ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರ್‌ನಾಗ್‌ ಎಂಬ ವಿದ್ಯಮಾನ, ನೆನಪು ಶಾಶ್ವತ

Last Updated 29 ಸೆಪ್ಟೆಂಬರ್ 2022, 21:30 IST
ಅಕ್ಷರ ಗಾತ್ರ

ಒಮ್ಮೆ ನಾನು ಬೆಂಗಳೂರಿನಲ್ಲಿ ಉತ್ತರ ಭಾರತದ ಒಬ್ಬ ಗೆಳೆಯನೊಂದಿಗೆ ನಡೆದುಕೊಂಡು ಹೋಗುತ್ತಿದ್ದೆ. ಅವನು ಒಂದು ಪ್ರಶ್ನೆ ಕೇಳಿದ. ನಾನೂ ಒಬ್ಬರು ಗಡ್ಡಧಾರಿಯ ಚಿತ್ರವನ್ನೂ ಆಟೋ ಮತ್ತೆ ಟ್ಯಾಕ್ಸಿ ಹಿಂದೆ ಅನೇಕ ಬಾರಿ ನೋಡಿದ್ದೇನೆ. ಆಟೋ ಸ್ಟ್ಯಾಂಡ್‌ನಲ್ಲಿ ಅವರ ಚಿತ್ರ ಅಲ್ಲಲ್ಲಿ ನೋಡಿದ್ದೇನೆ. ಅವರು ಯಾರು? ಎಲ್ಲೋ ನೋಡಿದ ನೆನಪು ಎಂದು ಕೇಳಿದ.

ಅವರು ‘ಶಂಕರ್ ನಾಗ್’ ಎಂದು ನಾನು ಸಹಜವಾಗಿಯೇ ಹೇಳಿದೆ. ಅವನ ಮುಖದ ಮೇಲೆ ಹೆಸರು ಪರಿಚಯವೆಂಬಂತೆಯೇ ಕಂಡರೂ, ಇನ್ನು ಪ್ರಶ್ನೆ ಮನಸ್ಸಿನಲ್ಲಿ ಉಳಿದಂತಿತ್ತು. ನಾನು ಸ್ವಲ್ಪ ಜೋರಾಗಿ ‘ಮಾಲ್ಗುಡಿ ಡೇಸ್’ ಅಂದೆ. ಓಹ್ ! ಎಂದು ಉದ್ಗರಿಸಿ! ಆ ವ್ಯಕ್ತಿಯೇ ಅವರು? ಎಂದ.

ಶಂಕರ್‌ನಾಗ್‌ ಹೆಸರು ಕೇಳಿದ ಕ್ಷಣವೇ ನನಗೆ ನಿರ್ದೇಶನ, ವೈವಿಧ್ಯತೆ, ವೇಗ, ತಂತ್ರಜ್ಞಾನ, ತರ್ಕಬದ್ಧ ಆಲೋಚನೆಗಳು, ಹೊಸ ಪ್ರಯೋಗಗಳು, ನಾಯಕತ್ವ ಮತ್ತು ಆವಿಷ್ಕಾರಗಳು ನೆನಪಾಗುತ್ತವೆ. ಮತ್ತೊಂದೆಡೆ ನಾವು ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದೇವೆ. ಇಂದಿಗೂ ಅವರ ನಿಧನವು ನಂಬಲಸಾಧ್ಯವಾಗಿದೆ ಮತ್ತು ನನ್ನನ್ನು ಭಾವುಕನನ್ನಾಗಿಸುತ್ತದೆ. ಅವರು ಕೇವಲ 36 ವರ್ಷಗಳ ಕಾಲ ಬದುಕಿದ್ದರೂ ಮತ್ತು ಸುಮಾರು 32 ವರ್ಷಗಳ ಹಿಂದೆಯೇ ನಿಧನರಾಗಿದ್ದಾರಾದರೂ ಅವರ ನೆನಪುಗಳು ಮಾತ್ರ ಸ್ವಲ್ಪವೂ ಮಾಸಿಲ್ಲ. ಬದಲಾಗಿ ಹೆಚ್ಚುತ್ತಲೇ ಇದೆ.

ಅವರ ವಿಶೇಷ, ಆಕರ್ಷಕ, ಉಚ್ಚಾರಣೆ ಮತ್ತು ಪ್ರಭಾವಶಾಲಿ ಧ್ವನಿ ಇನ್ನೂ ಕಿವಿಯಲ್ಲಿ ಗುನುಗುತ್ತದೆ. ಕನ್ನಡ ಸಂಘಗಳು ತಮ್ಮ ಫಲಕಗಳ ಮೂಲಕ ನೆನಪಿಸಿದರೆ, ಆಟೋ ಚಾಲಕರು ಅವರ ಭಾವಚಿತ್ರವನ್ನು ಪ್ರದರ್ಶಿಸುವ ಮೂಲಕ ಪದೇ ಪದೇ ನೆನಪಿಸುತ್ತಾರೆ. ಅವರು 1990ರಲ್ಲಿ ನಿಧನರಾದಾಗಲೂ ಕೆಲವು ಆಟೋ ಚಾಲಕರು ಮತ್ತು ಅಭಿಮಾನಿಗಳು ಇನ್ನೂ ಹುಟ್ಟಿಯೇ ಇರಲಿಲ್ಲ. ಹಾಗಿದ್ದಲ್ಲಿ, ಅವರ ಪ್ರಭಾವ, ಆಕರ್ಷಣೆ ಇವರೆಲ್ಲರಿಗೂ ಹೇಗೆ? ಎಂಬುದನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತೇನೆ.

ನಿಜವಾದ ಮಿಂಚಿನ ಓಟ
ಅವರು ತಮ್ಮ ಚಿಕ್ಕ ವಯಸ್ಸನ್ನು ವೇಗವೆಂಬುದು ಸಾಮಾನ್ಯವಾಗಿದ್ದ ಮುಂಬೈಯಂತಹ ನಗರಗಳಲ್ಲಿ ಕಳೆದಿದ್ದರು. ಹಾಗಾಗಿ ತಮ್ಮೊಳಗೆ ಅಂತರ್ಗತವಾಗಿ ವೇಗವನ್ನು ಹೊಂದಿದ್ದರು. ನೀವೆಲ್ಲರೂ ಅವರ ‘ಮಿಂಚಿನ ಓಟ’ ಚಿತ್ರ ನೋಡಿರಬಹುದು. ಅವರ ನಿಜ ಜೀವನವೂ ಅದೇ ರೀತಿ ಮಿಂಚಿನ ಓಟವೇ ಆಗಿತ್ತು. ಬೆಂಗಳೂರಿಗೆ ಬಂದಾಗ ಎಲ್ಲವೂ ನಿಧಾನ ಮತ್ತು ವೇಗದ ಅವಶ್ಯಕತೆ ಇದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಅವರು ಗುಜರಾತಿ, ಮರಾಠಿ ಒಂದು ಮಟ್ಟಕ್ಕೆ ಮಾತಾಡಿದರೆ ಕನ್ನಡ, ಹಿಂದಿ, ಇಂಗ್ಲಿಷ್ ಮತ್ತು ಕೊಂಕಣಿ ಚೆನ್ನಾಗಿ ಬಲ್ಲವರಾಗಿದ್ದರು. ದಿನಪತ್ರಿಕೆಗಳು, ವಾರಪತ್ರಿಕೆಗಳು ಮತ್ತು ಕಾದಂಬರಿಗಳನ್ನು ಎಡೆಬಿಡದೆ ಓದುವ ಮೂಲಕ ಅವರು ಅಪಾರವಾದ ಪ್ರಪಂಚ ಜ್ಞಾನವನ್ನು ಹೊಂದಿದ್ದರು.

ಶಂಕರ್‌ನಾಗ್‌ ಯಾವಾಗಲೂ ತಂಡದೊಂದಿಗೆ ಕೆಲಸ ಮಾಡಿದಾಗ ಮಾತ್ರವೇ ಪರಿಣಾಮಕಾರಿ ಫಲಿತಾಂಶಗಳನ್ನು ತರಬಹುದುಎಂದು ನಂಬಿದ್ದವರು. ಅವರ ನಿಕಟವರ್ತಿಗಳೆಂದರೆ ರಮೇಶ್ ಭಟ್, ಸಂಕೇತ್ ಕಾಶಿ, ಮಲ್ನಾಡ್ ಜಗದೀಶ್, ಕೆ.ವಿ. ಮಂಜಯ್ಯ, ಜಾನ್ ದೇವರಾಜ್, ಗಿರೀಶ್ ಕಾರ್ನಾಡ್ ಮತ್ತು ಅಂದಿನ ಬಾಲ ನಟರು ಮಾಸ್ಟರ್ ಮಂಜುನಾಥ್. ಅವರ ಹಿರಿಯ ಸಹೋದರ ಅನಂತ್ ನಾಗ್ ಅವರು ತಂದೆಯಂತೆ, ಸ್ನೇಹಿತರಾಗಿ, ಮಾರ್ಗದರ್ಶಕರಾಗಿ ಮತ್ತು ತಂಡದ ಸಕ್ರಿಯ ಸದಸ್ಯರೂ ಆಗಿದ್ದರು. ಅವರ ತಂಡದಲ್ಲಿ ಅವರ ಪತ್ನಿ ಅರುಂಧತಿ ಮತ್ತು ನಾದಿನಿ ಪದ್ಮಾವತಿ ಕೂಡ ಇದ್ದರು.

ಉತ್ತಮ ಉದ್ದೇಶಗಳನ್ನು ಸಾಧಿಸಲು ತಂಡವನ್ನು ಹುರಿದುಂಬಿಸುವಲ್ಲಿ ಮತ್ತು ಉದ್ದೇಶ ಕಾರ್ಯಗತಗೊಳಿಸುವಲ್ಲಿ ಅವರು ಯಾವಾಗಲೂ ಎತ್ತಿದ ಕೈ. ವ್ಯಕ್ತಿಯ ಸಾಮರ್ಥ್ಯಗಳನ್ನು, ವಿಶೇಷತೆಯನ್ನು ಗುರುತಿಸಿ ಅವರನ್ನು ಸರಿಯಾದ ಕೆಲಸಕ್ಕಾಗಿ ಬಳಸುವುದು ಶಂಕರ ಅವರ ವಿಶೇಷತೆಯಾಗಿತ್ತು.

ಆಶ್ಚರ್ಯವೆಂದರೆ ಅವರ ತಂಡವೂ ಕೂಡ ಅವರ ಅತಿವೇಗಕ್ಕೆ ಹೊಂದಿಕೊಂಡೇ ಇತ್ತು. ಸ್ನೇಹಿತರು ಎಂದಿಗೂ ಬೇಸರಪಟ್ಟುಕೊಳ್ಳಲಿಲ್ಲ ಮತ್ತು ಅವರ ಸಂಗಡ ಬಿಡಲಿಲ್ಲ. ಕಾರಣ ಅವರು ಯಾವಾಗಲೂ ಅವರ ಆಲೋಚನೆಗಳಲ್ಲಿ ಮೌಲ್ಯವನ್ನು ಗುರುತಿಸುತ್ತಿದ್ದರು. ಶ್ರಮಕ್ಕಿಂತ ಹೆಚ್ಚಿನದನ್ನು ಕಲಿತರು. ಅವರು ಶಂಕರ್ ಅವರನ್ನು ವಿಶ್ವವಿದ್ಯಾಲಯ ಎಂದು ಕರೆಯುತ್ತಾರೆ. ಅವರ ಒಡನಾಟದ ದಿನಗಳಲ್ಲಿ ಕಲಿತ ಉತ್ತಮ ಅಭ್ಯಾಸಗಳು ಮತ್ತು ಪಾಠಗಳನ್ನು ಅನುಸರಿಸುವ ಮೂಲಕ ಶಂಕರರ ಸಾವಿನ ನಂತರವೂ ಬಹುಪಾಲು ಸ್ನೇಹಿತರು ಸಾರ್ಥಕ ಜೀವನವನ್ನು ಕಂಡುಕೊಂಡಿದ್ದಾರೆ. ಈ ಕಾರಣಕ್ಕಾಗಿಯೇ ಅವರು ತಮ್ಮ ಸ್ನೇಹಿತರ ಮನಸ್ಸಿನಲ್ಲಿ ಎಂದಿಗೂ ಮರೆಯಾಗದೆ ಶಾಶ್ವತವಾಗಿ ನೆನಪುಗಳಲ್ಲಿ ಬೇರೂರಿದ್ದಾರೆ.

ಹಲವು ಪ್ರಸಂಗಗಳನ್ನು ಆಗೊಮ್ಮೆ ಈಗೊಮ್ಮೆ ಅವರ ಸಹವರ್ತಿಗಳು ಮತ್ತು ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ ಮತ್ತು ವಿವಿಧ ಮಾಧ್ಯಮಗಳ ಮೂಲಕ ವ್ಯಕ್ತಪಡಿಸುತ್ತಾರೆ. ಆಶ್ಚರ್ಯಕರ ಎಂಬಂತೆ ದಿನಗಳು ಕಳೆದಂತೆ ಅವರ ಕುರಿತಾದ ಮಾತುಗಳು ಮಾತ್ರ ಹೆಚ್ಚುತ್ತಿವೆ. ಅವರ ಇಲ್ಲದಿರುವಿಕೆಯನ್ನು ಇರುವಿಕೆಯಾಗಿ ಬದಲಾಯಿಸಿ, ಅವರ ನಿಕಟವರ್ತಿಗಳು ಅವರನ್ನು ಜೀವಂತವಾಗಿ ಕಾಣುತ್ತಾರೆ. ಅಲ್ಲಿಗೆ, ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇ ಅಲ್ಲ.

ಈಗ ಅವರ ಸರಳತೆಯ ಬಗ್ಗೆ ಮಾತನಾಡೋಣ. ಯಾವ ಜಾಗದಲ್ಲಿ ಬೇಕಾದರೂ ಹೊಂದಿಕೊಂಡು ಇರುವ, ಮಲಗುವ ವ್ಯಕ್ತಿ. ಇದನ್ನು ಗಮನಿಸಿದ ಅವರ ಸಹವರ್ತಿಗಳು ಅವರ ಹಾಗೆ ಸರಳತೆಯನ್ನು ರೂಡಿಸಿಕೊಂಡಿದ್ದರು. ಚಿತ್ರೀಕರಣದ ಸಮಯದಲ್ಲಿ ಜನ ಜಂಗುಳಿ ನೋಡದೇ, ಸಂಕೋಚವಿಲ್ಲದೇ ಇಲ್ಲದೇ ಬಟ್ಟೆಗಳನ್ನು ಬದಲಾಯಿಸುತ್ತಿದ್ದರು. ಕಾರಣ ಇಷ್ಟೇ, ಅವರು ಸಮಯಕ್ಕೆ ನೀಡಿದ ಮೌಲ್ಯ. ಅಂತರ್ಜಾಲದಲ್ಲಿ ಅವರ ಚಿತ್ರಗಳನ್ನು ನೀವು ಗಮನಿಸಿ, ಅವರ ಬಟ್ಟೆಯು ಕೇವಲ ಕುರ್ತಾ ಮತ್ತು ಪೈಜಾಮವಾಗಿತ್ತು. ಅದು ಅವರ ಸರಳ ಜೀವನ ಮತ್ತು ಉನ್ನತ ಚಿಂತನೆಯನ್ನು ತೋರಿಸುತ್ತದೆ.

ಲೈಟ್ ಬಾಯ್‌ಗಳು ಮತ್ತು ಇತರ ತಂತ್ರಜ್ಞರೊಂದಿಗೆ ಅವರು ಎಂದಿಗೂ ನಿರ್ದೇಶಕರೆಂಬ ಅಹಂಕಾರ ತೋರಿಸುತ್ತಿರಲಿಲ್ಲ. ಅವಶ್ಯಕತೆ ಬಿದ್ದರೆ ಅವರು ಯಾವುದೇ ಹಿಂಜರಿಕೆಯಿಲ್ಲದೆ ತಂಡದೊಂದಿಗೆ ಶೂಟಿಂಗ್ ಉಪಕರಣಗಳನ್ನು ಎತ್ತಿ ಒಯ್ಯುತ್ತಿದ್ದರು. ಅವರು ಸಮಯದ ಅಭಾವವಿದ್ದಾಗ ತಾವೇ ಖುದ್ದಾಗಿ ಕಾರು, ಬಸ್ಸು, ಲಾರಿ ಚಲಾಯಿಸುತಿದ್ದರು. ಅವರು ಸಲಿಸಾಗಿ ಏಕವಚನದಲ್ಲಿ, ‘ಗುರೂ’ ಎಂದು, ಜನರನ್ನು ಮಾತನ್ನಾಡಿಸಿ ನಿಂತಲ್ಲೇ ಅವರ ಸ್ನೇಹ ಗಿಟ್ಟಿಸಿಕೊಳ್ಳುತಿದ್ದರು. ರಾತ್ರಿ ಎಷ್ಟೇ ಹೊತ್ತಿಗೆ ಮನೆಗೆ ಬಂದರೂ ಮರುದಿನ ಬೆಳಿಗ್ಗೆ 6 ಗಂಟೆಗೆ ಎದ್ದು ತಾವೇ ಚಹಾ ಮಾಡಿಕೊಂಡು ಕುಡಿದು ಮುಂದಿನ ಕೆಲಸಕ್ಕೆ ಹೊರಟೇ ಬಿಡುತ್ತಿದ್ದರು.

ಅವರು ಆಯ್ಕೆ ಮಾಡುತ್ತಿದ್ದ ವಿಷಯ ಎಂದರೆ ಸರಳ, ಪ್ರಭಾವಶಾಲಿ ಮತ್ತು ಸಣ್ಣ ಬಜೆಟ್‌ನ ವಿಷಯಗಳು. ಯಾವುದೇ ಸೃಜನಾತ್ಮಕ ಆಲೋಚನೆಯನ್ನು ಕಾರ್ಯಗತಗೊಳಿಸಿ ಮುಗಿಸಿಬಿಡಬೇಕು ಅಷ್ಟೇ. ಮಾಸ್ ಹೀರೋ ಆಗಿದ್ದರೂ ಅವರ ಚಿಂತನೆಯಲ್ಲಿ ಯಾವಾಗಲೂ ಕ್ಲಾಸ್ ಇರುತ್ತಿತ್ತು. ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ, ಸಾಧ್ಯವಾದಷ್ಟು ಮರುಬಳಕೆ, ಸಮಯದ ಅತ್ಯುತ್ತಮ ಬಳಕೆ, ಸರಳತೆಯೊಂದಿಗೆ ಶಂಕರ್‌ ಅವರ ಕಾರ್ಯ ಶೈಲಿಯಾಗಿತ್ತು. ಕೆಲಸದ ವೇಳೆ ಬರುವ ಸಣ್ಣ ಪುಟ್ಟ ಅಡಚಣೆಗಳನ್ನು ನಿರ್ವಹಿಸಲು ತಕ್ಷಣ ಪರ್ಯಾಯ ಹುಡುಕಿ, ಕೆಲಸ ಸಾಧಿಸಿಬಿಡುತ್ತಿದ್ದರು. ಇದರರ್ಥ ಅವರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದರು ಎಂದಲ್ಲ. ಆದರೇ ಸುತ್ತ ಮುತ್ತ ಇರುವ ವಸ್ತುಗಳು ಮತ್ತು ಸಂಪನ್ಮೂಲಗಳನ್ನು ಹೊಂದಿಸಿಕೊಂಡು ಕೆಲಸ ಇನ್ನೂ ಅಚ್ಚುಕಟ್ಟಾಗಿ ಮುಗಿಸಿಬಿಡುತ್ತಿದ್ದರು. ಸಮಯಕ್ಕೆ ಬೇಕಾದ, ದುಡ್ಡು, ಲೈಟ್ ಬಾಯ್‌ನಿಂದ ಹಿಡಿದು ನಿರ್ಮಾಪಕರವರೆಗೆ ಯಾರಿಂದಲೋ ಪೂರೈಸಿಕೊಳ್ಳುವ ಜಾಣ್ಮೆ ಶಂಕರರಿಗಿತ್ತು. ಆದ್ರೆ ಪೈಸಾ ಪೈಸಾ ಲೆಕ್ಕ ಇಡುತ್ತಿದ್ದರು. ಈ ಎಲ್ಲಾ ಅಂಶಗಳು ನಿಸ್ಸಂದೇಹವಾಗಿ ಕಡಿಮೆ ಬಜೆಟ್‌ನೊಂದಿಗೆ ಉನ್ನತ ಗುಣಮಟ್ಟದ ಪಲಿತಾಂಶಕ್ಕೆ ಕಾರಣವಾಗುತ್ತಿತ್ತು.

ಆಟೋರಿಕ್ಷಾಗಳಲ್ಲಿ ಶಂಕರ್‌ನಾಗ್‌
ಆಟೋರಿಕ್ಷಾಗಳಲ್ಲಿ ಶಂಕರ್‌ನಾಗ್‌

ಕನಸುಗಾರ ಶಂಕರ್ ನಾಗ್: ದೊಡ್ಡ ಕನಸು ಕಾಣುವುದು ಮತ್ತು ಕನಸುಗಳನ್ನು ಹೇಗಾದರೂ ಮಾಡಿ ನನಸಾಗಿಸುವುದು ಅವರ ಉದ್ದೇಶವಾಗಿತ್ತು. ‘To finish a job, first begin’ ಅವರ ತತ್ವವಾಗಿತ್ತು. ಸರಣಿ ಸರಣಿಯಾಗಿ ಸಮಸ್ಯೆಗಳನ್ನು ನೋಡಿದವರು, ಅದರಿಂದ ಹುಟ್ಟಿದ ಆಲೋಚನೆಗಳು, ಕನಸುಗಳು ಅವರ ವಿಶೇಷ ಪರಿಕಲ್ಪನೆಗಳಿಗೆ ಕಾರಣವಾಗಿತ್ತು. ಸಿನಿಮಾ, ನಾಟಕವನ್ನು ಮೀರಿದ ಕೆಲವು ಉದಾಹರಣೆಗಳು ಎಂದರೆ, ಅವರು ನಿರ್ಗತಿಕರಿಗೆ ಕಡಿಮೆ ವೆಚ್ಚದ ಮನೆಗಳನ್ನು, ವಿದ್ಯಾರ್ಥಿಗಳಿಗೆ ಸೌಲಭ್ಯಗಳನ್ನು ಒದಗಿಸಲು ರಾಜಕೀಯಕ್ಕೆ ಪದಾರ್ಪಣೆ ಮಾಡಲು ಬಯಸಿದ್ದರು.

ನಮ್ಮ ಮೆಟ್ರೋ ಮತ್ತು ನಂದಿ ಬೆಟ್ಟಕ್ಕೆ ರೋಪ್ ವೇ 1985-90 ಇಸವಿಯಲ್ಲಿಯೆ ಅವರ ದೊಡ್ಡ ಕನಸು ಮತ್ತು ಸಾಮಾಜಿಕ ಕಳಕಳಿಗಳಾಗಿದ್ದವು. ಸಂಕೇತ್ ಸ್ಟುಡಿಯೋ ಅವರ ದೊಡ್ಡ ಸಾಧನೆಯಾಗಿತ್ತು. ಸಂಕೇತ್‌ನಲ್ಲಿ ಧ್ವನಿ ಮುದ್ರಣ ಮಾಡುವವರಿಗೆ ಸರ್ಕಾರ ರಿಯಾಯಿತಿ ನೀಡಬೇಕು ಎಂದು ಮನವಿ ಮಾಡಿದ್ದರು. ಅಲ್ಲಿಗೆ ಇಡೀ ಜಗತ್ತೇ ಅವರಿಗೆ ಅವಕಾಶಗಳ ಮಹಾಪೂರವಾಗಿ ಕಂಡಿತ್ತು. ಪ್ರತಿ ಅವಕಾಶಗಳ ಸಮಂಜಸವಾದ ಬಳಕೆ ಅವರ ಉದ್ದೇಶವಾಗಿತ್ತು.

ಮಾಲ್ಗುಡಿ ಡೇಸ್ ಅವರ ಅತ್ಯುತ್ತಮ ದೂರದರ್ಶನ ಸರಣಿಯಾಗಿತ್ತು. ಅವರ ದೊಡ್ಡ ಕನಸುಗಳಲ್ಲಿ ಒಂದಾದ ರಂಗಶಂಕರವನ್ನು ಅವರ ಪತ್ನಿ ಅರುಂಧತಿ ನಾಗ್ ಮರಣೋತ್ತರವಾಗಿ ದೃಢವಾಗಿ ಸಾಕಾರಗೊಳಿಸಿದರು. ಮಾಲ್ಗುಡಿ ಡೇಸ್ ಸಾಧನೆ, ಸಾಹಸಗಳು ಮತ್ತು ಸವಾಲುಗಳನ್ನು ಅವರ ಜೊತೆಗಾರರು ಸಂತೋಷವನ್ನು ಅನುಭವಿಸುತ್ತಾ ನಿರೂಪಿಸುತ್ತಾರೆ ಮತ್ತು ಕೇಳುಗರು ರೋಮಾಂಚಿತರಾಗುತ್ತಾರೆ.

ಅವರು ನಮ್ಮನೆಲ್ಲ ಅಗಲಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳೋಣ. ಆದರೆ ಅವರ ಸಹವರ್ತಿಗಳಿಗೆ ನಾನಾ ರೀತಿಗಳಲ್ಲಿ ಅವರ ಸಾವನ್ನು ತಪ್ಪಿಸಬಹುದಿತ್ತೆಂಬ ಭ್ರಮೆ ಮತ್ತು ತಪ್ಪಿತಸ್ಥ ಮನೋಭಾವ ಈಗಲೂ ಅವರನ್ನು ಕಾಡುತ್ತದೆ. ನನ್ನ ಮಾತನ್ನು ಕೇಳಿದಿದ್ದರೆ..., ನನ್ನ ಕಾರಿನಲ್ಲಿ ಬಂದಿದ್ದರೆ... ಚಿತ್ರೀಕರಣಕ್ಕೆ ನಮ್ಮಲ್ಲಿ ಬಂದಿದ್ದರೆ ಶಂಕರ್ ಪ್ರಾಯಶಃ ಉಳಿಯುತ್ತಿದ್ದರು ಎಂದು ಅವರ ಸಹವರ್ತಿಗಳೆಲ್ಲಾ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾ, ನೆನಪಿಸಿಕೊಳ್ಳುತ್ತಾ ಪೇಚಾಡಿಕೊಳ್ಳುತ್ತಾರೆ. ಕೊನೆಯಲ್ಲಿ ಅವರು ರಂಗಶಂಕರದಲ್ಲಿ ಜೀವಂತವಾಗಿದ್ದಾರೆ ಎಂದು ನಮಗೆ ನಾವೆ ಸಮಾಧಾನಪಟ್ಟುಕೊಳ್ಳುತ್ತೇವೆ ಎಂದು ಹೇಳಿಕೊಳ್ಳುತ್ತಾರೆ. ವಿಧಿಯಾಟದ ಮುಂದೆ ಎಲ್ಲಾ ಶೂನ್ಯ.

ಕೇವಲ 13 ವರ್ಷಗಳಲ್ಲಿ 83 ಚಲನಚಿತ್ರಗಳು, ಹಲವಾರು ಉತ್ತಮ ನಾಟಕಗಳು, ‘ಮಾಲ್ಗುಡಿ ಡೇಸ್’ ದೂರದರ್ಶನ ಸರಣಿ, ಸಂಕೇತ್ ರೆಕಾರ್ಡಿಂಗ್ ಸ್ಟುಡಿಯೋ, ಹಲವಾರು ಪ್ರಶಸ್ತಿಗಳು ಶಂಕರ್‌ನಾಗ್ ಸಾಧನೆಗಳು. ಅಜಾತಶತ್ರು ಎಂದೆನಿಸಿಕೊಂಡು, ಹೆಚ್ಚು ಕಡಿಮೆ ಕನ್ನಡದೆಲ್ಲಾ ಮೇರು ನಟ/ನಟಿಯರೊಂದಿಗೆ ಅಭಿನಯಿಸಿದ್ದರು. ಪ್ರಮುಖ ಸಿನಿಮಾ ದಿಗ್ಗಜರು, ತಂತ್ರಜ್ಞರು ಮತ್ತು ರಾಜಕಾರಣಿಗಳೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದ್ದರು. ಅವರು ಜೀವಮಾನವಿಡೀ ಮಾಡಬೇಕಾಗಿದ್ದ ಸಾಧನೆ ಕೇವಲ 36 ವರ್ಷಗಳಲ್ಲೇ ಮುಗಿಸಿದರೋ? ಅಥವಾ ಅವರು ಇಂದು ಬದುಕಿದಿದ್ದರೆ ಯಾವ ಮಟ್ಟಕ್ಕೆ ಸಾಧನೆ ಮಾಡಿರುತ್ತಿದ್ದರು ಎಂಬುದು ಊಹಿಸಲಸಾಧ್ಯ.

ಯುವಕರು ಕಾಲಹರಣ ಮಾಡದೆ, ತಮ್ಮ ಬುದ್ಧಿ ಹಾಗೂ ದೈಹಿಕ ಶಕ್ತಿಯನ್ನು ಸರಿಯಾಗಿ ಉಪಯೊಗಿಸಿಕೊಂಡರೆ ಅವರು ಎಂಥಾ ದೊಡ್ಡ ಸಾಧನೆಯನ್ನಾದರು ಮಾಡಬಹುದು ಎಂಬುದಕ್ಕೆ ಶಂಕರ್ ನಾಗ್ ಅವರಿಂತ ಉತ್ತಮ ಉದಾಹರಣೆ ಬೇಕೆ?

ಜೆ.ಪಿ ನಗರದಲ್ಲಿರುವ ರಂಗಶಂಕರ ರಂಗಮಂದಿರ
ಜೆ.ಪಿ ನಗರದಲ್ಲಿರುವ ರಂಗಶಂಕರ ರಂಗಮಂದಿರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT