ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿ ಹೊಸ ವಾಗ್ದಾನ

Last Updated 20 ಜುಲೈ 2020, 9:35 IST
ಅಕ್ಷರ ಗಾತ್ರ

ಸಿನಿಮಾ ಮತ್ತು ರಾಜಕಾರಣದಲ್ಲಿ ಒಟ್ಟೊಟ್ಟಿಗೆ ಸಾಗುತ್ತಿರುವವರು ನಟ, ನಿರ್ದೇಶಕ ಉಪೇಂದ್ರ. ‘ಬುದ್ಧಿವಂತ 2’, ‘ಕಬ್ಜ’, ’ರವಿಚಂದ್ರ’ ಹಾಗೂ ‘ಹೋಂಮಿನಿಸ್ಟರ್‌’ ಚಿತ್ರಗಳಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. 'ಬುದ್ಧಿವಂತ' ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್‌ ಕೆಲಸವಷ್ಟೇ ಬಾಕಿ ಇದೆ. ಕೊರೊನಾ ಲಾಕ್‌ಡೌನ್‌ ಬಿಡುವಿನಲ್ಲಿ ಉಪ್ಪಿ ತಮ್ಮ ಪಕ್ಷ ‘ಪ್ರಜಾಕೀಯ’ದ ಕಡೆಗೂ ಗಮನ ಹರಿಸಿದ್ದಾರೆ. ನವಪೀಳಿಗೆಯ ಜನರ ಮೇಲೆ ದೃಷ್ಟಿ ಹೆಚ್ಚು ಹರಿಸಿರುವ ಅವರು ಪ್ರಜಾಕೀಯದ ತತ್ವಸಿದ್ಧಾಂತಗಳನ್ನು ಸಾಮಾಜಿಕ ಜಾಲತಾಣಗಳ ಮುಖೇನ ನೆಟ್ಟಿಗರ ಮನಸಿಗೆ ನಾಟಿಸಲು ಪ್ರಯತ್ನಿಸುತ್ತಿದ್ದಾರೆ.

ಪ್ರಜಾಕೀಯದ ಸಿದ್ಧಾಂತಗಳನ್ನು ಜನರೊಂದಿಗೆ ಹಂಚಿಕೊಳ್ಳಲು ಶುರು ಮಾಡಿದ್ದು, ಈಗ ಹೊಸ ವಾಗ್ದಾನವನ್ನೂ ಅವರು ನೀಡಿದ್ದಾರೆ. ಉಪೇಂದ್ರ ಎಂಬ ನಾನು.... ‘ಈ ರಾಜ್ಯದ ಸಿಎಂ (ಕಾಮನ್‌ ಮ್ಯಾನ್‌) ಪ್ರಜೆಯಾಗಿ (ಜನಾಸಾಮಾನ್ಯ) ಎಂದೆಂದೂ ನಿಮ್ಮ ಜೊತೆ ಇರುತ್ತೇನೆ. ನಿಮ್ಮ ಜೊತೆ ಪ್ರಜಾಪ್ರಭುತ್ವದ –ಪ್ರಜಾಕೀಯದ ಪ್ರಚಾರ ನಿರಂತರವಾಗಿ ಮಾಡುತ್ತಿರುತ್ತೇನೆ. ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಯಾಗಬಯಸುವ ಪ್ರಜಾಕಾರ್ಮಿಕರನ್ನು ನೀವು ಬಯಸಿದಂತೆ (ಎಆರ್‌ಟಿ) (ಎಸ್‌ಒಪಿ) ನಿರ್ದಿಷ್ಟ ಕಾರ್ಯ ವೈಖರಿಯ ವಿಧಾನದಂತೆ ಕೆಲಸ ಮಾಡಲು ಷರತ್ತು ವಿಧಿಸಿ ಚುನಾವಣೆಗೆ ನಿಲ್ಲಿಸುವ ಕೆಲಸ ಮಾಡುತ್ತೇನೆ. ಚುನಾವಣೆಯಲ್ಲಿ ಪ್ರಜಾಕಾರ್ಮಿಕರಿಗೆ ನೀವು ಕೆಲಸ ಕೊಟ್ಟರೆ ಪಕ್ಷದ ಅಧ್ಯಕ್ಷನಾಗಿ ಮತ್ತು ನಿಮ್ಮ ಜೊತೆ ಪ್ರಜೆಯಾಗಿ ನಿಂತು ನೀವು ಬಯಸುವ ಕೆಲಸ(ಎಆರ್‌ಟಿ) (ಎಸ್‌ಒಪಿ) ಪ್ರಕಾರ ಮಾಡುತ್ತಿದ್ದಾರಾ ಎಂದು ನಿರಂತರವಾಗಿ ನೋಡಿಕೊಳ್ಳುತ್ತೇನೆ. ನಮ್ಮ ಕನಸುಗಳು ಶಿಕ್ಷಣ, ಆರೋಗ್ಯ, ವಸತಿ, ಕೆಲಸ, ಮೂಲಭೂತ ಸೌಕರ್ಯಗಳ ವಿಚಾರ ನಿಮ್ಮ ಮುಂದೆ ಇಟ್ಟು ನೀವು ಒಪ್ಪಿದರೆ ಸಾಕಾರಗೊಳಿಸುತ್ತೇನೆ. ನಿಮಗೆ ಪ್ರಜಾಕಾರ್ಮಿಕನ ಬಗ್ಗೆ ಅಸಮಾಧಾನವಾದರೆ ನಾನು ನಿಮ್ಮ ಮುಂದೆ ನಿಂತು ಹೋರಾಡಿ ಅವನನ್ನು ಕೆಳಗೆ ಇಳಿಸುತ್ತೇನೆ. ಇದು ನಾನು ಪ್ರಮಾಣ ಮಾಡಿ ಹೇಳುತ್ತಿದ್ದೇನೆ’ ಎಂದು ವಾಗ್ದಾನ ಮಾಡಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆಯಲ್ಲಿ ತೊಡಗಿರುವ ಅವರು, ಬೆಂಗಳೂರಿನ ಯಾವುದಾದರೊಂದು ವಿಧಾನಸಭಾ ಕ್ಷೇತ್ರದಲ್ಲಿ ತಾವು ಸ್ಪರ್ಧಿಸುವ ಜತೆಗೆ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಯಾರಿ ನಡೆಸುತ್ತಿದ್ದಾರೆ. ರಾಜಕಾರಣದಲ್ಲಿ ಬದಲಾವಣೆ ತರಬೇಕೆಂದರೆ ಸ್ವತಃ ಚುನಾವಣಾ ಅಕಾಡಕ್ಕೆ ಇಳಿಯುವುದು ಅನಿವಾರ್ಯವೆಂದು ತಮ್ಮ ಆಪ್ತರ ಬಳಿಯೂ ಉಪ್ಪಿ ಹೇಳಿಕೊಂಡಿದ್ದಾರಂತೆ.ದೆಹಲಿಯಲ್ಲಿ ಕೇಜ್ರಿವಾಲ್‌ ಆಮ್‌ ಆದ್ಮಿ ಪಕ್ಷವನ್ನು ಕಟ್ಟಿ ಬೆಳೆಸಿ, ಅಧಿಕಾರ ಸ್ಥಾಪಿಸಿದಂತೆ ಕರ್ನಾಟಕದ ಕೇಜ್ರಿವಾಲ್‌ ಆಗುವ ಕನಸು ಉಪೇಂದ್ರ ಅವರಿಗೆ ಇದೆ ಎನ್ನುತ್ತಾರೆ ಅವರ ಆಪ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT