ಮಂಗಳವಾರ, ನವೆಂಬರ್ 30, 2021
20 °C

ಟ್ರೋಲರ್‌ಗಳಿಗೆ ಛೀಮಾರಿ ಹಾಕಿದ ನಟಿ ಅನಶ್ವರಾ ರಾಜನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನಸ್ವರ ರಾಜನ್‌

ಇತ್ತೀಚೆಗೆ ಸಿನಿಮಾ ನಟ–ನಟಿಯರನ್ನು ಕಾರಣವಿಲ್ಲದೇ ಟ್ರೋಲ್ ಮಾಡುವುದು ಅಭ್ಯಾಸವಾಗಿದೆ. ಅವರು ಧರಿಸುವ ಬಟ್ಟೆ, ಆಡುವ ಮಾತುಗಳನ್ನು ಇರಿಸಿಕೊಂಡು ಟ್ರೋಲರ್‌ಗಳು ಅಸಭ್ಯ ಶಬ್ದಗಳಿಂದ ನಿಂದಿಸುತ್ತಾರೆ. ಟ್ರೋಲರ್‌ಗಳಿಗೆ ಎಚ್ಚರಿಗೆ ನೀಡಿದಷ್ಟೂ ಅವರು ಇನ್ನಷ್ಟು ಟ್ರೋಲ್‌ ಮಾಡುತ್ತಾರೆ. ಈ ಬಗ್ಗೆ ಅನೇಕ ನಟ– ನಟಿಯರು ದೂರು ಕೂಡ ಸಲ್ಲಿಸಿದ ಉದಾಹರಣೆಗಳಿವೆ. 

ಆದರೆ ಮಲೆಯಾಳಿ ನಟಿ ಅನಶ್ವರಾ ರಾಜನ್ ಟ್ರೋಲರ್‌ಗಳಿಗೆ ತಕ್ಕ ಉತ್ತರ ನೀಡುವ ಮೂಲಕ ಅವರ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೇ ಇವರ ಈ ಧೈರ್ಯಕ್ಕೆ ಮಲಯಾಳಂ ಚಿತ್ರರಂಗದ ಅನೇಕ ನಟ–ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ನಡೆದಿದ್ದಿಷ್ಟು..

18 ವರ್ಷದ ಅನಶ್ವರಾ ರಾಜನ್‌ ಇತ್ತೀಚೆಗೆ ಗುಲಾಬಿ ಬಣ್ಣದ ಟಾಪ್ ಹಾಗೂ ಬೂದು ಬಣ್ಣದ ಶಾರ್ಟ್ಸ್‌ ಧರಿಸಿರುವ ಫೋಟೊವನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಅವರು ಧರಿಸಿದ್ದ ಬಟ್ಟೆಗೆ ಅಕ್ಷೇಪ ವ್ಯಕ್ತಪಡಿಸಿದ್ದ ಟ್ರೋಲಿಗರು ಅವರ ವಿರುದ್ಧ ಟ್ರೋಲ್ ಮಾಡಲು ಆರಂಭಿಸಿದ್ದರು. ಆದರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಆಕೆ ಅದೇ ದಿರಿಸಿನಲ್ಲಿರುವ ಇನ್ನಷ್ಟು ಫೋಟೊಗಳನ್ನು ಹಂಚಿಕೊಂಡಿದ್ದರು. ಅಲ್ಲದೇ ‘ನಾನು ಏನು ಮಾಡುತ್ತೇನೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾನು ಏನು ಮಾಡುತ್ತಿದ್ದೇನೆ ಎಂಬುದರ ಬಗ್ಗೆ ನೀವ್ಯಾಕೆ ತಲೆ ಕೆಡಿಸಿಕೊಳ್ಳುತ್ತಿದ್ದೀರಿ ಎಂಬುದನ್ನಷ್ಟೇ ಯೋಚಿಸಿ’ ಎಂದು ಕಡಕ್ ಆಗಿ ಉತ್ತರ ನೀಡುವ ಮೂಲಕ ಟ್ರೋಲರ್‌ಗಳಿಗೆ ಛೀಮಾರಿ ಹಾಕಿದ್ದಾರೆ. 

ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಅವರ ಈ ಫೋಟೊಗೆ 2 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದರು. ಆದರೆ ಕೆಲವರು ಇವರ ಈ ಪೋಸ್ಟ್‌ ಅನ್ನು ಟ್ರೋಲ್‌ ಮಾಡಲು ಆರಂಭಿಸಿದ್ದರು. ಈ ರೀತಿ ಬಟ್ಟೆ ಧರಿಸಿರುವ ಫೋಟೊಗಳನ್ನು ಪೋಸ್ಟ್ ಮಾಡಬೇಡಿ ಎಂದು ಹೇಳಿರುವ ವ್ಯಕ್ತಿಯೊಬ್ಬರು ಅಸಭ್ಯ ಭಾಷೆಯಲ್ಲಿ ಕಮೆಂಟ್ ಮಾಡಿದ್ದರು. 18ನೇ ವಯಸ್ಸಿನಲ್ಲಿ ಆಕೆ ಇಂತಹ ಬಟ್ಟೆಗಳನ್ನು ಯಾಕೆ ಧರಿಸಬೇಕಿತ್ತು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದರು.

ಅನಶ್ವರಾ ಅವರ ಈ ಪ್ರತ್ಯುತ್ತರಕ್ಕೆ ಮಲೆಯಾಳಂ ಸಿನಿರಂಗದ ನಟ ಆದಿಲ್‌ ಇಬ್ರಾಹಿಂ, ದಿವ್ಯಾ ಪ್ರಭಾ ಹಾಗೂ ಗಾಯಕ, ಸಂಗೀತ ನಿರ್ದೇಶಕ ಫೈಸಲ್ ರಾಝಿ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಅನೇಕರು ಟ್ರೋಲರ್‌‌ಗಳಿಗೆ ನೈತಿಕ ಪಾಠ ಹೇಳಿದ್ದಲ್ಲದೇ ಈ ರೀತಿ ಕೆಲಸ ಮಾಡದಂತೆ ಬುದ್ಧಿವಾದ ಹೇಳಿದ್ದಾರೆ.

ಅನಶ್ವರಾ ರಾಜನ್‌ ಮಲೆಯಾಳಂ ಹಾಗೂ ತಮಿಳಿನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಗ್ಲೋಬ್’ ಕಿರುಚಿತ್ರದ ಮೂಲಕ ಇವರು ನಟನೆ ಆರಂಭಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು