ಶುಕ್ರವಾರ, ಏಪ್ರಿಲ್ 3, 2020
19 °C

ಅಂಧ ಗಾಯಕಿಯರಿಗೆ ಜಗ್ಗೇಶ್‌ ನಿರ್ಮಿಸಿದ ಮನೆ: ಊರ ಹಬ್ಬದಂತೆ ನಡೆದ ಗೃಹಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ: ಊರಿನ ತುಂಬೆಲ್ಲಾ ಸಡಗರ, ಅಂಧ ಕಲಾವಿದೆಯರ ಮೊಗದಲ್ಲಿ ಸೂರು ಸಿಕ್ಕ ತೃಪ್ತಿ. ನಟ ಜಗ್ಗೇಶ್‌, ಪರಿಮಳ ದಂಪತಿಗೆ ಧನ್ಯತಾ ಭಾವ. ಗಾಯಕಿಯರ ಕೈ ಹಿಡಿದು ಹೊಸ ಮನೆಗೆ ಕಾಲಿಟ್ಟ ಜಗ್ಗೇಶ್‌ ಅವರನ್ನು ನೋಡಲು ಸೇರಿದ್ದ ಜನರ ಸಂಭ್ರಮ...

ಅಂಧ ಕಲಾವಿದೆಯರಾದ ರತ್ನಮ್ಮ– ಮಂಜಮ್ಮ ಸಹೋದರಿಯರಿಗಾಗಿ ಕಸಬಾ ವ್ಯಾಪ್ತಿಯ ಡಿ.ವಿ.ಹಳ್ಳಿ ಗ್ರಾಮದಲ್ಲಿ ಜಿಲ್ಲಾ ಜಗ್ಗೇಶ್‌ ಅಭಿಮಾನಿಗಳ ಸಂಘ ಹಾಗೂ ಕೊರಟಗೆರೆ ಫ್ರೆಂಡ್ಸ್‌ ಗ್ರೂಪ್‌ನಿಂದ ನಿರ್ಮಿಸಿದ್ದ ಮನೆಯ ಗೃಹಪ್ರವೇಶ ಗುರುವಾರ ಊರಿನ ಹಬ್ಬದಂತೆ ನಡೆಯಿತು.

ನೆಲೆಸಲು ಸೂರಿಲ್ಲದೆ ತಾಲ್ಲೂಕಿನ ದಂಡಿನ ಮಾರಮ್ಮ ದೇವಾಲಯದ ಮುಂದೆ ಹಾಡುತ್ತಾ ಜೀವನ ಸಾಗಿಸುತ್ತಿದ್ದ ಅಂಧ ಕಲಾವಿದೆಯರಿಗೆ ‘ಝೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರ ನೋವಿಗೆ ಮಿಡಿದ ನಟ ಜಗ್ಗೇಶ್‌ ಮನೆ ನಿರ್ಮಿಸಿಕೊಟ್ಟಿದ್ದಾರೆ.

ಅಂಧ ಕಲಾವಿದೆಯರನ್ನು ಅಪ್ಪಿಕೊಂಡೇ ನೂತನ ಮನೆ ಪ್ರವೇಶಿಸಿದ ಜಗ್ಗೇಶ್‌, ಮನೆಯ ಒಳಾಂಗಣ ಕಂಡು ಸಂತಸಗೊಂಡರು. ಪತ್ನಿ ಪರಿಮಳ ಅವರಿಗೆ ತೋರಿಸಿ ‘ಮನೆ ಎಷ್ಟು ಸುಂದರವಾಗಿದೆ’ ಎಂದು ಸಂಭ್ರಮಿಸಿದರು.

ಕಲಾವಿದೆಯರಾದ ರತ್ನಮ್ಮ– ಮಂಜಮ್ಮ ಹಾಡಿನ ಮೂಲಕವೇ ಜಗ್ಗೇಶ್‌ ಅವರಿಗೆ ಅಭಿನಂದಿಸಿದರು. ಇವರ ಹಾಡು ಸೇರಿದ್ದ ಜನರನ್ನು ರಂಜಿಸಿತು.

ಜಗ್ಗೇಶ್ ಮಾತನಾಡಿ, ‘ಇವರ ಹಾಡುಗಳಿಗೆ ಮನಸೋತಿದ್ದೇನೆ. ಅವರ ಗಂಟಲಿನಲ್ಲಿರುವ ಸರಸ್ವತಿಯನ್ನು ಹುಡುಕಿಕೊಂಡು ಮಧುಗಿರಿಗೆ ಬಂದಿದ್ದೇನೆ. ಈ ಕಲಾವಿದೆಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಾರೆ’ ಎಂದರು.

ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಂಗಳೂರಿನ ರಾಘವೇಂದ್ರ ಮಠದ ರಾಘವೇಂದ್ರ ಸ್ವಾಮೀಜಿ, ಪರಿಮಳ ಜಗ್ಗೇಶ್ ಮಾತನಾಡಿದರು. ಸ್ಥಳೀಯ ಮುಖಂಡರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಜಗ್ಗೇಶ್‌ ನೋಡಲು ಜನಸಂದಣಿ: ಗೃಹ ಪ್ರವೇಶಕ್ಕೆ ಚಿತ್ರ ನಟ ಜಗ್ಗೇಶ್ ಬರುವ ವಿಷಯ ತಿಳಿದ, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಮನೆಯ ಮುಂಭಾಗ ಜಮಾಯಿಸಿದ್ದರು. ಜನರ ನಿಯಂತ್ರಣಕ್ಕೆ ಪೊಲೀಸರು ಹರ ಸಾಹಸಪಟ್ಟರು. ಸುತ್ತ ಮುತ್ತಲಿನ ಮನೆಯ ಮಹಡಿಯ ಮೇಲೆ ನಿಂತ ನೂರಾರು ಜನರು ಜಗ್ಗೇಶ್ ಕಾರ್ಯಕ್ಕೆ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

***
ಸಹಾಯ ಮಾಡಿದ ನಟ ಜಗ್ಗೇಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಜಗ್ಗೇಶ್ ಅಭಿಮಾನಿಗಳು, ಮಧುಗಿರಿ ಜನರನ್ನು ಎಂದಿಗೂ ಮರೆಯುವುದಿಲ್ಲ
–ಅಂಧ ಕಲಾವಿದೆಯರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು