ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಭೂಮಿಯಲ್ಲಿ ಕಾಂಗ್ರೆಸ್‌ ಪ್ರಾಬಲ್ಯ

ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಬಿಜೆಪಿ, ಜನತಾದಳಕ್ಕೂ ಮನ್ನಣೆ
Last Updated 17 ಏಪ್ರಿಲ್ 2023, 7:51 IST
ಅಕ್ಷರ ಗಾತ್ರ

ವಿಜಯಪುರ: 12ನೇ ಶತಮಾನದಲ್ಲಿ ಜಗತ್ತಿಗೆ ಸಮಾನತೆ ಸಂದೇಶ ಸಾರಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿ ಮತಕ್ಷೇತ್ರ ತನ್ನದೇಯಾದ ವೈಶಿಷ್ಟ್ಯತೆ ಹೊಂದಿದೆ.

ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲ್ಲೂಕು ಒಳಗೊಂಡಿರುವ ಈ ವಿಧಾನಸಭಾ ಕ್ಷೇತ್ರ ಆಲಮಟ್ಟಿ ಜಲಾಶಯ, ಕೂಡಿಗಿ ಉಷ್ಣ ವಿದ್ಯುತ್‌ ಸ್ಥಾವರ, ಬಸವಣ್ಣನ ಜನ್ಮ ಸ್ಥಳದಿಂದಾಗಿ ನಾಡಿನ ಗಮನ ಸೆಳೆದಿದೆ. ರಾಜಕೀಯವಾಗಿಯೂ ಇಲ್ಲಿಯ ಜನತೆ ಪ್ರಬುದ್ಧತೆಗೆ ಹೆಸರಾಗಿದ್ದಾರೆ.

ಕಾಂಗ್ರೆಸ್‌ ಪಕ್ಷವು 11 ಬಾರಿ ಈ ಕ್ಷೇತ್ರದಲ್ಲಿ ಆದಿಪತ್ಯ ಸ್ಥಾಪಿಸಿದೆ. ಬಿಜೆಪಿ ಎರಡು ಬಾರಿ ಮತ್ತು ಜನತಾ ದಳ ಒಂದು ಬಾರಿ ಈ ಕ್ಷೇತ್ರದಲ್ಲಿ ಆಳ್ವಿಕೆ ನಡೆಸಿವೆ.

ಕ್ಷೇತ್ರದಲ್ಲಿ ಒಬ್ಬರೇ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷ. ಒಬ್ಬರು ಮೂರು ಬಾರಿ ಶಾಸಕರಾಗಿ, ಇಬ್ಬರು ಎರಡು ಬಾರಿ ಶಾಸಕರಾಗಿ, ಒಬ್ಬರು ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದ ಮೂವರು ಶಾಸಕರಿಗೆ ಸಚಿವ ಸ್ಥಾನ ಒಲಿದುಬಂದಿತ್ತು.

ಮಹಿಳಾ ಸಮಾನತೆಯ ಹರಿಕಾರ ಬಸವಣ್ಣನವರ ಜನ್ಮಭೂಮಿ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಆರಂಭ ಎರಡು ಅವಧಿಗೆ ಅಂದರೆ, 1957 ಮತ್ತು 1962 ವಿಧಾನಸಭೆ ಚುನಾವಣೆಯಲ್ಲಿ ಸುಶೀಲಾಬಾಯಿ ಶಹಾ ಅವರು ಆಯ್ಕೆಯಾಗಿದ್ದು ವಿಶೇಷ.

ಮನಗೂಳಿಯ ಬಿ.ಎಸ್.ಪಾಟೀಲ ಅವರು ಕಾಂಗ್ರೆಸ್ ಪಕ್ಷದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ವೀರಪ್ಪ ಮೊಯ್ಲಿ ಸಚಿವ ಸಂಪುಟದಲ್ಲಿ ನೀರಾವರಿ ಸಚಿವರಾಗಿದ್ದರು. ಇವರ ಪುತ್ರ ಸೋಮನಗೌಡ ಪಾಟೀಲ ಸಾಸನೂರ ಅವರು ರಾಜಕೀಯ ಪ್ರವೇಶಿಸಿದ್ದರೂ ಇನ್ನೂ ಅದೃಷ್ಟ ಕುಲಾಯಿಸಿಲ್ಲ!

ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಹಾಲಿ ಶಾಸಕ ಶಿವಾನಂದ ಪಾಟೀಲ ಅವರು ಬಸವನಬಾಗೇವಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮೂರು ಬಾರಿ, ತಿಕೋಟಾ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಬಾರಿ ಜನತಾ ದಳದಿಂದ, ಒಂದು ಬಾರಿ ಬಿಜೆಪಿಯಿಂದ ಹೀಗೆ ಒಟ್ಟು ಐದು ಸಲ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕ್ಷೇತ್ರದ ಕೆನೆಮೊಸರಿನ ಊರು ಕೊಲ್ಹಾರದ ಎಸ್.ಕೆ.ಬೆಳ್ಳುಬ್ಬಿ ಅವರು ಬಿಜೆಪಿ ಪಕ್ಷದಿಂದ ಎರಡು ಸಲ ಶಾಸಕರಾಗಿ ಆಯ್ಕೆಯಾಗಿದ್ದರು. ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ತೋಟಗಾರಿಕೆ ಸಚಿವರಾಗಿದ್ದರು. ಜಗದೀಶ ಶೆಟ್ಟರ್‌ ಸಂಪುಟದಲ್ಲಿ ಎಪಿಎಂಸಿ ಸಚಿವರಾಗಿದ್ದರು. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಮತ್ತೊಮ್ಮೆ ಅವರಿಗೆ ಟಿಕೆಟ್ ಲಭಿಸಿದೆ.

ಬಸವನಬಾಗೇವಾಡಿಯ ಐತಿಹಾಸಿಕ ಮೂಲನಂದೀಶ್ವರ ದೇವಸ್ಥಾನದ ಜಿರ್ಣೋದ್ದಾರ, ಬಸವಣ್ಣನವರು ಜನಿಸಿದ ಮನೆಯನ್ನು ಬಸವಜನ್ಮ ಸ್ಮಾರಕವನ್ನಾಗಿಸುವುದರೊಂದಿಗೆ ವಿವಿಧೆಡೆಯಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸಲು ಸುಸಜ್ಜಿತ ರಸ್ತೆ, ಪಟ್ಟಣದಲ್ಲಿ ವ್ಯಾಪಾರ ಅಭಿವೃದ್ಧಿ ನಿಟ್ಟಿನಲ್ಲಿ ಮೆಗಾ ಮಾರುಕಟ್ಟೆ, ಪ್ರವಾಸಿಗರಿಗೆ ಉಳಿದುಕೊಳ್ಳಲು ಯಾತ್ರಿ ನಿವಾಸ, ಮದುವೆ ಸೇರಿದಂತೆ ವಿವಿಧ ಸಮಾರಂಭಗಳಿಗಾಗಿ ಭವ್ಯವಾದ ಎರಡು ಭವನಗಳ ನಿರ್ಮಾಣ ಮಾಡಲಾಗಿದೆ.

ಮಾದರಿ ನೂತನ ಪುರಸಭೆ ಕಟ್ಟಡ, ಬಸವಣ್ಣನವರ ತಾಯಿ ಮಾದಲಾಂಬಿಕೆ ತವರೂರು ಇಂಗಳೇಶ್ವರದಲ್ಲಿ ಮಾದಲಾಂಬಿಕೆ ಸ್ಮಾರಕ ಭವನ ಸೇರಿದಂತೆ ಕ್ಷೇತ್ರದ ವಿವಿಧ ಐತಿಹಾಸಿಕ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಮತಕ್ಷೇತ್ರದ ಕೂಡಗಿ ಬೃಹತ್ ಉಷ್ಣ ವಿದ್ಯುತ್ ಉತ್ಪಾದನಾ ಘಟಕ, ಆಲಮಟ್ಟಿ ಆಣೆಕಟ್ಟೆಯಲ್ಲಿ ಜಲ ವಿದ್ಯುತ್ ಉತ್ಪಾದನೆ, ಖಾಸಗಿ ಒಡೆತನದಲ್ಲಿ ಸೋಲಾರ್‌ ಹಾಗೂ ಪವನ ವಿದ್ಯುತ್ ಉತ್ಪಾದನೆಯಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಗಣನೀಯ ಪ್ರಗತಿ ಕಂಡಿರುವ ಕ್ಷೇತ್ರ ಎನಿಸಿಕೊಂಡಿದೆ.

ಕ್ಷೇತ್ರದ ವ್ಯಾಪ್ತಿಯಲ್ಲಿರುವ ಆಲಮಟ್ಟಿಯು ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಆಣೆಕಟ್ಟಿನಿಂದಾಗಿ ಮುಳವಾಡ ಏತ ನೀರಾವರಿ ಯೋಜನೆಗಳು ನಡೆಯುತ್ತಿರುವುದರಿಂದ ಕೃಷಿ ಭೂಮಿಗೆ ನೀರು ಹರಿಸುವುದು ಹಾಗೂ ಕೆರೆಗಳನ್ನು ತುಂಬುವ ಯೋಜನೆಯಿಂದಾಗಿ ತೋಟಗಾರಿಕೆ ಬೆಳೆ ಬೆಳೆಯುವ ರೈತರ ಸಂಖ್ಯೆ ಹೆಚ್ಚುತ್ತಿದೆ.

ವಿವಿಧೆಡೆ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದಾಗಿ ಸಮರ್ಪಕ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಬಸವನಬಾಗೇವಾಡಿಯಲ್ಲಿ (24X7) ನಿರಂತರ ಕುಡಿಯುವ ನೀರು ಬರುತ್ತಿದೆ. ಕ್ಷೇತ್ರದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರಿ ಡಿಪ್ಲೊಮಾ, ಐಟಿಐ, ಪದವಿ ಕಾಲೇಜು ಸೇರಿದಂತೆ ವಸತಿ ನಿಲಯಗಳಿಗೆ ಆದ್ಯತೆ ನೀಡಲಾಗಿದೆ.

ಹೀಗೆ ವಿವಿಧ ಅಭಿವೃದ್ಧಿ ಕಾರ್ಯಗಳೊಂದಿಗೆ ಮಾದರಿ ಕ್ಷೇತ್ರ ಎನಿಸಿಕೊಳ್ಳುತ್ತಿರುವ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದ ನೀರಾವರಿ ಯೋಜನೆ ಜಾರಿಯಾಗಬೇಕಿದೆ, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಒಣ ದ್ರಾಕ್ಷಿ (ಮಣುಕ) ಸಂಸ್ಕರಣ ಘಟಕ ಸ್ಥಾಪನೆ, ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಅಗತ್ಯತೆ ಇದೆ.

ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಬೃಹತ್ ಬಸವಣ್ಣನವರ ಮೂರ್ತಿ ಸ್ಥಾಪನೆಯಾಗಬೇಕು ಎಂಬುದು ಬಸವ ಭಕ್ತರ ಆಶಯವಾಗಿದೆ. ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚನೆ, ಬಸವನಬಾಗೇವಾಡಿಯಲ್ಲಿ ಕಂದಾಯ ಉಪವಿಭಾಗಾಧಿಕಾರಿ ಕಚೇರಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳು ಸಾಕಾರಗೊಳ್ಳಬೇಕಿದೆ.

––––

ಬಸವನಬಾಗೇವಾಡಿ ಪ್ರತಿನಿಧಿಸಿದ ಶಾಸಕರು

ಇಸವಿ;ಶಾಸಕರು;ಪಕ್ಷ
1957;ಸುಶೀಲಾಬಾಯಿ ಶಹಾ;ಕಾಂಗ್ರೆಸ್
1962;ಸುಶೀಲಾಬಾಯಿ ಶಹಾ;ಕಾಂಗ್ರೆಸ್
1967;ಬಿ.ಎಸ್.ಪಾಟೀಲ ಮನಗೂಳಿ;ಕಾಂಗ್ರೆಸ್
1972;ಬಿ.ಎಸ್.ಪಾಟೀಲ ಮನಗೂಳಿ;ಕಾಂಗ್ರೆಸ್
1978;ಬಿ.ಎಸ್.ಪಾಟೀಲ ಮನಗೂಳಿ;ಕಾಂಗ್ರೆಸ್
1983;ಬಿ.ಎಸ್.ಪಾಟೀಲ ಮನಗೂಳಿ;ಕಾಂಗ್ರೆಸ್
1985;ಕುಮಾರಗೌಡ ಪಾಟೀಲ; ಜೆಡಿ
1989;ಬಿ.ಎಸ್.ಪಾಟೀಲ ಮನಗೂಳಿ;ಕಾಂಗ್ರೆಸ್
1994;ಬಿ.ಎಸ್.ಪಾಟೀಲ;ಮನಗೂಳಿ;ಕಾಂಗ್ರೆಸ್
1999;ಎಸ್.ಕೆ.ಬೆಳ್ಳುಬ್ಬಿ; ಬಿಜೆಪಿ
2004;ಶಿವಾನಂದ ಪಾಟೀಲ;ಕಾಂಗ್ರೆಸ್
2008;ಎಸ್.ಕೆ.ಬೆಳ್ಳುಬ್ಬಿ;ಬಿಜೆಪಿ
2013;ಶಿವಾನಂದ ಪಾಟೀಲ;ಕಾಂಗ್ರೆಸ್
2018;ಶಿವಾನಂದ ಪಾಟೀಲ;ಕಾಂಗ್ರೆಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT