ಬುಧವಾರ, ಮಾರ್ಚ್ 29, 2023
23 °C

ಸ್ಯಾಂಡಲ್‌ವುಡ್‌ ‘ಸಲಗ’ನಿಗೆ ಜನ್ಮದಿನದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ, ನಿರ್ದೇಶಕ ‘ದುನಿಯಾ’ ವಿಜಯ್‌ಗೆ ಇಂದು(ಜ.20) ಜನ್ಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಸ್ಯಾಂಡಲ್‌ವುಡ್‌ನ ‘ಸಲಗ’ನಿಗೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಶುಭಕೋರಿದ್ದಾರೆ. ಇದೇ ವೇಳೆ ‘ಭೀಮ’ ಸೇರಿದಂತೆ ಅವರ ಮುಂದಿನ ಪ್ರಾಜೆಕ್ಟ್‌ಗಳ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ.

‘ದುನಿಯಾ’ ಸಿನಿಮಾ ಮೂಲಕ ನಾಯಕನಾಗಿ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ದುನಿಯಾ ವಿಜಯ್‌ ಸಿನಿ ಪಯಣಕ್ಕೆ ಮತ್ತೊಂದು ತಿರುವು ನೀಡಿದ ಸಿನಿಮಾ ‘ಸಲಗ’. ಈ ಸಿನಿಮಾ ಮೂಲಕ ನಟನಾಗಷ್ಟೇ ಅಲ್ಲದೆ ನಿರ್ದೇಶಕನಾಗಿಯೂ ವಿಜಯ್‌ ಸೈ ಎನಿಸಿಕೊಂಡಿದ್ದರು. ಇದರ ಬೆನ್ನಲ್ಲೇ ವಿಲನ್‌ ಪಾತ್ರಕ್ಕಾಗಿ ಟಾಲಿವುಡ್‌ ಅಂಗಳಕ್ಕೆ ಹೆಜ್ಜೆ ಇಟ್ಟಿದ್ದರು ವಿಜಯ್‌. ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ ‘ವೀರ ಸಿಂಹರೆಡ್ಡಿ’ ಚಿತ್ರದಲ್ಲಿ ಖಳನಾಯಕ ‘ಮುಸಲಿ ಮಡುಗು ಪ್ರತಾಪ್‌ ರೆಡ್ಡಿ’ಯಾಗಿ ಮಿಂಚಿದ್ದರು. ಸಂಕ್ರಾಂತಿಯಂದು ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ವಿಜಯ್‌ ನಟನೆ ಕಂಡು ಪ್ರೇಕ್ಷಕರು ಫಿದಾ ಆಗಿದ್ದರು. ಈ ಸಂಭ್ರಮದ ಜೊತೆಗೇ ತಮ್ಮ ಜನ್ಮದಿನವನ್ನು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ವಿಜಯ್‌ ತಮ್ಮ ಹುಟ್ಟೂರಾದ ಆನೆಕಲ್‌ನ ಕುಂಬಾರನಹಳ್ಳಿಯಲ್ಲಿ ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ವಿಜಯ್‌ ನಿರ್ದೇಶನದ ಹೊಸ ಚಿತ್ರ ‘ಭೀಮ’ದ ಫಸ್ಟ್‌ ಲುಕ್‌ ಟೀಸರ್‌ ಕೂಡಾ ಬಿಡುಗಡೆಯಾಗಿದೆ.

ವಿಜಯ್‌ಗೆ ಜಡೇಶ್‌ ಆ್ಯಕ್ಷನ್‌ ಕಟ್‌: ‘ಭೀಮ’ ಪ್ರಾಜೆಕ್ಟ್‌ ಪೂರ್ಣಗೊಳಿಸಿದ ಬಳಿಕ ವಿಜಯ್‌, ಜಡೇಶ್‌ ಕುಮಾರ್‌ ಹಂಪಿ ಆ್ಯಕ್ಷನ್‌ ಕಟ್‌ ಹೇಳಲಿರುವ ಸಿನಿಮಾದಲ್ಲಿ ನಟಿಸಲಿದ್ದಾರೆ. ಪ್ರಜ್ವಲ್‌ ದೇವರಾಜ್‌ ನಟನೆಯ ‘ಜಂಟಲ್‌ಮ್ಯಾನ್‌’ ಸಿನಿಮಾ ಮೂಲಕ ಚಂದನವನದಲ್ಲಿ ಜಡೇಶ್‌ ಖ್ಯಾತಿ ಪಡೆದಿದ್ದರು. ಇದಾದ ಬಳಿಕ ಕಳೆದ ವರ್ಷ ರಿಲೀಸ್‌ ಆಗಿದ್ದ ಶರಣ್‌ ನಟನೆಯ ‘ಗುರುಶಿಷ್ಯರು’ ಸಿನಿಮಾ ಮೂಲಕ ತಮ್ಮ ನಿರ್ದೇಶನದ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದರು. ನೈಜ ಘಟನೆಗಳನ್ನು ಆಧರಿಸಿ ವಿಜಯ್‌ಗಾಗಿ ಈ ಕಥೆಯನ್ನು ಜಡೇಶ್‌ ಅವರು ಬರೆದಿದ್ದು, ಇದು ಆ್ಯಕ್ಷನ್‌ ಸಬ್ಜೆಕ್ಟ್‌ ಇರುವ ಸಿನಿಮಾ ಎನ್ನಲಾಗಿದೆ. ಸದ್ಯ ಪ್ರಿಪ್ರೊಡಕ್ಷನ್‌ ಹಂತದಲ್ಲಿ ಸಿನಿಮಾವಿದೆ. ಈ ಚಿತ್ರವನ್ನು ‘ವಿಕೆ–29’ ಎಂದು ಚಿತ್ರತಂಡ ಕರೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು