ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಸಿ ಸುಳ್ಳು ಹೇಳುತ್ತಿರುವ ರಾಜ್ಯ ಸರ್ಕಾರ: ಬಿಜೆಪಿ ವಕ್ತಾರ ಅಶ್ವತ್ಥ ನಾರಾಯಣಗೌಡ

Published 21 ಏಪ್ರಿಲ್ 2024, 20:55 IST
Last Updated 21 ಏಪ್ರಿಲ್ 2024, 20:55 IST
ಅಕ್ಷರ ಗಾತ್ರ

ರಾಮನಗರ: ‘ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತು ಹಸಿ ಸುಳ್ಳಿನಿಂದ ಕೂಡಿದೆ’ ಎಂದು ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣಗೌಡ ಕಿಡಿಕಾರಿದರು.

‘ರಾಜ್ಯ ಕಾಂಗ್ರೆಸ್‌ನವರು ಲೋಕಸಭಾ ಚುನಾವಣೆಯನ್ನು ರಾಷ್ಟ್ರೀಯ ಚುನಾವಣೆ ಎಂಬುದನ್ನು ಮರೆತು, ಸ್ಥಳೀಯ ಚುನಾವಣೆ ಎಂದುಕೊಂಡಿದ್ದಾರೆ. ರಾಜ್ಯದ ಆಡಳಿತ ಪಕ್ಷವಾಗಿ ತಮ್ಮ ಸಾಧನೆಗಳನ್ನು ಹೇಳದೆ, ಕೇಂದ್ರ ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿ ತೋರಿಸದೆ ಜಾಹೀರಾತು ರಾಜಕೀಯ ಮಾಡುತ್ತಿದ್ದಾರೆ’ ಎಂದು ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ವಿದೇಶದಲ್ಲಿರುವ ಕಪ್ಪು ಹಣ ತಂದು ಜನರ ಬ್ಯಾಂಕ್ ಖಾತೆಗೆ ₹ 15 ಲಕ್ಷ ಹಾಕುವ ಭರವಸೆಯನ್ನು 2014ರಲ್ಲಿ ಮೋದಿ ಅವರನ್ನು ನೀಡಿಲ್ಲ. ಆದರೂ, ನೀಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಾ ಅಪಪ್ರಚಾರ ಮಾಡುತ್ತಿದ್ದಾರೆ. ಬೇಕಿದ್ದರೆ ಆಗಿನ ಮೋದಿ ಅವರ ಮಾತಿನ ವಿಡಿಯೊ ಕೇಳಿಸಿಕೊಳ್ಳಲಿ’ ಎಂದರು.

‘ಕೇಂದ್ರ ಮತ್ತು ರಾಜ್ಯದ ನಡುವೆ ಅನುದಾನ ಹಂಚಿಕೆ‌ ಕುರಿತು ನೀತಿ ಆಯೋಗ ಮತ್ತು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧಾರವಾಗುತ್ತದೆ. ಈ ಸಭೆಯಲ್ಲಿ ಸಿದ್ದರಾಮಯ್ಯ ಇದುವರೆಗೆ ಭಾಗವಹಿಸಿಲ್ಲ. ಬದಲಿಗೆ ಸಚಿವ ಕೃಷ್ಣ ಬೈರೇಗೌಡ ಅವರೇ ಭಾಗವಹಿಸಿದ್ದಾರೆ. ಸಭೆಗೆ ಹೋಗಿ ಬಂದಾಗ ಏನೂ ಮಾತನಾಡದವರು, ಚುನಾವಣೆ ಸಂದರ್ಭದಲ್ಲಿ ಕೇಂದ್ರವು ಅನುದಾನದ ವಿಷಯದಲ್ಲಿ ಅನ್ಯಾಯ ಮಾಡಿದೆ ಎಂದು ಬೊಬ್ಬೆ ಹಾಕುತ್ತಿದ್ದಾರೆ’ ಎಂದು ಹೇಳಿದರು.

‘ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ವಾಗಿದೆ ಎಂದು ಆರೋಪಿಸುತ್ತಾ ಕನ್ನಡದ ಅಸ್ಮಿತೆ ಹೆಸರಲ್ಲಿ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್‌ನವರು, ಹತ್ತು ವರ್ಷಗಳ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ವಿದ್ದಾಗ ತೆರಿಗೆಯಲ್ಲಿ ರಾಜ್ಯಕ್ಕೆ ಎಷ್ಟು ಪಾಲು ಬರುತ್ತಿತ್ತು ಎಂಬುದನ್ನು ಸಹ ಜನರ ಮುಂದಿಡಲಿ’ ಎಂದು ಸವಾಲು ಹಾಕಿದರು.

‘ಸುಳ್ಳು ಜಾಹೀರಾತು ಕೊಟ್ಟಿರುವ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್‌ನವರು ತೋರಿಸಿರುವ ಚೊಂಬು ನಮಗೆ ಅಕ್ಷಯ ಪಾತ್ರೆಯಾಗಲಿದ್ದು, ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅವರಿಗೆ ಉತ್ತರ ಕೊಡುತ್ತೇವೆ’ ಎಂದರು.

ಮುಖಂಡ ಗಿರಿಗೌಡ ಮಾತನಾಡಿ, ‘ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಗಂಡಸುತನ ಹಾಗೂ ತಾಕತ್ತಿಲ್ಲವೆ ಎಂದು ನಾಲಿಗೆ ಹರಿಬಿಟ್ಟಿರುವ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರ ಮಾತನ್ನು ಒಕ್ಕಲಿಗ ಸಮುದಾಯ ಗಂಭೀರವಾಗಿ ಪರಿಗಣಿಸಬೇಕು. ಅವರ ಹೇಳಿಕೆಯನ್ನು ಖಂಡಿಸದ ಡಿ.ಕೆ ಸಹೋದರರಿಗೆ ಈ ಚುನಾವಣೆಯಲ್ಲಿ ಪಾಠ ಕಲಿಸಬೇಕು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ರಾಜ್ಯ ವಕ್ತಾರ  ನರಸಿಂಹಮೂರ್ತಿ, ಉಭಯ ಪಕ್ಷಗಳ ಮುಖಂಡರಾದ ಶಿವಾನಂದ, ರುದ್ರ ದೇವರು, ದರ್ಶನ್, ಜಯಕುಮಾರ್ ಮತ್ತಿತರರು ಇದ್ದರು.

‘ಮೇಕೆದಾಟು: ಅವರವರ ಹಿತಾಸಕ್ತಿ ಮುಖ್ಯ’

‘ಮೇಕೆದಾಟು ಯೋಜನೆ ವಿಷಯದಲ್ಲಿ ಎಲ್ಲರಿಗೂ ಹಿತಾಸಕ್ತಿಯೇ ಮುಖ್ಯ. ಅದರಂತೆ, ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೂಡ ಅದನ್ನೇ ಹೇಳಿದ್ದಾರೆ. ಆದರೆ, ನಾವು ನಮ್ಮ ನೆಲದ ಯೋಜನೆಗೆ ಬದ್ಧರಾಗಿರ ಬೇಕಲ್ಲವೆ? ಅಣ್ಣಾಮಲೈ ವಿರೋಧಿಸಿದರೂ ರಾಜ್ಯ ಬಿಜೆಪಿ ಮೇಕೆದಾಟು ಪರವಾಗಿದೆ. ನಮ್ಮಂತೆ, ರಾಜ್ಯ ಕಾಂಗ್ರೆಸ್‌ನವರು ಡಿಎಂಕೆ ಪ್ರಣಾಳಿಕೆ ವಿರೋಧಿಸಿ ಹೇಳಿಕೆ ನೀಡಲಿ. ಆಗ ಯೋಜನೆಗಾಗಿ ಪಾದಯಾತ್ರೆ ಮಾಡಿದವರ ಬದ್ಧತೆ ಏನೆಂದು ಗೊತ್ತಾಗಲಿದೆ. ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಸರ್ಕಾರ ಬಂದ ಬಳಿಕ ಯೋಜನೆ ಜಾರಿಗೆ ತರು ತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಅಶ್ವತ್ಥ ನಾರಾಯಣಗೌಡ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT