ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋವಾ ಅಂತರರಾಷ್ಟ್ರೀಯ ಚಿತ್ರೋತ್ಸವ ಇಂದಿನಿಂದ

Last Updated 19 ನವೆಂಬರ್ 2022, 20:45 IST
ಅಕ್ಷರ ಗಾತ್ರ

ಪಣಜಿ: ಕೋವಿಡ್‌, ಕೊರೊನಾ ನಿಯಂತ್ರಣ ಕ್ರಮಗಳಿಂದ ಉಂಟಾದ ಹಿಂಜರಿಕೆ, ನಿರುತ್ಸಾಹ ಮತ್ತು ಅವ್ಯವಸ್ಥೆಗಳಿಂದ ಸೊರಗಿದ್ದ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಈ ವರ್ಷ ಚೇತರಿಸಿಕೊಳ್ಳಬಹುದೆಂಬ ಆಶಾವಾದದೊಡನೆ 53ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಭಾನುವಾರ ಸಂಜೆ ಚಾಲನೆ ಸಿಗಲಿದೆ.

ಪಣಜಿ ಹೊರವಲಯದಲ್ಲಿರುವ ಗೋವಾ ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಸಂಜೆ 4 ಗಂಟೆಗೆ ಕೇಂದ್ರ ಪ್ರಸಾರ ಖಾತೆ ಸಚಿವ ಅನುರಾಗ್‌ಸಿಂಗ್‌ ಠಾಕೂರ್‌ ಚಿತ್ರೋತ್ಸವವನ್ನು ಉದ್ಘಾಟಿಸುವರು. ರಾಜ್ಯಪಾಲ ಪಿ.ಎಸ್‌.ಶ್ರೀಧರನ್‌ ಪಿಳ್ಳೈ, ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಅಜಯ್‌ ದೇವಗನ್‌, ಸಾರಾ ಅಲಿಖಾನ್‌ ಸೇರಿದಂತೆ ಹಲವು ನಟ,ನಟಿಯರು ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿರುವರು. ಆಸ್ಟ್ರಿಯಾ ದೇಶದ ಡಯಟರ್‌ ಬರ್ನರ್‌ ನಿರ್ದೇಶನದ ಅಲ್ಮ ಅಂಡ್‌ ಆಸ್ಕರ್‌ ಉದ್ಘಾಟನಾ ಚಿತ್ರವಾಗಿ ಪ್ರದರ್ಶನವಾಗಲಿದೆ.

ಸೋಮವಾರದಿಂದ ಪಣಜಿಯ ಐನಾಕ್ಸ್‌ ಚಿತ್ರಮಂದಿರದ 6 ತೆರೆಗಳು ಮತ್ತು ಪೊರ್ವರಿಂನ ಐನಾಕ್ಸ್‌ನ ನಾಲ್ಕು ತೆರೆಗಳಲ್ಲಿ ಎಪ್ಪತ್ತೊಂಬತ್ತು ದೇಶಗಳ 280 ಸಿನಿಮಾಗಳು ಮುಂಜಾನೆ 9 ರಿಂದ ತಡರಾತ್ರಿವರೆಗೆ ನಿರಂತರವಾಗಿ ಪ್ರದರ್ಶನಗೊಳ್ಳಲಿವೆ. ಈ ಚಿತ್ರಗಳನ್ನು (ನೊಂದಾಯಿಸಿಕೊಂಡ ಪ್ರತಿನಿಧಿಗಳು) ಕೆಲ ಪ್ರಾಯೋಜಿತ ಒಟಿಟಿ ವೇದಿಕೆಗಳ ಮೂಲಕ ನೋಡುವ ಅವಕಾಶವಿದೆ. ಪಣಜಿ ಮತ್ತು ಮಡಗಾಂವ್‌ನ ಸಾರ್ವಜನಿಕರಿಗಾಗಿ ಐದಾರು ಸ್ಥಳಗಳಲ್ಲಿ ಸಂಜೆ ವೇಳೆ ಆಯ್ದ ಸಿನಿಮಾಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಭಾರತೀಯ ಪನೋರಮಾ ವಿಭಾಗದಲ್ಲಿ 25 ಕಥಾಚಿತ್ರಗಳು ಮತ್ತು 19 ನಾನ್‌ ಫೀಚರ್‌ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಈ ವಿಭಾಗದ ಉದ್ಘಾಟನಾ ಚಿತ್ರವಾಗಿ ಕನ್ನಡದ ‘ಹದಿನೇಳೆಂಟು’ (ಸೆವೆಂಟೀನರ್ಸ್‌) ಸೋಮವಾರ ಪ್ರದರ್ಶನವಾಗಲಿದೆ. ಪೃಥ್ವಿ ಕೊಣನೂರು ಈ ಚಿತ್ರದ ನಿರ್ದೇಶಕರು. ಈ ವಿಭಾಗದಲ್ಲಿರುವ ಇನ್ನೊಂದು ಕನ್ನಡ ಚಿತ್ರ ಕೃಷ್ಣೇಗೌಡ ನಿರ್ದೇಶನದ ‘ನಾನು ಕುಸುಮ’. ನಾನ್‌ ಫೀಚರ್‌ ವಿಭಾಗದಲ್ಲಿ ‘ಮಧ್ಯಂತರ’ ಹೆಸರಿನ ಕಿರು ಚಿತ್ರವಿದೆ. ಚಿತ್ರೋತ್ಸವದ ಫೋಕಸ್‌ ರಾಷ್ಟ್ರ ಫ್ರಾನ್ಸ್ ಆಗಲಿದೆ. ಫ್ರೆಂಚ್‌ ಭಾಷೆಯ ಎಂಟು ಸಮಕಾಲೀನ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಸ್ಪರ್ಧಾ ವಿಭಾಗದಲ್ಲಿ ಹದಿನೈದು ಅಂತರರಾಷ್ಟ್ರೀಯ ಸಿನಿಮಾಗಳಿವೆ. ಇವುಗಳಲ್ಲಿ ಮೂರು ಭಾರತೀಯ ಸಿನಿಮಾಗಳು.

ಹೆಸರಾಂತ ನಿರ್ದೇಶಕ ದಿ.ಸತ್ಯಜಿತ್‌ ರೇ ಹೆಸರಿನಲ್ಲಿ ನೀಡುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ಪ್ಯಾನಿಷ್‌ ಚಿತ್ರ ನಿರ್ದೇಶಕ ಕಾರ್ಲೋಸ್‌ ಸೌರಾ ಅವರಿಗೆ ಪ್ರದಾನ ಮಾಡಲಾಗುವುದು. ಕಾರ್ಲೋಸ್‌ ಪರವಾಗಿ ಅವರ ಮಗಳು ಅನ್ನಾ ಸೌರಾ ಪ್ರಶಸ್ತಿ ಸ್ವೀಕರಿಸುವರು.

ಕಳೆದ ಒಂದು ವರ್ಷದ ಅವಧಿಯಲ್ಲಿ ಅಗಲಿದ ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್‌, ಕಥಕ್‌ ನೃತ್ಯ ಕಲಾವಿದ ಪಂಡಿತ್‌ ಬಿರ್ಜು ಮಹಾರಾಜ್‌, ತೆಲುಗು ನಟ ಕೃಷ್ಣಂರಾಜು, ಮಲಯಾಳಂ ನಟ ಪ್ರತಾಪ್‌ ಪೋತನ್‌, ಸಂಗೀತ ನಿರ್ದೇಶಕ ಬಪ್ಪಿ ಲಹರಿ, ಗಾಯಕ ಕೆ.ಕೆ. ಸೇರಿದಂತೆ ಹದಿನೇಳು ಸಿನಿಮಾ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ ಚಿತ್ರಗಳನ್ನು ಪ್ರದರ್ಶನ ಮಾಡಲಾಗುವುದು.

ಸಮಕಾಲೀನ ಸಿನಿಮಾ ತಂತ್ರಜ್ಞಾನದ ಆವಿಷ್ಕಾರಗಳನ್ನು ಕುರಿತು ತಜ್ಞರ ಜೊತೆ ಸಂವಾದ ಮತ್ತು ಭಾರತೀಯ ಸಿನಿಮಾಗಳಿಗೆ ಮಾರುಕಟ್ಟೆ, ಪ್ರಾಯೋಜಕತ್ವ ಮತ್ತು ಮಾಹಿತಿ ವಿನಿಮಯಕ್ಕೆ ವೇದಿಕೆ ಕಲ್ಪಿಸುವ ಐದು ದಿನಗಳ ಫಿಲ್ಮ್‌ ಬಜಾರ್‌ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT