ಮಂಗಳವಾರ, ಫೆಬ್ರವರಿ 25, 2020
19 °C

ದಯಾಮರಣದ ಅಭ್ಯಂಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಚಿತ್ರಗಳ ಪ್ರೇಕ್ಷಕರನ್ನು ಈಗಷ್ಟೇ ‘ಹಗಲು ಕನಸು’ ಕಾಣುವಂತೆ ಮಾಡಿದ್ದ ನಿರ್ದೇಶಕ ದಿನೇಶ್‌ ಬಾಬು, ಪ್ರೇಕ್ಷಕನ ಹೃದಯ ಹಿಂಡುವಂಥಹ ಕಥಾವಸ್ತುವಿನ ‘ಅಭ್ಯಂಜನ’ದ ದರ್ಶನ ಮಾಡಿಸಲು ಸಜ್ಜಾಗಿದ್ದಾರೆ.

ತಮಿಳುನಾಡಿನ ಕೆಲವು ಭಾಗದಲ್ಲಿ, ಕೆಲವು ಜನಾಂಗದಲ್ಲಿ ಇವತ್ತಿಗೂ ಆಚರಣೆಯಲ್ಲಿರುವ ‘ತಲೈ ಕೂತಲ್‌’ ಪದ್ಧತಿ ಕುರಿತು ಬಾಬು ಸಿನಿಮಾ ಮಾಡಿದ್ದಾರೆ. ಈ ಚಿತ್ರದ ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಛಾಯಾಗ್ರಹಣದ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆ. 

ಇದನ್ನೂ ಓದಿ: ದಿನೇಶ್ ಬಾಬು ಹೇಳಿದ ಹಗಲು ವಾಸ್ತವ!

ಇತ್ತೀಚೆಗೆ ಚಿತ್ರದ ಮೊದಲ ಪ್ರದರ್ಶನವನ್ನು ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದರು. ‘ತಲೈ ಕೂತಲ್‌’ ಎಂದರೆ ವಯೋವೃದ್ಧರು, ಗುಣವಾಗದ ಕಾಯಿಲೆಪೀಡಿತರಿಗೆ ‘ದಯಾಮರಣ’ ಕಲ್ಪಿಸುವುದು. ಒಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲದಿರುವಾಗ ಈ ಪದ್ಧತಿ ಸರಿ ಅಂತೀರಾ ಎನ್ನುವ ಪ್ರಶ್ನೆಯನ್ನು ನಿರ್ದೇಶಕ ಈ ಚಿತ್ರದಲ್ಲಿ ಪ್ರೇಕ್ಷಕನ ಮುಂದಿಟ್ಟಿದ್ದಾರೆ. ಪ್ರಶಸ್ತಿಯನ್ನು ಗುರಿಯಾಗಿಟ್ಟುಕೊಂಡೇ ಈ ಚಿತ್ರ ಮಾಡಿರುವುದನ್ನು ಚಿತ್ರತಂಡ ಮುಚ್ಚುಮರೆ ಇಲ್ಲದಂತೆಯೂ ಹೇಳಿದೆ. ಸದ್ಯದಲ್ಲೆ ಚಿತ್ರವನ್ನು ತೆರೆಕಾಣಿಸುವ ಸಿದ್ಧತೆಯಲ್ಲಿದೆ ಚಿತ್ರತಂಡ.

 

‘ಕಮರ್ಷಿಯಲ್ ಸಿನಿಮಾಗಳಲ್ಲಿ ಬಜೆಟ್ ಇರುತ್ತದೆ, ಆದರೆ, ಸಬ್ಜೆಕ್ಟ್ ಇರುವುದಿಲ್ಲ. ಇಂತಹ ಸಿನಿಮಾಗಳಲ್ಲಿ ಬಜೆಟ್ ಕಡಿಮೆ ಇರುತ್ತದೆ, ಆದರೆ ಸಬ್ಜೆಕ್ಟ್ ಇರುತ್ತದೆ. ಈ ಚಿತ್ರದಲ್ಲಿ ನಟಿಸಿರುವುದು ಆತ್ಮಸಂತೋಷ ಕೊಟ್ಟಿದೆ’ ಎಂದರು ನಟ ನಾರಾಯಣಸ್ವಾಮಿ.

‘ನನ್ನ ನಿವೃತ್ತಿ ಅಂಚಿನಲ್ಲಿ ಒಳ್ಳೆಯ ಪಾತ್ರಗಳು ಸಿಗುತ್ತಿವೆ. ಬಾಬು ಅವರ ಜತೆಗೆ ಮೊದಲು ಧಾರಾವಾಹಿಯಲ್ಲಿ‌ ಕೆಲಸ ಮಾಡಿದ್ದೆ. ಅವರೊಂದಿಗೆ ಎರಡನೇ ಬಾರಿಗೆ ಕೆಲಸ‌‌ ಮಾಡುವ ಅವಕಾಶವೂ ಸಿಕ್ಕಿತು. ಅವರು ನೀಡಿದ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸಿದ ಆತ್ಮತೃಪ್ತಿ ಇದೆ. ಇದು ವಿಭಿನ್ನ ಶೈಲಿಯ ಸಿನಿಮಾ. ಇದೊಂದು ಬ್ರಿಡ್ಜ್ ಸಿನಿಮಾ ಎನ್ನಬಹುದು’ ಎಂದರು ಹಿರಿಯ ಪೋಷಕ ನಟ ಕರಿಸುಬ್ಬು.

 

ನಟ ನಾರಾಯಣಸ್ವಾಮಿ ಈ ಚಿತ್ರದಲ್ಲಿ ನಾಯಕನಾಗಿ, ನಾಯಕಿಯಾಗಿ ಅಪೂರ್ವ ಭಾರದ್ವಾಜ್‌, ಪ್ರಮುಖ ಪಾತ್ರದಲ್ಲಿ ಕರಿಸುಬ್ಬು ನಟಿಸಿದ್ದಾರೆ. ನಟಿ ನಿಧಿ, ಭಾಗ್ಯಶ್ರೀ, ಬಾಲ‌ ನಟರಾದ ಧನುಷ್, ಮಂಜುನಾಥ್‌ ತಾರಾಗಣದಲ್ಲಿದ್ದಾರೆ. ನಟ ಮತ್ತು ವಿಗ್‌ ತಯಾರಕ ನಾಗೇಶ್ವರರಾವ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು