ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ನನ್ನ ಹೊಸ ಪ್ರಯತ್ನ-ನಟಿ ಮಯೂರಿ

Last Updated 27 ಸೆಪ್ಟೆಂಬರ್ 2019, 5:45 IST
ಅಕ್ಷರ ಗಾತ್ರ

‘ಅಶ್ವಿನಿ ನಕ್ಷತ್ರ’ ಕಿರುತೆರೆ ಪ್ರವೇಶಿಸಿ, ಕಿರುತೆರೆಯ ಮೂಲಕ ಹಿರಿತೆರೆಗೆ ದಾರಿ ಮಾಡಿಕೊಂಡ ನಟಿ ಮಯೂರಿ ಕ್ಯಾತರಿ. ‘ಇಷ್ಟಕಾಮ್ಯ’, ‘ರುಸ್ತುಂ’ನಂತಹ ಭಿನ್ನ ಬಗೆಯ ಸಿನಿಮಾಗಳಲ್ಲಿ ನಟಿಸಿದ ನಂತರ, ಮಯೂರಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಸಿನಿಮಾ ಫಲಿತಾಂಶ ಏನಿರಲಿದೆ ಎಂಬ ಕಾತರದಲ್ಲಿ ಇದ್ದಾರೆ. ಅಂದಹಾಗೆ ‘ಆಟಕ್ಕುಂಟು...’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ.

ಈ ಹೊತ್ತಿನಲ್ಲಿ, ‘ಸಿನಿಮಾ ಪುರವಣಿ’ಗೆ ಮಾತಿಗೆ ಸಿಕ್ಕಿದ್ದ ಮಯೂರಿ, ತಮ್ಮ ಸಿನಿಮಾ ಬಗ್ಗೆ, ತಮ್ಮ ಕನಸುಗಳ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

* ‘ಆಟಕ್ಕುಂಟು...’ ಚಿತ್ರದಲ್ಲಿ ನಿಮ್ಮ ಪಾತ್ರ ಏನು?

‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ನನ್ನ ಪಾಲಿಗೆ ಒಂದು ಹೊಸ ‍ಪ್ರಯತ್ನ. ಇದು ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ. ನಾನು ಇದರಲ್ಲಿ ಗೃಹಿಣಿಯಾಗಿ ಕಾಣಿಸಿಕೊಂಡಿದ್ಧೇನೆ. ಮೊದಲ ಬಾರಿಗೆ ವಿಭಿನ್ನ ಪಾತ್ರ, ವಿಭಿನ್ನ ಶೇಡ್‌ ನನಗೆ ಸಿಕ್ಕಿದೆ. ಒಂದು ಕಡೆ ದೆವ್ವದ ರೀತಿಯಲ್ಲಿ, ಇನ್ನೊಂದೆಡೆ ಹೊಸದಾಗಿ ಮದುವೆ ಆಗಿರುವವಳ ರೀತಿಯಲ್ಲಿ ಕಾಣಿಸುತ್ತೇನೆ. ಅಭಿನಯಕ್ಕೆ ದೊಡ್ಡ ಮಟ್ಟದ ಅವಕಾಶ ಇದ್ದ ಪಾತ್ರ ಇದು. ಈ ಸಿನಿಮಾದಲ್ಲಿನ ನಟನೆಯನ್ನು ನಾನು ಖುಷಿಯಿಂದ ಮಾಡಲು ಸಾಧ್ಯವಾಯಿತು. ಇದು ರಾಮ್‌ಜಿ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಕೂಡ ಹೌದು. ಅವರು ಬಹಳ ಛಲದಿಂದ ಈ ಸಿನಿಮಾ ಮಾಡಿದ್ದಾರೆ.

ಹೊಸಬರಿಗೆ ತುಸು ಹೆಚ್ಚೇ ಹುಮ್ಮಸ್ಸು ಇರುತ್ತದಲ್ಲವಾ? ರಾಮ್‌ಜಿ ಅವರು ಬಹಳ ಫ್ಲೆಕ್ಸಿಬಲ್ ಆಗಿ ಕೂಡ ಇದ್ದರು. ನಮ್ಮ ಸಲಹೆ, ಸೂಚನೆಗಳನ್ನು ಖುಷಿಯಿಂದ ಸ್ವೀಕರಿಸುತ್ತಿದ್ದರು. ಇದು ಮಹಿಳಾ ಕೇಂದ್ರಿತ ಎಂದು ಹೇಳಲಾರೆ. ಆದರೆ, ಒಂದಿಷ್ಟು ಮಿದುಳು ಉಪಯೋಗಿಸಿ ನೋಡಬೇಕಾದ ಸಿನಿಮಾ ಇದು.

* ಈ ಚಿತ್ರದಲ್ಲಿನ ಪಾತ್ರಕ್ಕಾಗಿ ಸಿದ್ಧತೆ ಹೇಗಿತ್ತು?

ಯಾವುದೇ ಬಗೆಯ ಪಾತ್ರ ನಿಭಾಯಿಸುವಾಗಲೂ ಒಂದಿಷ್ಟು ಸಿದ್ಧತೆ ಮಾಡಬೇಕಾಗುತ್ತದೆ. ನಾನು ಅಭಿನಯಿಸುವ ಪಾತ್ರಕ್ಕಾಗಿ ನನ್ನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬದಲಾವಣೆ ತಂದುಕೊಳ್ಳಲು ಯತ್ನಿಸುತ್ತಿರುತ್ತೇನೆ. ‘ಅಶ್ವಿನಿ ನಕ್ಷತ್ರ’ದ ನಂತರ ನಾನು ತಾಳಿ ಧರಿಸಿದ್ದು ಇದರಲ್ಲೇ. ನಾನು ಹಿರಿತೆರೆಯಲ್ಲಿ ತಾಳಿ ಧರಿಸಿದ್ದು ಇಲ್ಲವೇ ಇಲ್ಲ. ಇಲ್ಲಿನ ನಟನೆಯಲ್ಲಿ ಸೌಮ್ಯ ಭಾವದ ಸ್ಪರ್ಶ ಇದೆ. ಈ ಚಿತ್ರದಲ್ಲಿನ ಪಾತ್ರ ನಿಭಾಯಿಸಿದ್ದು ನನಗೆ ನನ್ನ ಹಳೆಯ ದಿನಗಳನ್ನು ನೆನಪಿಸಿತು. ವಾಸ್ತವದಲ್ಲಿ ಸಖತ್ ಜಾಲಿ ಆಗಿರುವ ಹುಡುಗಿ ನಾನು. ನಾನು ತುಂಬಾ ಮಾತನಾಡುತ್ತೇನೆ. ಆದರೆ ಈ ಚಿತ್ರದಲ್ಲಿ ಎಷ್ಟು ಬೇಕೋ ಅಷ್ಟೇ ಮಾತನಾಡಬೇಕು. ನಾನು ಈ ಮೊದಲು ಈ ಪಾತ್ರದ ಸ್ವಭಾವಕ್ಕೆ ಬಹಳ ಸನಿಹವಾದ ಪಾತ್ರವನ್ನು ಮಾಡಿದ್ದ ಕಾರಣ, ಈ ಪಾತ್ರ ಮಾಡುವುದು ಸುಲಭ ಆಯಿತು. ಎಲ್ಲರಿಗೂ ಇಷ್ಟವಾಗುವಂತಹ ಪಾತ್ರ ಇದು.

* ಇದುವರೆಗಿನ ಸಿನಿಮಾ ಯಾನದಲ್ಲಿ ನಿಮಗೆ ನೀವು ಬಯಸಿದ ಪಾತ್ರಗಳು ಸಿಕ್ಕಿವೆಯಾ?

ಕಲಾವಿದರಿಗೆ ಆಸೆ ಕಡಿಮೆಯಾ? ದೊಡ್ಡ ನಟರ ಬಳಿ ಈ ಪ್ರಶ್ನೆ ಕೇಳಿದರೂ, ‘ನಾನು ಕಲಾವಿದನಾಗಿ ಮಾಡುವುದು ಇನ್ನೂ ಸಾಕಷ್ಟಿದೆ’ ಎಂದೇ ಹೇಳುತ್ತಾರೆ. ಅಂದರೆ, ಏನು ಮಾಡಿದರೂ ಕಡಿಮೆ ಅಂತಲೇ ಅನಿಸುತ್ತದೆ. ನಾನು ನಟನಾ ಲೋಕಕ್ಕೆ ಬಂದು ಏಳು ವರ್ಷಗಳು ಆದವು. ಈವರೆಗೆ ಮಾಡಿರುವುವು ಬೆರಳೆಣಿಕೆಯಷ್ಟು ಸಿನಿಮಾಗಳು. ನಾನು ನಿಭಾಯಿಸಬೇಕಿರುವ ಪಾತ್ರಗಳು ಇನ್ನೂ ಸಾಕಷ್ಟಿವೆ. ಆದರೆ, ನಾನು ಇದುವರೆಗೆ ಮಾಡಿರುವ ಸಿನಿಮಾಗಳಲ್ಲಿ ದೊಡ್ಡ ನಿರ್ದೇಶಕರ ಜೊತೆ, ಹೊಸಬರ ಜೊತೆ ಕೆಲಸ ಮಾಡಿದ್ದೇನೆ. ಹಾಗಾಗಿ, ನಾನು ಒಂದು ರೀತಿಯಲ್ಲಿ ಹೆಮ್ಮೆ ಪಟ್ಟುಕೊಳ್ಳಬೇಕು. ‘ನಿಮ್ಮ ಅಭಿನಯಕ್ಕಾಗಿ ಈ ಪಾತ್ರ ನಿಮಗೆ ಕೊಟ್ಟಿದ್ದೇವೆ’ ಎಂದು ನನ್ನ ಬಳಿ ಹೇಳಿದ್ದಿದೆ. ವಿಮರ್ಶಕರು ಕೂಡ ನನ್ನ ಬಗ್ಗೆ ಒಳ್ಳೆಯ ಮಾತು ಹೇಳಿದ್ದಾರೆ. ಮರ ಸುತ್ತುವುದು ಮಾತ್ರವಲ್ಲದೆ, ಮರದಹಲ್ಲಿನ ಹಣ್ಣನನ್ನು ಕೀಳುವ ಪಾತ್ರಗಳನ್ನು ಕೂಡ ಮಾಡಿದ್ದೇನೆ.

* ಯಾವ ರೀತಿಯ ಪಾತ್ರಗಳನ್ನು ನಿಭಾಯಿಸುವುದು ನಿಮಗೆ ಇಷ್ಟ?

ನನಗೆ ವಾಸ್ತವ ನೆಲೆಯಲ್ಲಿನ ಸಿನಿಮಾಗಳು ಅಂದರೆ ಇಷ್ಟ. ರಿಯಲ್ ಲೈಫ್‌ನ ಬಗ್ಗೆ ಮಾತನಾಡುವ, ವಾಸ್ತವಕ್ಕೆ ಹತ್ತಿರವಾದ ವಿಷಯಗಳು ಇರುವ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ನನಗೆ ಇದೆ. ಸಾಮಾಜಿಕ ಕಳಕಳಿ ಪ್ರತಿ ವ್ಯಕ್ತಿಯಲ್ಲೂ ಇರುತ್ತದೆ. ನನ್ನ ವಯಸ್ಸಿನವರಿಗೆ ಅಥವಾ ಈಗಿನ ಯಾವುದೇ ನಾಗರಿಕನಿಗೆ ತಿಳಿಹೇಳುವ ಸಬ್ಜೆಕ್ಟ್ ಇರುವ ಪಾತ್ರ ನಿಭಾಯಿಸಬೇಕು ಎಂಬ ಆಸೆ ನನ್ನಲ್ಲಿ ಇದೆ.

* ಅಂತಹ ಪಾತ್ರಗಳು ಸಿಗುತ್ತವೆ ಎಂಬ ಭರವಸೆ ಇದೆಯೇ?

ಹೊಸಬರು ವಾಸ್ತವಕ್ಕೆ ಹತ್ತಿರವಾದ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಾಗಾಗಿ, ಅಂತಹ ‍ಪಾತ್ರಗಳು ಸಿಗುತ್ತವೆ ಎಂಬ ಭರವಸೆ ಇದೆ.

* ಮಹಿಳೆಯನ್ನು ಕೇಂದ್ರೀಕರಿಸಿಕೊಂಡ, ಅಂದರೆ ಮಹಿಳೆಯೇ ‘ನಾಯಕ’ ಆಗಿರುವ ಮಾಸ್‌ ಸಿನಿಮಾಗಳು ಕನ್ನಡದಲ್ಲಿ ಹೆಚ್ಚು ಹೆಚ್ಚು ಬರಬಹುದೇ?

ಅದರ ಬಗ್ಗೆ ಮಾತನಾಡಲು ನಾನು ಸೂಕ್ತ ವ್ಯಕ್ತಿಯಲ್ಲ. ಆದರೆ, ಹೆಣ್ಣಾಗಿ ನನಗೊಂದು ಆಸೆ ಇದೆ. ಅಂತಹ ಸಿನಿಮಾಗಳನ್ನು ಜನ ಸ್ವೀಕರಿಸುವಂತೆ ಆಗಬೇಕು. ‘ನನ್ನ ಪ್ರಕಾರ’ದಲ್ಲಿ ಕಥೆಯೇ ಹೀರೊ ಆಗಿತ್ತು. ಹೆಣ್ಣು ಮಕ್ಕಳನ್ನು ಕೇಂದ್ರವಾಗಿ ಇಟ್ಟುಕೊಂಡು ಒಳ್ಳೊಳ್ಳೆಯ ಸಿನಿಮಾ ಮಾಡಬಹುದು. ಆದರೆ, ಹಾಗೆ ಕಥೆ ಹೆಣೆಯುವ ಸೂಕ್ಷ್ಮಮತಿಗಳು ಬೇಕು.

* ಇದುವರೆಗಿನ ಸಿನಿಮಾ ಯಾನದಲ್ಲಿ ಖುಷಿ ಇದೆಯಾ, ನಿರಾಸೆ ಆಗಿದೆಯಾ?

ಸಾಮಾನ್ಯ ಕುಟುಂಬದ, ಹುಬ್ಬಳ್ಳಿ ಮೂಲದ ಹುಡುಗಿ ನಾನು. ಈವರೆಗೆ ಸಿಕ್ಕಿದ ಪಾತ್ರಗಳ ಬಗ್ಗೆ ಖುಷಿ ಇದೆ. ನನಗೆ ಸಿಕ್ಕಿದ ಪಾತ್ರಗಳನ್ನು ಖುಷಿಯಿಂದ ಅನುಭವಿಸಿ, ನಿಭಾಯಿಸುತ್ತೇನೆ. ಆದರೆ ನನ್ನಲ್ಲಿ ಇನ್ನೂ ಹಸಿವು ಇದೆ. ನಾನು ಇನ್ನೂ ಒಳ್ಳೆಯ ಪಾತ್ರಗಳನ್ನು ಮಾಡಬಲ್ಲೆ ಎಂಬ ಭರವಸೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT