ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊಟಿಯಲ್ಲಿ ಸಿಎಂ ಪಾರ್ಟಿ: ಅಶೋಕ ವ್ಯಂಗ್ಯ

Published 9 ಮೇ 2024, 0:00 IST
Last Updated 9 ಮೇ 2024, 0:00 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಬರದಿಂದ ಜನತೆ ಸಂಕಷ್ಟದಲ್ಲಿ ಮುಳುಗಿರುವಾಗ ಊಟಿಯಲ್ಲಿ ಪಾರ್ಟಿ ಮಾಡಿಕೊಂಡು ಮೋಜು ಮಾಡುತ್ತಿರುವ ನಿಮಗೆ ಕನ್ನಡಿಗರ ಬಗ್ಗೆ ಬದ್ಧತೆ ಇದೆಯೇ’ ಎಂದು  ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

‘ಸಿದ್ದರಾಮಯ್ಯ ಅವರೇ ನಿಮ್ಮ ಸರ್ಕಾರದ ಎಡವಟ್ಟುಗಳು, ದುರಾಡಳಿತ ಮತ್ತು ಬೇಜವಾಬ್ದಾರಿಯಿಂದ ರಾಜ್ಯದ ಜನತೆ ಅನುಭವಿಸುತ್ತಿರುವ ಸಂಕಷ್ಟಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಮಜಾ ಮಾಡಿಕೊಂಡು ಪ್ರಧಾನಿ ಮೋದಿಯವರ ಬಗ್ಗೆ ಅನಾವಶ್ಯಕ ಟೀಕೆಗಳ ಮೂಲಕ ರಾಜಕೀಯ ಮಾಡುತ್ತಿರುವ ನಿಮಗೆ ನಾಚಿಗೆ ಆಗಬೇಕು’ ಎಂದು ಅವರು ‘ಎಕ್ಸ್‌’ ಮೂಲಕ ತಿವಿದಿದ್ದಾರೆ.

‘ಮೋದಿಯವರು ಒಂದು ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಮಂತ್ರಿಯಾಗಿ ಕಳೆದ 23 ವರ್ಷಗಳಿಂದ ಸತತವಾಗಿ ಸರ್ಕಾರದ ಮುಖ್ಯಸ್ಥರಾಗಿ ಒಂದು ದಿನವೂ ರಜೆ ತೆಗೆದುಕೊಳ್ಳದೇ ಜನರ ಸೇವೆ ಮಾಡುತ್ತಿದ್ದಾರೆ. ಮೋದಿ ಅವರೆಲ್ಲಿ ತಾವೆಲ್ಲಿ’ ಎಂದು ಕುಟುಕಿದ್ದಾರೆ.

ದುರಾಡಳಿತಕ್ಕೆ ಇಲ್ಲಿದೆ ಸಾಕ್ಷಿ:

* ಕೇಂದ್ರ ಸರ್ಕಾರದಿಂದ ರೈತರಿಗೆ ಬರ ಪರಿಹಾರ ನೀಡಲು ₹3,454 ಕೋಟಿ ಬಿಡುಗಡೆ ಮಾಡಿ ಎರಡು ವಾರ ಕಳೆದರೂ ಒಂದು ನಯಾಪೈಸೆ ಬರ ಪರಿಹಾರ ರೈತರ ಕೈ ಸೇರಿಲ್ಲ.

* ಹೈನುಗಾರರಿಗೆ ಏಳು ತಿಂಗಳಿಂದ ಬಾಕಿ ಇರುವ ₹700 ಕೋಟಿ ಇನ್ನೂ ಪಾವತಿ ಮಾಡಿಲ್ಲ.

* ತೆಂಗು ಬೆಳೆಗಾರರ ನಷ್ಟದ ಬಗ್ಗೆ ಅಧ್ಯಯನ ನಡೆಸಲು ಇನ್ನೂ ಸಮಿತಿ ರಚಿಸಿಲ್ಲ.

*ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣದ ಜಾಲ ದಿನೇ ದಿನೇ ಹೆಚ್ಚಾಗುತ್ತಿದ್ದರೂ ಇನ್ನೂ ಎಸ್‌ಐಟಿ ರಚನೆ ಮಾಡಿಲ್ಲ.

*ಅಂಗನವಾಡಿಗಳಲ್ಲಿ ಊಟ, ಆರೈಕೆ ಸರಿ ಇಲ್ಲದೆ 2 ಲಕ್ಷಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಕಡಿಮೆ ಆಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

* ಆಂಬುಲೆನ್ಸ್‌ ಚಾಲಕರಿಗೆ ಮೂರು ತಿಂಗಳಿಂದ ವೇತನ ಪಾವತಿ ಆಗಿಲ್ಲ.

* ಸಿಇಟಿ ಪ್ರಶ್ನೆ ಪತ್ರಿಕೆ ಎಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದ್ದರೂ ತಮಗೆ ಯಾವುದೇ ಚಿಂತೆ ಇಲ್ಲ.

*ಒಂದು ವಾರದೊಳಗೆ ಬಾಕಿ ಬಿಲ್‌ ಪಾವತಿ ಆಗದಿದ್ದರೆ ಕಾಮಗಾರಿ ಸ್ಥಗಿತಗೊಳಿಸುತ್ತೇವೆ ಎಂದು ಗುತ್ತಿಗೆದಾರರ ಸಂಘದ ಗಡುವು ನೀಡಿದ್ದರೂ ನಿಮ್ಮ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT