ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಚುನಾವಣಾ ಅಕ್ರಮ ತಡೆಗೆ ಕ್ರಮ: ವಾರ್‌ರೂಮ್‌ನಿಂದಲೇ ‘ಹದ್ದಿನ ಕಣ್ಣು’

ಚೆಕ್‌ಪೋಸ್ಟ್‌ಗಳಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆ
Published 14 ಏಪ್ರಿಲ್ 2024, 6:46 IST
Last Updated 14 ಏಪ್ರಿಲ್ 2024, 6:46 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭಾ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತವು ಸಜ್ಜಾಗಿದ್ದು, ಅತ್ಯಂತ ಕಟ್ಟುನಿಟ್ಟಿನ ಕ್ರಮ ವಹಿಸಿ ಕೆಲಸ ನಿರ್ವಹಿಸುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ವಾರ್‌ ರೂಮ್‌ ಆರಂಭಿಸಿದ್ದು, ನೀತಿ ಸಂಹಿತೆ ಉಲ್ಲಂಘನೆ, ಚೆಕ್‌ಪೋಸ್ಟ್‌ಗಳಲ್ಲಿನ ಚಲನವಲನ, ರಾಜಕೀಯ ಸಮಾವೇಶಗಳ ಮೇಲೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

ಪೇಯ್ಡ್‌ ನ್ಯೂಸ್‌ ಟೀಂ, ಜಿಪಿಎಸ್‌ ಟ್ರ್ಯಾಕಿಂಗ್‌ ಟೀಂ, ಚೆಕ್‌ಪೋಸ್ಟ್‌ ವೆರಿಫಿಕೇಷನ್‌ ಟೀಂ, ನೋಡಲ್‌ ಅಧಿಕಾರಿ, ಸಹಾಯಕರು, ಕಂಪ್ಯೂಟರ್‌ ಆಪ್‌ರೇಟರ್‌ಗಳು ಸೇರಿದಂತೆ ಇನ್ನಿತರ ಸಿಬ್ಬಂದಿಯು ವಾರ್‌ರೂಮ್‌ನಲ್ಲಿ 24/7 ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಿಗೂ ತಲಾ ಒಬ್ಬ ನೋಡಲ್‌ ಅಧಿಕಾರಿಯನ್ನು ನೇಮಿಸಲಾಗಿದೆ. ಇವರೊಂದಿಗೆ ಸಹಾಯಕರು ಹಾಗೂ ಆಪರೇಟರ್‌ಗಳೂ ಕಾರ್ಯನಿರ್ವಹಿಸುತ್ತಿದ್ದಾರೆ.

ವಾರ್‌ರೂಮ್‌ನಲ್ಲಿ ಕೆಲಸ ನಿರ್ವಹಿಸುವ ನೋಡಲ್‌ ಅಧಿಕಾರಿಗಳು, ಅವರಿಗೆ ನಿಗದಿಪಡಿಸಿದ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುವ ರಾಜಕೀಯ ಚಟುವಟಿಕೆಗಳ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ನೀತಿಸಂಹಿತೆ ಉಲ್ಲಂಘನೆ ಬಗ್ಗೆ ಸಾರ್ವಜನಿಕರಿಂದ ದೂರು ಬಂದರೆ ಅಥವಾ ಟಿವಿ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ವರದಿ ಬಂದರೆ ಆಯಾ ತಾಲ್ಲೂಕು ಕಚೇರಿಯಲ್ಲಿನ ಸಹಾಯಕ ಚುನಾವಣಾಧಿಕಾರಿಗೆ ಮಾಹಿತಿ ನೀಡಿ, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸುತ್ತಾರೆ.

ಫ್ಲೈಯಿಂಗ್‌ ಸ್ಕ್ವಾಡ್‌ ಟೀಂ (ಎಫ್‌ಎಸ್‌ಟಿ):

ಕ್ಷೇತ್ರದಲ್ಲಿ ನೀತಿ ಸಂಹಿತೆ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸುವುದು, ಗಣ್ಯರು, ಅತೀ ಗಣ್ಯರ (ವಿಐಪಿ, ವಿವಿಐಪಿ) ಕಾರ್‌, ಹೆಲಿಕಾಪ್ಟರ್‌ ಸೇರಿದಂತೆ ಇನ್ನಿತರ ವಾಹನಗಳ ತಪಾಸಣೆ ಕಾರ್ಯ ನಡೆಸುವ ಕೆಲಸವನ್ನು ಈ ತಂಡವು ನಿರಂತರವಾಗಿ ಮಾಡುತ್ತಿದೆ. ಪ್ರತೀ ತಾಲ್ಲೂಕು ವ್ಯಾಪ್ತಿಯಲ್ಲಿ 3 ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ ಪಕ್ಷಗಳಿಂದ ಹಂಚಲಾಗುವ ಹಣ ಹಾಗೂ ಇನ್ನಿತರ ವಸ್ತುಗಳ ಬಗ್ಗೆಯೂ ತಂಡದ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ.

32 ಚೆಕ್‌ಪೋಸ್ಟ್‌ಗಳು:

ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 32 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 5, ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 4, ದಾವಣಗೆರೆ ಉತ್ತರದಲ್ಲಿ 5, ದಾವಣಗೆರೆ ದಕ್ಷಿಣದಲ್ಲಿ 4, ಮಾಯಕೊಂಡದಲ್ಲಿ 3, ಚನ್ನಗಿರಿ 5, ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 6 ಚೆಕ್‌ಪೋಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. 

ಪ್ರತೀ ಚೆಕ್‌ಪೋಸ್ಟ್‌ನಲ್ಲಿ ಎಸ್‌ಎಸ್‌ಟಿ (ಸ್ಟ್ಯಾಟಿಕ್‌ ಸರ್ವೆಲೆನ್ಸ್‌ ಟೀಂ) ಅಧಿಕಾರಿ, ಪೊಲೀಸ್‌ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತೀ ವಾಹನವನ್ನೂ ತಪಾಸಣೆ ನಡೆಸುವುದು ಹಾಗೂ ದಾಖಲೆಗಳಿಲ್ಲದ ಹಣ, ಆಭರಣ ಹಾಗೂ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗುತ್ತದೆ. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿಯೂ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿದ್ದು, ವಾರ್‌ರೂಮ್‌ನಲ್ಲಿಯೇ ಕುಳಿತು ಚೆಕ್‌ಪೋಸ್ಟ್‌ನಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿನ ವಾರ್‌ ರೂಮ್‌ನಲ್ಲಿ ಚುನಾವಣಾ ಅಧಿಕಾರಿಗಳು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವುದು
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿನ ವಾರ್‌ ರೂಮ್‌ನಲ್ಲಿ ಚುನಾವಣಾ ಅಧಿಕಾರಿಗಳು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುವುದು
ನೀತಿಸಂಹಿತೆ ಜಾರಿಯಾದಾಗಿನಿಂದ ವಾರ್‌ ರೂಮ್‌ ಆರಂಭಿಸಿದ್ದು ತಂತ್ರಜ್ಞಾನದ ನೆರವಿನಿಂದ ಅತ್ಯಂತ ತ್ವರಿತವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಚುನಾವಣಾ ಅಕ್ರಮದ ಬಗ್ಗೆ ಸಾರ್ವಜನಿಕರಿಂದ ದೂರುಗಳನ್ನೂ ಸ್ವೀಕರಿಸಲಾಗುತ್ತಿದೆ
–ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ ಹೆಚ್ಚುವರಿ ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ಸೂಚನೆಯಂತೆ ಅಕ್ರಮ ತಡೆ ನ್ಯಾಯಸಮ್ಮತ ಪಕ್ಷಪಾತ ರಹಿತ ಚುನಾವಣೆಗೆ ಶ್ರಮಿಸಲಾಗುತ್ತಿದೆ. ವಾರ್‌ರೂಮ್‌ನಲ್ಲಿ ಪಾಳಿ ಪ್ರಕಾರ 24/7 ಅಧಿಕಾರಿಗಳು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದೇವೆ
–ಉದಯ ಕುಂಬಾರ ಜಿಲ್ಲಾ ನೋಡಲ್ ಅಧಿಕಾರಿ ವಾರ್‌ರೂಮ್‌
ಸಹಾಯವಾಣಿಗೆ 369 ಕರೆಗಳು
ಜಿಲ್ಲಾಡಳಿತ ಭವನದಲ್ಲಿ ಆರಂಭಗೊಂಡಿರುವ ಉಚಿತ ಸಹಾಯವಾಣಿ ಸಂಖ್ಯೆಗೆ (1950) ಮಾರ್ಚ್‌ 17ರಿಂದ ಶನಿವಾರ ಮಧ್ಯಾಹ್ನದ ವರೆಗೂ 369 ಕರೆಗಳು ಬಂದಿವೆ. ಸಾರ್ವಜನಿಕರು ಚುನಾವಣಾ ಗುರುತಿನ ಚೀಟಿಗೆ ಸಂಬಂಧಿಸಿದ ಮಾಹಿತಿ ಪಡೆಯಲು ದೂರು ನೀಡಲು ಈ ಸಹಾಯವಾಣಿಗೆ ಕರೆ ಮಾಡುತ್ತಿದ್ದಾರೆ. ಚುನಾವಣಾ ಗುರುತಿನ ಚೀಟಿಯಲ್ಲಿನ ಹೆಸರು ತಿದ್ದುಪಡಿ ವಿಳಾಸ ಬದಲಾವಣೆ ಹೊಸದಾಗಿ ಅರ್ಜಿ ಸಲ್ಲಿಸುವುದು ಸೇರಿದಂತೆ ಇನ್ನಿತರ ಮಾಹಿತಿಗಾಗಿ ಮತದಾರರು ಕರೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT