ಶುಕ್ರವಾರ, ಜನವರಿ 17, 2020
20 °C

ರಜನಿಕಾಂತ್‌ 'ದರ್ಬಾರ್': ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್‌ ಹವಾ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಮಾಲ್‌ ಮಾಡಿರುವ ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ದರ್ಬಾರ್ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ತಲೈವನ ದರ್ಬಾರ್‌  ಟ್ರೇಲರ್‌ ಅನ್ನು ಸೋಮವಾರ ಯುಟ್ಯೂಬ್‌ನಲ್ಲಿ ಸೇರಿಸಲಾಗಿದೆ. ಬಿಡುಗಡೆಯಾಗಿ 16 ಗಂಟೆಗಳಲ್ಲಿ 62 ಲಕ್ಷ ಜನರು ವೀಕ್ಷಿಸಿದ್ದಾರೆ. ಸುಮಾರ 6 ಲಕ್ಷ ಜನರು ಲೈಕ್‌ ಮಾಡಿದ್ದಾರೆ.

ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಬಾರಿ ನೀರಿಕ್ಷೆ ಹುಟ್ಟುಹಾಕಿದೆ. ಚಿತ್ರಕಥೆಗಿಂತಲೂ ರಜನಿಯ ನಟನಾ ಶೈಲಿ ಮತ್ತು ಡೈಲಾಗ್‌ಗಳಿಗೆ ಮಾರುಹೋಗುವ ಪ್ರೇಕ್ಷಕರೇ ಹೆಚ್ಚು. ಈ ಹಿಂದೆ ‘ದರ್ಬಾರ್‌’ ಚಿತ್ರದ ಫಸ್ಟ್‌ಲುಕ್‌ ಕೂಡ ಬಣ್ಣದಲೋಕದಲ್ಲಿ ದೊಡ್ಡಮಟ್ಟದ ಸಂಚಲನ ಸೃಷ್ಟಿಸಿತ್ತು.

ಎ.ಆರ್. ಮುರುಗದಾಸ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ನಯನ ತಾರಾ, ಸುನಿಲ್ ಶೆಟ್ಟಿ, ಯೋಗಿಬಾಬು ಮುಖ್ಯಭೂಮಿಕೆಯಲ್ಲಿದ್ದಾರೆ. ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. 

1992ರಲ್ಲಿ ಬಿಡುಗಡೆಗೊಂಡ ‘ಪಾಂಡಿಯನ್’ ಚಿತ್ರದಲ್ಲಿ ರಜನಿಕಾಂತ್‌ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಅವರು ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಚಿತ್ರದಲ್ಲಿ ಖಳನಟನಾಗಿ ಟೈಗರ್ ಪ್ರಭಾಕರ್ ನಟಿಸಿದ್ದರು. ಎಸ್.ಪಿ. ಮುತ್ತುರಾಮನ್ ನಿರ್ದೇಶನ ಮಾಡಿದ್ದ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಗಿತ್ತು. 

‘ಘಜನಿ’, ‘ತುಪಾಕಿ’, ‘ಕತ್ತಿ’ ಮತ್ತು ‘ಸರ್ಕಾರ್’ ಮೊದಲಾದ ಯಶಸ್ವಿ ಚಿತ್ರಗಳನ್ನು ನೀಡಿರುವ ಮುರುಗದಾಸ್ ದರ್ಬಾರ್‌ನಲ್ಲಿ ರಜನಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಹಿಂದೆ ತಲೈವ ಖಾಕಿ ತೊಟ್ಟು ಮಿಂಚಿದ್ದ ಚಿತ್ರಗಳು ಭರ್ಜರಿ ಯಶಸ್ಸು ಕಂಡಿವೆ. ‘ದರ್ಬಾರ್’ ಮೂಲಕ ಮತ್ತೆ ಖಾಕಿ ಗತ್ತಿನ ಗತವೈಭವ ಮರುಕಳಿಸುವುದೇ ಎನ್ನುವುದು ಅವರ ಅಭಿಮಾನಿಗಳ ಕುತೂಹಲ. ಈ ಚಿತ್ರ ಪೊಂಗಲ್‌ ಹಬ್ಬಕ್ಕೆ ತೆರೆಗೆ ಬರಲಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು