ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಗರ ಕ್ಷೇತ್ರ | ಲೋಕಸಭೆಯಲ್ಲಿ ‘ಕೈ’ ಹಿಡಿಯದ ಮತದಾರ

ಸಾಗರ ಕ್ಷೇತ್ರದಲ್ಲಿ ಭರ್ಜರಿ ಮತ ಫಸಲು ತೆಗೆದ ಬಿಜೆಪಿ
Published 6 ಜೂನ್ 2024, 6:26 IST
Last Updated 6 ಜೂನ್ 2024, 6:26 IST
ಅಕ್ಷರ ಗಾತ್ರ

ಸಾಗರ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ‘ಕೈ’ ಹಿಡಿದಿದ್ದ ಸಾಗರ ಕ್ಷೇತ್ರದ ಮತದಾರರು ಲೋಕಸಭಾ ಚುನಾವಣೆ ವೇಳೆಗೆ ತಮ್ಮ ನಿಲುವು ಬದಲಿಸಿ, ಕಮಲದತ್ತ ವಾಲಿದ್ದಾರೆ.

ವರ್ಷದ ಹಿಂದೆ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಅವರಿಗೆ 88,988 ಮತಗಳು ದೊರೆತಿದ್ದವು. ಕ್ಷೇತ್ರದಲ್ಲಿ 16,022 ಮತಗಳ ಅಂತರದಿಂದ ಕಾಂಗ್ರೆಸ್ ಗೆದ್ದು ಬೀಗಿತ್ತು. 

ಆದರೆ ಲೋಕಸಭೆ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ 95,209 ಮತಗಳು ಲಭಿಸಿವೆ. ಕಾಂಗ್ರೆಸ್‌ ಅಭ್ಯರ್ಥಿಗಿಂತಲೂ 26,519 ಹೆಚ್ಚುವರಿ ಮತಗಳನ್ನು ಬಿಜೆಪಿ ಅಭ್ಯರ್ಥಿ ಪಡೆದಿದ್ದಾರೆ.  

ಕಾಂಗ್ರೆಸ್‌ನ ಸ್ಥಳೀಯ ನಾಯಕರು ವಿಧಾನಸಭೆ ಚುನಾವಣೆ ವೇಳೆ ತೋರಿದ್ದ ಅತ್ಯುತ್ಸಾಹವನ್ನು ಲೋಕಸಭೆ ಚುನಾವಣೆಯಲ್ಲಿ ತೋರಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. 

ಈಡಿಗ, ಮುಸ್ಲಿಂ ಸಮುದಾಯದ ಮತದಾರರು ಕಾಂಗ್ರೆಸ್ ಕೈ ಹಿಡಿದರೂ ಗಣನೀಯ ಪ್ರಮಾಣದಲ್ಲಿ ಇರುವ ಇತರ ಹಿಂದುಳಿದ ವರ್ಗದವರ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ.

‘ನಮ್ಮ ಅಭ್ಯರ್ಥಿ ರಾಜಕೀಯ ಚಟುವಟಿಕೆಗಳಿಂದ ದೂರವೇ ಉಳಿದವರು. ಹೀಗಾಗಿ ಕಾರ್ಯಕರ್ತರ ನಡುವೆ ಸಮನ್ವಯತೆ ಮೂಡಿಸುವಲ್ಲಿ ನಮ್ಮ ಪಕ್ಷ ಯಶಸ್ಸು ಕಂಡಿಲ್ಲ’ ಎನ್ನುತ್ತಾರೆ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಆರ್.ಜಯಂತ್.

‘ಒಂದು ವರ್ಷದ ಅವಧಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಕ್ಷೇತ್ರಕ್ಕೆ ಯಾವುದೇ ಅನುದಾನ ತಂದಿಲ್ಲ. ಇಲ್ಲಿ ಯಾವ ಅಭಿವೃದ್ಧಿ ಕಾಮಗಾರಿಯೂ ನಡೆದಿಲ್ಲ. ಅವರ ಆಡಳಿತ ವೈಫಲ್ಯದಿಂದಾಗಿ ಬಿಜೆಪಿಗೆ ಮುನ್ನಡೆ ಲಭಿಸಿದೆ’ ಎನ್ನುತ್ತಾರೆ ಮಾಜಿ ಸಚಿವ ಎಚ್. ಹಾಲಪ್ಪ ಹರತಾಳು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್, ಕಾಂಗ್ರೆಸ್ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅದೇ ಹೊತ್ತಿಗೆ ಕಾಂಗ್ರೆಸ್ ಪಕ್ಷ ಗೋಪಾಲಕೃಷ್ಣ ಬೇಳೂರು ಅವರಿಗೆ ಟಿಕೆಟ್ ನೀಡಿದ್ದನ್ನು ಖಂಡಿಸಿ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಕಾಗೋಡು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

ಲೋಕಸಭೆ ಚುನಾವಣೆ ಹೊತ್ತಿಗೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಹೀಗೆ ಸ್ಥಳೀಯ ಮುಖಂಡರು ಒಬ್ಬರ ಹಿಂದೆ ಒಬ್ಬರು ಪಕ್ಷ ತೊರೆದಿದ್ದು ಕಾಂಗ್ರೆಸ್ ಹಿನ್ನಡೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ. 

ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ಇಲ್ಲಿನ ಬಿಜೆಪಿ ಪಾಳಯದ ಮೇಲೆ ನಿರಾಶೆಯ ಕಾರ್ಮೋಡ ಆವರಿಸಿತ್ತು. ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ದೊರಕಿರುವ ಮುನ್ನಡೆ ಬರಲಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕೂಡ ನೆರವಾಗಲಿದೆ ಎಂಬ ಭರವಸೆ ಬಿಜೆಪಿ ಮುಖಂಡರಲ್ಲಿ ಮನೆಮಾಡಿದೆ. 

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಎದುರಾಗುವ ವಿಷಯಗಳೇ ಬೇರೆ, ಲೋಕಸಭೆ ಚುನಾವಣೆಯಲ್ಲಿ ಪರಿಗಣನೆಗೆ ಬರುವ ಅಂಶಗಳೇ ಬೇರೆ. ಹೀಗಾಗಿ ಈಗಿನ ಫಲಿತಾಂಶದಿಂದ ವಿಚಲಿತರಾಗಬೇಕಿಲ್ಲ ಎಂಬ ಅಭಿಪ್ರಾಯ ಕಾಂಗ್ರೆಸ್ ಮುಖಂಡರದ್ದು.

ಎಚ್.ಹಾಲಪ್ಪ ಹರತಾಳು
ಎಚ್.ಹಾಲಪ್ಪ ಹರತಾಳು

ಕರಾವಳಿ ಮಲೆನಾಡು ಭಾಗದಲ್ಲಿ ಮೋದಿ ವರ್ಚಸ್ಸು ಕೆಲಸ ಮಾಡಿದೆ. ಶಿವಮೊಗ್ಗ ಕ್ಷೇತ್ರದಲ್ಲೂ ಮೋದಿ ಹೆಸರಿನಲ್ಲೇ ಮತ ಕೇಳಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರ ವರ್ಚಸ್ಸಿನಿಂದ ಆ ಪಕ್ಷಕ್ಕೆ ಮುನ್ನಡೆ ಲಭಿಸಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಪುಟಿದೇಳಲಿದೆ.

-ಗೋಪಾಲಕೃಷ್ಣ ಬೇಳೂರು ಶಾಸಕ

ಕಳೆದ ಒಂದು ವರ್ಷದಿಂದ ಸಾಗರ ಕ್ಷೇತ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಅನೇಕರ ಮೇಲೆ ಸುಳ್ಳು ಕೇಸು ದಾಖಲಾಗುತ್ತಿದೆ. ಶಾಸಕರ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಈ ಎಲ್ಲಾ ಕಾರಣಕ್ಕೆ ಬಿಜೆಪಿಗೆ ದೊಡ್ಡ ಪ್ರಮಾಣದ ಮುನ್ನಡೆ ದೊರಕಿದೆ.

-ಎಚ್.ಹಾಲಪ್ಪ ಹರತಾಳು ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT