ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನಿಂದ ತಪ್ಪಾಗಿತ್ತು ಮನ್ನಿಸಿಬಿಡಿ: ವಿಜಯಾನಂದ ಕಾಶಪ್ಪನವರ ಬಹಿರಂಗ ಕ್ಷಮೆಯಾಚನೆ

Last Updated 28 ಮಾರ್ಚ್ 2019, 12:13 IST
ಅಕ್ಷರ ಗಾತ್ರ

ಬಾಗಲಕೋಟೆ: ‘ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನೋವಿನಿಂದ ಜಿಲ್ಲೆಯ ಪಕ್ಷದ ಮುಖಂಡರಾದಎಸ್.ಆರ್.ಪಾಟೀಲ, ಆರ್.ಬಿ.ತಿಮ್ಮಾಪುರ, ಎಸ್.ಜಿ.ನಂಜಯ್ಯನಮಠ ಹಾಗೂ ರವೀಂದ್ರ ಕಲಬುರ್ಗಿ ವಿರುದ್ಧ ಹೇಳಿಕೆ ನೀಡಿದ್ದೆನು’ ಎಂದು ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪತ್ನಿ ವೀಣಾ ಕಾಶಪ್ಪನವರ ನಾಮಪತ್ರ ಸಲ್ಲಿಸಿದ ನಂತರ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ನನ್ನ ತಪ್ಪಿನ ಅರಿವಾಗಿ ಆಗಲೇ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಕ್ಷಮೆ ಯಾಚಿಸಿದ್ದೇನೆ. ಈಗ ಮತ್ತೊಮ್ಮೆ ಬಹಿರಂಗವಾಗಿ ಕ್ಷಮೆ ಕೇಳುತ್ತಿದ್ದೇನೆ’ ಎಂದರು.

‘ಮುಖಂಡರ ಷರತ್ತಿನ ಕಾರಣಕ್ಕೆ ಕ್ಷಮೆ ಯಾಚಿಸುತ್ತಿಲ್ಲ. ಬದಲಿಗೆ ತಪ್ಪು ಕಲ್ಪನೆಯಿಂದ ಆಗಿದ್ದ ಪ್ರಮಾದದ ಅರಿವು ನನಗೆ ಆಗಿದೆ. ನನ್ನ ಆರೋಪಗಳಿಂದ ಈ ನಾಲ್ವರು ಮುಖಂಡರ ಬೆಂಬಲಿಗರು, ಕುಟುಂಬ ಹಾಗೂ ಬಳಗದವರು ಕೂಡ ನೊಂದಕೊಂಡಿದ್ದರು. ನನ್ನ ಮಾತುಗಳನ್ನು ಹಿಂಪಡೆದುಕೊಂಡು ಅವರ ಕ್ಷಮೆ ಕೂಡ ಯಾಚಿಸುವೆ’ ಎಂದರು.

‘ಕೆಲವು ಕಾರ್ಯಕರ್ತರು ಹಾಗೂ ಜನರ ಮಾತು ಕೇಳಿ ಆ ರೀತಿ ಹೇಳಿಕೆ ನೀಡಿದ್ದೆನು. ಆದರೆ ಆಗಿನ ಮಾತುಗಳನ್ನು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುವ ಮೂಲಕ ವಿರೋಧಿಗಳು ಲಾಭ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ತಪ್ಪಿಸಲು ಸ್ಪಷ್ಟನೆ ನೀಡುತ್ತಿದ್ದೇನೆ. ಈ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೂಡ ನನಗೆ ಬುದ್ಧಿಮಾತು ಹೇಳಿದ್ದಾರೆ’ ಎಂದು ಹೇಳಿದರು.

‘ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಆರ್.ನವಲಿಹಿರೇಮಠ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಇಬ್ಬರೂ ಪರಸ್ಪರ ವಿರೋಧಿಗಳಾಗಿದ್ದ ಕಾರಣ ರಾಜಕೀಯವಾಗಿ ಆರೋಪ–ಪ್ರತ್ಯಾರೋಪ ಮಾಡಿದ್ದೇವೆ. ಈಗ ಕಾಂಗ್ರೆಸ್–ಜೆಡಿಎಸ್ ಒಟ್ಟಾಗಿ ಸ್ಪರ್ಧಿಸುತ್ತಿರುವ ಕಾರಣ ಒಂದಾಗಿದ್ದೇವೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ.‍ಇಬ್ಬರೂ ಈಗ ಸಂಪರ್ಕದಲ್ಲಿದ್ದೇವೆ. ನಿತ್ಯ ಮಾತಾಡುತ್ತೇವೆ. ನನ್ನ ಪತ್ನಿ ವೀಣಾ ಪರ ಅವರೂ ಪ್ರಚಾರಕ್ಕೆ ಬರಲಿದ್ದಾರೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ.ಎಲ್.ಶಾಂತಗಿರಿ, ಮುಖಂಡರಾದ ಬಿ.ವಿ.ಪಾಟೀಲ, ಗಂಗಾಧರ, ಬಸವರಾಜ ಗದ್ದಿ, ಬಸವರಾಜ ಅಂಗಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT