ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ ಲೋಕಸಭಾ ಚುನಾವಣೆ: ಸ್ನೇಹ ನಿವೇದನೆಗೆ ಸಂಸದೆ ಸುಮಲತಾ ಒಪ್ಪುವರೇ?

ಸಂಸದೆ ಸುಮಲತಾ ಅವರ ಮನೆಯ ಬಾಗಿಲು ತಟ್ಟಿದ ಎಚ್‌.ಡಿ.ಕುಮಾರಸ್ವಾಮಿ
ಎಂ.ಎನ್‌.ಯೋಗೇಶ್‌
Published 1 ಏಪ್ರಿಲ್ 2024, 6:02 IST
Last Updated 1 ಏಪ್ರಿಲ್ 2024, 6:02 IST
ಅಕ್ಷರ ಗಾತ್ರ

ಮಂಡ್ಯ: ಕಳೆದ 5 ವರ್ಷಗಳಿಂದ ಸಂಸದೆ ಸುಮಲತಾ ವಿರುದ್ಧ ಬೆಂಕಿಯ ಮಾತುಗಳನ್ನಾಡುತ್ತಿದ್ದ ಜೆಡಿಎಸ್‌ ಮುಖಂಡರು ಈಗ ಚುನಾವಣೆಗಾಗಿ ಅವರ ಸ್ನೇಹ ಸಂಬಂಧ ಬೆಳೆಸಲು ಮುಂದಾಗಿದ್ದಾರೆ. ಆ ಮೂಲಕ ‘ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರಲ್ಲ’ ಎಂಬುದನ್ನು ಸಾಬೀತು ಮಾಡಿದ್ದಾರೆ.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಸುಮಲತಾ ಅವರನ್ನು ಭೇಟಿಯಾಗಿ ಮೈತ್ರಿಗೆ ಬೆಂಬಲ ಕೋರಿರುವುದು ಜಿಲ್ಲೆಯಾದ್ಯಂತ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭ ಹಾಗೂ ಚುನಾವಣೆ ನಂತರವೂ ಸುಮಲತಾ– ಜೆಡಿಎಸ್‌ ಮುಖಂಡರ ನಡುವೆ ‘ಏಟ– ಎದಿರೇಟು’ ಮುಂದುವರಿದೇ ಇತ್ತು.

ಈಗ ಎಚ್‌.ಡಿ.ಕುಮಾರಸ್ವಾಮಿ ಅವರು ತಾವೇ ಹುರಿಯಾಳು ಆಗಿರುವಾಗ ಕಳೆದ 5 ವರ್ಷಗಳಿಂದ ನಡೆದುದ್ದೆಲ್ಲವನ್ನೂ ಮರೆತು ಅವರು ಸುಮಲತಾ ಅವರ ಮನೆ ಬಾಗಿಲು ತಟ್ಟಿದ್ದಾರೆ. ಜೆಡಿಎಸ್‌– ಬಿಜೆಪಿ ಮೈತ್ರಿ ಮಾತುಕತೆ ಆರಂಭವಾದಾಗಲೇ ‘ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ಸ್ನೇಹಸೂತ್ರ’ ಸಿದ್ಧಗೊಂಡಿದೆ ಎಂದೇ ಹೇಳಲಾಗುತ್ತಿತ್ತು, ಈಗ ಅದು ನಿಜವಾಗಿದೆ. ಕುಮಾರಸ್ವಾಮಿ ಅವರ ಸ್ನೇಹ ನಿವೇದನೆಗೆ ಸುಮಲತಾ ಉತ್ತರ ಏನು ಎಂಬುದು ಕುತೂಹಲ ಮೂಡಿಸಿದೆ.

‘ಬಿಜೆಪಿ ಟಿಕೆಟ್‌ ವಂಚಿತಗೊಂಡ ನಂತರ ಸುಮಲತಾ ಅವರ ಮುಂದಿನ ನಡೆ ಬಗ್ಗೆ ಪ್ರಶ್ನೆ ಇದೆ. ಕಾಂಗ್ರೆಸ್‌ ಮುಖಂಡರು ಕೂಡ ಅವರ ಬೆಂಬಲ ಪಡೆಯಲು ಯತ್ನಿಸುತ್ತಿದ್ದಾರೆ. ಅವರು ಕಾಂಗ್ರೆಸ್‌ ಕಡೆ ಮುಖ ಮಾಡುವ ಮೊದಲೇ ಎಚ್‌.ಡಿ.ಕುಮಾರಸ್ವಾಮಿ ಅವರು ಧಾವಂತದಿಂದ ಅವರ ಮನೆಗೆ ಹೋಗಿ ಬೆಂಬಲ ಕೋರಿದ್ದಾರೆ’ ಎಂಬುದು ಸ್ಥಳೀಯರು ಅಭಿಪ್ರಾಯ.

ಹೀಯಾಳಿಸಿದ್ದರು: ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಸುಮಲತಾ ಸ್ಪರ್ಧೆ ಮಾಡಿದ್ದನ್ನೇ ಆಗ ಮುಖ್ಯಮಂತ್ರಿಯಾಗಿದ್ದ ಎಚ್‌ಡಿಕೆ ಸಹಿಸಿಕೊಂಡಿರಲಿಲ್ಲ, ಅವರ ಮಾತುಗಳಲ್ಲಿ ಅಸಹಿಷ್ಣುತೆ ಎದ್ದು ಕಾಣುತ್ತಿತ್ತು. ಪುತ್ರನ ಗೆಲುವಿಗಾಗಿ ಅಂಬರೀಷ್‌ ಮೃತದೇಹದ ಕುರಿತಾಗಿಯೂ ಮಾತನಾಡಿದ್ದರು.

ಜೆಡಿಎಸ್‌ ಮುಖಂಡರು ಅವರ ವೈಯಕ್ತಿಕ ವಿಚಾರಗಳನ್ನೆಲ್ಲಾ ತೆಗೆದು ಹೀಯಾಳಿಸಿದ್ದರು. ‘ಸುಮಲತಾ ಮಂಡ್ಯ ಗೌಡ್ತಿಯಲ್ಲ’ ಎಂದು ಜೆಡಿಎಸ್‌ ನಾಯಕ ಕೆ.ಟಿ.ಶ್ರೀಕಂಠೇಗೌಡ ಹೇಳಿದ್ದರು. ‘ಗಂಡ ಸತ್ತು 6 ತಿಂಗಳಾಗಿಲ್ಲ, ಇವರಿಗೆ ಚುನಾವಣೆ ಬೇಕಿತ್ತಾ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಪ್ರಶ್ನಿಸಿದ್ದರು. ‘ಮನೆಗೆ ಹೋದರೆ ಸುಮಲತಾ ಒಂದು ಲೋಟ ನೀರು ಕೊಡುವುದಿಲ್ಲ’ ಎಂದು ಡಿ.ಸಿ.ತಮ್ಮಣ್ಣ ಹೇಳಿದ್ದರು.

ಚುನಾವಣೆ ನಡೆದ ನಂತರೂ ಜೆಡಿಎಸ್‌ ನಾಯಕರು ಹಾಗೂ ಸುಮಲತಾ ನಡುವೆ ಮಾತಿಕ ಚಕಮಕಿ ಮುಂದುವರಿದಿತ್ತು. ಕಲ್ಲು ಗಣಿಗಾರಿಕೆ, ಕೆಆರ್‌ಎಸ್‌ ಜಲಾಶಯ ಸೇರಿದಂತೆ ಹಲವು ವಿಚಾರಗಳಲ್ಲಿ ಜಟಾಪಟಿ ಮುಂದುವರಿದಿತ್ತು.

ಈಗ ಪರಿಸ್ಥಿತಿ ಬದಲಾಗಿದ್ದು ಕುಮಾರಸ್ವಾಮಿ ಅವರು ಸಂಸದೆಯ ಸ್ನೇಹ ಬಯಸಿದ್ದಾರೆ.  ‘ಇದು ಧರ್ಮ ಯುದ್ಧ, ಈ ಚುನಾವಣೆಯನ್ನು ಸೋತರೆ ಇದ್ದೂ ಸತ್ತಂತೆ’ ಎಂದು ಹೇಳಿರುವ ಕುಮಾರಸ್ವಾಮಿ ಅವರು ಗೆಲುವಿಗಾಗಿ ಏನು ಬೇಕಾದರೂ ಮಾಡುತ್ತಾರೆ ಎಂದೇ ಚರ್ಚೆಯಾಗುತ್ತಿದೆ.

‘ಕಾಂಗ್ರೆಸ್‌ ಸೇರಲು ಸಿದ್ಧರಾಗಿದ್ದ ಕೆ.ಸಿ.ನಾರಾಯಣಗೌಡರನ್ನು ಎಚ್‌ಡಿಕೆ ತಡೆದಿದ್ದಾರೆ, ಈಗ ಸುಮಲತಾ ಮನೆಯ ಬಾಗಿ ತಟ್ಟಿ ಅವರ ಬೆಂಬಲ ಪಡೆಯಲು ಪ್ರಯತ್ನಿಸಿದ್ದಾರೆ. ಮುಂದೆ ಇನ್ನೂ ಏನೇನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ’ ಎಂದು ವಕೀಲ ಶಿವಕುಮಾರ್‌ ಹೇಳಿದರು.

ಎಚ್.ಡಿ.ಕುಮಾರಸ್ವಾಮಿ ಅವರ ಸ್ನೇಹ ನಿವೇದನೆಗೆ ಸುಮಲತಾ ಅವರು ಒಪ್ಪುತ್ತಾರಾ, ಮೈತ್ರಿಗೆ ಬೆಂಬಲ ನೀಡುತ್ತಾರಾ, ಕಾಂಗ್ರೆಸ್‌ ಕಡೆ ವಾಲುತ್ತಾರಾ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ, ತಟಸ್ಥವಾಗಿ ಉಳಿಯುತ್ತಾರಾ ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ.

‘ಸುಮಲತಾ ಮೈತ್ರಿಗೆ ಬೆಂಬಲ ಕೊಡಲಿ ಅಥವಾ ಕೊಡದಿರಲಿ. ಆದರೆ, ಕುಮಾರಸ್ವಾಮಿ ಅವರು ಸಂಸದೆಯನ್ನು ಭೇಟಿ ಮಾಡಿ ಉತ್ತಮ ನಡೆ ಪ್ರದರ್ಶಿಸಿದ್ದಾರೆ. ಇದು ಗೆಲುವಿಗೆ ಅನುಕೂಲವಾಗಲಿದೆ’ ಎಂದು ಜೆಡಿಎಸ್‌ ನಾಯಕರೊಬ್ಬರು ತಿಳಿಸಿದರು.

ಬಿಜೆಪಿ ಮುಖಂಡರ ವಿರೋಧ

ಎಚ್‌.ಡಿ.ಕುಮಾರಸ್ವಾಮಿ ಅವರು ಸಂಸದೆ ಸುಮಲತಾ ಅವರ ಮನೆಗೆ ತೆರಳಿದ್ದಕ್ಕೆ ಕೆಲ ಸ್ಥಳೀಯ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಕುಮಾರಸ್ವಾಮಿ ಅವರ ಪರವಾದ ಅಲೆ ಇದೆ ಗೆಲುವು ಖಾತ್ರಿ ಇರುವಾಗ ಸುಮಲತಾ ಅವರ ಬೆಂಬಲ ಕೋರುವ ಅಗತ್ಯವೇನಿತ್ತು? ಗೆದ್ದ ನಂತರ ತನ್ನಿಂದಲೇ ಗೆಲುವಾಯಿತು ಎಂದು ಸುಮಲತಾ ಹೇಳಿಕೊಂಡು ಓಡಾಡುತ್ತಾರೆ’ ಎಂದರು. ‘ಸ್ವಾಭಿಮಾನದ ಹೆಸರಿನಲ್ಲಿ ಗೆದ್ದ ಸುಮಲತಾ ಈಗ ಸ್ವಾಭಿಮಾನವನ್ನು ಬಿಸಾಡಿ ಕುಮಾರಸ್ವಾಮಿ ಅವರನ್ನು ಬೆಂಬಲಿಸಲು ಸಾಧ್ಯವೇ’ ಎಂದು ಮತ್ತೊಬ್ಬ ಮುಖಂಡ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT