ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಬಂಡಾಯ ಶಮನಗೊಳಿಸಿ, ಹುರುಪು ತುಂಬಿದ ಅಮಿತ್ ಶಾ

ಇಡೀ ದಿನ ಸಭೆಗಳು, ಸಮಾವೇಶದಲ್ಲಿ ಅಮಿತ್‌ ಶಾ ಭಾಗಿ
Published 2 ಏಪ್ರಿಲ್ 2024, 16:13 IST
Last Updated 2 ಏಪ್ರಿಲ್ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ಆಂತರಿಕ ಭಿನ್ನಮತ ಮತ್ತು ಬಂಡಾಯದ ಕಾರಣ ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಉಂಟಾಗಿದ್ದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹುತೇಕ ಯಶಸ್ವಿಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿದ್ದ ‘ವಿಘ್ನ’ಗಳನ್ನು ನಿವಾರಿಸುವುದರ ಜತೆಗೆ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಿದರು.

ಅಮಿತ್‌ ಶಾ ಅವರು ಮಂಗಳವಾರ ಇಡೀ ದಿನ ಸರಣಿ ಸಭೆಗಳು, ಕಾರ್ಯಕರ್ತರ ಸಮಾವೇಶ ಮತ್ತು ಚನ್ನಪಟ್ಟಣದಲ್ಲಿ ರೋಡ್ ಶೋದಲ್ಲಿ ತಮ್ಮನ್ನು ತೊಡಗಿಸಿಕೊಂಡರು. 

ಈಗಾಗಲೇ ಬಿ.ಎಸ್‌.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರು ಕೆಲವು ಕ್ಷೇತ್ರಗಳಲ್ಲಿ ಬಂಡಾಯವನ್ನು ಶಮನ ಮಾಡಿದ್ದರು. ಉಳಿದ ಕ್ಷೇತ್ರಗಳಲ್ಲಿನ ಭಿನ್ನಮತವನ್ನು ಅಮಿತ್‌ ಶಾ ಅವರೇ ಬಗೆಹರಿಸಿದರು. ಅಲ್ಲದೇ, ಜೆಡಿಎಸ್‌ ಜತೆ ಸಮನ್ವಯದಿಂದ ಮುನ್ನಡೆಯಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚನೆ ನೀಡಿದರು.

‘ಯಾವುದೇ ಕಾರಣಕ್ಕೂ ಅಸಮಾಧಾನ ಅತೃಪ್ತಿಯ ಕಾರಣಕ್ಕೆ ಪಕ್ಷದ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಬಾರದು. ಇಲ್ಲಿ ವ್ಯಕ್ತಿಗಳು ಮುಖ್ಯವಲ್ಲ ಪಕ್ಷ ಮುಖ್ಯ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಅದಕ್ಕಾಗಿ ಎಲ್ಲ ಬೇಸರ, ಅತೃಪ್ತಿಯನ್ನು ಬದಿಗಿಟ್ಟು ಕೆಲಸ ಮಾಡಬೇಕು. ಇದೇ ವೇಳೆ ಜೆಡಿಎಸ್‌ ನಾಯಕರು ಮತ್ತು ಕಾರ್ಯಕರ್ತರ ಜತೆ ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಿಜೆಪಿ–ಜೆಡಿಎಸ್‌ ನಾಯಕರ ಜತೆ ಬೆಳಿಗ್ಗೆ ಸಮಾಲೋಚನೆ ನಡೆಸಿದ ಶಾ,  ಆ ಬಳಿಕ ದಾವಣಗೆರೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಕ್ಷೇತ್ರಗಳ ಕೋರ್‌ ಕಮಿಟಿ ಸದಸ್ಯರ ಸಭೆ ನಡೆಸಿದರು. ‘ಭಿನ್ನಾಭಿಪ್ರಾಯ, ಅಸಮಾಧಾನ ಬದಿಗಿಟ್ಟು ಈ ಎಲ್ಲ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಅತಿ ಹಚ್ಚು ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಬೇಕು. ಇದಕ್ಕೆ ಒಗ್ಗಟ್ಟಿನ ಹೋರಾಟ ಮುಖ್ಯ’ ಎಂದು ಸೂಚನೆ ನೀಡಿದರು.

ತಮ್ಮ ಪತ್ನಿ ಕಣಕ್ಕಿಳಿದಿರುವ ಕ್ಷೇತ್ರದಲ್ಲಿ ಕೆಲವು ಮುಖಂಡರ ಸಹಕಾರ ಸಿಗುತ್ತಿಲ್ಲ ಎಂದು ದಾವಣಗೆರೆ ಸಂಸದ  ಜಿ.ಎಂ. ಸಿದ್ದೇಶ್ವರ್‌ ಅಳಲು ತೋಡಿಕೊಂಡರು. ಆಗ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಇತರರು ಆಕ್ಷೇಪ ವ್ಯಕ್ತಪಡಿಸಿದಾಗ, ಅಮಿತ್‌ ಶಾ ಮಧ್ಯಪ್ರವೇಶಿಸಿ ಅವರೆಲ್ಲರನ್ನು ಸಮಾಧಾನಪಡಿಸಿದರು ಎಂದು ಮೂಲಗಳು ಹೇಳಿವೆ.

‘ಜೆಡಿಎಸ್‌ ಮತಗಳು ಬಿಜೆಪಿ ಅಭ್ಯರ್ಥಿಗೂ, ಬಿಜೆಪಿ ಮತಗಳು ಜೆಡಿಎಸ್‌ ಅಭ್ಯರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ವರ್ಗಾವಣೆ ಆಗುವಂತೆ ನೋಡಿಕೊಳ್ಳಬೇಕು. ಮತದಾನದ ದಿನ ಬಿಜೆಪಿ ಮತ್ತು ಜೆಡಿಎಸ್‌ ಮತಗಳೂ ಒಂದೂ ವ್ಯರ್ಥ ಆಗಬಾರದು. ಪರಸ್ಪರ ಮಾತನಾಡಿಕೊಂಡು ಚಲಾವಣೆ ಆಗಬೇಕು. ಮತ ಎಣಿಕೆ ಆಗುವರೆಗೂ ಜೆಡಿಎಸ್‌ ಜತೆ ಗಟ್ಟಿಯಾಗಿ ನಿಲ್ಲಬೇಕು’ ಎಂಬ ಸೂಚನೆಯನ್ನೂ ನೀಡಿದರು.

ಇದೇ ಸಂದರ್ಭದಲ್ಲಿ ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಮಾಡಾಳ್‌ ವಿರೂಪಾಕ್ಷಪ್ಪ ಅವರು ಸ್ಥಳೀಯ ಮಟ್ಟದ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದಾಗ, ಸಣ್ಣ ವಿಷಯಗಳನ್ನು ಏಕೆ ದೊಡ್ಡದು ಮಾಡುತ್ತೀರಿ?  ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೆಲಸ ಮಾಡಿ. ಉಳಿದ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಅವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT