ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ತಂಗಡಿ: ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100 ಮತದಾನ

Published 26 ಏಪ್ರಿಲ್ 2024, 22:35 IST
Last Updated 26 ಏಪ್ರಿಲ್ 2024, 22:35 IST
ಅಕ್ಷರ ಗಾತ್ರ

ಬೆಳ್ತಂಗಡಿ: ‘ಬಾಂಜಾರು ಮಲೆಯಲ್ಲಿ ಶೇ 100ರಷ್ಟು ಮತದಾನದ ಭರವಸೆಯನ್ನು ನಾವು ಈಡೇರಿಸಿದ್ದೇವೆ. ಗ್ರಾಮಕ್ಕೆ ಕನಿಷ್ಠ ಮೂಲ ಸೌಲಭ್ಯವನ್ನು ಒದಗಿಸುವುದಾಗಿ ನೀಡಿದ್ದ ಭರವಸೆಯನ್ನು ಅಧಿಕಾರಿಗಳು ಈಡೇರಿಸಬೇಕು. ಬಂಜಾರು ಮಲೆಗೆ ರಸ್ತೆ, ಸೇತುವೆ ಹಾಗೂ ಮೊಬೈಲ್‌ ನೆಟ್‌ವರ್ಕ್‌ ಅಗತ್ಯವಿದೆ’ ಎಂದು ಗ್ರಾಮದ ಸುಜೀತ್‌ ಬಂಜಾರು ಹೇಳಿದರು.

‘ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ. ಈ ಹಿಂದೆ ಚುನಾವಣೆಯ ಸಂದರ್ಭದಲ್ಲಿ ಬಂದು ಭರವೆ ನೀಡಿ ಹೋಗುತ್ತಿದ್ದ ಅಧಿಕಾರಿಗಳು, ನಂತರ ಗ್ರಾಮವನ್ನು ಮರೆತುಬಿಡುತ್ತಿದ್ದರು, ಮತ್ತೆ ಮುಂದಿನ ಚುನಾವಣೆ ನಡೆಯುವಾಗಲೇ ಅವರು ಕಾಣಿಸುತ್ತಿದ್ದರು. ಇನ್ನು ಮುಂದೆ ಹಾಗಾಗಬಾರದು. ಅಧಿಕಾರಿಗಳು ಆಗಾಗ ಭೇಟಿನೀಡಿ, ಗ್ರಾಮಕ್ಕೆ ಅಗತ್ಯ ಸೌಲಭ್ಯ ಒದಗಿಸಬೇಕು’ ಎಂದು ಸ್ಥಳೀಯ ಸಂತೋಷ್‌ ಬಂಜಾರು ಒತ್ತಾಯಿಸಿದರು.

ಮತಗಟ್ಟೆಯೂ ಇರಲಿಲ್ಲ: ಪಶ್ಚಿಮ ಘಟ್ಟದ ಮಧ್ಯದ ಚಾರ್ಮಾಡಿ ಬಳಿಯ ಕುಗ್ರಾಮದಲ್ಲಿ ನೆಲೆಸಿರುವ ಈ ಗ್ರಾಮದವರು ಮತದಾನಕ್ಕಾಗಿ 45 ಕಿ.ಮೀ ದೂರದವರೆಗೆ ನಡೆದುಕೊಂಡೇ ಬರಬೇಕಾಗಿತ್ತು. 2014ರಲ್ಲಿ ಬಂಜಾರು ಮಲೆಗೆ ಭೇಟಿ ನೀಡಿದ್ದ ಅಂದಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಜನರ ಕಷ್ಟವನ್ನು ಅರಿತು ಅಲ್ಲಿ ಮತಗಟ್ಟೆ ಸ್ಥಾಪಿಸುವ ಭರವಸೆ ನೀಡಿದ್ದರು. ಅದರಂತೆ ಅದೇ ವರ್ಷ ಮತಗಟ್ಟೆ ಆರಂಭಿಸಿದ್ದರು. ಅದರ ಹೊರತಾಗಿಯೂ ಗ್ರಾಮಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ 2015ರಿಂದೀಚೆಗೆ ಎರಡು ಬಾರಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಮಾಡಿದ್ದರು.

2019ರ ಚುನಾವಣೆಯಲ್ಲಿ ಒಟ್ಟು 106 ಮತದಾರರಲ್ಲಿ 105 ಮಂದಿ ಮತದಾನ ಮಾಡಿದ್ದರು. ಚುನಾವಣೆಯ ಭದ್ರತೆಗಾಗಿ ನಿಯುಕ್ತೊಗೊಂಡಿರುವ ಪೊಲೀಸರು ಹಲ್ಲೆಯ ಪ್ರಕರಣ ವೊಂದಕ್ಕೆ ಸಂಬಂಧಿಸಿ ತನ್ನನ್ನು ಬಂಧಿಸಬಹುದೆಂಬ ಭೀತಿಯಿಂದ ಭಾಸ್ಕರ ಬಂಜಾರು ಎಂಬುವರು ಮತದಾನದ ದಿನ ತಲೆಮರೆಸಿಕೊಂಡಿದ್ದರು. ಆದ್ದರಿಂದ ಆ ವರ್ಷ ಶೇ 99.06 ಮತದಾನವಾಗಿತ್ತು.

ಕೆಲವು ದಿನಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ಸ್ವೀಪ್‌ ಸಮಿತಿಯ ನೋಡಲ್‌ ಅಧಿಕಾರಿ ಪಿ.ಎಸ್‌. ವಸ್ತ್ರದ ಅವರು ಬಂಗಾರು ಮಲೆಯಲ್ಲಿ ಶೇ 100 ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಅದರಂತೆ ಬೆಳ್ತಂಗಡಿ ತಾಲ್ಲೂಕಿನ ಸ್ವೀಪ್ ಸಮಿತಿ ಅಧ್ಯಕ್ಷ ವೈಜಣ್ಣ ನೇತೃತ್ವದ ತಂಡ ಜಾಗೃತಿ ಮೂಡಿಸಿತ್ತು. 

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಆನಂದ್ ಕೆ.ಎ. ಇಲ್ಲಿಗೆ  ಭೇಟಿ ನೀಡಿ ಮತದಾರರೊಂದಿಗೆ ಸಂವಾದ ನಡೆಸಿದ್ದರು. ತಾಲ್ಲೂಕು ಸ್ವೀಪ್ ಸಮಿತಿ ನೇತೃತ್ವದಲ್ಲಿ ಊರವರೊಂದಿಗೆ ಪೋಸ್ಟರ್ ಅಭಿಯಾನ ನಡೆಸಲಾಗಿತ್ತು. ಇದರಿಂದ ಪ್ರೇರಿತರಾದ ಮತದಾರರು ಈ ಬಾರಿ ಶೇ 100 ಮತದಾನದ ಭರವಸೆ ನೀಡಿದ್ದರು. 

ಆದರೆ, ಅನಾರೋಗ್ಯ ಹಾಗೂ ಇತರ ಕಾರಣಗಳಿಂದ ಒಟ್ಟು ನಾಲ್ವರು ಮತದಾರರು ಗ್ರಾಮದಿಂದ ಬೇರೆ ಊರುಗಳಿಗೆ ಹೋಗಿ ನೆಲೆಸಿದ್ದರಿಂದ ಈ ಬಾರಿಯೂ ಶೇ 100ರಷ್ಟು ಮತದಾನವಾಗುವುದು ಕಷ್ಟ ಎಂದು ಭಾವಿಸಲಾಗಿತ್ತು. ಜೊತೆಗೆ ಕೆಲವು ದಿನಗಳ ಹಿಂದೆ ಗ್ರಾಮದಿಂದ ದಂಪತಿ ನಾಪತ್ತೆಯಾದ ಘಟನೆ ಸ್ಥಳೀಯ ಯುವಕರಲ್ಲಿ ಆತಂಕ ಮೂಡಿಸಿತ್ತು. 

‘ನಾಪತ್ತೆಯಾಗಿದ್ದ’ ದಂಪತಿ ಗ್ರಾಮದ ಯುವಕರ ಶ್ರಮದಿಂದಾಗಿ ಮತದಾನಕ್ಕೂ ಮುನ್ನ ವಾಪಸಾದರು. ಅನಾರೋಗ್ಯದಿಂದಾಗಿ ಗ್ರಾಮವನ್ನು ಬಿಟ್ಟು ಪುತ್ರನ ಮನೆಗೆ ಹೋಗಿ ನೆಲೆಸಿದ್ದ ವೃದ್ಧರನ್ನು ವಾಹನದಲ್ಲಿ ಮತದಾನ ಕೇಂದ್ರಕ್ಕೆ ಕರೆತರಲಾಯಿತು. ಆ ಮೂಲಕ ಶೇ 100 ಮತದಾನ ಸಾಧಿಸಲಾಗಿದೆ. ‘ಶೇ 100 ಮತದಾನ ಸಾಧಿಸಿದ್ದು ನಮಗೆ ಖುಷಿ ತಂದಿದೆ’ ಎಂದು ಸ್ಥಳೀಯ ಪ್ರಕಾಶ್‌ ಬಂಜಾರು ಸಂತಸ ವ್ಯಕ್ತಪಡಿಸಿದರು.

ಉಕ್ಕುಡದಲ್ಲಿ ಶೇ 89.95: ಬೆಳ್ತಂಗಡಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಟ್ಟರೂ 120 ಕಿ.ಮೀ. ದೂರ ಸುತ್ತಿ ಬರಬೇಕಾಗಿರುವ ಮಲವಂತಿಗೆ ಗ್ರಾಮದ ಎಳನೀರು ಮತಗಟ್ಟೆ ಸಂಖ್ಯೆ 15ರ ಅಂಗನವಾಡಿ ಕೇಂದ್ರ ಉಕ್ಕುಡದಲ್ಲಿಯೂ ಶೇ 100ರಷ್ಟು ಮತದಾನ ಮಾಡಿಸಲು ಅಧಿಕಾರಿಗಳು ಶ್ರಮಿಸಿದ್ದರು. ಇಲ್ಲಿ ಶೇ 89.95 ಮತದಾನವಾಗಿದೆ.

ಈ ಮತಗಟ್ಟೆಯಲ್ಲಿ 223 ಮಹಿಳೆಯರು, 250 ಪುರುಷರು ಸೇರಿ 473 ಮತದಾರರು ಇದ್ದಾರೆ. ಅವರಲ್ಲಿ 425 ಜನ ಮತದಾನ ಮಾಡಿದರು.

ಈ ಮತಗಟ್ಟೆಯಲ್ಲಿ ಮೃತ 5 ಮಂದಿಯ ಹೆಸರು ಮತದಾರರ ಪಟ್ಟಿಯಲ್ಲಿ ಉಳಿದಿವೆ. ಒಬ್ಬರ ಹೆಸರು ಎರಡು ಬಾರಿ ನಮೂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT