ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಕನಿಷ್ಠ ದರ: ಛಾಯಾಗ್ರಾಹಕರ ನಿರಾಸಕ್ತಿ

Published 1 ಏಪ್ರಿಲ್ 2024, 6:12 IST
Last Updated 1 ಏಪ್ರಿಲ್ 2024, 6:12 IST
ಅಕ್ಷರ ಗಾತ್ರ

ಮಂಗಳೂರು: ನಿರ್ದಿಷ್ಟ ಪ್ರದೇಶಗಳಲ್ಲಿ ಕಳೆದ‌‌ ಚುನಾವಣೆಯ ವೇಳೆ ನಡೆದ ಘಟನೆಗಳು, ಸ್ಥಳೀಯ ವಿದ್ಯಮಾನಗಳನ್ನು ಆಧರಿಸಿ ಜಿಲ್ಲಾಡಳಿ ತವು ಜಿಲ್ಲೆಯಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದೆ.

ಈ ಹಿಂದೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಕೆಲವು ಮತಗಟ್ಟೆಗಳನ್ನು ಗುರುತಿಸಲಾಗುತ್ತಿತ್ತು. ಈಗ ಅದರ ಮಾನದಂಡಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಇಂತಹ ಮತಗಟ್ಟೆಗಳಲ್ಲಿ ಚುನಾವಣೆಯ ದಿನ ನಡೆಯುವ ಮತದಾನ ಪ್ರಕ್ರಿಯೆಯ ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ. ಜೊತೆಗೆ, ಮನೆಯಿಂದ ಮತದಾನ ಮಾಡಲು ನೋಂದಾಯಿಸಿಕೊಂಡಿರುವ 80 ವರ್ಷ ಮೇಲ್ಪಟ್ಟ (ಪ್ರಸ್ತುತ ಚುನಾವಣೆಯಲ್ಲಿ 85 ವರ್ಷ ಮೇಲ್ಪಟ್ಟ) ಮತದಾರರ ಮತದಾನದ ಪ್ರಕ್ರಿಯೆಯನ್ನು ದಾಖಲೆಗಾಗಿ ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ.

ಈ ವಿಡಿಯೊ ಚಿತ್ರೀಕರಣದ ಹೊಣೆಯನ್ನು ಸಾಮಾನ್ಯವಾಗಿ ಸ್ಥಳೀಯ ಫೋಟೊಗ್ರಾಫರ್‌ಗಳು ಮತ್ತು ವಿಡಿಯೊಗ್ರಾಫರ್‌ಗಳಿಗೆ ಗುತ್ತಿಗೆ‌ ಆಧಾರದಲ್ಲಿ ನೀಡಲಾಗುತ್ತದೆ. ಇಡೀ ದಿನದ ಕೆಲಸಕ್ಕೆ ಕನಿಷ್ಠ ಮೊತ್ತ ದೊರೆಯುವ ಕಾರಣಕ್ಕೆ ಈ ಕಾರ್ಯಕ್ಕೆ ಬರಲು ವಿಡಿಯೊಗ್ರಾಫರ್‌ಗಳು ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ.

‘ಚುನಾವಣೆಯ ದಿನ ಮತದಾನ ಆರಂಭವಾದಾಗಿನಿಂದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳುವ ತನಕ ಮತಗಟ್ಟೆಯಲ್ಲೇ ಇರಬೇಕಾಗುತ್ತದೆ. ಇಡೀ ದಿನದ ಕೆಲಸಕ್ಕೆ ₹2,000 ಗೌರವಧನ ಸಿಗುತ್ತದೆ. ಕಾಲಕ್ಕೆ ತಕ್ಕಂತೆ ಎಲ್ಲ ಸಾಮಗ್ರಿ, ಕೂಲಿ ದರ ಹೆಚ್ಚಳವಾಗುತ್ತದೆ. ಅಭ್ಯರ್ಥಿಗಳ ಚುನಾವಣಾ ವೆಚ್ಚ, ಒಟ್ಟಾರೆ ಚುನಾವಣೆ ವೆಚ್ಚ ಎಲ್ಲವೂ ಹೆಚ್ಚಾಗಿವೆ. ಆದರೆ, ಚುನಾವಣೆಯ ವಿಡಿಯೊಗ್ರಫಿ ಪ್ರಕ್ರಿಯೆಯ ಬಾಡಿಗೆ ಮೊತ್ತ ಮಾತ್ರ ಯಾಕೆ ಹೆಚ್ಚಳ ಆಗುತ್ತಿಲ್ಲ’ ಎಂದು ಛಾಯಾಗ್ರಾಹಕರೊಬ್ಬರು ಪ್ರಶ್ನಿಸುತ್ತಾರೆ.

‘ಬಹಳ ವರ್ಷಗಳ ಹಿಂದೆ ಒಂದು ಮತಗಟ್ಟೆಯಲ್ಲಿ ವಿಡಿಯೊ ಚಿತ್ರೀಕರಣ ಮಾಡಿದರೆ ಇಡೀ ದಿನಕ್ಕೆ ₹1,500 ಬಾಡಿಗೆ ಮೊತ್ತ ನಿಗದಿಯಾಗಿತ್ತು. ತೀವ್ರ ಒತ್ತಡ ತಂದ ನಂತರ ಇದನ್ನು ₹2,000ಕ್ಕೆ ಹೆಚ್ಚಳ ಮಾಡಲಾಗಿದೆ. ಆದರೆ, ದರ ಪರಿಷ್ಕರಣೆಗೊಂಡು ದಶಕ ಕಳೆದಿದ್ದು, ಮತ್ತೊಮ್ಮೆ ಪರಿಷ್ಕರಣೆ ಮಾಡಿ ಕನಿಷ್ಠ ದರವನ್ನು ₹4,000ಕ್ಕೆ ನಿಗದಿಪಡಿಸಬೇಕು’ ಎಂದು ಪುತ್ತೂರಿನ ಛಾಯಾಗ್ರಾಹಕರೊಬ್ಬರು ಒತ್ತಾಯಿಸಿದರು.

‘ಛಾಯಾಗ್ರಾಹಕ ವೃತ್ತಿಯು ಸೀಸನ್ ಅವಲಂಬಿತವಾಗಿದೆ. ಈಗ ಧಾರ್ಮಿಕ, ಕೌಟುಂಬಿಕ ಶುಭ ಸಮಾರಂಭಗಳು ಹೆಚ್ಚು ನಡೆಯುವ ಸಮಯ. ಈ ವೇಳೆ ಸಿಗುವ ಮುಂಗಡ ಬುಕ್ಕಿಂಗ್‌ಗಳನ್ನು ಬಿಟ್ಟು ಚುನಾವಣೆಯ ಕಾರ್ಯದಲ್ಲಿ ಭಾಗವಹಿಸುತ್ತೇವೆ. ಮನೆಯಲ್ಲಿ ಮತದಾನ ಪ್ರಕ್ರಿಯೆಯ ಚಿತ್ರೀಕರಣಕ್ಕೆ ಕೆಲವೊಮ್ಮೆ ದುರ್ಗಮ ಮಾರ್ಗಗಳಲ್ಲಿ ಹೋಗಬೇಕಾಗುತ್ತದೆ. ಇಡೀ ದಿನವನ್ನು ಅಲ್ಲಿಯೇ ವ್ಯಯಿಸಬೇಕಾಗುತ್ತದೆ. ಸಹಾಯಕರನ್ನು ನೇಮಿಸಿಕೊಂಡು ಈ ಕೆಲಸ ಮಾಡಬೇಕಾಗುತ್ತದೆ. ಅವರಿಗೆ ನಾವು ಅದೇ ದಿನ ಕಿಸೆಯಿಂದ ಸಂಬಳ ಕೊಟ್ಟು ಕಳುಹಿಸುತ್ತೇವೆ. ಆದರೆ, ನಮ್ಮ ಬಿಲ್ ಪಾಸಾಗಲು ಒಂದು ತಿಂಗಳಾದರೂ ಆಗಬಹುದು, ನಾಲ್ಕು ತಿಂಗಳಾದರೂ ಆಗಬಹುದು’ ಎಂದು ಅವರು ಬೇಸರಿಸಿದರು. ‘ಜಿಲ್ಲಾಡಳಿತವು ಸ್ಥಳೀಯ ಪರಿಸ್ಥಿತಿ ಗಮನಿಸಿ ಕ್ರಿಟಿಕಲ್ ಮತ್ತು ವಲ್‌ನರೇಬಲ್ ಮತಗಟ್ಟೆಗಳನ್ನು ಗುರುತಿಸುತ್ತದೆ. ಈ ಬಾರಿ ಈವರೆಗೆ ಒಟ್ಟು 171 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕೆಲವು ಕಡೆಗಳಲ್ಲಿ ವೆಬ್ ಕಾಸ್ಟಿಂಗ್‌ ಮಾಡಲಾಗುತ್ತದೆ. ವೆಬ್ ಕಾಸ್ಟಿಂಗ್‌ ಮಾಡಲು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತದೆ. ವೆಬ್‌ ಕ್ಯಾಮೆರಾ ಹೆಚ್ಚು ಸುರಕ್ಷಿತ ಯಾಕೆಂದರೆ ಇದನ್ನು ಮುಂಚಿತವಾಗಿ ಅಳವಡಿಸಿರುವುದರಿಂದ ಮಾನವ ಹಸ್ತಕ್ಷೇಪ ಇರುವುದಿಲ್ಲ, ಜೊತೆಗೆ ಪ್ರತಿ ಕ್ಷಣದ‌ ಆಗುಹೋಗುಗಳು ಲೈವ್ ಇರುತ್ತವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಕನಿಷ್ಠ ಮೊತ್ತ ₹5,000 ನಿಗದಿಪಡಿಸಲಿ’

‘ಫೋಟೊಗ್ರಾಫರ್ಸ್ ಮತ್ತು ವಿಡಿಯೊಗ್ರಾಫರ್ಸ್ ಅಸೋಸಿಯೇಷನ್ ಮೂಲಕವೇ ಗುತ್ತಿಗೆ ನೀಡುವಂತೆ ಈ ಹಿಂದೊಮ್ಮೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಸಂಘಟನೆ ಮೂಲಕ‌ ಹೊಣೆಗಾರಿಕೆ ನೀಡಿದಾಗ ಅದು ಹೆಚ್ಚು ಸುರಕ್ಷಿತವೂ ಆಗಿರುತ್ತದೆ. ಆದರೆ, ಈಗಿನ ದರಕ್ಕೆ ಹೆಚ್ಚಿನ ಛಾಯಾಗ್ರಾಹಕರು ಟೆಂಡರ್ ಪಡೆಯಲು ಮುಂದೆ ಬರುವುದಿಲ್ಲ. ದಿನದ ಬಾಡಿಗೆ ಪರಿಷ್ಕರಿಸಿ ಕನಿಷ್ಠ ₹5,000 ಮೊತ್ತ ನಿಗದಿ ಮಾಡಬೇಕು’ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಛಾಯಾಗ್ರಾಹಕರ ಸಂಘದ ಉಳ್ಳಾಲ ವಲಯದ ಸ್ಥಾಪಕಾಧ್ಯಕ್ಷ ಅರುಣ್ ಕುಮಾರ್ ಒತ್ತಾಯಿಸಿದರು.

‘ತರಬೇತಿ ಭತ್ಯೆ ನೀಡಲಿ’

ಚುನಾವಣಾ ಕರ್ತವ್ಯ ನಿರ್ವಹಿಸುವವರು ಮುಂಚಿತವಾಗಿ ಒಂದು ದಿನ ತರಬೇತಿಗೆ ಹೋಗಬೇಕಾಗುತ್ತದೆ. ಇದಕ್ಕೆ ಭತ್ಯೆ ಲಭ್ಯವಾ ಗುವುದಿಲ್ಲ. ಆ ದಿನದ ನಮ್ಮ ಎಲ್ಲ ಆರ್ಡರ್‌ ಬಿಡಬೇಕಾ ಗುತ್ತದೆ. ಹೀಗಾಗಿ, ಚುನಾವಣೆಯ ದಿನದ ಬಾಡಿಗೆ ಮೊತ್ತ ಹೆಚ್ಚಿಸುವ‌ ಜತೆಗೆ ತರಬೇತಿಯ ದಿನದ ಭತ್ಯೆ‌ ನೀಡುವಂತಾಗಬೇಕು ಎಂದು ಛಾಯಾಗ್ರಾಹಕ ಲೋಕೇಶ್ ಕುಮಾರ್ ಅವರು ಒತ್ತಾಯಿಸಿದರು.

ಕ್ರಿಟಿಕಲ್‌, ವಲ್‌ನರೇಬಲ್ ಮತಗಟ್ಟೆ

ನಿರ್ದಿಷ್ಟ ಮತಗಟ್ಟೆಯಲ್ಲಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಿಂಸಾಚಾರ ನಡೆದಿದ್ದರೆ, ಅಲ್ಲಿನ ಮತದಾರರಲ್ಲಿ ಹೆಚ್ಚಿನವರ ಬಳಿ ಚುನಾವಣಾ ಗುರುತಿನ ಚೀಟಿ ಇಲ್ಲದಿದ್ದರೆ, ಶೇ 90ಕ್ಕಿಂತ ಹೆಚ್ಚು ಮತದಾನ ನಡೆದು, ಅದರಲ್ಲಿ ಶೇ 75ಕ್ಕಿಂತ ಹೆಚ್ಚು ಮತಗಳು ಒಂದೇ ಅಭ್ಯರ್ಥಿ ಪರವಾಗಿ ಬಂದಿದ್ದರೆ ಅಂಥ ಮತಗಟ್ಟೆಯನ್ನು ಕ್ರಿಟಿಕಲ್ ಮತಗಟ್ಟೆ ಎಂದು ಗುರುತಿಸಲಾಗುತ್ತದೆ. 

ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಯ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸಲು ಮತದಾರರಿಗೆ ಬೆದರಿಕೆಯೊಡ್ಡಿದ ಪ್ರಕರಣ ದಾಖಲಾಗಿದ್ದರೆ ಅಥವಾ ಪ್ರಭಾವ ಬೀರಿದ ಮಾಹಿತಿ ಲಭ್ಯವಾಗಿದ್ದರೆ, ಮುಂದಿನ ಚುನಾವಣೆಯಲ್ಲಿ ಅಂಥ ಘಟನೆಗಳು ಪುನರಾವರ್ತನೆ ಆಗಬಾರದೆಂದು ಅಂಥ ಮತಗಟ್ಟೆಗಳನ್ನು ವಲ್‌ನರೇಬಲ್ ಎಂದು ಗುರುತಿಸಲಾಗುತ್ತದೆ.

ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗ ಇಂಥ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತದೆ.

‘ಶೇ 50 ಬೂತ್‌ಗಳಲ್ಲಿ ವೆಬ್‌ ಕಾಸ್ಟಿಂಗ್’

ಕ್ರಿಟಿಕಲ್ ಮತಗಟ್ಟೆಗಳಲ್ಲಿ ಹೆಚ್ಚುವರಿ ಭದ್ರತೆಯ ಜೊತೆಗೆ ಕೆಲವು ಕಡೆಗಳಲ್ಲಿ ವೆಬ್ ಕಾಸ್ಟಿಂಗ್ ಕೂಡ ಇರುತ್ತದೆ. ಕಳೆದ ಚುನಾವಣೆಯಲ್ಲೂ ಶೇ 50ರಷ್ಟು ಕ್ರಿಟಿಕಲ್ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗಿತ್ತು. ಈ ಬಾರಿಯೂ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ಯಾಮೆರಾ ಅಳವಡಿಸಿ ವೆಬ್ ಕಾಸ್ಟಿಂಗ್ ಮಾಡಲಾಗುತ್ತದೆ. ಕಳೆದ ಬಾರಿ ಮನೆಯಲ್ಲಿ ಮತದಾನ ಮಾಡಲು 80 ವರ್ಷ ಮೀರಿದ ನಾಗರಿಕರಿಗೆ ಅವಕಾಶ ನೀಡಿದ ಸಂದರ್ಭದಲ್ಲಿ ವಿಡಿಯೊ ಚಿತ್ರೀಕರಣಕ್ಕೆ ವಿಡಿಯೊಗ್ರಾಫರ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಬಾಡಿಗೆ ಮೊತ್ತ ಹೆಚ್ಚಳಕ್ಕೆ ಅವರಿಂದ ಬೇಡಿಕೆ ಇತ್ತು. ಆದರೆ, ಇದನ್ನು ಸ್ಥಳೀಯವಾಗಿ ನಿರ್ಧರಿಸಲು ಸಾಧ್ಯವಾಗದು. ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತ ನಡೆದುಕೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT