ಶುಕ್ರವಾರ, ಏಪ್ರಿಲ್ 23, 2021
23 °C
₹ 5ಲಕ್ಷ ಪರಿಹಾರ ಮಂಜೂರು, ಮಗನಿಗೆ ದಿನಗೂಲಿ ಆಧಾರದಲ್ಲಿ ಉದ್ಯೋಗ

ಬೆಳೆ ಕಾಯುತ್ತಿದ್ದ ರೈತ ಕಾಡಾನೆಗೆ ಬಲಿ; ರೈತರ ದಿಢೀರ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಬಾಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಸುಕಿನಲ್ಲಿ ಕಾಡಾನೆ ದಾಳಿಗೆ ರೈತರೊಬ್ಬರು ಬಲಿಯಾಗಿದ್ದಾರೆ.

ಗ್ರಾಮದ ನಿವಾಸಿ ಚಿಕ್ಕ ಕೂಸೇಗೌಡ (52) ಮೃತಪಟ್ಟಿರುವ ದುರ್ದೈವಿ. ಸೂರ್ಯಕಾಂತಿ ಬೆಳೆಯ ರಕ್ಷಣೆಗಾಗಿ ಕಾವಲು ಕಾಯಲು ಅವರು ಗುರುವಾರ ರಾತ್ರಿ ತಮ್ಮ ಜಮೀನಿಗೆ ತೆರಳಿದ್ದರು.

ಘಟನೆಯಿಂದ ಆಕ್ರೋಶಗೊಂಡ ರೈತರು ಹಾಗೂ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ದಿಢೀರ್‌ ಪ್ರತಿಭಟನೆ ನಡೆಸಿದರು.

‘ಮೃತರ ಕುಟುಂಬಕ್ಕೆ ₹ 50 ಲಕ್ಷ ಪರಿಹಾರ ಕೊಡಬೇಕು, ಅವರ ಮಗನಿಗೆ ಇಲಾಖೆಯಲ್ಲಿ ಉದ್ಯೋಗ ಕೊಡಿಸಬೇಕು. ಅದುವರೆಗೂ ಶವ ತೆಗೆಯುವುದಿಲ್ಲ’ ಎಂದು ಪಟ್ಟು ಹಿಡಿದರು.  

‘ಸೋಲಾರ್ ತಂತಿಬೇಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆನೆ ಕಂದಕಗಳು ಮುಚ್ಚಿ ಹೋಗಿವೆ. ಎಲ್ಲ ವನ್ಯಪ್ರಾಣಿಗಳು ಸರಾ‌ಗವಾಗಿ ಜಮೀನಿಗೆ ನುಗ್ಗುತ್ತಿವೆ. ಅರಣ್ಯ ಇಲಾಖೆಯ ಸಿಬ್ಬಂದಿಯ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸ್ಥಳಕ್ಕೆ ಬಂದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು, ‘ಇಲಾಖೆಯಿಂದ ಮೃತರ ಕುಟುಂಬಕ್ಕೆ ₹ 5 ಲಕ್ಷ ಹಣವನ್ನು ಪರಿಹಾರವಾಗಿ ನೀಡಲು ಅವಕಾಶ ಇದೆ. ಹೆಚ್ಚಿನ ಪರಿಹಾರ ಮೊತ್ತಕ್ಕೆ ಬೇಡಿಕೆ ಇಟ್ಟು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕುಟುಂಬದ ಸದಸ್ಯರೊಬ್ಬರಿಗೆ ವಿದ್ಯಾರ್ಹತೆ ಆಧಾರದಲ್ಲಿ ತಾತ್ಕಾಲಿಕ ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. 

ಇದನ್ನು ಒಪ್ಪದ ಪ್ರತಿಭಟನಾಕಾರರು ತಕ್ಷಣವೇ ಪರಿಹಾರ ಮೊತ್ತವನ್ನು ಮೃತ ಕೂಸೇಗೌಡ ಅವರ ಪತ್ನಿ ನಾಗೇಂದ್ರಮ್ಮ ಅವರ ಖಾತೆಗೆ ಹಾಕಬೇಕು ಎಂದು ಪಟ್ಟು ಹಿಡಿದರು. 

ಅಂತಿಮವಾಗಿ ಬಾಲಚಂದ್ರ ಅವರು, ‘ನಾಗೇಂದ್ರಮ್ಮ ಅವರಿಗೆ ₹ 5 ಲಕ್ಷ ಹಣವನ್ನು ಸರ್ಕಾರ ಮಂಜೂರು ಮಾಡಿದೆ. ಕುಟುಂಬದ ಒಬ್ಬ ವ್ಯಕ್ತಿಗೆ ದಿನಗೂಲಿ ಆಧಾರದಲ್ಲಿ ಉದ್ಯೋಗಕ್ಕೆ ನೇಮಿಸಲಾಗುವುದು. ಹೆಚ್ಚುವರಿಯಾಗಿ ಇನ್ನೂ ₹ 5 ಲಕ್ಷ ಪರಿಹಾರ ನೀಡುವ ಬಗ್ಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಮುಚ್ಚಳಿಕೆ ಬರೆದು ಕೊಟ್ಟರು. 

ಸ್ಥಳಕ್ಕೆ ಭೇಟಿ ನೀಡಿದ ಗುಂಡ್ಲುಪೇಟೆ ತಹಶೀಲ್ದಾರ್‌ ನಂಜುಂಡಯ್ಯ ಮತ್ತು ಕಂದಾಯ ಅಧಿಕಾರಿಗಳು ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಸರ್ಕಾರದ ಗಮನಸೆಳೆಯಲಾಗುವುದು ಎಂದು ಭರವಸೆ ನೀಡಿದರು. 

ಕೂಸೇಗೌಡ ಅವರ ಅಂತಿಮ ಸಂಸ್ಕಾರಕ್ಕಾಗಿ ವಲಯಾರಣ್ಯಾಧಿಕಾರಿ ಮಂಜುನಾಥ್‌ ಅವರು ₹ 10 ಸಾವಿರ ನೆರವನ್ನೂ ನೀಡಿದರು. ಆ ಬಳಿಕ ರೈತರು ಪ್ರತಿಭಟನೆ ವಾಪಸ್‌ ಪಡೆದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಟರಾಜ್, ರೈತ ಮುಖಂಡರಾದ ಕುಂದುಕೆರೆ ಸಂಪತ್ತು, ಕಡಬೂರು ಮಂಜುನಾಥ್, ಸೇರಿದಂತೆ ಹಲವರು ಇದ್ದರು. 

ಚಾಮರಾಜನಗರದಲ್ಲೂ ಪ್ರತಿಭಟನೆ

ಮೃತರ ಕುಟುಂಬಕ್ಕೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಗುರುಪ್ರಸಾದ್‌ ನೇತೃತ್ವದಲ್ಲಿ ರೈತರು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. 

‘ಆನೆದಾಳಿಯಲ್ಲಿ ಅಧಿಕಾರಿಗಳು ಮೃತಪಟ್ಟರೆ ₹ 25 ಲಕ್ಷ ಪರಿಹಾರ ನೀಡಲಾಗುತ್ತದೆ. ರೈತರಿಗೆ ₹ 5 ಲಕ್ಷ. ಇದು ಯಾವ ನ್ಯಾಯ? ಅರಣ್ಯ ವೀಕ್ಷಕರು ಹಾಗೂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ಈ ರೀತಿ ಆಗಿದೆ. ಸಂಬಂಧಿಸಿದವರನ್ನು ಮೊದಲು ಅಮಾನತು ಮಾಡಬೇಕು. ತಕ್ಷಣವೇ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು. 

ಪ್ರತಿಭಟನಾಕಾರರನ್ನು ಮನವೊಲಿಸಲು ಯತ್ನಿಸಿದ ಪ್ರಭಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶಂಕರ್‌ ಅವರು, ‘ಮೊದಲು ನಾವೇ ಚೆಕ್‌ ಮೂಲಕ ಪರಿಹಾರ ನೀಡುತ್ತಿದ್ದೆವು. ಈಗ ಅದು ಸರ್ಕಾರದಿಂದಲೇ ಬರಬೇಕು. ತಾಂತ್ರಿಕ ಸಮಸ್ಯೆಗಳಿದ್ದರೆ ಸ್ವಲ್ಪ ವಿಳಂಬವಾಗುತ್ತದೆ. ಆದರೆ ₹ 5 ಲಕ್ಷ ಪರಿಹಾರ ಸಿಗಲಿದೆ’ ಎಂದರು. 

ಹೆಚ್ಚಿನ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವ ಭರವಸೆಯನ್ನೂ ಅವರು ನೀಡಿದರು.

ಆದರೆ, ಇದನ್ನು ಒಪ್ಪದ ಪ್ರತಿಭಟನಾಕಾರರು, ಪರಿಹಾರ ನೀಡುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. 

ಪರಿಹಾರ ಮಂಜೂರು ಆಗಿರುವುದು ದೃಢಪಟ್ಟ ನಂತರ ಪ್ರತಿಭಟನೆಯನ್ನು ವಾಪಸ್‌ ಪಡೆದರು. 

‘ಮೃತ ರೈತರ ಪತ್ನಿಯ ಖಾತೆಗೆ ₹ 5 ಲಕ್ಷ ಜಮೆ ಆಗಿದೆ. ಅವರ ಮಗನಿಗೆ ಇಲಾಖೆಯಲ್ಲಿ ಕೆಲಸ ಕೊಡುವುದಾಗಿಯೂ ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚಿನ ಪರಿಹಾರಕ್ಕಾಗಿ ಪ್ರಸ್ತಾವನೆ ಕಳುಹಿಸುವ ಭರವಸೆಯನ್ನೂ ನೀಡಿದ್ದಾರೆ. ಹಾಗಾಗಿ ಪ್ರತಿಭಟನೆಯನ್ನು ವಾಪಸ್‌ ಪಡೆದಿದ್ದೇವೆ’ ಎಂದು ಗುರುಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ರೈತ ಮುಖಂಡರಾದ ಪೃಥ್ವಿ, ಮಹೇಶ್‌, ಶಿವು, ಶಿವಪ್ರಸಾದ್‌, ಅಶೋಕ್‌ ಮಹದೇವಸ್ವಾಮಿ, ದೊರೆಸ್ವಾಮಿ, ಶಂಭುಲಿಂಗಪ್ಪ ಇದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು