ಬುಧವಾರ, ಆಗಸ್ಟ್ 10, 2022
23 °C

ನಟ ಸಂಚಾರಿ ವಿಜಯ್‌ಗೆ ಅಪಘಾತ: ಸ್ಥಿತಿ ಗಂಭೀರ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಸಂಚಾರಿ ವಿಜಯ್‌ ಅವರಿಗೆ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಅಪಘಾತವಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಬೈಕ್‌ನಿಂದ ಬಿದ್ದು ವಿಜಯ್‌ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ದಾರಿಹೋಕರೇ ಅವರನ್ನು ಬನ್ನೇರುಘಟ್ಟದ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ  ದಾಖಲಿಸಿದ್ದಾರೆ.  ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದು, ಅದಕ್ಕಾಗಿ ಭಾನುವಾರ ಮುಂಜಾನೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸದ್ಯ ಐಸಿಯುನಲ್ಲಿರುವ ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಪೋಲೊ ಆಸ್ಪತ್ರೆಯ ನರರೋಗ ತಜ್ಞ ಅರುಣ್‌ ನಾಯಕ್‌ ‘ ವಿಯಜ್‌ ಅವರ ಬಲ ತೊಡೆ ಮುರಿದಿದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಮುಂದಿನ 48 ಗಂಟೆಗಳ ಕಾಲ ಅವರ ಮೇಲೆ ನಿಗಾ ವಹಿಸಬೇಕಾಗುತ್ತದೆ. ಅವರಿಗೆ ಜೀವರಕ್ಷಕಗಳ ನೆರವಿನೊಂದಿಗೆ ಚಿಕಿತ್ಸೆ ಮುಂದುವರಿಸಬೇಕಾಗುತ್ತದೆ,’ ಎಂದು ಹೇಳಿದ್ದಾರೆ. 

ಪ್ರಜ್ಞೆ ಬಂದ ಬಳಿಕವಷ್ಟೇ ಕಾಲಿನ ಗಾಯಗಳಿಗೆ ಮೂಳೆ ತಜ್ಞರು ಚಿಕಿತ್ಸೆ ನೀಡುತ್ತಾರೆ. ಮೊದಲು ಅವರು ಪ್ರಜ್ಞಾಸ್ಥಿತಿಗೆ ಬರಬೇಕಾಗಿದೆ ಎಂದು ಅರುಣ್‌ ನಾಯಕ್‌ ಹೇಳಿದರು. 

ಜೆ.ಪಿ.ನಗರದಲ್ಲಿ ತಮ್ಮ ಸ್ನೇಹಿತರ ಮನೆಗೆ ಊಟಕ್ಕೆ ಹೋಗಿ ವಾಪಸ್‌ ಬರುವಾಗ ಅಪಘಾತ ಸಂಭವಿಸಿದೆ. ವಿಜಯ್‌ ಹಿಂಬದಿ ಕುಳಿತಿದ್ದರು. ಬೈಕ್‌ ಓಡಿಸುತ್ತಿದ್ದ ಅವರ ಗೆಳೆಯನ ಬೆನ್ನು ಮೂಳೆಗೆ ಏಟಾಗಿದೆ. 

ಘಟನೆ ಹೇಗಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತಡರಾತ್ರಿ ಘಟನೆ ನಡೆದಿರುವ ಕಾರಣ ಇನ್ನೂ ವಿವರ ತಿಳಿದುಬಂದಿಲ್ಲ ಎಂದು ವಿಜಯ್‌ ಆಪ್ತರು ಹೇಳಿದ್ದಾರೆ.

ಇತ್ತೀಚೆಗೆ ಕೋವಿಡ್‌ ಸಂಕಟಕ್ಕೊಳಗಾದವರಿಗೆ ನೆರವಾಗುವಲ್ಲಿ ವಿಜಯ್‌ ಸಕ್ತಿಯರಾಗಿದ್ದರು. ಕೋವಿಡ್‌ಗೆ ತುತ್ತಾದವರಿಗೆ ಆಸ್ಪತ್ರೆ, ಆಮ್ಲಜನಕ ಸೌಲಭ್ಯ ಕಲ್ಪಿಸುವಲ್ಲಿ ನೆರವಾಗಿದ್ದರು.

ಕೋವಿಡ್‌ ಸಂದರ್ಭದಲ್ಲಿ ಅವರು ಕೆಲಸ ಮಾಡುತ್ತಿದ್ದ ‘ಉಸಿರು‘ ತಂಡದ ಕಾರ್ಯಕರ್ತರು, ವಿಜಯ್‌ ಅವರ ಸಹೋದರ ಸೇರಿದಂತೆ ಕುಟುಂಬದವರು ಆಸ್ಪತ್ರೆಯತ್ತ ಧಾವಿಸಿದರು.

ಅಪಘಾತ ಬಗ್ಗೆ ಆಸ್ಪತ್ರೆ ವೈದ್ಯರೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.

ನಮಗೂ ತುಂಬಾ ಆಘಾತವಾಗಿದೆ. ಈ ಘಟನೆಯನ್ನು ಸ್ವೀಕರಿಸಲಾಗುತ್ತಿಲ್ಲ ಎಂದು ಚಿತ್ರ ಸಾಹಿತಿ ಕವಿರಾಜ್‌ ಬೇಸರ ವ್ಯಕ್ತಪಡಿಸಿದ್ದಾರೆ. ಕವಿರಾಜ್‌ ಅವರು ವಿಜಯ್‌ ಅವರ ‘ಉಸಿರು’ ಸ್ವಯಂ ಸೇವಕರ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 

‘ತಾನು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಎಂಬ ಯಾವ ಹಮ್ಮು ಬಿಮ್ಮೂಇಲ್ಲದೆ ಎಲ್ಲರೊಡನೆ ಬೆರೆಯುತ್ತಿದ್ದರು. ಕೋವಿಡ್‌ ನೆರವಿನ ವೇಳೆಯೂ ಬಹುತೇಕ ಕೆಲಸಗಳಿಗೆ ತಾವೇ ಓಡಾಡುತ್ತಿದ್ದರು,‘ ಎಂದು ಕವಿರಾಜ್‌ ನೆನಪಿಸಿದರು.

ನಿರ್ದೇಶಕ ಲಿಂಗದೇವರು ಕೂಡಾ ವಿಜಯ್‌ ಸ್ಥಿತಿ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ಇವುಗಳನ್ನೂ ಓದಿ... 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು