕ್ಷಕರ ಕ್ಷೇತ್ರ: ಜೆಡಿಎಸ್‌ನ ಭೋಜೇಗೌಡಗೆ 3,069 ಮತಗಳ ಮುನ್ನಡೆ

ಮೈಸೂರು: ವಿಧಾನಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಎರಡನೇ ಸುತ್ತಿನ ಮುಕ್ತಾಯದ ವೇಳೆಗೆ ಜೆಡಿಎಸ್‌ನ ಎಸ್.ಎಲ್. ಭೋಜೇಗೌಡ 3,069 ಮತಗಳಿಂದ ಮುನ್ನಡೆ ಗಳಿಸಿದ್ದಾರೆ.

ಅವರು 6,645 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌ನ ಕೆ.ಕೆ. ಮಂಜುನಾಥ್‌ ಕುಮಾರ್ ‌3,576 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿ ಹರೀಶ್ ಆಚಾರ್ಯ 1,681 ಮತಗಳನ್ನು ಗಳಿಸಿದ್ದಾರೆ.

ಈವರೆಗೆ 14,000 ಮತಗಳನ್ನು ಎಣಿಕೆ ಮಾಡಲಾಗಿದ್ದು, ಅದರಲ್ಲಿ 560 ಮತಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ.

11:4306 Jun 2024

ದಕ್ಷಿಣ ಶಿಕ್ಷಕರ ಕ್ಷೇತ್ರ: ಮೇಲ್ಮನೆ ಪ್ರವೇಶಿಸಿದ ರಿಯಲ್ ಎಸ್ಟೇಟ್ ಉದ್ಯಮಿ ಕೆ.ವಿವೇಕಾನಂದ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವಿನ ನಗೆ ಬೀರಿದ್ದಾರೆ. 4622 ಮತಗಳ ಅಂತರದಿಂದ ಗೆದ್ದಿದ್ದಾರೆ.

ಸತತ 5ನೇ ಬಾರಿಗೆ ಆಯ್ಕೆ ಬಯಸಿದ್ದ ಕಾಂಗ್ರೆಸ್‌ನ ಮರಿತಿಬ್ಬೇಗೌಡ ಸೋಲನುಭವಿಸಿದ್ದಾರೆ.

12:4006 Jun 2024

ನೈರುತ್ಯ ಪದವೀಧರರ ಕ್ಷೇತ್ರ: ಬಿಜೆಪಿಯ ಸರ್ಜಿ ಮುನ್ನಡೆ

ಮೈಸೂರು: ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಇಲ್ಲಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಪ್ರಗತಿಯಲ್ಲಿದ್ದು, ಮೊದಲ ಸುತ್ತಿನಲ್ಲಿ ಬಿಜೆಪಿಯ ಧನಂಜಯ ಸರ್ಜಿ ಆರಂಭಿಕ ಮುನ್ನಡೆ ಗಳಿಸಿದ್ದಾರೆ.

ಅವರು 6,714 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌ನ ಆಯನೂರು ಮಂಜುನಾಥ್‌ 2,434 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ.ರಘುಪತಿ ಭಟ್‌ 3,218 ಮತಗಳನ್ನು ತೆಗೆದುಕೊಂಡಿದ್ದಾರೆ.

ಮೊದಲ ಸುತ್ತಿನಲ್ಲಿ 14ಸಾವಿರ ಮತಗಳ ಎಣಿಕೆ ನಡೆದಿದ್ದು, 1,093 ಮತಗಳನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್‌ ತಿಳಿಸಿದ್ದಾರೆ.

ನೈರುತ್ಯ ಶಿಕ್ಷಕರ ಕ್ಷೇತ್ರ: ಜೆಡಿಎಸ್‌ನ ಭೋಜೇಗೌಡಗೆ ಗೆಲುವು

ಮೈಸೂರು: ವಿಧಾನಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ನ ಎಸ್.ಎಲ್. ಭೋಜೇಗೌಡ 5,267 ಮತಗಳಿಂದ ಗೆಲುವು ಸಾಧಿಸಿದರು.

ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಪಡೆದ ಅವರು, 9,829 ಮತ ಗಳಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್‌ 4,562 ಮತ ಪಡೆದರು.

19,479 ಮತಳು ಚಲಾವಣೆ ಆಗಿದ್ದವು. ಅದರಲ್ಲಿ 821 ಮತಗಳು ಅಸಿಂಧುವಾಗಿದ್ದವು.

ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ