ಸೋಮವಾರ, ಮಾರ್ಚ್ 27, 2023
21 °C
ನಟ ಶರಣ್ ಮಾತು

ನಾನು ಪಕ್ಕಾ ಎಂಟರ್‌ಟೇನರ್

ಸಂದರ್ಶನ: ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

Prajavani

ನಟ ಶರಣ್‌ ಅವರ ಚಿತ್ತ ಕೌಟುಂಬಿಕ ಪ್ರೇಕ್ಷಕ ವರ್ಗದತ್ತ ನೆಟ್ಟಿದೆ. ನಗಿಸುವುದಷ್ಟೇ ನನ್ನ ಕಾಯಕ ಎನ್ನುವುದು ಅವರ ದೃಢ ನಿರ್ಧಾರ. ‘ನಾನೊಬ್ಬ ಪಕ್ಕಾ ಎಂಟರ್‌ಟೇನರ್‌ ಅಷ್ಟೇ. ಹಾಸ್ಯ ಕಲಾವಿದ ಎಂಬ ಕಾರಣಕ್ಕೆ ಜನರು ನನ್ನ ಸಿನಿಮಾ ನೋಡುತ್ತಾರೆ. ಹಾಗೆಂದು ಹಳೆಯ ಹಾದಿಯಲ್ಲಿ ನಡೆದರೆ ನೋಡುಗರಿಗೆ ರುಚಿಸುವುದಿಲ್ಲ. ಹೊಸತನ ನೀಡಿದಾಗಲಷ್ಟೇ ನೋಡುಗರು ಮೆಚ್ಚಿಕೊಳ್ಳುತ್ತಾರೆ ಅಲ್ಲವೇ?’ ಎಂದು ಪ್ರಶ್ನಿಸುತ್ತಲೇ ಅವರು ಮಾತಿಗೆ ಇಳಿದರು.

‘ನಾನು ಯಾವುದೇ ತಯಾರಿ ಇಲ್ಲದೆಯೇ ಚಿತ್ರರಂಗಕ್ಕೆ ಬಂದವನು. ಅಂಥವನಿಗೆ ಪ್ರೇಕ್ಷಕರು ಕೆಲಸ ಕೊಟ್ಟು, ಊಟ ನೀಡಿದ್ದಾರೆ. ಅವರಿಗೆ ನಾನು ಆಭಾರಿ. ಇದರಲ್ಲಿ ನನ್ನ ಕೊಡುಗೆ ಏನಿಲ್ಲ. ಇಂದಿಗೂ ನನಗೆ ನಟನೆ ಎಂದರೆ ಭಯ. ಪ್ರತಿಯೊಂದು ದೃಶ್ಯವನ್ನೂ ಸವಾಲಿನಿಂದಲೇ ಎದುರಿಸುತ್ತೇನೆ. ನಟನೆಯ ತೃಪ್ತಿಯ ಹಂತಕ್ಕೆ ನಾನಿನ್ನೂ ಮುಟ್ಟಿಲ್ಲ’ ಎಂದು ಮಾತು ವಿಸ್ತರಿಸಿದರು.

ಹಾಗೆಂದು ಶರಣ್‌ ಅವರು ನಟನೆಯ ಭಿನ್ನ ಹಾದಿಗೆ ಹೊರಳುತ್ತಿದ್ದಾರೆಯೇ ಎಂದು ಅರ್ಥೈಸಿಕೊಳ್ಳಬೇಕಿಲ್ಲ. ಕೆಲವು ಪ್ರಶ್ನೆಗಳಿಗೆ ಅವರ ಉತ್ತರ ಖಡಕ್‌ ಆಗಿಯೇ ಇತ್ತು. ಇನ್ನು ಕೆಲವು ವಿಷಯಗಳಿಗೆ ಹಾಸ್ಯದ ದಾಟಿಯಲ್ಲಿ ಉತ್ತರಿಸಿದರು. ಅವರು ನಾಯಕ ನಟನಾಗಿರುವ, ಅಮೆರಿಕದಲ್ಲಿಯೇ ಹೆಚ್ಚಿನ ಪಾಲು ಶೂಟಿಂಗ್‌ ನಡೆಸಿರುವ ‘ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದು ಮಲಯಾಳದ ‘ಟು ಕಂಟ್ರೀಸ್‌’ ಚಿತ್ರದ ರಿಮೇಕ್. ಈ ಸಿನಿಮಾ ಮೂಲಕ ಆರಂಭವಾದ ಅವರೊಂದಿಗಿನ ಮಾತುಕತೆ, ವೃತ್ತಿಬದುಕು, ಪ್ರೇಕ್ಷಕರ ಮನಸ್ಥಿತಿ ಹೀಗೆ ಎಲ್ಲೆಲ್ಲೋ ಗಿರಕಿ ಹೊಡೆದು ಹೊಸಬರಿಗೆ ಸಲಹೆ ನೀಡುವುದರೊಂದಿಗೆ ಮುಕ್ತಾಯಗೊಂಡಿತು. 

* ‘ಅಧ್ಯಕ್ಷ ಇನ್‌ ಅಮೆರಿಕಾ’ ಚಿತ್ರದ ವಿಶೇಷ ಏನು?

ಫ್ಯಾಮಿಲಿ ಡ್ರಾಮಾ ಇದು. ಗಂಡ ಮತ್ತು ಹೆಂಡತಿ ನಡುವಿನ ಬಾಂಧವ್ಯ ಕಥನ. ನಾನು ಹಿಂದೆಯೂ ಇಂತಹ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ, ಹೆಚ್ಚಿನ ಒತ್ತು ಕೊಟ್ಟಿರಲಿಲ್ಲ. ನೀವು ಏಕೆ ಕೌಟುಂಬಿಕ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನುವುದು ಕೌಟುಂಬಿಕ ಸಿನಿಮಾಪ್ರಿಯರು, ವಿತರಕರು ನನಗೆ ಕೇಳುತ್ತಿದ್ದರು. ಅಂಥವರಿಗೆ ಇದು ಒಳ್ಳೆಯ ಟ್ರೀಟ್‌. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಲಿದೆ. 
 

* ಮೂಲ ಸಿನಿಮಾಕ್ಕೂ, ಇದಕ್ಕೂ ಏನಾದರೂ ವ್ಯತ್ಯಾಸ ಇದೆಯೇ? 

ಸಾಕಷ್ಟು ವ್ಯತ್ಯಾಸವಿದೆ. ಈ ಸಿನಿಮಾದ ಶೈಲಿ, ಧಾಟಿಯೇ ಬೇರೆಯದಾಗಿದೆ. ಕನ್ನಡದಲ್ಲಿ ಒಂದು ರಿಮೇಕ್ ಚಿತ್ರ ಮಾಡುವಾಗ ಮೂಲ ಸಿನಿಮಾ ವೀಕ್ಷಿಸಿ ಅಲ್ಲಿನ ಕಲಾವಿದರು ಮಾಡಿದಂತೆಯೇ ನಾವೂ ನಟಿಸಲು ಆಗದು. ನಮ್ಮ ಶೈಲಿಯಲ್ಲಿಯೇ ನಟನೆ ಮಾಡಬೇಕು. ಈ ಚಿತ್ರ ನನ್ನ ಶೈಲಿಗೆ ತುಂಬಾ ಒಪ್ಪುತ್ತಿತ್ತು. ಅದಕ್ಕಾಗಿಯೇ ರಿಮೇಕ್‌ ಮಾಡಿದ್ದೇವೆ. ನಿರ್ದೇಶಕರು ಮೂಲತಃ ಬರಹಗಾರರು. ಅದೇ ಈ ಚಿತ್ರದ ದೊಡ್ಡ ಶಕ್ತಿ. ನೀವೆಲ್ಲಾ ‘ಅಧ್ಯಕ್ಷ’ ಚಿತ್ರದ ಶರಣ್‌ನನ್ನು ನೋಡಿದ್ದೀರಿ. ಅದೇ ಶರಣ್‌ನನ್ನು ಕೇಳುವ ಕಥೆ ಇದು. ಅದಕ್ಕೆ ಪೂರಕವಾಗಿಯೇ ಚಿತ್ರಕ್ಕೆ ‘ಅಧ್ಯಕ್ಷ ಇನ್‌ ಅಮೆರಿಕಾ’ ಎಂದು ಹೆಸರಿಡಲಾಗಿದೆ.

* ಚಿತ್ರೀಕರಣದ ಅನುಭವ ಹೇಗಿತ್ತು?

ಚಿತ್ರದ ಶೇಕಡ 60ರಷ್ಟು ಶೂಟಿಂಗ್‌ ನಡೆದಿರುವುದು ಅಮೆರಿಕದಲ್ಲಿ. ಎರಡು ತಿಂಗಳ ಕಾಲ ಅಮೆರಿಕದಲ್ಲಿದ್ದೆವು. ನನ್ನ ವೃತ್ತಿಬದುಕಿನಲ್ಲಿ ನಾನು ತಿಂಗಳಾನುಗಟ್ಟಲೆ ಒಂದೇ ಸ್ಥಳದಲ್ಲಿ ಶೂಟಿಂಗ್‌ ಮಾಡಿದ್ದು ಇದೇ ಮೊದಲು. ಇದು ನನಗೆ ಹೊಸ ಅನುಭವ. ಸಿನಿಮಾಗೆ ಪೂರಕವಾದಂತಹ ಲೊಕೇಶನ್‌ ಸಿಕ್ಕಿದ್ದು ನಮ್ಮ ಅದೃಷ್ಟ.

* ನೀವು ಸಿನಿಮಾ ಒಪ್ಪಿಕೊಳ್ಳುವಾಗ ಯಾವ ಅಂಶಗಳಿಗೆ ಒತ್ತು ನೀಡುತ್ತೀರಿ?

ಪ್ರೇಕ್ಷಕರು ನನ್ನನ್ನು ಇಷ್ಟಪಟ್ಟಿರುವುದು ಮನರಂಜನೆ ವಿಚಾರದಲ್ಲಿ. ಆ ಅಂಶಗಳು ಕಥೆಯಲ್ಲಿ ಇವೆಯೇ ಎನ್ನುವುದಕ್ಕೆ ನನ್ನ ಮೊದಲ ಆದ್ಯತೆ. ಬಳಿಕ ಕಥೆಯಲ್ಲಿ ಹೊಸತನ ಇದೆಯೇ ಎಂದು ಪರಾಮರ್ಶೆ ಮಾಡುತ್ತೇನೆ. ಕಾಮಿಡಿ ಮಾಡುವುದು ಸುಲಭವಲ್ಲ. ಹಳೆಯ ಹಾದಿಯಲ್ಲಿ ನಡೆದರೆ ನೋಡುಗನಿಗೆ ರುಚಿಸುವುದಿಲ್ಲ. ಹೊಸದನ್ನೂ ಮಾಡಬೇಕು. ಜನರು ನನ್ನಲ್ಲಿ ಏನು ಇಷ್ಟಪಟ್ಟಿದ್ದಾರೋ ಅದನ್ನೂ ಮಾಡಬೇಕು. ಇದು ಒಬ್ಬ ಹಾಸ್ಯ ನಟನಿಗೆ ಸವಾಲಿನ ಹಾದಿ. ಪ್ರತಿಯೊಂದು ಹೊಸ ಚಿತ್ರದಲ್ಲೂ ಹೊಸದೊಂದು ಪ್ರಯೋಗ ಮಾಡುತ್ತೇನೆ. ಜೊತೆಗೆ, ಹೊಸದನ್ನೂ ಕಲಿಯುತ್ತೇನೆ.

* ಸಿನಿಮಾ ನಿರ್ದೇಶನಕ್ಕೆ ಇಳಿಯುವ ಆಸೆ ಇಲ್ಲವೇ?

ಸಿನಿಮಾ ನಿರ್ದೇಶನ ಎನ್ನುವುದು ಸಾಮಾನ್ಯ ವಿಚಾರವಲ್ಲ. ಸಾಕಷ್ಟು ಶ್ರಮ ಬೇಡುವ ವೃತ್ತಿ ಅದು. ಜೊತೆಗೆ, ಅಧ್ಯಯನವೂ ಬೇಕು. ನನಗೆ ಸಿನಿಮಾಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಮಿಟ್‌ಮೆಂಟ್‌ಗಳಿವೆ. ಸದ್ಯಕ್ಕೆ ನಿರ್ದೇಶಕನ ಕ್ಯಾಪ್‌ ಧರಿಸುವ ಆಲೋಚನೆ ಇಲ್ಲ. 

* ಧಾರಾವಾಹಿಗಳ ಮುಂದೆ ಕುಳಿತ ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆಯುವ ಬಗೆ ಹೇಗೆ?

ಒಳ್ಳೆಯ ಸಿನಿಮಾವಷ್ಟೇ ಇದಕ್ಕೆ ಮದ್ದು. ಚಿತ್ರ ಚೆನ್ನಾಗಿದ್ದರೆ ಥಿಯೇಟರ್‌ಗೆ ಜನರು ಬರುತ್ತಾರೆ. ವಾರಕ್ಕೆ ಏಳೆಂಟು ಸಿನಿಮಾಗಳು ಬರುತ್ತಿವೆ. ಪ್ರೇಕ್ಷಕರ ಇನ್ನೂ ನಮ್ಮೊಟ್ಟಿಗೆ ಇದ್ದಾರೆ. ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ನನಗೆ ಅನಿಸುತ್ತಿಲ್ಲ. 

* ಚಿತ್ರರಂಗ ಪ್ರವೇಶಿಸುತ್ತಿರುವ ಹೊಸಬರ ಬಗ್ಗೆ ನಿಮ್ಮ ಅನಿಸಿಕೆ ಏನು?

ಸಾಕಷ್ಟು ತಯಾರಿ ನಡೆಸಿಕೊಂಡೇ ಹೊಸಬರು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ. ಹೊಸ ಪೀಳಿಗೆಯು ಭರವಸೆ ಮೂಡಿಸಿದೆ. ಇದು ಪೈಪೋಟಿ ಯುಗ. ಪ್ರತಿದಿನವೂ ಪೈಪೋಟಿ ಕಾಣಬಹುದು. ಅದರ ತೀವ್ರತೆಯು ಅಂದಾಜಿಗೆ ನಿಲುಕುವುದಿಲ್ಲ. ಆದರೆ, ಹೊಸಬರು ಅದನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡು ಅಖಾಡಕ್ಕೆ ಇಳಿಯುತ್ತಿದ್ದಾರೆ. ಅವರ ಪೂರ್ವ ತಯಾರಿ, ಆಸೆ, ಗುರಿ ಸಾಧಿಸುವ ಛಲ ಅಭಿನಂದನೆಗೆ ಅರ್ಹ. ಅದೇ ಹಾದಿಯಲ್ಲಿ ಸಾಗಿದರೆ ಯಶಸ್ಸು ಕಟ್ಟಿಟ್ಟಬುತ್ತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು