ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: 2018ರಲ್ಲಿ ‘ನೋಟಾ’ ಚಲಾಯಿಸಿದ್ದ 6 ಸಾವಿರ ಮಂದಿ!

2018ರ ವಿಧಾನಸಭೆ ಚುನಾವಣೆ; ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿ ಬಿಟ್ಟು ನೋಟಾಗೆ ಮತ
Published 9 ಮೇ 2023, 5:52 IST
Last Updated 9 ಮೇ 2023, 5:52 IST
ಅಕ್ಷರ ಗಾತ್ರ

ಕೆ.ಓಂಕಾರ ಮೂರ್ತಿ

ಕೋಲಾರ: 2018ರ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳಲ್ಲಿ 6,103 ಮತದಾರರು ತಮಗೆ ಯಾವುದೇ ಅಭ್ಯರ್ಥಿಗಳು ಇಷ್ಟ ಇಲ್ಲವೆಂದು ತಿರಸ್ಕರಿಸಿದ್ದರು.

ಈ ಮತದಾರರು ವಿದ್ಯುನ್ಮಾನ ಮತಯಂತ್ರದಲ್ಲಿ ಅಳವಡಿಸಿದ್ದ ’ನೋಟಾ’ ಬಟನ್‌ ಒತ್ತಿ ಈ ನಿರ್ಧಾರ ಪ್ರಕಟಿಸಿದ್ದರು.

2014ರ ಲೋಕಸಭೆ ಚುನಾವಣೆಯಲ್ಲಿ ನೋಟಾ ಆಯ್ಕೆ ಮೊದಲ ಬಾರಿ ಜಾರಿಗೆ ಬಂತು. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ 2018ರಲ್ಲಿ ಮೊದಲ ಬಾರಿ ಪೂರ್ಣ ಪ‍್ರಮಾಣದಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿತ್ತು.

‘ನೋಟಾ’ದಿಂದ ಯಾವುದೇ ಕ್ಷೇತ್ರದ ಅಭ್ಯರ್ಥಿಯ ಸೋಲು ಗೆಲುವಿನ ಮೇಲೆ ಪರಿಣಾಮ ಉಂಟಾಗಿಲ್ಲವಾದರೂ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡುವ ತಮ್ಮ ಉದ್ದೇಶವನ್ನು ಮತದಾರರು ಈಡೇರಿಸಿಕೊಂಡಿದ್ದರು.

ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಬಳಿಕದ ಸ್ಥಾನ ಲಭಿಸಿದ್ದು ‘ನೋಟಾ’ಗೆ. ಕೆಜಿಎಫ್‌ ಮೀಸಲು ಕ್ಷೇತ್ರದಲ್ಲಿ 1,750 ಅತಿ ಹೆಚ್ಚು ಹಾಗೂ ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ 646 ಅತಿ ಕಡಿಮೆ ‘ನೋಟಾ’ ಚಲಾವಣೆ ಆಗಿತ್ತು. ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ ನಾಲ್ಕನೇ ಸ್ಥಾನ, ಕೆಜಿಎಫ್‌ ಹಾಗೂ ಬಂಗಾರಪೇಟೆಯಲ್ಲಿ 5ನೇ ಸ್ಥಾನ ಸಿಕ್ಕಿತ್ತು.

ಆಗ ಮುಳಬಾಗಿಲು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಎಚ್‌.ನಾಗೇಶ್‌ ಅವರು ಜೆಡಿಎಸ್‌ನ ಸಮೃದ್ಧಿ ಮಂಜುನಾಥ್‌ ಎದುರು ಕೇವಲ ಕೇವಲ 6,715 ಮತಗಳಿಂದ ಗೆದ್ದಿದ್ದರು. ವಿಶೇಷವೆಂದರೆ ಈ ಕ್ಷೇತ್ರದಲ್ಲಿ 646 (ಶೇ 0.39) ‘ನೋಟಾ’ ಚಲಾವಣೆ ಆಗಿದ್ದವು.

ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಈ ಬಾರಿ ‘ನೋಟಾ’ ಆಯ್ಕೆ ಬಳಸುವುದಾಗಿ ಹಲವು ಸಂಘಟನೆಗಳ ಸದಸ್ಯರು ಹೇಳಿಕೊಂಡಿದ್ದಾರೆ.

‘ಚುನಾವಣೆ ಮೇಲೆ ನೋಟಾ ಅಷ್ಟೇನೂ ಪ್ರಭಾವ ಬೀರುವುದಿಲ್ಲ. ಅಭ್ಯರ್ಥಿಗಳ ಗೆಲುವಿನ ಅಂತರ ತುಸು ಕಡಿಮೆಯಾಗಬಹುದು ಅಷ್ಟೆ‌. ಆದರೆ, ಇದೊಂದು ಪ್ರತಿರೋಧದ ಅಸ್ತ್ರ’ ಎನ್ನುತ್ತಾರೆ ಚುನಾವಣಾ ವಿಶ್ಲೇಷಕರು.

ಚುನಾವಣೆಗೂ ಮುನ್ನ ಮತಯಂತ್ರದಲ್ಲಿ ನೋಟಾ ಆಯ್ಕೆಯೊಂದಿಗೆ ವಿವಿಧೆಡೆ ಮತದಾರರಿಗೆ ಜಿಲ್ಲಾಡಳಿದಿಂದಲೂ ಮಾಹಿತಿ ನೀಡಲಾಗಿದೆ.

ನೋಟಾ ಎಂದರೆ?: None of the above ಎಂಬುದು NOTA ಪದದ ಪೂರ್ಣ ಅರ್ಥ. ಮತದಾನ ಪಟ್ಟಿಯಲ್ಲಿರುವ ಯಾರೂ ನನ್ನ ಮತಕ್ಕೆ ಅರ್ಹರಲ್ಲ ಎಂಬುದು ಇದರ ಅರ್ಥ. 2014ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿ ನೋಟಾ ಜಾರಿಗೊಂಡಿತು. ಈ ಬಟನ್‌ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೊನೆಯಲ್ಲಿರುತ್ತದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಚಲಾವಣೆಯಾಗಿದ್ದ ನೋಟಾ

ಕ್ಷೇತ್ರ; ನೋಟಾ; ಸ್ಥಾನ; ಶೇ; ಕಣದಲ್ಲಿದ್ದವರು

ಶ್ರೀನಿವಾಸಪುರ; 689; 6; 0.37; 13

ಮುಳಬಾಗಿಲು; 646; 10; 0.39; 40

ಕೆಜಿಎಫ್‌; 1750; 5; 1.25; 17

ಕೋಲಾರ; 1195; 7; 0.67; 22

ಬಂಗಾರಪೇಟೆ; 1127; 4; 0.72; 11 ಮಾಲೂರು; 696; 5; 0.43; 13

ಲೋಕಸಭೆ: ನೋಟಾಗೆ 3ನೇ ಸ್ಥಾ‌ನ!

2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ‘ನೋಟಾ’ಗೆ ಮೂರನೇ ಸ್ಥಾನ ಸಿಕ್ಕಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿಯ ಎಸ್‌.ಮುನಿಸ್ವಾಮಿ ಹಾಗೂ ಕಾಂಗ್ರೆಸ್‌ ಕೆ.ಎಚ್‌.ಮುನಿಯಪ್ಪ ಬಳಿಕದ ಸ್ಥಾನ ಲಭಿಸಿತ್ತು. 13889 ಮಂದಿ ‘ನೋಟಾ’ ಬಟನ್‌ ಒತ್ತಿ ತಮ್ಮ ಮತ ಹಾಕಿದ್ದರು. ಶೇ 1.1 ಮತದಾರರು ಈ ಆಯ್ಕೆ ಮಾಡಿಕೊಂಡಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT