ಶುಕ್ರವಾರ, ಮೇ 29, 2020
27 °C

ಪಾತಕಲೋಕದ ಚೈತನ್ಯ ಕಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

KM chaitanya

ಕೆ.ಎಂ. ಚೈತನ್ಯ ನಿರ್ದೇಶಿಸಿದ ಮೊದಲ ಚಿತ್ರ ‘ಆ ದಿನಗಳು’. ಕಥೆಯ ನಿರೂಪಣೆ ಮತ್ತು ಮೇಕಿಂಗ್‌ನಿಂದ ಕನ್ನಡದಲ್ಲಿ ಹೊಸ ಅಲೆಯೊಂದನ್ನು ಸೃಷ್ಟಿಸಿದ್ದು ಈ ಚಿತ್ರದ ಹೆಗ್ಗಳಿಕೆ. ಭೂಗತಲೋಕದ ಸುತ್ತ ಹೆಣೆದ ಈ ಸಿನಿಮಾ ತೆರೆಕಂಡು ಒಂದು ದಶಕ ಉರುಳಿದೆ. ರೊಮ್ಯಾಂಟಿಕ್‌, ಹಾರರ್‌, ಥ್ರಿಲ್ಲರ್‌, ಸಸ್ಪೆನ್ಸ್‌ ಹಾದಿಯಲ್ಲಿ ಸಾಗುತ್ತಿದ್ದ ಅವರು ಮತ್ತೆ ಪಾತಕಲೋಕದ ಕಥೆ ಹೇಳಲು ಸಜ್ಜಾಗಿದ್ದಾರೆ. ಇದರ ಸ್ಕ್ರಿಪ್ಟ್‌ ಸಿದ್ಧಪಡಿಸಿದ್ದು, ಕೊರೊನಾ ಭೀತಿ ಕಡಿಮೆಯಾದ ಬಳಿಕ ಸೂಕ್ತ ಪಾತ್ರವರ್ಗದೊಟ್ಟಿಗೆ ಶೂಟಿಂಗ್‌ ಆರಂಭಿಸುವುದು ಅವರ ಇರಾದೆ.

‘ನನ್ನ ಮೊದಲ ಚಿತ್ರದ ಬಳಿಕ ಪಾತಕಲೋಕದ ಕಥೆ ಮುಟ್ಟಿರಲಿಲ್ಲ. ಲಾಕ್‌ಡೌನ್ ಅವಧಿಯಲ್ಲಿ‌ ಸ್ಕ್ರಿಪ್ಟ್‌ ಸಿದ್ಧಪಡಿಸಿರುವೆ. ಆದರೆ, ಯಾವಾಗ ಶೂಟಿಂಗ್‌ ಶುರು ಮಾಡುತ್ತೇವೆ ಎಂಬುದು ಖಾತ್ರಿಯಿಲ್ಲ’ ಎಂದು ‘ಪ್ರಜಾ ಪ್ಲಸ್‌’ಗೆ ಮಾಹಿತಿ ನೀಡಿದರು.

ಚೈತನ್ಯ ಅವರು ಹೀರೊಗಳನ್ನು ತಲೆಯಲ್ಲಿಟ್ಟುಕೊಂಡು ಸ್ಕ್ರಿಪ್ಟ್‌ ಸಿದ್ಧಪಡಿಸುವುದಿಲ್ಲವಂತೆ. ‘ನಾನು ಎಂದಿಗೂ ಹೀರೊ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕಥೆಗೆ ಪ್ರಾಧಾನ್ಯ ಕೊಡುತ್ತೇನೆ. ಕಥೆ ಮತ್ತು ಪಾತ್ರವನ್ನು ಚೆನ್ನಾಗಿ ಬಿಲ್ಡ್‌ ಮಾಡುತ್ತೇನೆ. ನಿರ್ಮಾಪಕರು ಸಿಕ್ಕಿದ ನಂತರ ಪಾತ್ರವರ್ಗದ ಬಗ್ಗೆ ನಿರ್ಧರಿಸುತ್ತೇನೆ. ದೊಡ್ಡ ಹೀರೊ ಸಿಕ್ಕಿದರೆ ಅವರಿಗೆ ತಕ್ಕಂತೆ ಸ್ಕ್ರಿಪ್ಟ್‌ನಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇನೆ’ ಎಂದು ಗುಟ್ಟು ಬಿಚ್ಚಿಟ್ಟರು.

‘ಆಟಗಾರ’ ಚಿತ್ರವನ್ನೂ ಅವರು ಹತ್ತು ಮಂದಿ ಹೊಸಬರಿಗೆ ಸಿದ್ಧಪಡಿಸಿದ್ದರಂತೆ. ‘ನಿರ್ಮಾಪಕ ಯೋಗಿ ಅವರು ಕಥೆ ಕೇಳಿ ಪರಿಚಿತ ನಟರ ಮೂಲಕ ಕಥೆ ನಿರೂಪಿಸಿದರೆ ಚೆನ್ನಾಗಿರುತ್ತದೆಂದು ಸಲಹೆ ನೀಡಿದರು. ಹಾಗಾಗಿಯೇ, ಚಿರಂಜೀವಿ ಸರ್ಜಾ ಅವರ ಮೂಲಕ ಕಥೆಯನ್ನು ಹೇಳಿಸಿದೆ. ಇಲ್ಲವಾದರೆ ಹೊಸಬರೇ ಆ ಚಿತ್ರದಲ್ಲಿ ನಟಿಸುತ್ತಿದ್ದರು’ ಎಂದು ವಿವರಿಸಿದರು. 

ಹಾರರ್‌ ಧಾರಾವಾಹಿ ನಿರ್ಮಾಣ

ಚೈತನ್ಯ ಅವರು ಕೆಲಸ ಮಾಡಲು ಕಿರುತೆರೆ ಮತ್ತು ಹಿರಿತೆರೆ ಎಂಬ ಗಡಿರೇಖೆ ವಿಧಿಸಿಕೊಂಡಿಲ್ಲ. ಹದಿನೈದು ವರ್ಷದ ಹಿಂದೆ ಅವರು ‘ಕಿಚ್ಚು’ ಧಾರಾವಾಹಿಯನ್ನು ನಿರ್ಮಿಸಿದ್ದರು. ಈಗ ಹಾರರ್‌ ಧಾರಾವಾಹಿಯೊಂದನ್ನೂ ನಿರ್ಮಾಣ ಮಾಡುತ್ತಿದ್ದು, ಅದಕ್ಕೂ ಕೊರೊನಾ ಭೀತಿ ತಟ್ಟಿದೆ. ನಾಲ್ಕು ದಿನಗಳ ಶೂಟಿಂಗ್‌ ನಡೆದಿದ್ದು ಸದ್ಯಕ್ಕೆ ಸ್ಥಗಿತಗೊಂಡಿದೆ.

‘ಕಿಚ್ಚು’ ಧಾರಾವಾಹಿಯ ಬಳಿಕ ‘ಆ ದಿನಗಳು’ ಸಿನಿಮಾ ನಿರ್ದೇಶಿಸಿದೆ. ಬಳಿಕ ‘ಮುಗಿಲು’ ಸೀರಿಯಲ್ ನಿರ್ಮಿಸಿದೆ. ಇದಾದ ಬಳಿಕ ‘ಸೂರ್ಯಕಾಂತಿ’ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಿದೆ. ನಂತರ ‘ಮೂಕಾಂಬಿಕೆ’ ಧಾರಾವಾಹಿಯನ್ನು ನಿರ್ಮಾಣ ಮಾಡಿದೆ. ಆ ನಂತರ ‘ಪರಾರಿ’ ಸಿನಿಮಾ ನಿರ್ದೇಶಿಸಿದೆ. ಸೀರಿಯಲ್‌ಗಳ ಜೊತೆಯಲ್ಲಿಯೇ ಸಿನಿಮಾ ಪಯಣವೂ ಸಾಗಿದೆ’ ಎಂದರು ಚೈತನ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.