ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರನ್ನು ಪಿಎಂ ಮಾಡಿದ್ದು ಕಾಂಗ್ರೆಸ್; ಉಪಕಾರ ಸ್ಮರಣೆ ಇರಬೇಕಿತ್ತು: ಡಿಕೆಶಿ

ತೆನೆ ಬಿಸಾಕಿ ಸ್ವಂತ ಬಾವನಿಗೆ ಕಮಲ ಪಕ್ಷದಿಂದ ಟಿಕೆಟ್‌, ಜೆಡಿಎಸ್‌ ಎಲ್ಲಿದೆ: ಡಿಕೆಶಿ ಪ್ರಶ್ನೆ
Published 4 ಏಪ್ರಿಲ್ 2024, 13:01 IST
Last Updated 4 ಏಪ್ರಿಲ್ 2024, 13:01 IST
ಅಕ್ಷರ ಗಾತ್ರ

ಕೋಲಾರ: ‘ಎಚ್‌.ಡಿ.ಕುಮಾರಸ್ವಾಮಿ ತೆನೆ ಬಿಸಾಕಿ ಸ್ವಂತ ಬಾವನನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಮಲ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಇದಕ್ಕಿಂತ ಅವಮಾನ ಮತ್ತೊಂದಿಲ್ಲ. ಬಾವನನ್ನೇ ತಮ್ಮ ಪಕ್ಷದ ಚಿಹ್ನೆ ಮೇಲೆ ಕಣಕ್ಕಿಳಿಸಲು ಸಾಧ್ಯವಾಗದಿದ್ದ ಮೇಲೆ ಜೆಡಿಎಸ್ ಪಕ್ಷ ಎಲ್ಲಿದೆ ಹೇಳಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ‌ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಕೋಲಾರ ಮೀಸಲು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ಪರ ರೋಡ್‌ ಶೋ ನಡೆಸಿ ಅವರು ಮಾತನಾಡಿದರು.

‘ಕೋಲಾರ ಕ್ಷೇತ್ರದಲ್ಲಿ ತೆನೆ ಬೇಕಂತೆ. ಆದರೆ, ಬೆಂಗಳೂರು ಗ್ರಾಮಾಂತರದಲ್ಲಿ ಬಾವನಿಗೆ ಕಮಲ ಬೇಕಂತೆ. ಅವರನ್ನು ಏಕೆ ಜೆಡಿಎಸ್‌ನಿಂದ ಕಣಕ್ಕಿಳಿಸಿಲ್ಲ ಎಂಬುದನ್ನು ಜೆಡಿಎಸ್‌ ಕಾರ್ಯಕರ್ತರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಬೇಕು’ ಎಂದರು.

‘ಕುಮಾರಸ್ವಾಮಿ ಒಮ್ಮೆ ರಾಮನಗರದಿಂದ ಸ್ಪರ್ಧಿಸಿದ್ದರು, ಮತ್ತೊಮ್ಮೆ ಚಿಕ್ಕಬಳ್ಳಾಪುರಕ್ಕೆ ಹೋದರು. ಆನಂತರ ರಾಮನಗರ, ಚನ್ನಪಟ್ಟಣ ಆಯಿತು. ಈಗ ಮಂಡ್ಯಕ್ಕೆ ತೆರಳಿದ್ದಾರೆ. ಊಟ ಕೊಟ್ಟ ಪಕ್ಷ, ಎಚ್.ಡಿ.ದೇವೇಗೌಡರನ್ನು ಪ್ರಧಾನಿ ಮಾಡಿದ್ದು, ತಮ್ಮನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಉಪಕಾರ ಸ್ಮರಣೆ ಇರಬೇಕಿತ್ತು. ಆದರೆ, ಕುಮಾರಣ್ಣ ಅದನ್ನೆಲ್ಲಾ ಮರೆತು ನಮ್ಮ ಪಕ್ಷದ ವಿರುದ್ಧ ಕೀಳಾಗಿ ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ತಮಗೆ ಸಹಾಯ ಮಾಡಿದ ರಾಮನಗರ ಜಿಲ್ಲೆಯನ್ನೇ ಮರೆತು ಮಂಡ್ಯಕ್ಕೆ ಹೋಗಿದ್ದಾರೆ. ಬೆಂಗಳೂರು ಗ್ರಾಮಾಂತರದಿಂದ ಸಂಸದರಾಗಿದ್ದ ಅವರು ಇಲ್ಲೇ ಸ್ಪರ್ಧಿಸಬೇಕಿತ್ತು. ಅದನ್ನು ಬಿಟ್ಟು ಬಾವನನ್ನು ಮತ್ತೊಂದು ಪಕ್ಷದಿಂದ ಕಣಕ್ಕಿಳಿಸಿದ್ದಾರೆ’ ಎಂದು ಟೀಕಿಸಿದರು.

‘ಕಳೆದ ವಿಧಾನಸಭೆ ಚುನಾವಣೆಯ ರೀತಿಯಲ್ಲೇ ಲೋಕಸಭೆ ಚುನಾವಣೆಯಲ್ಲೂ ಫಲಿತಾಂಶ ಬರಲಿದೆ. ಚುನಾವಣೆ ಬಳಿ ಸರ್ಕಾರ ಪತನವಾಗಲಿದೆ ಎಂಬುದಾಗಿ ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ’ ಎಂದು ಹೇಳಿದರು.

‘ಕೋವಿಡ್ ಕಾಲದಲ್ಲಿ ‌ಜನರ ನೆರವಿಗೆ ನಿಂತ ಪಕ್ಷ ಕಾಂಗ್ರೆಸ್‌. ನಾನು ಮಾಲೂರಿಗೆ ಬಂದು ತರಕಾರಿ ಖರೀದಿಸಿ ರೈತರಿಗೆ ನೆರವಾದೆ. ಕೇಂದ್ರದಲ್ಲಿ ಸಚಿವರಾಗಿದ್ದ ಸುರೇಶ್ ಅಂಗಡಿ ಕೋವಿಡ್‌ನಿಂದ ಮೃತರಾದಾಗ ಅವರ ದೇಹವನ್ನು ದೆಹಲಿಯಿಂದ ತರಲೂ ಕುಟುಂಬದವರಿಗೆ ಸಾಧ್ಯವಾಗಲಿಲ್ಲ. ಸಹೋದರ ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ತನ್ನ ಜೀವ ಲೆಕ್ಕಿಸದೆ ಕೋವಿಡ್‌ನಿಂದ ಮೃತರಾದವರನ್ನು ಹೊತ್ತುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಲು ನೆರವಾದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT