ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕ್ಯತೆಯಿಂದ ಹೋರಾಡಿದರೆ ನಮ್ಮದೇ ಜಯ: ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ

ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರ ಪರ ಚುನಾವಣಾ ಪ್ರಚಾರ
Last Updated 3 ಮೇ 2019, 13:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸ್ಥಳೀಯವಾಗಿ ಕಾಂಗ್ರೆಸ್‌, ಜೆಡಿಎಸ್‌ ನಡುವೆ ಏನೇ ಭಿನ್ನಾಭಿಪ್ರಾಯಗಳು ಇರಲಿ ಅವುಗಳನ್ನು ಉಭಯ ಪಕ್ಷದವರೂ ಸರಿಪಡಿಸಿಕೊಂಡು ಐಕ್ಯತೆಯಿಂದ ಹೋರಾಡಿದಾಗ ಮಾತ್ರ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರು ಗೆಲುವು ಸಾಧಿಸಲು ಸಾಧ್ಯ’ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಅವರ ಪರ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಮೊಯಿಲಿ ಅವರು ಹಿಂದುಳಿದ ಸಮಾಜಕ್ಕೆ ಸೇರಿದವರು, ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರು ಅನುಭವಿ ರಾಜಕಾರಣಿ. ಅವರನ್ನು ಜಾತಿ, ಮತ ನೋಡದೆ ಗೆಲ್ಲಿಸಬೇಕು. ಅದಕ್ಕಾಗಿ ಎರಡೂ ಪಕ್ಷದವರು ಹಿಂದಿನ ಘಟನೆಗಳನ್ನೆಲ್ಲ ಮರೆಯಬೇಕು. ಆಗಲೇ ರಾಜಕೀಯ ಮುತ್ಸದಿತನ ಬರುತ್ತದೆ. ಬೇಕಾದರೆ ನಿಮ್ಮ ನಿಮ್ಮ ಚುನಾವಣೆಗಳಲ್ಲಿ ಏನು ಬೇಕಾದರೂ ಮಾಡಿ’ ಎಂದು ತಿಳಿಸಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಎಲ್ಲ ಯೋಜನೆಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಕಾಂಗ್ರೆಸ್‌ ಬೆಂಬಲ ಇಲ್ಲದೆ ಇಷ್ಟೆಲ್ಲ ಮಾಡಲು ಸಾಧ್ಯವಿತ್ತೆ? ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಇಬ್ಬರೂ ರೈತರ ಸಾಲ ಮನ್ನಾ ಮಾಡಿದ್ದಾರೆ. ನಾವೆಲ್ಲ ರೈತರ ಮಕ್ಕಳು. ಹೀಗಾಗಿ ನಾವು ರೈತರ ಕಷ್ಟಸುಖಗಳನ್ನು ಅರ್ಥ ಮಾಡಿಕೊಂಡಿದ್ದೇವೆ’ ಎಂದರು.

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ‘ಇವತ್ತು ರೈತರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಈ ಹಿಂದೆ ನಾನು ಅನೇಕ ಬಾರಿ ಸರ್ವ ಪಕ್ಷಗಳ ನಿಯೋಗದಲ್ಲಿ ಹೋಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ರಾಷ್ಟ್ರೀಕೃತ ಬ್ಯಾಂಕಿನಲ್ಲಿರುವ ಸಾಲ ಮನ್ನಾ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರಿಪರಿಯಾಗಿ ಗೋಗರೆದರೂ ಅವರು ಒಪ್ಪಲಿಲ್ಲ. ಬಿಜೆಪಿ ನಾಯಕರೂ ಆಗ ತುಟಿ ಪಿಟಿಕ್ ಎನ್ನಲಿಲ್ಲ’ ಎಂದು ಹೇಳಿದರು.

‘ಮೋದಿ ಅವರು ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಯಡಿಯೂರಪ್ಪ ಕೂಡ ಮುಖ್ಯಮಂತ್ರಿಯಾಗಿದ್ದ ವೇಳೆ ರೈತರ ಸಾಲ ಮನ್ನಾ ಮಾಡಲು ಒಪ್ಪಲಿಲ್ಲ. ಹಾಗಾದರೆ ಇವರನ್ನು ರೈತವಿರೋಧಿಗಳು ಎಂದು ಕರೆಯಬೇಕೇ ಬೇಡವೆ? ನಮ್ಮಲ್ಲಿ ಸಣ್ಣ ಪುಟ್ಟ ಏನೇ ಭಿನ್ನಾಭಿಪ್ರಾಯವಿರಲಿ, ರೈತ ವಿರೋಧಿ ಬಿಜೆಪಿ ಅಭ್ಯರ್ಥಿಗೆ ಮಾತ್ರ ಮತ ಹಾಕಬೇಡಿ’ ಎಂದು ತಿಳಿಸಿದರು.

‘ರೈತರನ್ನು ಕೆಟ್ಟದಾಗಿ ನಡೆಸಿಕೊಂಡ ಮೋದಿ, ಯಡಿಯೂರಪ್ಪ ಅವರ ಅಭ್ಯರ್ಥಿ ಬಚ್ಚೇಗೌಡರು ಇದೀಗ ಜಾತಿ ಹೇಳಿಕೊಂಡು ಮತ ಕೇಳುತ್ತಾರೆ. ಆದ್ದರಿಂದ ಹುಷಾರಾಗಿರಿ. ಬಚ್ಚೇಗೌಡರು ಯಾವ ಸೇರಿದ್ದಾರೆ ಎಂಬುದು ಮುಖ್ಯವಾಗಬಾರದು. ಯಾರೂ ರೈತರಿಗೆ ಏನು ಮಾಡಿದ್ದಾರೆ ಎಂಬುದು ಮುಖ್ಯವೇ ಹೊರತು ಜಾತಿ ಮುಖ್ಯವಾಗಬಾರದು’ ಎಂದರು.

ಶಾಸಕ ಡಾ.ಕೆ.ಸುಧಾಕರ್ ಮಾತನಾಡಿ, ‘ಬಿಜೆಪಿಯವರು ಈ ಭಾಗಕ್ಕೆ ನಯಾಪೈಸೆ ಕೊಟ್ಟಿಲ್ಲ. ಈ ಭಾಗದ ಜನರನ್ನು ಅರ್ಥಮಾಡಿಕೊಂಡವರಲ್ಲಿ, ರೈತರ ನಾಡಿಮಿಡಿತ ಅರಿತ ಸಂಸದರಲ್ಲಿ ಮೊಯಿಲಿ ಅವರು ಮೊದಲಿಗರು. ಹೀಗಾಗಿ ಜಾತಿ ನೋಡದೆ ಅವರ ನೀತಿ, ನಿಯತ್ತು ನೋಡಿ ಮತ ಕೊಡಿ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ರಮೇಶ ಗೌಡ, ಮಾಜಿ ಸಚಿವೆ ರಾಣಿ ಸತೀಶ್‌, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡರಾದ ಹರ್ಷ ಮೊಯಿಲಿ. ಕೆ.ವಿ.ನಾಗರಾಜ್, ಯಲುವಹಳ್ಳಿ ಎನ್.ರಮೇಶ್‌, ಉದಯ ಶಂಕರ್, ರಫಿಕ್, ಜಿ.ಆರ್.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT