ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಮೋಸ ಆಗಿಲ್ಲ: ಸುಮಲತಾ

ಬಿಜೆಪಿ ಸೇರಿದ ಮಂಡ್ಯ ಸಂಸದೆ
Published 5 ಏಪ್ರಿಲ್ 2024, 14:18 IST
Last Updated 5 ಏಪ್ರಿಲ್ 2024, 14:18 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯಿಂದ ನನಗೆ ಮೋಸ ಆಗಿಲ್ಲ. ಮೋಸ ಆಗಿದ್ದರೆ ನಾನು ಆದೇ ಪಕ್ಷವನ್ನು ಏಕೆ ಸೇರುತ್ತಿದ್ದೆ’ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಅವರು ಪ್ರಶ್ನಿಸಿದರು.

ಬಿಜೆಪಿಗೆ ಸೇರ್ಪಡೆಯಾದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿ, ‘ದೇಶದ ಅಭ್ಯುದಯಕ್ಕಾಗಿ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರೇರಣೆಗೊಂಡು ಅವರ ಕೈ ಬಲಪಡಿಸಲು ಬಿಜೆಪಿಗೆ ಸೇರಿದ್ದೇನೆ’ ಎಂದು ಹೇಳಿದರು.

‘ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರೇ. ಪಕ್ಷದ ವರಿಷ್ಠರು ಯಾವ ಜವಾಬ್ದಾರಿ ಕೊಡುತ್ತಾರೋ ಅದನ್ನು ನಿರ್ವಹಿಸುತ್ತೇನೆ. ಆ ಬಗ್ಗೆ ನಾಯಕರು ತಿರ್ಮಾನ ತೆಗೆದುಕೊಳ್ಳುತ್ತಾರೆ’ ಎಂದರು.

‘ಪುತ್ರ ಅಭಿಷೇಕ್ ಅಂಬರೀಷ್ ಸಿನಿಮಾ ರಂಗದಲ್ಲಿಯೇ ಮುಂದುವರೆಯುತ್ತಾರೆ. ಸದ್ಯಕ್ಕೆ ರಾಜಕೀಯಕ್ಕೆ ಬರುವುದಿಲ್ಲ. ಚಿತ್ರನಟರಾದ ದರ್ಶನ್, ಯಶ್‌ ಬೆಂಬಲ ಸದ್ಯಕ್ಕೆ ಅಪ್ರಸ್ತುತ. ಪಕ್ಷಕ್ಕಿಂತ ನಿಮ್ಮ ನಿರ್ಧಾರ ಮುಖ್ಯ ಎಂದು ಅವರು ನನಗೆ ತಿಳಿಸಿದ್ದಾರೆ’ ಎಂದರು.

ಪಕ್ಷದ ರಾಜ್ಯ ಘಟಕದ ಆಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ನರೇಂದ್ರ ಮೋದಿ ಅವರ ನಾಯಕತ್ವವನ್ನು ಇಡೀ ದೇಶವೇ ಮೆಚ್ಚುತ್ತಿದೆ. 400 ಸ್ಥಾನ ಗೆಲ್ಲಬೇಕು ಎಂಬ ಅಪೇಕ್ಷೆ ಮೋದಿ ಅವರದು ಮಾತ್ರವಲ್ಲ, ಜನಸಾಮಾನ್ಯರದು ಆಗಿದೆ’ ಎಂದು ಹೇಳಿದರು.

ಸುಮಲತಾ ಅಲ್ಲದೇ, ಕೊಪ್ಪಳ ಕ್ಷೇತ್ರದ ಮಾಜಿ ಸಂಸದ ಎಸ್‌.ಶಿವರಾಮೇಗೌಡ, ವಿಜಯಪುರ ಜಿಲ್ಲೆ ಯುವ ನಾಯಕ, ಸಚಿವ ಶಿವಾನಂದ ಪಾಟೀಲರ ಕುಟುಂಬದವರಾದ ಹರ್ಷಗೌಡ ಶಿವಶರಣ ಪಾಟೀಲ, ಮಾಜಿ ಕ್ರಿಕೆಟ್‌ ಪಟು ದೊಡ್ಡಗಣೇಶ್ ಬಿಜೆಪಿಗೆ ಸೇರಿದರು. 

ಪ್ರಚಾರಕ್ಕೆ ಎಚ್‌ಡಿಕೆ ಕರೆದಿಲ್ಲ: ಸುಮಲತಾ

‘ಕುಮಾರಸ್ವಾಮಿ ಅವರು ಸಹಕಾರ ಕೊಡಿ ಎಂದು ಹೇಳಿದ್ದಾರೆ. ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ’ ಎಂದು ಸುಮಲತಾ ಹೇಳಿದರು. ‘ಮಂಡ್ಯದಲ್ಲಿ ಕುಮಾರಸ್ವಾಮಿ ಪರ ಪ್ರಚಾರ ಕುರಿತು ಪಕ್ಷದ ಸೂಚನೆಯಂತೆ ನಡೆದುಕೊಳ್ಳುತ್ತೇನೆ. ಇದು ಮಂಡ್ಯದ ಚುನಾವಣೆಯಲ್ಲ ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆ’ ಎಂದರು.

ರಾಹುಕಾಲ ಮುಗಿದ ಬಳಿಕ ಸೇರ್ಪಡೆ

ಸುಮಲತಾ ಅವರ ಸೇರ್ಪಡೆ ಬೆಳಿಗ್ಗೆ 11.30 ಕ್ಕೆ ನಡೆಯಬೇಕಿತ್ತು. ಆದರೆ ಸುಮಲತಾ ಬರೋಬ್ಬರಿ ಒಂದು ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಬಂದರು. ಇದಕ್ಕೆ ಮುಖ್ಯ ಕಾರಣವೆಂದರೆ ಬೆಳಿಗ್ಗೆ 10.30 ರಿಂದ ರಾಹುಕಾಲ ಆರಂಭವಾಗಿತ್ತು. ಪಕ್ಷದ ಎಲ್ಲ ಹಿರಿಯ ನಾಯಕರು ಕಚೇರಿಗೆ ಬಂದು ಕುಳಿತಿದ್ದರೂ ಸುಮಲತಾ ಬಂದಿರಲಿಲ್ಲ. ರಾಹುಕಾಲ ಮುಗಿದ ಬಳಿಕ ಕಚೇರಿಗೆ ಬಂದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT