ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಆಟ ನಡೆಯುವುದಿಲ್ಲ: ವಿಜಯೇಂದ್ರ

Published 12 ಏಪ್ರಿಲ್ 2024, 4:52 IST
Last Updated 12 ಏಪ್ರಿಲ್ 2024, 4:52 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಅವರು 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. 

ಬಾಲರಾಜು ಪರ ರೋಡ್‌ ಶೋ ನಡೆಸಲು ನಗರಕ್ಕೆ ಬಂದಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಟ ಇನ್ನು ಮುಂದೆ ನಡೆಯುವುದಿಲ್ಲ. ಚಾಮರಾಜನಗರದ ಜಿಲ್ಲೆಯಲ್ಲಿ ಅವರು ಮೂಲೆಗುಂಪಾಗಿದ್ದಾರೆ. ಸಂಸದ ವಿ ಶ್ರೀನಿವಾಸ್ ಪ್ರಸಾದ್ ಹಾಗೂ ಅಳಿಯ ಮಾಜಿ ಶಾಸಕ ಹರ್ಷವರ್ಧನ್ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಹಾಗಾಗಿ ನಮ್ಮ ಗೆಲುವು ಖಚಿತ’ ಎಂದರು. 

‘ಶ್ರೀನಿವಾಸ್ ಪ್ರಸಾದ್ ಅವರು ಅನುಭವಿ ರಾಜಕಾರಣಿ. ಆ ಕಾರಣ ಎಲ್ಲ ಪಕ್ಷದವರು ಅವರ ಬಳಿ ಹೋಗಿ ಆಶೀರ್ವಾದ ಪಡೆದುಕೊಂಡು ಬರುತ್ತಿದ್ದಾರೆ. ನಮ್ಮ ಪಕ್ಷಕ್ಕೆ ಅವರು ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದರು. 

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಮತದಾ‌ರ ಕಿವಿಗೆ ಹೂ ಮುಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ಸರ್ಕಾರವಾಗಿದೆ. ಎಸ್‌ಸಿಎಸ್‌ಪಿ ಹಾಗೂ  ಟಿಎಸ್‌ಪಿ ಯೋಜನೆಯ  ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಂಡು ದಲಿತ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಮಹಿಳೆಯರಿಗೆ ₹2000  ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ಮತ್ತೊಂದು ಕಡೆ ಮದ್ಯದ ಬೆಲೆಯಲ್ಲಿ ಹೆಚ್ಚಿಸುತ್ತಿದ್ದಾರೆ. ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದ್ದಾರೆ’ ಎಂದು ದೂರಿದರು. 

ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. 10 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ₹2.93 ಲಕ್ಷ ಕೋಟಿ ತೆರಿಗೆ ಪಾಲು ಕೊಟ್ಟಿದೆ. 2004ರಿಂದ 2014ರವರೆಗೆ ಯುಪಿಎ ಅವಧಿಯಲ್ಲಿ ಕೇವಲ ₹80 ಸಾವಿರ ಕೋಟಿ ತೆರಿಗೆ ಪಾಲು ರಾಜ್ಯಕ್ಕೆ ಬಂದಿತ್ತು. 10 ವರ್ಷಗಳಲ್ಲಿ ವಿವಿಧ ಯೋಜನೆಗಳಿಗೆ ಎನ್‌ಡಿಎ ಸರ್ಕಾರ  ₹2.36 ಲಕ್ಷ ಕೋಟಿ ಅನುದಾನ ಕೊಟ್ಟಿದೆ‌. ಯುಪಿಎ ಸರ್ಕಾರದ ಅವಧಿಯಲ್ಲಿ ಬಂದಿದ್ದು ಕೇವಲ ₹60 ಸಾವಿರ ಕೋಟಿ’ ಎಂದು ವಿಜಯೇಂದ್ರ ಹೇಳಿದರು. 

‘ಜಮೀನಿಗೆ ರೈತರು ವಿದ್ಯುತ್‌ ಪರಿವರ್ತಕ ಹಾಕಬೇಕಾದರೆ, ಈಗ ₹3 ಲಕ್ಷ ಹಣ ಕಟ್ಟಬೇಕು ಮಹಿಳೆಯರಿಗೆ ಉಚಿತ ಬಸ್ ಎಂದು ಹೇಳುತ್ತಾರೆ. ಆದರೆ, ಪುರುಷರ ಬಳಿ ದುಪ್ಟಟ್ಟು ಹಣ ವಸೂಲಿ ಮಾಡುತ್ತಾರೆ‌. ಕಾಂಗ್ರೆಸ್‌ನವರು ಹಣ, ತೋಳು, ಹೆಂಡದ ಬಲದಿಂದ ಚುನಾವಣೆ ಮಾಡುತ್ತಾರೆ’ ಎಂದು ದೂರಿದರು. 

ರೋಡ್ ಶೋ: ಸುದ್ದಿಗೋಷ್ಠಿಯ ನಂತರ ವಿಜಯೇಂದ್ರ ಹಾಗೂ ಮುಖಂಡರು ಎಸ್‌.ಬಾಲರಾಜು ಪರ ರೋಡ್‌ ಶೋ ನಡೆಸಿದರು. ಕ್ಷೇತ್ರದ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಬಂದಿದ್ದ ನೂರಾರು ಕಾರ್ಯಕರ್ತರು ಬಿಸಿಲನ್ನೂ ಲೆಕ್ಕಿಸದೆ ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದರು.  

ವಿಷ್ಣುವರ್ಧನ್ ರಸ್ತೆಯಲ್ಲಿ ಪ್ರಚಾರದ ರಥಕ್ಕೆ ಚಾಲನೆ ನೀಡಿ ಅಲ್ಲಿಂದ ಡಾ.ರಾಜಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಸಾಗಿ ಬಂದು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್,  ಹನೂರು ಶಾಸಕ ಎಂ.ಆರ್ ಮಂಜುನಾಥ್,  ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್, ಕ್ಷೇತ್ರ ಪ್ರಭಾರಿ ಫಣೀಶ್‌, ಸಂಚಾಲಕ ಪ್ರೊ.ಮಲ್ಲಿಕಾರ್ಜುನಪ್ಪ ಸೇರಿದಂತೆ ಹಲವು ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಇದ್ದರು.

ಹನೂರು ಪಟ್ಟಣದಲ್ಲಿ ನಡೆದ ರೋಡ್‌ ಶೋನಲ್ಲಿ ವಿಜಯೇಂದ್ರ ಅವರು ಅಭ್ಯರ್ಥಿ ಬಾಲರಾಜು ಪರವಾಗಿ ಮತಯಾಚನೆ ಮಾಡಿದರು. ಶಾಸಕ ಎಂ.ಆರ್‌.ಮಂಜುನಾಥ್‌ ಇತರರು ಭಾಗವಹಿಸಿದ್ದರು
ಹನೂರು ಪಟ್ಟಣದಲ್ಲಿ ನಡೆದ ರೋಡ್‌ ಶೋನಲ್ಲಿ ವಿಜಯೇಂದ್ರ ಅವರು ಅಭ್ಯರ್ಥಿ ಬಾಲರಾಜು ಪರವಾಗಿ ಮತಯಾಚನೆ ಮಾಡಿದರು. ಶಾಸಕ ಎಂ.ಆರ್‌.ಮಂಜುನಾಥ್‌ ಇತರರು ಭಾಗವಹಿಸಿದ್ದರು
ಹನೂರಲ್ಲೂ ರೋಡ್‌ ಶೋ ಮತಯಾಚನೆ
ಹನೂರು: ಅಭ್ಯರ್ಥಿ ಎಸ್‌.ಬಾಲರಾಜು ಪರವಾಗಿ ವಿಜಯೇಂದ್ರ ಅವರು ಪಟ್ಟಣದಲ್ಲೂ ಗುರುವಾರ ರೋಡ್‌ ಶೋ ನಡೆಸಿದರು. ಸ್ಥಳೀಯ ಶಾಸಕ ಎಂ.ಆರ್‌.ಮಂಜುನಾಥ್‌ ಅವರು ಜೊತೆಗಿದ್ದರು.   ಪಟ್ಟಣದ ಆರ್.ಎಂ.ಸಿ ಆವರಣದಿಂದ ಹೊರಟ ರೋಡ್‌ ಶೋ ಡಾ.ಅಂಬೇಡ್ಕರ್ ವೃತ್ತದಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಅಲ್ಲಿಂದ ಸಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಕೊನೆಗೊಂಡಿತು.  ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಮತ್ತು ಜೆಡಿಎಸ್‌ನ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ವಿವಿಧ ಕಲಾ ತಂಡಗಳು ಭಾಗಿಯಾಗಿದ್ದವು ವಿಜಯೇಂದ್ರ  ಮಾತನಾಡಿ ‘ಹನೂರು ಕ್ಷೇತ್ರದ ಅಭಿವೃದ್ದಿಗೆ ಯಡಿಯೂರಪ್ಪನವರ ಕೊಡುಗೆ ಇದೆ. ಮಹದೇಶ್ವರ ಬೆಟ್ಟ ಮುಖ್ಯ ರಸ್ತೆ ಅಭಿವೃದ್ಧಿಗೆ ₹120 ಕೋಟಿ ಅನುದಾನ ನೀಡಿದ್ದರು. ಬೆಟ್ಟ ಪ್ರಾಧಿಕಾರ ರಚನೆ ಮಾಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಭಾಗದ ರೈತರಿಗೆ ಅನುಕೂಲ ಒದಗಿಸಲಾಗುವುದು’ ಎಂದರು.  ‘ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಬೆಂಬಲ ಸೂಚಿಸಿದ್ದಾರೆ. 28 ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ಮುಂಚೂಣಿಯಲ್ಲಿದ್ದಾರೆ. ಚಾಮರಾಜನಗರ ಲೋಕಾಸಭಾ ಕ್ಷೇತ್ರ ಅಭಿವೃದ್ಧಿ ಆಗಬೇಕಾದರೆ ಮತದಾರರು ಬಾಲರಾಜುಗೆ ಮತ ನೀಡಬೇಕು’ ಎಂದರು.  ‘ಚಾಮರಾಜನಗರ ಭಾಗಕ್ಕೆ ಅನ್ಯಾಯವಾಗಿದೆ. ಸಚಿವ ಎಚ್.ಸಿ.ಮಹದೇವಪ್ಪ ಅವರ ಮನೆಯವರೇ ಎಂಎಲ್‌ಎ ಮಂತ್ರಿ ಎಂ.ಪಿ ಆಗಬೇಕೇ? ಸಾಮಾನ್ಯ ಕಾರ್ಯಕರ್ತರಿಗೆ ಬೇಡವೇ? ನಾನು ಸಾಮಾನ್ಯ ಕಾರ್ಯಕರ್ತ ನಿಮ್ಮ ಕೈಗೆ ಸಿಗುತ್ತೇನೆ. ಯಡಿಯೂರಪ್ಪ ಆಶೀರ್ವಾದ ಪಡೆದು ಬಂದಿದ್ದೇನೆ. ನನ್ನನ್ನು ಗೆಲ್ಲಿಸಿದರೆ ನಮ್ಮ ಯುವ ನಾಯಕ ವಿಜಯೇಂದ್ರ ಶಾಸಕ ಎಂ.ಆರ್.ಮಂಜುನಾಥ್ ನಾನು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇವೆ’ ಎಂದರು. ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ ‘ಬಾಲರಾಜು ಒಳ್ಳೆಯ ಅಭ್ಯರ್ಥಿಯಾಗಿದ್ದು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ ಅವರನ್ನು ಗೆಲ್ಲಿಸಲು ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಗೆಲ್ಲಿಸಲು ಶ್ರಮಿಸಬೇಕು. ಬಾಲರಾಜು ಗೆದ್ದರೆ ನಮ್ಮ ಕ್ಷೇತ್ರದ ಅಭಿವೃದ್ಧಿಗೆ  ಸಹಾಯವಾಗುತ್ತದೆ. ಮೋದಿ ಮತ್ತೊಮ್ಮೆ ಗೆಲ್ಲಲು ನಮ್ಮ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿಯವರು ಮುಂದಾಗಿದ್ದಾರೆ’ ಎಂದರು.  ಬಿಜೆಪಿ ಮುಖಂಡರಾದ ಜನಧ್ವನಿ ವೆಂಕಟೇಶ್ ಡಾ.ಪ್ರೀತನ್ ನಾಗಪ್ಪ ದತ್ತೇಶ್ ಕುಮಾರ್ ನಿಶಾಂತ್ ಇತರರು ಇದ್ದರು. 
‘ಮೋದಿ ಪ್ರಧಾನಿಯಾಗುವುದು ಖಚಿತ’
ಅಭ್ಯರ್ಥಿ ಬಾಲರಾಜು ಮಾತನಾಡಿ ‘ಬಡವರು ದಲಿತರು ಹಿಂದುಳಿದವರ ಪರ ಮೋದಿಜಿ ಇದ್ದಾರೆ. ಹರಿಹರ ಬ್ರಹ್ಮ ಬಂದರೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ. ಕಾಂಗ್ರೆಸ್‌ನ ಗ್ಯಾರಂಟಿಗೆ ಶಕ್ತಿ ಇಲ್ಲ. ಕಾಂಗ್ರೆಸ್ ಸರ್ಕಾರ ಉಚಿತವಾಗಿ ಅಕ್ಕಿ ನೀಡುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯ ಅನುಕೂಲವನ್ನು ಮನೆಯ ಎಲ್ಲ ಹೆಣ್ಣು ಮಕ್ಕಳಿಗೆ ನೀಡುತ್ತೇವೆ ಎಂದು ವಂಚಿಸಿದೆ. ಉಚಿತ ಬಸ್ ಸೇವೆ ಎಂದು ಹೇಳಿ ಹೆಚ್ಚುವರಿಯಾಗಿ ಬಸ್ ಗಳನ್ನು ಬಿಟ್ಟಿಲ್ಲ. ಬಸ್ ಹತ್ತಲು ಪರದಾಡುತ್ತಿದ್ದಾರೆ. ಉದ್ಯೋಗ ನಿಧಿ ಯುವ ಜನತೆಗೆ ತಲುಪಿಲ್ಲ ದಲಿತರಿಗೆ ಮೀಸಲಾಗಿ ಇಟ್ಟಿದ್ದ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT