ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬಲ ಪ್ರಧಾನಿ ಸಾಲ ಮನ್ನಾ ಮಾಡಲಿಲ್ಲವೇಕೆ?: ಮೋದಿ ಭಾಷಣಕ್ಕೆ ಸಚಿವ ಶಿವಾನಂದ ಕಿಡಿ

Last Updated 19 ಏಪ್ರಿಲ್ 2019, 6:42 IST
ಅಕ್ಷರ ಗಾತ್ರ

ಬಾಗಲಕೋಟೆ: ‘ದುರ್ಬಲ (ಮಜಬೂರಿ) ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಲ ಮನ್ನಾ ಮಾಡಿ ರೈತರ ಕಣ್ಣೀರು ಒರೆಸಿದ್ದಾರೆ. ಆ ಕೆಲಸ ನೀವು (ಪ್ರಧಾನಿ ನರೇಂದ್ರ ಮೋದಿ) ಮಾಡಲಿಲ್ಲವೇಕೆ’ ಎಂದುಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ ದುರ್ಬಲ ಸರ್ಕಾರ (ರಾಜ್ಯ) ಹಾಗೂ ಪ್ರಬಲ ಸರ್ಕಾರ (ಕೇಂದ್ರ) ಹೋಲಿಕೆಯ ಭಾಷಣಕ್ಕೆ ಶುಕ್ರವಾರ ಇಲ್ಲಿ ತಿರುಗೇಟು ನೀಡಿದ ಅವರು, ‘ತಮ್ಮದು ಮಜಬೂತ್ ಸರ್ಕಾರ ಎನ್ನುವ ಪ್ರಧಾನಿ ನರೇಂದ್ರ ಮೋದಿ, ಐದು ವರ್ಷಗಳ ಆಡಳಿತದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿ ಅವರ ಸಂಕಷ್ಟಕ್ಕೆ ಮಿಡಿಯಲಿಲ್ಲವೇಕೆ’ ಎಂದು ಕೇಳಿದರು.

‘ಪ್ರಧಾನಿ ಭಾಷಣ ಬಾಗಲಕೋಟೆ ಜನರ ಹಾಗೂ ಮುಳುಗಡೆ ಸಂತ್ರಸ್ತರ ನಿರೀಕ್ಷೆ ಹುಸಿಗೊಳಿಸಿದೆ. ಆಲಮಟ್ಟಿ ಜಲಾಶಯ ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಬರಬೇಕು ಎಂಬುದು ರಾಜ್ಯ ಸರ್ಕಾರದ ಒತ್ತಾಯವಾಗಿದೆ. ಆ ಬಗ್ಗೆಯೂ ಮೋದಿ ಸ್ಪಷ್ಟವಾಗಿ ಏನೂ ಹೇಳಲಿಲ್ಲ. ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ಅದಕ್ಕೆ ವೇಗ ನೀಡಿದ್ದರು. ಆದರೆ ಮೋದಿ ಬರೀ ಮಾತಾಡಿ ಹೋದರು’ ಎಂದು ಟೀಕೆ ಮಾಡಿದರು.

ಲಿಂಗಾಯತ ಪ್ರತ್ಯೇಕ ಧರ್ಮದಂತಹ ವಿಚಾರ ಪ್ರಧಾನಿ ಪ್ರಸ್ತಾಪಿಸಿದ್ದು ಸರಿಯಲ್ಲ. ಇಬ್ಬರು ಸಚಿವರ ನಡುವಿನ ಮಾತುಗಳನ್ನು ಪ್ರಸ್ತಾಪಿಸುವ ಬದಲು ಪ್ರಧಾನಿ ಜನರ ಸಮಸ್ಯೆಗಳ ಬಗ್ಗೆ ಮಾತಾಡಬೇಕಿತ್ತು ಎಂದು ಟಾಂಗ್ ನೀಡಿದ ಶಿವಾನಂದ ಪಾಟೀಲ, ಸಣ್ಣ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ನಮಗೂ ಸಂತೋಷವಿದೆ. ಮುಂದೆ ಬರುವ ಪ್ರಧಾನಿಯೂ ಅದನ್ನು ಮಾಡಬಹುದು ಎಂದರು.

ಮಾತಿನಲ್ಲಿಯೇ ಮನೆಕಟ್ಟುವ ಮೋದಿ, ತಮ್ಮ ಮುಖ ನೋಡಿಕೊಂಡು ಬಿಜೆಪಿ ಅಭ್ಯರ್ಥಿಗಳಿಗೆ ಮತ ಕೊಡಿ ಎನ್ನುತ್ತಿದ್ದಾರೆ. ಓಟು ಕೊಟ್ಟ ಮತದಾರರು ಮೋದಿ ಮುಖ ನೋಡಲು ಮತ್ತೊಂದು ಚುನಾವಣೆವರೆಗೆ ಕಾಯಬೇಕೇ ಎಂದು ಛೇಡಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT