ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಮಂಜುನಾಥ್‌ ವಿರುದ್ಧ ಮತ್ತೊಬ್ಬ ಸಿ.ಎನ್. ಮಂಜುನಾಥ್ ಸ್ಪರ್ಧೆ!

ಬಹುಜನ ಭಾರತ ಪಾರ್ಟಿಯಿಂದ ಸ್ಪರ್ಧಿಸಲು ಸಿದ್ಧತೆ
Published 28 ಮಾರ್ಚ್ 2024, 21:42 IST
Last Updated 28 ಮಾರ್ಚ್ 2024, 21:42 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿಯಿಂದ ಡಾ. ಸಿ.ಎನ್‌. ಮಂಜುನಾಥ್ ಅವರು ಸ್ಪರ್ಧಿಸಿದ್ದಾರೆ. ಇದೀಗ ಅದೇ ಹೆಸರಿನ ಮತ್ತೊಬ್ಬರು ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಇವರ ಹೆಸರು ಸಹ ಸಿ.ಎನ್. ಮಂಜುನಾಥ್. ಅಂದಹಾಗೆ ಇವರು ಸಹ ಡಾ. ಮಂಜುನಾಥ್ ಅವರ ತವರು ಚನ್ನರಾಯಪಟ್ಟಣದವರೇ ಎಂಬುದು ವಿಶೇಷ.

ಚನ್ನರಾಯಪಟ್ಟಣದ ತಾಲ್ಲೂಕು ಪಂಚಾಯಿತಿ ಮತ್ತು ಪುರಸಭೆಯ ಮಾಜಿ ಸದಸ್ಯರಾಗಿರುವ ಮಂಜುನಾಥ್ ಅವರು ಪಟ್ಟಣದ ಶಾರದಾ ನಗರದವರು. ದಲಿತ ಸೇನಾ ಪಡೆ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಅವರು, ಮಾದಿಗ ದಂಡೋರ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್‌ಪಿ ಕಾರ್ಯಕರ್ತರಾಗಿಯೂ ಕೆಲಸ ಮಾಡಿರುವ ಅವರು ಇದೀಗ ಗ್ರಾಮಾಂತರ ಕ್ಷೇತ್ರದಲ್ಲಿ ಏಪ್ರಿಲ್ 2ರಂದು ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಿ.ಎನ್. ಬಾಲಕೃಷ್ಣ ಪರ ಕೆಲಸ: ‘ಮೂವತ್ತು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ನಾನು ಎಲ್ಲಾ ಪಕ್ಷಗಳಲ್ಲೂ ಕೆಲಸ ಮಾಡಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧೆಗೆ ಅವಕಾಶ ಕೊಡುವುದಾಗಿ ಹೇಳಿ ಕೈ ಕೊಟ್ಟರು. ಹಾಗಾಗಿ, ಡಾ. ಮಂಜುನಾಥ್ ಅವರ ಸಹೋದರನಾದ ಜೆಡಿಎಸ್‌ನ ಸಿ.ಎನ್. ಬಾಲಕೃಷ್ಣ ಅವರ ಪರವಾಗಿ ಕೆಲಸ ಮಾಡಿದ್ದೆ’ ಎಂದು ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾರದೋ ಆಮಿಷ ಅಥವಾ ಒತ್ತಡದಿಂದ ಡಾ. ಮಂಜುನಾಥ್ ಎದುರು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂಬ ಮಾತು ಸುಳ್ಳು. ಇದು ಪ್ರಜಾಪ್ರಭುತ್ವ. ಚನ್ನರಾಯಪಟ್ಟಣದ ಮಂಜುನಾಥ್ ಅವರು ಇಲ್ಲಿ ಸ್ಪರ್ಧಿಸಿರುವಾಗ, ನಾನು ಸ್ಪರ್ಧಿಸುವುದು ತಪ್ಪೇ? ನನ್ನನ್ನು ಗುರುತಿಸಿ ಬಹುಜನ ಭಾರತ ಪಾರ್ಟಿ ಟಿಕೆಟ್ ಕೊಟ್ಟಿದೆ. ಏಪ್ರಿಲ್ 2ರಂದು ನಾನು ನಾಮಪತ್ರ ಸಲ್ಲಿಸಲಿದ್ದೇನೆ’ ಎಂದರು.

‘ಡಾ. ಮಂಜುನಾಥ್ ಅವರ ಬಗ್ಗೆ ನನಗೆ ಪೂಜ್ಯ ಭಾವನೆ ಇದೆ. ಅವರ ಸಾಧನೆ ಬಗ್ಗೆಯೂ ಗೌರವವಿದೆ. ಆದರೆ, ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದು ಸರಿಯಲ್ಲ. ನನ್ನ ಹೋರಾಟ ಬಿಜೆಪಿಯ ವಿರುದ್ಧವೇ ಹೊರತು, ಮಂಜುನಾಥ್ ವಿರುದ್ಧವಲ್ಲ’ ಎಂದರು. ಅವರು ಎಸ್‌ಎಸ್‌ಎಲ್‌ಸಿವರೆಗೆ ಓದಿದ್ದಾರೆ. 

ನಾನು ಬಿಜೆಪಿ ವಿರೋಧಿಯೇ ಹೊರತು ಮಂಜುನಾಥ್ ವಿರೋಧಿಯಲ್ಲ. ಅವರ ಬಗ್ಗೆ ನನಗೆ ಪೂಜ್ಯ ಭಾವನೆ ಇದೆ. ಅವರು ಜೆಡಿಎಸ್‌ನಿಂದ ನಿಂತಿದ್ದರೆ ನಾನು ಸ್ಪರ್ಧಿಸುತ್ತಿರಲಿಲ್ಲ
– ಸಿ.ಎನ್. ಮಂಜುನಾಥ್ ಚನ್ನರಾಯಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT