ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತ ಎಣಿಕೆ ಪ್ರಕ್ರಿಯೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ

ಮತಯಂತ್ರ ಭದ್ರತಾ ಕೊಠಡಿ ಪರಿಶೀಲನೆ ಬಳಿಕ ಹೇಳಿಕೆ
Last Updated 28 ಮಾರ್ಚ್ 2019, 12:53 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಇಲ್ಲಿನ ಲೋಕಸಭಾ ಚುನಾವಣಾ ಮತ ಎಣಿಕೆ ಕೇಂದ್ರ ಹಾಗೂ ಮತಯಂತ್ರಗಳ ಭದ್ರತಾ ಕೊಠಡಿಗೆ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು) ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮತ ಎಣಿಕೆ ಪ್ರಕ್ರಿಯೆಗೆ ವಿಧಾನಸಭಾ ಕ್ಷೇತ್ರವಾರು ಕೊಠಡಿಗಳನ್ನು ಗುರುತಿಸಲಾಗಿದ್ದು, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಬದರಿನಾಥ್‌ ಭದ್ರತಾ ಕೊಠಡಿ, ಎಣಿಕೆ ಕೇಂದ್ರ ಹಾಗೂ ಕಟ್ಟಡ ದುರಸ್ತಿ, ಮೂಲಸೌಕರ್ಯದ ಅಗತ್ಯತೆ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ವಿಧಾನಸಭಾ ಕ್ಷೇತ್ರವಾರು ಡಿ-ಮಸ್ಟರಿಂಗ್ ಮತ್ತು ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ, ನಿರ್ಗಮನ, ಸಿಬ್ಬಂದಿ ಕೊಠಡಿ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್ ಮಾಹಿತಿ ಪಡೆದು ಸಲಹೆ ಸೂಚನೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಮತ ಎಣಿಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆ ಮಾಡಲಾಗುತ್ತಿದೆ. ಮತ ಎಣಿಕೆ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು’ ಎಂದು ತಿಳಿಸಿದರು.

36 ಕೊಠಡಿ ಬಳಕೆ: ‘ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ಕೇಂದ್ರಗಳನ್ನು ಲೋಕೋಪಯೋಗಿ ಇಲಾಖೆ ಗುರುತಿಸಿದೆ. ಭದ್ರತಾ ಕೊಠಡಿ ಮತ್ತು ಮತ ಎಣಿಕೆ ಕೇಂದ್ರದ ಸ್ಥಿತಿಗತಿ ತಿಳಿಯುವ ಉದ್ದೇಶದಿಂದ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ’ ಎಂದು ವಿವರಿಸಿದರು.

‘ವಿಧಾನಸಭಾ ಕ್ಷೇತ್ರವಾರು ಮತಯಂತ್ರ ಸಂಗ್ರಹಿಸಲು 2 ಕೊಠಡಿ ಹಾಗೂ ಮತ ಎಣಿಕೆಗೆ 2 ಕೊಠಡಿ ಬೇಕಿದ್ದು, ಒಟ್ಟು 36 ಕೊಠಡಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಮತದಾನ ಮುಗಿದ ನಂತರ ಆಯಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ 8 ವಿಧಾನಸಭೆ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರ ಮತ್ತು ಸ್ಟ್ಯಾಚುಟರಿ ಕವರ್‌ಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಸಂಗ್ರಹಿಸಬೇಕು. ಈ ಸಂಬಂಧ ತಪಾಸಣೆ ನಡೆಸಿ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಲಾಗಿದೆ’ ಎಂದು ತಿಳಿಸಿದರು.

‘ಕಾಲೇಜಿನಲ್ಲಿ ಪದವಿ ತರಗತಿಗಳು ಮೇ 24ರವರೆಗೆ ನಡೆಯಲಿದ್ದು, ಸಂಪೂರ್ಣ ಕೆಲಸ ಮಾಡಲು ತೊಂದರೆಯಾಗುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಏ.4ಕ್ಕೆ ಮುಗಿಯುವುದರಿಂದ ಜೂನಿಯರ್‌ ಕಾಲೇಜಿನಲ್ಲಿ 20 ಕೊಠಡಿ ಪಡೆದು ಅಲ್ಲಿಗೆ ಪದವಿ ತರಗತಿಗಳನ್ನು ಸ್ಥಳಾಂತರಿಸಲಾಗುವುದು’ ಎಂದು ಮಾಹಿತಿ ನೀಡಿದರು.

3 ಹಂತದ ಭದ್ರತೆ: ‘ಡಿ-ಮಸ್ಟರಿಂಗ್ ಕೇಂದ್ರಕ್ಕೆ 3 ಹಂತದಲ್ಲಿ ಪೊಲೀಸ್‌ ಭದ್ರತೆ ಕಲ್ಪಿಸಲಾಗುವುದು. ಮೊದಲ ಹಂತದಲ್ಲಿ ಕೇಂದ್ರ ಭದ್ರತಾ ಪಡೆ, 2ನೇ ಹಂತದಲ್ಲಿ ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‍ಆರ್‌ಪಿ) ಹಾಗೂ 3ನೇ ಹಂತದಲ್ಲಿ ಸ್ಥಳೀಯ ಪೊಲೀಸ್ ಭದ್ರತೆ ಇರುತ್ತದೆ. ಎಣಿಕೆ ದಿನವೂ ಇದೇ ರೀತಿಯಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗುವುದು’ ಎಂದು ರೋಹಿಣಿ ಕಟೋಚ್ ಸೆಪಟ್‌ ವಿವರಿಸಿದರು.

ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಡಿವೈಎಸ್ಪಿ ಜಿ.ಅನುಷಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT