ಭಾನುವಾರ, ಜನವರಿ 19, 2020
23 °C

‘ಶೋಕಿವಾಲ’ನ ಸಾಹಸ ಯಾತ್ರೆ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Prajavani

‘ಕೃಷ್ಣನ್‌ ಲವ್‌ಸ್ಟೋರಿ’, ‘ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ’, ‘ಕೃಷ್ಣ ಲೀಲಾ’ ಹೀಗೆ ಕೃಷ್ಣನ ಹೆಸರಿನ ಸರಣಿ ಸಿನಿಮಾಗಳಲ್ಲಿ ಕಾಣಿಸಿಕೊಂಡು ಕೃಷ್ಣವೇಷಧಾರಿಯಾಗಿದ್ದ ನಟ ಕೃಷ್ಣ ಅಜೇಯ್‌ ರಾವ್‌ ಅವರದು ಈಗ ‘ಶೋಕಿವಾಲ’ನ ಅವತಾರ.

ಪ್ರೀತಿಸಿ ಮದುವೆಯಾಗಬೇಕು ಎಂಬುದು ಈ ಶೋಕಿವಾಲನ ಆಸೆ. ಆದರೆ, ಬೀದಿಯಲ್ಲಿ ಕಂಡಕಂಡ ಹುಡುಗಿಯರಿಗೆ ಕಾಳು ಹಾಕುವುದರಲ್ಲೂ ಈತ ನಿಸ್ಸೀಮ. ಈ ಚಿತ್ರ ನಿರ್ದೇಶಿಸಿರುವುದು ಜಾಕಿ. ಚಿತ್ರಕಥೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ. ‘ಭಾಗ್ಯದ ಬಳೆಗಾರ’, ‘ತಮಸ್ಸು’, ‘ದೇವರು ಕೊಟ್ಟ ತಂಗಿ’ ಮುಂತಾದ ಸಿನಿಮಾಗಳಿಗೆ ಅವರು ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ‘ಲಕ್ಕಿ’, ‘ಅಧ್ಯಕ್ಷ’, ‘ರನ್ನ’, ‘ವಿಕ್ಚರಿ’ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. ಇದು ಅವರ ಮೊದಲ ನಿರ್ದೇಶನದ  ಸಿನಿಮಾ.

ಕ್ರಿಸ್ಟಲ್‌ ಪಾರ್ಕ್ ಸಿನಿಮಾಸ್ ಲಾಂಛನದಡಿ ಟಿ.ಆರ್. ಚಂದ್ರಶೇಖರ್ ಇದಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಬೆಂಗಳೂರಿನಲ್ಲಿ ಕಲಾ ನಿರ್ದೇಶಕ ರಾಘವೇಂದ್ರ ಮೈಸೂರು ನಿರ್ಮಿಸಿರುವ ಅದ್ದೂರಿ ಸೆಟ್‍ನಲ್ಲಿ ಇತ್ತೀಚೆಗೆ ಸಾಹಸ ಸನ್ನಿವೇಶದ ಶೂಟಿಂಗ್‌ ನಡೆಯಿತು. ಕೃಷ್ಣ ಅಜೇಯ್ ರಾವ್ ಹಾಗೂ ಸಹ ಕಲಾವಿದರು ನಟಿಸಿದ ಈ ಸನ್ನಿವೇಶಕ್ಕೆ ವಿಕ್ರಂ ಮೋರ್ ಸಾಹಸ ಸಂಯೋಜಿಸಿದ್ದಾರೆ. ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಮೂರು ಹಾಡುಗಳ ಶೂಟಿಂಗ್‌ ಅಷ್ಟೇ ಬಾಕಿ ಉಳಿದಿದೆಯಂತೆ. 

‘ನಟ ಯಶ್ ಅವರು ನನಗೆ ಏಳು ವರ್ಷಗಳಿಂದ ಪರಿಚಯ. ಅಣ್ಣನಂತೆ ಸಲಹೆ, ಸೂಚನೆ ನೀಡುತ್ತಾರೆ’ ಎನ್ನುವ ನಿರ್ದೇಶಕ ಜಾಕಿ ಚಿತ್ರದ ಶೀರ್ಷಿಕೆಯ ಅನ್ವೇಷಣೆಯಲ್ಲಿದ್ದರಂತೆ. ಆಗ ಯಶ್ ಅವರೇ ‘ಶೋಕಿವಾಲ’ ಎಂಬ ಶೀರ್ಷಿಕೆ ನೀಡಿದರಂತೆ. 

ನವೀನ್ ಕುಮಾರ್ ಅವರ ಛಾಯಾಗ್ರಹಣವಿದೆ. ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ, ವಿ. ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಹಾಗೂ ಗೌಸ್‍ಫೀರ್ ಹಾಡುಗಳನ್ನು ಬರೆದಿದ್ದಾರೆ. ಕೆ.ಎಂ. ಪ್ರಕಾಶ್ ಅವರ ಸಂಕಲನವಿದೆ. ಮೋಹನ್ ಅವರ ನೃತ್ಯ ನಿರ್ದೇಶನವಿದೆ. ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ.

ಸಂಜನಾ ಆನಂದ್ ಈ ಚಿತ್ರದ ನಾಯಕಿ. ಶರತ್ ಲೋಹಿತಾಶ್ವ, ಗಿರಿ ಮುನಿರಾಜು, ಪ್ರಮೋದ್ ಶೆಟ್ಟಿ, ತಬಲ ನಾಣಿ, ಅರುಣಾ ಬಾಲರಾಜ್, ನಾಗರಾಜಮೂರ್ತಿ, ಲಾಸ್ಯಾ, ವಾಣಿ ತಾರಾಗಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)