ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್ ಸಮೀಕ್ಷೆ: ದಳಪತಿ ‘ಸಿ.ಎಂ’ ಅಸ್ತ್ರಕ್ಕೆ ಸೈನಿಕನ ‘ಸ್ವಾಭಿಮಾನಿ’ ಪ್ರತ್ಯಾಸ್ತ್ರ

ಚನ್ನಪಟ್ಟಣ: ಎಚ್‌ಡಿಕೆ–ಸಿಪಿವೈ ಅಬ್ಬರದಲ್ಲಿ ಮಂಕಾದ ಕಾಂಗ್ರೆಸ್‌
Published 7 ಮೇ 2023, 19:35 IST
Last Updated 7 ಮೇ 2023, 19:35 IST
ಅಕ್ಷರ ಗಾತ್ರ

ರಾಮನಗರ: ‘ಮತ್ತೊಮ್ಮೆ ಮುಖ್ಯಮಂತ್ರಿ’ಯಾಗುವ ವಿಶ್ವಾಸದೊಂದಿಗೆ ಚನ್ನಪಟ್ಟಣ ಕ್ಷೇತ್ರದ ಕಣದಲ್ಲಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕ್ಷೇತ್ರದ ಮಗನಿಗೆ ಅವಕಾಶ ನೀಡಿ ಎಂದು ‘ಸ್ವಾಭಿಮಾನ’ದ ಹೆಸರಲ್ಲಿ ಪೈಪೋಟಿ ಒಡ್ಡಿರುವ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ನಡುವಿನ ಜಿದ್ದಾಜಿದ್ದಿ ಗಮನ ಸೆಳೆದಿದೆ.

ಇದರೊಂದಿಗೆ ಹಾಲಿ ಹಾಗೂ ಮಾಜಿ ಪ್ರಧಾನಿಗಳ ಅಬ್ಬರದ ಪ್ರಚಾರ ಕೂಡ ಭಾರಿ ಸದ್ದು ಮಾಡಿದ್ದು, ಈ ಬಾರಿಯೂ  ಗೆಲುವಿಗಾಗಿ ಜೆಡಿಎಸ್‌– ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆದಿದೆ.

ಜೆಡಿಎಸ್‌ ಅಭ್ಯರ್ಥಿಗಳ ಪರ ಪುತ್ರ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯದಾದ್ಯಂತ ಪ್ರಚಾರಕ್ಕೆ ಕಳುಹಿಸಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕ್ಷೇತ್ರದಲ್ಲಿ ತಾವೇ ದಳಪತಿಯಾಗಿ ‘ಸೈನಿಕ’ನ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಚುನಾವಣೆ ಘೋಷಣೆ ಆದಾಗಿನಿಂದ ನಾಲ್ಕಾರು ಬಾರಿ ಭೇಟಿ ನೀಡಿದ್ದಾರೆ. ಇಳಿವಯಸ್ಸಿನಲ್ಲೂ ಅವರ ಉತ್ಸಾಹ ಕಂಡು ಜೆಡಿಎಸ್‌ ಕಾರ್ಯಕರ್ತರು ಹುರುಪಿನಲ್ಲಿದ್ದಾರೆ. ಬಿಜೆಪಿಯು ಇದನ್ನೇ ‘ಪುತ್ರ ವ್ಯಾಮೋಹ’ ಎಂದು ಜರಿಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಚನ್ನಪಟ್ಟಣದಲ್ಲಿ ಪ್ರಚಾರ ನಡೆಸಿದ್ದು, ಇದು ಗೆಲುವಿಗೆ ಮುನ್ನುಡಿ ಆಗಲಿದೆ ಎಂದು ಯೋಗೇಶ್ವರ ವಿಶ್ವಾಸದಲ್ಲಿದ್ದಾರೆ. ದೇವೇಗೌಡರ ಮೂಲಕ ಮೋದಿ ಅಲೆಯನ್ನು ಪುಡಿಗಟ್ಟುವ ವಿಶ್ವಾಸ ಜೆಡಿಎಸ್‌ನದ್ದು. 

ಈ ಕಿಚ್ಚು ನಾಯಕರಿಗೆ ಮಾತ್ರ ಸೀಮಿತವಾಗಿಲ್ಲ. ಕ್ಷೇತ್ರದ ಯಾವುದೇ ಹಳ್ಳಿ ಅಥವಾ ಮನೆಗೆ ಹೋದರೂ ಎರಡೂ ಪಕ್ಷಗಳ ಕಾರ್ಯಕರ್ತರ ನಡುವಿನ ತುರುಸಿನ ರಾಜಕೀಯ ಪೈಪೋಟಿ ಎದ್ದು ಕಾಣುತ್ತದೆ. ಈ ಇಬ್ಬರ ಅಬ್ಬರದಲ್ಲಿ ಕೈ ಪಡೆ ಮಂಕಾದಂತೆ ಕಾಣುತ್ತಿದೆ. 

ಚನ್ನಪಟ್ಟಣದಲ್ಲಿ ಒಕ್ಕಲಿಗರ ಪ್ರಾಬಲ್ಯ ಇದೆ. ಕುಮಾರಸ್ವಾಮಿ ಈ ಸಮುದಾಯದ ಮನ್ನಣೆ ಗಳಿಸಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಕಾರಣಕ್ಕೆ ಕಳೆದ ಬಾರಿ ಇಲ್ಲಿನ ಜನರು ಅವರನ್ನು ಆರಿಸಿದ್ದರು. ಈ ಬಾರಿ ಕೂಡ ಅದೇ ಪುನರಾವರ್ತನೆ ಆಗಲಿದೆ ಎನ್ನುವ ವಿಶ್ವಾಸ ಅವರದ್ದು.

ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ ರಾಜಕೀಯ ಬದುಕು ಅವರ ಸಿನಿಮಾಗಳಷ್ಟೇ ವರ್ಣರಂಜಿತವಾಗಿದೆ. ಇಲ್ಲಿಂದ ಏಳು ಬಾರಿ ಸ್ಪರ್ಧೆ ಮಾಡಿರುವ ಅವರು, ಐದರಲ್ಲಿ ಗೆಲುವು ಕಂಡಿದ್ದಾರೆ. 1999ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವಿನ ಖಾತೆ ತೆರೆದ ಯೋಗೇಶ್ವರ ನಂತರದಲ್ಲಿ ಎರಡು ಬಾರಿ ಕಾಂಗ್ರೆಸ್, ಒಮ್ಮೆ ಬಿಜೆಪಿಯಿಂದಲೂ ಗೆದ್ದಿದ್ದಾರೆ. 2013ರಲ್ಲಿ ಈ ಭಾಗದ ಜನರಿಗೆ ಪರಿಚಯವೇ ಇಲ್ಲದ ‘ಸೈಕಲ್‌’ ಚಿಹ್ನೆ ತೋರಿಸಿಯೂ ವಿಜಯಶಾಲಿ ಆಗಿದ್ದಾರೆ. ಈ ಬಾರಿ ವೈಯಕ್ತಿಕ ವರ್ಚಸ್ಸಿನ ಜೊತೆ ಮೋದಿ ಪ್ರಭಾವವನ್ನೂ ಅವರು ನೆಚ್ಚಿಕೊಂಡಿದ್ದಾರೆ.

ಸ್ವಾಭಿಮಾನಿ ಅಸ್ತ್ರ: ಕಳೆದ ಚುನಾವಣೆಯ ಸೋಲಿನ ಸೇಡಿನ ತವಕದಲ್ಲಿರುವ ಯೋಗೇಶ್ವರ, ವರ್ಷದ ಹಿಂದಿನಿಂದಲೇ ಸ್ಥಳೀಯ ಜೆಡಿಎಸ್‌ ಮುಖಂಡರಿಗೆ ಗಾಳ ಹಾಕಿ ಬಿಜೆಪಿಯತ್ತ ಎಳೆದಿದ್ದಾರೆ. ಮೂರ್ನಾಲ್ಕು ತಿಂಗಳಿಂದ ‘ಸ್ವಾಭಿಮಾನಿ ಸಂಕಲ್ಪ ನಡಿಗೆ’ ಹೆಸರಲ್ಲಿ ಊರೂರು ಸುತ್ತಿರುವ ಅವರು, ಈ ಬಾರಿ ಕ್ಷೇತ್ರದ ಮಗನಿಗೇ ಅವಕಾಶ ನೀಡಿ ಎಂದು ಸ್ವಾಭಿಮಾನದ ಅಸ್ತ್ರ ಪ್ರಯೋಗಿಸಿದ್ದಾರೆ.

ಜೆಡಿಎಸ್‌ ಪರ ದೇವೇಗೌಡರ ಪರಿವಾರದವರೇ ಕ್ಷೇತ್ರ ಪ್ರಚಾರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿಯಾಗಿದ್ದ ಪ್ರಸನ್ನಗೌಡರನ್ನೇ ‘ಹೈಜಾಕ್‌’ ಮಾಡಿರುವ ಎಚ್‌ಡಿಕೆ, ಗೋವಿಂದರಾಜು ಸೇರಿದಂತೆ ಯೋಗೇಶ್ವರ ಅನೇಕ ಆಪ್ತರನ್ನೂ ಸೆಳೆದು ತಿರುಗೇಟು ನೀಡಿದ್ದಾರೆ.

ನೀರಾವರಿ ಶ್ರೇಯಸ್ಸಿಗೆ ಕಿತ್ತಾಟ: ಕೆರೆ ತುಂಬಿಸುವ ಯೋಜನೆಗಳಿಂದ ನಾಡಿನ ಗಮನ ಸೆಳೆದ ಕ್ಷೇತ್ರ ಚನ್ನಪಟ್ಟಣ. ಸದ್ಯ ಇಲ್ಲಿನ 120ಕ್ಕೂ ಹೆಚ್ಚು ಕೆರೆಗಳು ಪೈಪ್‌ಲೈನ್‌ ಮೂಲಕ ಪ್ರತಿವರ್ಷ ಭರ್ತಿಯಾಗುತ್ತಿದ್ದು, ಕೃಷಿ ಮತ್ತು ಹೈನುಗಾರಿಕೆ ಮರುಜೀವ ಪಡೆದುಕೊಂಡಿದೆ. ಇದಕ್ಕೆ ತಾವೇ ಕಾರಣ ಎಂದು ದೇವೇಗೌಡ ಹಾಗೂ ಯೋಗೇಶ್ವರ ಇಬ್ಬರೂ ಶ್ರೇಯಸ್ಸಿಗಾಗಿ ಕಿತ್ತಾಡುತ್ತಿದ್ದಾರೆ. ಈ ಬಾರಿಯೂ ಇದೇ ಚುನಾವಣೆಯ ಪ್ರಮುಖ ಚರ್ಚೆ ವಿಷಯವಾಗಿದೆ.

ಕ್ಷೇತ್ರಕ್ಕೆ ಅನುದಾನ ಬಿಡುಗಡೆ ವಿಚಾರದಲ್ಲಿ ಕುಮಾರಸ್ವಾಮಿ– ಯೋಗೇಶ್ವರ ಬೆಂಬಲಿಗರ ನಡುವೆ ಅನೇಕ ದಿನಗಳಿಂದ ಘರ್ಷಣೆ ನಡೆಯುತ್ತಲೇ ಇದೆ. ಒಂದೊಮ್ಮೆ ಇದು ಅತಿರೇಕಕ್ಕೆ ತಿರುಗಿ, ಭೂಮಿಪೂಜೆಗೆ ಬಂದ ಯೋಗೇಶ್ವರ ಕಾರಿಗೆ ಜೆಡಿಎಸ್‌ ಕಾರ್ಯಕರ್ತರು ಮೊಟ್ಟೆ ಎಸೆದ ಘಟನೆಯ ನೆನಪು ಇನ್ನೂ ಹಸಿರಾಗಿದೆ.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಗಂಗಾಧರ್‌ ಕಡೆ ಕ್ಷಣದಲ್ಲಿ ಅಭ್ಯರ್ಥಿ ಆಗಿದ್ದಾರೆ. ಒಲ್ಲದ ಮನಸ್ಸಿನಿಂದ ನಾಮಪತ್ರ ಸಲ್ಲಿಸಿದ್ದರೂ ನಂತರದಲ್ಲಿ ಉತ್ಸಾಹದಿಂದ ಪ್ರಚಾರ ಮಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭಾವ ಶರತ್‌ಚಂದ್ರ ಇಲ್ಲಿ ಆಮ್‌ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಅವರ ಸ್ಪರ್ಧೆ ಯಾರ ಮೇಲೂ ಪರಿಣಾಮ ಬೀರಿಲ್ಲ. ಸೀಮಿತವಾಗಿ ಪ್ರಚಾರ ಮಾಡುತ್ತಿದ್ದು, ಹೊಸ ಪಕ್ಷ ಇಲ್ಲಿ ಮತದಾರರನ್ನು ಸೆಳೆಯುವಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಕಾಣುತ್ತಿಲ್ಲ.

ಸಿ.ಪಿ. ಯೋಗೇಶ್ವರ್‌
ಸಿ.ಪಿ. ಯೋಗೇಶ್ವರ್‌
ಎಸ್‌. ಗಂಗಾಧರ್
ಎಸ್‌. ಗಂಗಾಧರ್
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮ್ಯಾಪ್‌
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮ್ಯಾಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT