ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌.ಶಿವರಾಂ ನಿಧನ: ಸಿಎಂ ಬೊಮ್ಮಾಯಿ ಸೇರಿದಂತೆ ನಾಡಿನ ಗಣ್ಯರಿಂದ ಸಂತಾಪ

Last Updated 4 ಡಿಸೆಂಬರ್ 2021, 10:46 IST
ಅಕ್ಷರ ಗಾತ್ರ

ಬೆಂಗಳೂರು: ಚಂದನವನದ ಹಿರಿಯ ನಟರಾಗಿದ್ದ ಎಸ್‌. ಶಿವರಾಂ (83) ಅವರ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ನಾಡಿನ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ಕಲಾವಿದ ಶಿವರಾಂ ಅವರ ನಿಧನ ತುಂಬಾ ದುಃಖದ ವಿಷಯ. ಶಿವರಾಂ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್‌ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಅವರ ನಿಧನದಿಂದ ದುಃಖಿತನಾಗಿದ್ದೇನೆ. ದಶಕಗಳ ಕಾಲ ತಮ್ಮ ಅಮೋಘ ನಟನೆಯ ಮೂಲಕ ಕಲಾಸೇವೆಗೈದ ಶಿವರಾಂ ಅವರ ನೆನಪು ನಮ್ಮೊಂದಿಗೆ ಸದಾ ಜೀವಂತವಾಗಿರಲಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಕುಟುಂಬ ವರ್ಗಕ್ಕೆ ಮತ್ತು ಅಭಿಮಾನಿಗಳಿಗೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್‌ನಲ್ಲಿ ಸ್ಮರಿಸಿದ್ದಾರೆ.

ಕನ್ನಡ ಸಿನಿಮಾಗೆ ದೊಡ್ಡ ನಷ್ಟ. ಶೀವರಾಂ ಅಣ್ಣ ಅವರ ನಿಧನದಿಂದ ತುಂಬ ಬೇಸರವಾಯಿತು. ಅವರೊಬ್ಬರು ಐಕಾನ್ ಎಂದುಅನಿಲ್‌ ಕುಂಬ್ಳೆ ಟ್ವೀಟ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ ಶಿವರಾಂ ಅವರ ನಿಧನ ನನಗೆ ತೀವ್ರ ನೋವು ಉಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗದವರು, ಅಭಿಮಾನಿಗಳು, ಚಿತ್ರರಂಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

ಕನ್ನಡ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರು, ಚಿತ್ರರಂಗದ ಆಸ್ತಿಯಾಗಿದ್ದ ಹಿರಿಯ ನಟ ಶಿವರಾಂ ಅವರು ನಿಧನರಾದ ಸುದ್ದಿ ತಿಳಿದು ದಿಗ್ಭ್ರಮೆ ಆಯಿತು. ನಮ್ಮ ಚಿತ್ರರಂಗದ ಎಲ್ಲ ಆಗುಹೋಗುಗಳಿಗೆ ಸದಾ ಮಿಡಿಯುತ್ತಿದ್ದ ಅವರ ಅಗಲಿಕೆ ನನಗೆ ಬಹಳ ದುಃಖವುಂಟು ಮಾಡಿದೆ. ಶರಪಂಜರ, ನಾಗರಹಾವು, ಗುರುಶಿಷ್ಯರು, ಗೆಜ್ಜೆಪೂಜೆ, ಉಪಾಸನೆ ಸೇರಿದಂತೆ ಅನೇಕ ಸ್ಮರಣಿಯ ಚಿತ್ರಗಳಲ್ಲಿ ನಟಿಸಿದ್ದ ಶಿವರಾಂ ಅವರು ಚಿತ್ರರಂಗದ ಅಭಿವೃದ್ಧಿಯ ಎಲ್ಲ ಹಂತಗಳಿಗೂ ಸಾಕ್ಷಿಯಾಗಿದ್ದವರು. ದೈವಭಕ್ತರೂ ಆಗಿದ್ದ ಅವರು ಅಧ್ಯಾತ್ಮದತ್ತ ಒಲವು ಹೊಂದಿದ್ದರಲ್ಲದೆ, ಇತರರಲ್ಲೂ ಸಾತ್ವಿಕತೆಯನ್ನು ಮೂಡಿಸುತ್ತಿದ್ದರು ಎಂದು ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಬರೆದಿದ್ದಾರೆ.

ಕನ್ನಡ ಚಲನಚಿತ್ರ ರಂಗದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕರೂ ಆದಂತಹ ಶಿವರಾಂ ಅವರು ನಿಧನ ಹೊಂದಿರುವ ಸುದ್ಧಿ ನಿಜಕ್ಕೂ ದುಃಖಕರ. ಕನ್ನಡ ಚಿತ್ರರಂಗಕ್ಕೆ ಹಾಗೂ ಕನ್ನಡ ನಾಡಿಗೆ ಅವರ ಅಗಲಿಕೆಯಿಂದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಎಸ್‌ಎ ರಾಮದಾಸ್‌ ಹೇಳಿದ್ದಾರೆ.

ತಮ್ಮ ಮನೋಜ್ಞ ಅಭಿನಯದ ಮೂಲಕ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಶಿವರಾಂ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ಆಘಾತವಾಯಿತು. ಬಹುಮುಖ ಪ್ರತಿಭೆಯಾಗಿದ್ದ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಭಗವಂತನು ಅವರ ಆತ್ಮಕ್ಕೆ, ಸದ್ಗತಿ ನೀಡಿ, ಕುಟುಂಬದವರು ಮತ್ತು ಅಭಿಮಾನಿಗಳಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಮುರುಗೇಶ್‌ ನಿರಾಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT