ಶುಕ್ರವಾರ, ಜೂನ್ 5, 2020
27 °C

ಹೊಸಬರ 9 ದಿನಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಒಂಬತ್ತು ದಿನಗಳು, ಒಂಬತ್ತು ಪಾತ್ರಗಳ ಸುತ್ತ ನಡೆಯುವ ಘಟನೆಗಳನ್ನೇ ಆಧರಿಸಿ ನಿರ್ಮಿಸಲಾಗುತ್ತಿರುವ ‘9 ದಿನಗಳು’ ಚಿತ್ರಕ್ಕೆ ಎಸ್‌.ಎಸ್‌. ವಿಧಾ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಕೆಲಸಗಳನ್ನು ಲಾಕ್‌ಡೌನ್‌ ತೆರವಾದ ನಂತರ ಪೂರ್ಣಗೊಳಿಸಿ ಆದಷ್ಟು ಶೀಘ್ರ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

ಇದೊಂದು ಹೊಸಬರ ಚಿತ್ರತಂಡ. ನಾಯಕನಾಗಿ ದೈವಿಕ್‌ ಮತ್ತು ನಾಯಕಿಯಾಗಿ ಮಾನಸಾ ಅವರಿಗೆ ಇದು ಚೊಚ್ಚಲ ಸಿನಿಮಾ. ‘9 ದಿನಗಳು’ ಚಿತ್ರದಲ್ಲಿ ತಮ್ಮ ಅದೃಷ್ಟ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ ಈ ಇಬ್ಬರು. ವಿಧಾ ಅವರಿಗೂ ಇದು ಮೊದಲ ಸಿನಿಮಾ. 2015ರಲ್ಲಿ ‘ಉಗ್ರಾಕ್ಷ’ ಸಿನಿಮಾ ಕೈಗೆತ್ತಿಕೊಂಡಿದ್ದರೂ ಅದು ಕೈಗೂಡಲಿಲ್ಲ. ಈ ಚಿತ್ರದಲ್ಲಿ ನಟಿ ದೀಪಿಕಾ ಕಾಮಯ್ಯ ನಾಯಕಿಯಾಗಿ ಮತ್ತು ಮೋಹನ್‌ ನಾಯಕನಾಗಿ ನಟಿಸುತ್ತಿದ್ದರು. ಆದರೆ, ಈ ಸಿನಿಮಾ ಅರ್ಧಕ್ಕೆ ನಿಂತಿದೆ.

‘9 ದಿನಗಳು’ ಚಿತ್ರದ ಮಾತಿನ ಭಾಗ ಪೂರ್ಣಗೊಂಡಿದೆ. ಒಂದು ಫೈಟ್‌ ಮತ್ತು ಎರಡು ಹಾಡುಗಳ ಚಿತ್ರೀಕರಣವೂ ಆಗಿದೆ. ಎರಡು ಫೈಟ್‌ ಮತ್ತು ಎರಡು ಹಾಡುಗಳ ಚಿತ್ರೀಕರಣ ಬಾಕಿ ಇವೆ. ಬೆಂಗಳೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಹಾರೋಹಳ್ಳಿ, ಬಾಗೇಪಲ್ಲಿ, ಹೊಸಕೋಟೆ, ಕನಕಪುರ ಭಾಗದಲ್ಲಿ 45 ದಿನಗಳ ಚಿತ್ರೀಕರಣವಾಗಿದೆ ಎಂದು ಮಾತಿಗಿಳಿದರು ನಿರ್ದೇಶಕ ಎಸ್‌.ಎಸ್‌. ವಿಧಾ. ಈ ಚಿತ್ರದ ಮೇಲೆ ಅವರಿಗೂ ತುಂಬಾ ನಿರೀಕ್ಷೆಗಳಿವೆ. ಚಿತ್ರತಂಡದಲ್ಲಿರುವವರು ಬಹುತೇಕ ಎಲ್ಲರೂ ಹೊಸಬರೇ, ಹಾಗೆಯೇ ಚಿತ್ರದಲ್ಲೂ ಹೊಸತನ ತುಂಬಿತುಳುಕಲಿದೆ ಎನ್ನುವ ಮಾತು ಸೇರಿದರು.

ಸಸ್ಪೆನ್ಸ್‌– ಥ್ರಿಲ್ಲರ್‌ ಜಾನರ್‌ ಕಥೆ ಇದರಲ್ಲಿ. ಐವರು ಹುಡುಗರು, ನಾಲ್ವರು ಹುಡುಗಿಯರು ಹೊಸ ವರ್ಷದ ಮೊದಲ ದಿನ ಮೋಜುಮಸ್ತಿಗಾಗಿ ದೂರದ ಸ್ಥಳವೊಂದಕ್ಕೆ ಹೋಗುತ್ತಾರೆ. ಅಲ್ಲಿ ಒಂದು ಅಪಘಾತ ನಡೆದು, ಸಾವು ಸಂಭವಿಸುತ್ತದೆ. ಆ ಸಾವನ್ನು ಮುಚ್ಚಿ ಹಾಕಲು ಅಧಿಕಾರ ಮತ್ತು ಹಣ ಹೇಗೆ ಕೆಲಸ ಮಾಡುತ್ತದೆ ಹಾಗೂ ಅಪಘಾತದಲ್ಲಿ ಮಡಿದವನ ಆತ್ಮಕ್ಕೆ ಶಾಂತಿ– ಮುಕ್ತಿ ಹೇಗೆ ಸಿಗುತ್ತದೆ ಎನ್ನುವುದು ಚಿತ್ರದ ಕುತೂಹಲ. ಇದರಲ್ಲಿ ಒಂದು ಅದ್ಭುತವಾದ ಸಾಮಾಜಿಕ ಸಂದೇಶವೂ ಇದೆ ಎಂದು ವಿಧಾ ಅವರು ಕಥೆಯ ಬಗ್ಗೆಯೂ ಹೇಳಿದರು. ನಿರ್ದೇಶನದ ಜತೆಗೆ ರಚನೆ, ಚಿತ್ರಕಥೆ, ಸಂಭಾಷಣೆಯ ನೊಗವನ್ನು ವಿಧಾ ನಿಭಾಯಿಸಿದ್ದಾರೆ.

ಎಂ.ವಿ.ಫಿಲಂಸ್ ಲಾಂಛನದಡಿಯಲ್ಲಿ ಡಾ.ಎಂ.ವೆಂಕಟಸ್ವಾಮಿ ಬಂಡವಾಳ ಹೂಡಿದ್ದಾರೆ. ಜತೆಗೆ ಚಿತ್ರದಲ್ಲಿನ ಡಿಸಿಪಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಾರ್ತಿಕ್ ಜೆ.ಕಿರಣ್ ಛಾಯಾಗ್ರಹಣ, ಎಂ.ಸಂಜೀವ್‍ರಾವ್ ಸಂಗೀತ, ಅಲ್ಟಿಮೇಟ್‍ ಶಿವು ಸಾಹಸ, ಹರಿಕೃಷ್ಣ ನೃತ್ಯ ಸಂಯೋಜನೆ ಇದೆ. ತಾರಗಣದಲ್ಲಿ ಅರ್ಜುನ್‍ವೀರ್, ಅರ್ಚನಾ, ಕಬಾಡ ಸಂತೋಷ್, ಸೋನು ರಕ್ಷಾ, ಗಿರೀಶ್, ಸಂದೀಪ್, ಸಂಜು, ಮೋಹನ್ ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.