ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ: ಬಿಜೆಪಿ ವರಿಷ್ಠರಿಂದ ಸುಧಾಕರ್‌ಗೆ ಮನ್ನಣೆ

Published 25 ಮಾರ್ಚ್ 2024, 6:42 IST
Last Updated 25 ಮಾರ್ಚ್ 2024, 6:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತೀವ್ರ ಪೈಪೋಟಿಯ ನಡುವೆಯೇ ಮಾಜಿ ಸಚಿವ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಯಲಹಂಕ ಶಾಸಕ ಎಸ್‌.ಆರ್.ವಿಶ್ವನಾಥ್ ಅವರ ಪುತ್ರ ಅಲೋಕ್ ಮತ್ತು ಡಾ.ಕೆ.ಸುಧಾಕರ್ ಅವರ ನಡುವೆ ಟಿಕೆಟ್‌ಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ವರಿಷ್ಠರು ಸುಧಾಕರ್ ಅವರಿಗೆ ಕೃಪೆ ತೋರಿದ್ದಾರೆ. 

ಇದೇ ಮೊದಲ ಬಾರಿಗೆ ಡಾ.ಕೆ.ಸುಧಾಕರ್ ಲೋಕಸಭಾ ಚುನಾವಣೆಗೆ ಕಣಕ್ಕೆ ಇಳಿಯುತ್ತಿದ್ದಾರೆ.  ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಸೋಲಿನ ತರುವಾಯ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುವರು ಎನ್ನುವ ಚರ್ಚೆ ಜೋರಾಗಿತ್ತು. ಈಗ ಅಧಿಕೃತ ಮುದ್ರೆ ಬಿದ್ದಿದೆ. 

ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಡಾ.ಕೆ.ಸುಧಾಕರ್ ಕೆಲಸ ಮಾಡಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪಕ್ಷ  ಸಂಘಟಿಸುವಲ್ಲಿ ಮುಂಚೂಣಿಯಲ್ಲಿ ಇದ್ದಾರೆ. 

ಈ ಹಿಂದೆ ವಿಧಾನ ಪರಿಷತ್‌ನ ಕೋಲಾರ, ಚಿಕ್ಕಬಳ್ಳಾಪುರ  ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಳ್ಳವಲ್ಲಿ ಮತ್ತು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂರು ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.  

ಒಕ್ಕಲಿಗ ಅಭ್ಯರ್ಥಿ: ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗದ ಅಭ್ಯರ್ಥಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ. 2019ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್‌.ಬಚ್ಚೇಗೌಡ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಆ ಮೂಲಕ ಬಿಜೆಪಿಯು ಈ ಕ್ಷೇತ್ರದಲ್ಲಿ ಗೆಲುವಿನ ಖಾತೆ ತೆರೆಯಿತು. ಪ್ರಬಲ ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು ಮತ್ತು ಈ ಸಮುದಾಯದ ಮತಗಳ ಧ್ರುವೀಕರಣವು ಬಚ್ಚೇಗೌಡ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. 

ಬಿಜೆಪಿಯು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ನಡೆಸಿದೆ. ಈ ಭಾಗವಾಗಿ ಒಕ್ಕಲಿಗ ಸಮುದಾಯದ ಡಾ.ಕೆ.ಸುಧಾಕರ್ ಅವರನ್ನು ಕಣಕ್ಕೆ ಇಳಿಸಿದೆ. 

ಪಕ್ಷದ ಕೇಂದ್ರ ನಾಯಕರು ಸುಧಾಕರ್‌ ಅವರಿಗೆ ಟಿಕೆಟ್ ನೀಡುವ ಬಗ್ಗೆ ಒಲವು ಹೊಂದಿದ್ದರೂ ರಾಜ್ಯದ ಕೆಲವು ‘ಪ್ರಮುಖರು’ ಅಲೋಕ್ ಪರವಾಗಿ ಲಾಬಿ ನಡೆಸಿದ್ದರು. ಈ ಕಾರಣದಿಂದ ಟಿಕೆಟ್ ವಿಚಾರವಾಗಿ ಹಗ್ಗಜಗ್ಗಾಟ ಏರ್ಪಟ್ಟಿತ್ತು. 

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತಿತರರನ್ನು ಭೇಟಿಯಾದ ಸಂದರ್ಭದಲ್ಲಿಯೇ ಅವರಿಗೆ ಟಿಕೆಟ್ ದೊರೆಯುವ ಭರವಸೆ ದೊರೆತಿತ್ತು. ಆದರೆ ರಾಜ್ಯ ನಾಯಕರ ಅಡ್ಡಿಯ ಪರಿಣಾಮ ಪಟ್ಟಿಯಲ್ಲಿ ತಡವಾಗಿ ಹೆಸರು ಪ್ರಕಟವಾಗಿದೆ ಎನ್ನುತ್ತವೆ ಸುಧಾಕರ್ ಆಪ್ತ ಮೂಲಗಳು.

ಬಹುಸಂಖ್ಯಾತ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ
ಸುಧಾಕರ್ ರಾಜಕೀಯ ಹೆಜ್ಜೆ
2013 ಮತ್ತು 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು. ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ ಅವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದರು.   2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು.
ವಿಶ್ವಾಸಕ್ಕೆ ಪಡೆಯುವ ಸವಾಲು
ಟಿಕೆಟ್ ಪಡೆದಿರುವ ಡಾ.ಕೆ.ಸುಧಾಕರ್ ಅವರಿಗೆ ಈಗ ಪಕ್ಷದ ಎಲ್ಲ ನಾಯಕರನ್ನು ಒಟ್ಟಿಗೆ ಕೊಂಡೊಯ್ಯಬೇಕಾದ ಸವಾಲು ಇದೆ. ಅಂತರ ಕಾಯ್ದುಕೊಂಡಿದ್ದ ಎಂ.ಟಿ.ಬಿ.ನಾಗರಾಜ್ ಅವರ ಜೊತೆ ಮತ್ತೆ ಸುಧಾಕರ್ ಸ್ನೇಹ ಖುದುರಿಸಿದ್ದಾರೆ.  ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದ ಶಾಸಕ ಎಸ್‌.ಆರ್.ವಿಶ್ವನಾಥ್ ಅವರ ಪರವಾಗಿದ್ದ ಬಾಗೇಪಲ್ಲಿಯ ಮುಖಂಡ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜು ದೊಡ್ಡಬಳ್ಳಾಪುರ ಶಾಸಕ ಧೀರಜ್ ಅವರ ವಿಶ್ವಾಸವನ್ನು ಸುಧಾಕರ್ ಪಡೆಯಬೇಕಾಗಿದೆ.
ಜೆಡಿಎಸ್ ಒಲವು
ಕ್ಷೇತ್ರದ ಜೆಡಿಎಸ್ ಮುಖಂಡರು ಸಹ ಡಾ.ಕೆ.ಸುಧಾಕರ್ ಪರವಾಗಿ ಒಲವು ಹೊಂದಿದ್ದರು. ಚುನಾವಣೆ ಘೋಷಣೆಗೂ ಮುನ್ನವೇ ಸುಧಾಕರ್ ಎಚ್‌.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.  ಇತ್ತೀಚೆಗೆ ಬೆಂಗಳೂರಿನ ಎಚ್‌.ಡಿ.ಕುಮಾರಸ್ವಾಮಿ ಅವರ ನಿವಾಸದಲ್ಲಿ ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಜೆಡಿಎಸ್ ಮುಖಂಡರ ಸಭೆಯಲ್ಲಿಯೂ ಡಾ.ಕೆ.ಸುಧಾಕರ್‌ ಪರವಾಗಿ ಒಲವು ವ್ಯಕ್ತವಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT