ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ರಾಜ್‌ಕೋಟ್‌ನಲ್ಲಿ ಪರಷೋತ್ತಮ ರೂಪಾಲ–ಪರೇಶ್ ಧನಾನಿ ಮುಖಾಮುಖಿ

Published 22 ಏಪ್ರಿಲ್ 2024, 1:26 IST
Last Updated 22 ಏಪ್ರಿಲ್ 2024, 1:26 IST
ಅಕ್ಷರ ಗಾತ್ರ
ಪರಷೋತ್ತಮ ರೂಪಾಲ: ಬಿಜೆಪಿ

ಕರಕುಶಲ ವಸ್ತುಗಳಿಗೆ ಪ್ರಸಿದ್ಧವಾಗಿರುವ ಗುಜರಾತ್‌ನ ರಾಜ್‌ಕೋಟ್‌ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಏರಿಕೆಯಾಗಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ಪ್ರಬಲ ಪೈಪೋಟಿಗೆ ಸಿದ್ಧರಾಗಿದ್ದಾರೆ. ಬಿಜೆಪಿಯು ಈ ಬಾರಿ ಕೇಂದ್ರ ಸಚಿವ ಪರಷೋತ್ತಮ ರೂಪಾಲ ಅವರನ್ನು ಸ್ಪರ್ಧೆಗಿಳಿಸಿದೆ. ರಾಜ್ಯಸಭಾ ಸದಸ್ಯರಾಗಿರುವ ರೂಪಾಲ, ಈ ಸಲ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ.

2019ರ ಚುನಾವಣೆಯಲ್ಲಿ ಇಲ್ಲಿಂದ ಬಿಜೆಪಿಯ ಮೋಹನ್‌ ಕುಂದರಿಯಾ ಅವರು ಗೆದ್ದಿದ್ದರು. ರೂಪಾಲ ಅವರು ಈಚೆಗೆ ರಜಪೂತರ ಕುರಿತು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಇವರು ಕ್ಷಮೆ ಯಾಚಿಸಿದ್ದರೂ ರಜಪೂತರ ಸಿಟ್ಟು ಶಮನವಾಗಿಲ್ಲ. ಇವರನ್ನು ಅಭ್ಯರ್ಥಿಯಾಗಿಸಬಾರದು ಎಂದು ಈ ಸಮುದಾಯದ ಒಂದು ವಿಭಾಗ ಆಗ್ರಹಿಸಿತ್ತು. ಈ ನಡುವೆ ಪಾಟೀದಾರ್ ಸಮುದಾಯದವರು ರೂಪಾಲ ಅವರಿಗೆ ಬೆಂಬಲ ಸೂಚಿಸಿದ್ದಾರೆ.

ಪರೇಶ್ ಧನಾನಿ: ಕಾಂಗ್ರೆಸ್‌

ಪರಷೋತ್ತಮ ರೂಪಾಲ ಅವರೊಂದಿಗೆ ಸೆಣಸಲು ಕಾಂಗ್ರೆಸ್‌, ಗುಜರಾತ್‌ ವಿಧಾನಸಭೆಯ ವಿರೋಧ ಪಕ್ಷದ ಮಾಜಿ ನಾಯಕ ಪರೇಶ್ ಧನಾನಿ ಅವರನ್ನು ಅಖಾಡಕ್ಕಿಳಿಸಿದೆ. ಧನಾನಿ, 2002ರಲ್ಲಿ ಅಮ್ರೇಲಿ ವಿಧಾನಸಭಾ ಕ್ಷೇತ್ರದಿಂದ ರೂಪಾಲ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದರು. ರೂಪಾಲ ಅವರು ರಜಪೂತರ ಕೆಂಗಣ್ಣಿಗೆ ಗುರಿಯಾಗಿರುವುದರಿಂದ ಈ ಬಾರಿ ಧನಾನಿ ಗೆಲ್ಲಬಹುದೆಂಬ ವಿಶ್ವಾಸ ಕಾಂಗ್ರೆಸ್‌ ವರಿಷ್ಠರದ್ದಾಗಿದೆ.

ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆಯಾದ ಎನ್‌ಎಸ್‌ಯುಐ ಮೂಲಕ ರಾಜಕೀಯ ಪ್ರವೇಶಿಸಿದ್ದ ಧನಾನಿ, ಸ್ಥಳೀಯವಾಗಿಯೂ ಪ್ರಭಾವಿ ಮುಖಂಡರಾಗಿದ್ದಾರೆ.

ಧನಾನಿ ಅವರು ಪಾಟೀದಾರ್‌ ಸಮುದಾಯದ ಉಪ ಜಾತಿಯಾದ ಲೇವಾ ಪಟೇಲ್‌ಗೆ ಸೇರಿದವರಾಗಿದ್ದು, ಈ ಸಮುದಾಯದವರು ಈ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಬ್ಬರು ಪ್ರಬಲ ಅಭ್ಯರ್ಥಿಗಳಲ್ಲಿ ಮತದಾರರು ಯಾರ ಕೈ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT