ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಧನೆ ತಿಳಿಸಿ ಮತದಾರರ ಮನ ಗೆಲ್ಲಿ: ಕಾರ್ಯಕರ್ತರಿಗೆ ಮೋದಿ ಸಲಹೆ

ಜೆಡಿಎಸ್‌ ಜತೆ ಸಮನ್ವಯದಿಂದ ಕೆಲಸ ಮಾಡಿ: ಕಾರ್ಯಕರ್ತರಿಗೆ ಮೋದಿ ಸಲಹೆ
Published 6 ಏಪ್ರಿಲ್ 2024, 0:10 IST
Last Updated 6 ಏಪ್ರಿಲ್ 2024, 0:10 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆಮನೆಗೂ ತಲುಪಿಸಬೇಕು. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಕರ್ನಾಟಕದ ಬೂತ್‌ ಕಾರ್ಯಕರ್ತರ ಜತೆ ‘ನಮೋ ಆ್ಯಪ್‌’ ಮೂಲಕ ಶುಕ್ರವಾರ ಸಂವಾದ ನಡೆಸಿ ಮಾತನಾಡಿದ ಅವರು, ಕೇಂದ್ರದ ಸಾಧನೆಗಳ ಜತೆ ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನೂ ಜನರಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.

ಪ್ರತಿ ಬೂತ್‌ನಲ್ಲೂ ಎರಡು– ಮೂರು ಜನರ ಗುಂಪು ರಚಿಸಿಕೊಂಡು, ಒಂದೆಡೆ ಕುಳಿತು ಮಾತನಾಡಿ, ಕೇಂದ್ರದ ಸಾಧನೆಗಳನ್ನು ನಿರ್ದಿಷ್ಟ ಮನೆಗಳಿಗೆ ತಲುಪಿಸಬೇಕು. ಕಳೆದ 10 ವರ್ಷಗಳಲ್ಲಿ ನಾರಿ ಶಕ್ತಿಗೆ ಇನ್ನಷ್ಟು ಬಲ ತುಂಬಿದ್ದೇವೆ. ‘ನಾರಿ ಶಕ್ತಿ ವಂದನಾ’ ರಾಜಕೀಯವಾಗಿ ಮಹಿಳಾಬಲ ವರ್ಧನೆ ಮಾಡಲಿದೆ. ಹೀಗಾಗಿ ಮಹಿಳೆಯರ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಶ್ರಮಿಸಬೇಕು. ಬೂತ್‌ ಕಾರ್ಯಕರ್ತರು ತಮ್ಮ ಕಾರ್ಯದ ಅವಲೋಕನ ಮಾಡಲು ಪ್ರತಿ ದಿನದ ಚುನಾವಣಾ ಕೆಲಸ ಮುಗಿಸ ಬಳಿಕ ಒಂದೆಡೆ ಸೇರಿ ಮತಗಳ ಪ್ರಮಾಣ ಹೆಚ್ಚಾಗುತ್ತಿದೆಯೇ ಎಂಬ ಅಭಿಪ್ರಾಯಗಳನ್ನೂ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕ ಸರ್ಕಾರದ ವೈಫಲ್ಯಗಳನ್ನು ತಿಳಿಸಬೇಕು. ಕಾಂಗ್ರೆಸ್‌ನ ಭ್ರಷ್ಟಾಚಾರಗಳನ್ನು ಅನಾವರಣಗೊಳಿಸಬೇಕು. ಫಲಾನುಭವಿಗಳ ಜೊತೆ ಮಾತನಾಡಲು ಯುವ ಜನರ ಜೊತೆ ಯುವ ಜನರನ್ನೇ ನಿಯೋಜಿಸಬೇಕು. ಹಿರಿಯರ ಜತೆ ಹಿರಿಯರೇ ಮಾತನಾಡಬೇಕು. ಕೇಂದ್ರ ಯೋಜನೆಗಳಿಂದ ಫಲಾನುಭವಿಗಳಿಗೆ ಆದ ಲಾಭವನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಬೇಕು. ಮತದಾರರ ಮನವನ್ನು ಗೆಲ್ಲಬೇಕು. ಇದನ್ನು ಸವಾಲು ಎಂದು ಪರಿಗಣಿಸಿ ಕಾರ್ಯನಿರ್ವಹಿಸಬೇಕು ಎಂದು ಮೋದಿ ಹೇಳಿದರು.

‘ಕರ್ನಾಟಕದಲ್ಲಿ ಬಿಜೆಪಿ– ಜೆಡಿಎಸ್‌ ಮೈತ್ರಿ ಇದ್ದು, ಪ್ರತಿ ಬೂತ್‌ನಲ್ಲೂ ಎರಡೂ ಪಕ್ಷಗಳ ಸಮನ್ವಯ ಸಭೆ ನಡೆಸಬೇಕು. ಇದು ಗೆಲುವಿನ ಕಡೆ ನಮ್ಮನ್ನು ಕರೆದೊಯ್ಯಲಿದೆ. ನಾವು ರಾಜ್ಯದಲ್ಲಿ ಆಡಳಿತದಲ್ಲಿ ಇಲ್ಲದಿದ್ದರೂ ನಾವು ಭೇದಭಾವ ಮಾಡಿಲ್ಲ ಎಂಬುದನ್ನು ಜನರಿಗೆ ತಿಳಿಸಬೇಕು’ ಎಂದು ವಿವರಿಸಿದರು.

ಕಾಂಗ್ರೆಸ್‌ ಸರ್ಕಾರವು ರೈತರಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡುತ್ತಿಲ್ಲ. ರೈತರು ಕಷ್ಟಪಡುವಂತಾಗಿದೆ. ಈ ವಿಚಾರವನ್ನು ಜನರಿಗೆ ಮನದಟ್ಟು ಮಾಡಬೇಕು. ‘ಮೋದಿ ಗ್ಯಾರಂಟಿ’ ಎಂದರೆ, ನುಡಿದಂತೆ ನಡೆಯುವ ಗ್ಯಾರಂಟಿ ಎಂಬುದನ್ನು ತಿಳಿಹೇಳಬೇಕು. ‘ಮೋದಿ ಗ್ಯಾರಂಟಿ’ ಎಂದರೆ ಬಡವರಿಗೆ ಮನೆ ನಿರ್ಮಾಣ, ಶೌಚಾಲಯ, ಗ್ಯಾಸ್‌ ಸಂಪರ್ಕ, ಮನೆಮನೆಗೆ ನಲ್ಲಿ ನೀರಿನ ಸಂಪರ್ಕ, ಕಿಸಾನ್‌ ಸಮ್ಮಾನ್‌ ಸೇರಿ ಹಲವು ಉಪಯುಕ್ತ ಯೋಜನೆಗಳು. ಈ ಬಗ್ಗೆ ಜನರಿಗೆ ತಿಳಿಸಿ ಎಂದು ಮೋದಿ ಹೇಳಿದರು.

ಕಾರ್ಯಕರ್ತರಿಗೆ ಮೋದಿ ಪ್ರಶ್ನೆ

*ರಾಮಮಂದಿರದ ವಿಚಾರ ಎಷ್ಟು ಪ್ರಭಾವ ಬೀರಬಹುದು?

*ಜನರನ್ನು ಸಂಪರ್ಕಿಸುವ ಕೆಲಸ ಆರಂಭಿಸಿದ್ದೀರಾ?

*ಸಾಧನೆಗಳನ್ನು ತಿಳಿಸುತ್ತಿದ್ದೀರಾ?

*ಬಿಜೆಪಿ ಸರ್ಕಾರದ ಯಾವ ಕೆಲಸ ಹೆಚ್ಚು ಇಷ್ಟವಾಗಿದೆ?

ಕೈಯ ಮೇಲೆ ಕಮಲದ ಚಿಹ್ನೆ...

‘ಹಿಂದಿನ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಪಡೆದ ಮತಗಳ ಕುರಿತು ಮಾಹಿತಿ ಶೇಖರಿಸಿದ್ದೀರಾ’ ಎಂದು ಮೋದಿ ಕಾರ್ಯಕರ್ತರನ್ನು ಪ್ರಶ್ನಿಸಿದರು. ‘ಕಮಲದ ಚಿಹ್ನೆಯನ್ನು ಕೈಯ ಮೇಲೆ ಮೆಹಂದಿ ಮೂಲಕ ಹಾಕಿಕೊಳ್ಳಿ. ಇದರ ಮೂಲಕ ಜನಜಾಗೃತಿ ಮೂಡಿಸಿ ಎಂದು ಅವರು ಸಲಹೆ ಕೊಟ್ಟರು. ಯುಗಾದಿ ಸಂದರ್ಭದಲ್ಲಿ ಕಮಲದ ಚಿಹ್ನೆ ಮೂಲಕ ರಂಗೋಲಿ ಮಾಡುವ ಕುರಿತು ಸಲಹೆಯೂ ಒಳ್ಳೆಯದೇ’ ಎಂದು ಅವರು ಹೇಳಿದರು. ಬೇಸಿಗೆ ಕಾಲವಾದ್ದರಿಂದ ಬಿಸಿಲು ಪ್ರಖರವಾಗಿರುತ್ತದೆ. ಬಿಸಿಲು ಏರುವುದಕ್ಕೆ ಮುನ್ನವೇ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಿ. ಬಿಜೆಪಿ ಗೆಲ್ಲಲು ಪ್ರತಿಯೊಬ್ಬರೂ ಶ್ರಮ ಹಾಕಬೇಕು ಎಂದು ಅವರು ಸೂಚಿಸಿದರು. ಮೈಸೂರಿನ ರಾಜೇಶ್‌ ಶಿವಮೊಗ್ಗದ ಸರಳಾ ಬೆಳಗಾವಿಯ ಶ್ರುತಿ ಆಪ್ಟೇಕರ್‌ ಉಡುಪಿಯ ಸುಪ್ರೀತ್ ಭಂಡಾರಿ ಅವರಿಗೆ ಪ್ರಶ್ನೆಗಳನ್ನು ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT