ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ನಲ್ಲಿ ಈ ವಸ್ತುಗಳಿದ್ದರೆ ರಶ್ಮಿಕಾ ಮಂದಣ್ಣ ಕದ್ದೇ ಕದಿಯುತ್ತಾರಂತೆ!

ಬಾಲಿವುಡ್‌, ಹಾಲಿವುಡ್‌ನಲ್ಲಿ ನಟಿಸುವ ಆಸೆ ತೋಡಿಕೊಂಡ ರಶ್ಮಿಕಾ
Last Updated 22 ಸೆಪ್ಟೆಂಬರ್ 2020, 7:17 IST
ಅಕ್ಷರ ಗಾತ್ರ

‘ಕರ್ನಾಟಕ ಕ್ರಷ್’ ರಶ್ಮಿಕಾ ಮಂದಣ್ಣ ಬಿಡುವು ಸಿಕ್ಕಿದಾಗಲೆಲ್ಲಾ ಅಭಿಮಾನಿಗಳ ಜೊತೆಗೆ ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಸಂವಾದ ನಡೆಸುವುದು ಸರ್ವೇ ಸಾಮಾನ್ಯ. ಅಭಿಮಾನಿಗಳು ಕೇಳುವ ಪ್ರಶ್ನೆಗೆ ಅವರು ಮುಕ್ತವಾಗಿಯೇ ಉತ್ತರಿಸುತ್ತಾರೆ. ನಿನ್ನೆ ರಶ್ಮಿಕಾ ಟ್ವಿಟರ್‌ನಲ್ಲಿ ಮತ್ತೆ ಅಭಿಮಾನಿಗಳ ಜೊತೆಗೆ ಮುಖಾಮುಖಿಯಾಗಿದ್ದಾರೆ. ಅವರ ಪ್ರಶ್ನೆಗಳಿಗೆ ಮುಕ್ತವಾಗಿಯೇ ಉತ್ತರಿಸಿದ್ದಾರೆ.

‘ಹೋಟೆಲ್‌ನಲ್ಲಿ ನೀವು ಯಾವ ವಸ್ತು ಕದ್ದಿದ್ದೀರಿ’ ಎಂಬ ಅಭಿಮಾನಿಯೊಬ್ಬರ ಪ್ರಶ್ನೆಗೆ, ‘ಹೋಟೆಲ್‌ನಲ್ಲಿ ನನಗೆ ಶಾಂಪು ಇಷ್ಟವಾದರೆ ಅದನ್ನು ಕದಿಯದೇ ಬಿಡುವುದಿಲ್ಲ. ಒಮ್ಮೆ ನಾನು ಪಿಲ್ಲೊ ಕವರ್‌ ಕದ್ದಿದೆ. ಇಂದಿಗೂ ನನಗೆ ಆ ಅಪರಾಧಿ ಪ್ರಜ್ಞೆ ಕಾಡುತ್ತಿದೆ’ ಎಂದು ಉತ್ತರಿಸಿದ್ದಾರೆ ರಶ್ಮಿಕಾ.

ವೈಯಕ್ತಿಕ ಜೀವನ ಮತ್ತು ವೃತ್ತಿಬದುಕಿನಲ್ಲಿ ಉನ್ನತ ಹಂತಕ್ಕೆ ತಲುಪುವ ಆಸೆ ಅವರಿಗೆ ಇದೆಯಂತೆ. ‘ನನಗೆ ಯಾವುದೇ ಮಿತಿಗಳಿಲ್ಲ. ಬಾಲಿವುಡ್‌ ಮತ್ತು ಹಾಲಿವುಡ್‌ನಲ್ಲೂ ಕೆಲಸ ಮಾಡಬೇಕೆಂಬ ಆಸೆ ಇದೆ. ಆ ಆಸೆ ಈಡೇರುತ್ತದೆಯೇ ಎಂಬ ಕಾತರದಲ್ಲಿದ್ದೇನೆ. ಚಿತ್ರರಂಗದಲ್ಲಿ ನಾನು ಈಗ ಅಂಬೆಗಾಲು ಇಡುತ್ತಿರುವೆ’ ಎಂದಿದ್ದಾರೆ.

ರಶ್ಮಿಕಾಗೆ ಇರುವ ಕೆಟ್ಟ ಹವ್ಯಾಸವು ಸಂವಾದದ ವೇಳೆ ಬಯಲಾಗಿದೆ. ಪ್ರತಿಯೊಂದಕ್ಕೂ ನಗುವುದೇ ಅವರ ಕೆಟ್ಟ ಹವ್ಯಾಸವಂತೆ. ‘ನಾನು ಯಾರಿಗಾದರೂ ‘ಇಲ್ಲ’ ಎಂದು ಹೇಳುವಾಗಲೂ ನಗುತ್ತಲೇ ಹೇಳುತ್ತೇನೆ. ಆಗ ಜನರು ನನ್ನ ವರ್ತನೆ ನೋಡಿ ಗೊಂದಲಕ್ಕೀಡಾಗುತ್ತಾರೆ. ನಾನು ಕೆಲವೊಮ್ಮೆ ಒತ್ತಡಕ್ಕೆ ಒಳಗಾಗುತ್ತೇನೆ. ಆಗ ನಾನು ವಿಲಕ್ಷಣವಾಗಿ ವರ್ತಿಸುವೆ. ಆಗ ನಾನು ನನ್ನನ್ನು ಅನ್ಯಗ್ರಹದ ಜೀವಿ ಎಂದು ಭಾವಿಸಿಕೊಳ್ಳುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಪ್ರತಿದಿನವೂ ಅವರು ಐಪಿಎಲ್‌ ವೀಕ್ಷಣೆ ಮಾಡುತ್ತಾರಂತೆ. ಆದರೆ, ಅವರು ಯಾವುದೇ ಕ್ರಿಕೆಟ್‌ ತಂಡಕ್ಕೂ ಬೆಂಬಲ ನೀಡಲು ಸಿದ್ಧವಿಲ್ಲ. ‘ಈ ಸೀಸನ್‌ನಲ್ಲಿ ಯಾವ ತಂಡ ಗೆಲ್ಲುತ್ತದೆ ಎಂದು ನನಗೆ ಊಹೆ ಮಾಡಲು ಬರುವುದಿಲ್ಲ. ಆದರೆ, ಎಲ್ಲಾ ತಂಡಗಳಿಗೂ ಶುಭಾಶಯ ಕೋರುತ್ತೇನೆ’ ಎಂದಿದ್ದಾರೆ.

‘ನಾನು ಚಿತ್ರರಂಗ ಪ್ರವೇಶಿಸಿ ದೀರ್ಘ ಸಮಯ ಆಗಿಲ್ಲ. ಆದರೆ, ಹಲವು ಸ್ಟಾರ್‌ ನಟರ ಜೊತೆಗೆ ನಟಿಸಿದ್ದೇನೆ ಎಂದರೆ ನನಗೆ ನಂಬಲು ಆಗುತ್ತಿಲ್ಲ. ಅಭಿಮಾನಿಗಳೊಟ್ಟಿಗೆ ಸಂವಾದ ನಡೆಸುವುದು ನನಗೆ ನಿಜಕ್ಕೂ ರೋಮಾಂಚನವಾಗುತ್ತದೆ. ಜೊತೆಗೆ, ಅದು ಸಂತಸದ ಕ್ಷಣವೂ ಹೌದು’ ಎಂದು ಹೇಳಿದ್ದಾರೆ.‌

‘ನನಗೆ ಪ್ರತಿದಿನವೂ ಪರೀಕ್ಷೆಯೇ ದಿನವಾಗಿದೆ. ಸ್ಕ್ರಿಪ್ಟ್ ಓದಿಕೊಂಡು ಡೈಲಾಗ್‌ ಕಲಿಯುವುದು ನಡೆಯುತ್ತಲೇ ಇರುತ್ತದೆ. ಇದು ಕೆಲವೊಮ್ಮೆ ಒತ್ತಡ ಎನಿಸುತ್ತದೆ. ಆದರೆ, ನನಗದು ಥ್ರಿಲ್‌ ಆಗಿರುತ್ತದೆ. ಇಡೀ ಚಿತ್ರತಂಡ ನನ್ನ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದಾಗ ಖುಷಿಯಾಗುತ್ತದೆ’ ಎಂದಿದ್ದಾರೆ.

ಒತ್ತಡ ನಿವಾರಣೆಗೆ ರಶ್ಮಿಕಾ ಸಂಗೀತ ಕೇಳುತ್ತಾರಂತೆ. ‘ಕುಣಿಯುವುದೆಂದರೆ ನನಗೆ ಹುಚ್ಚು. ಒತ್ತಡ ನಿವಾರಣೆಗೆ ‘ಬಿಟಿಎಸ್‌’ ಬ್ಯಾಂಡ್‌ ತಂಡದ ಸಂಗೀತ ಕೇಳುತ್ತೇನೆ. ಏಳು ಹುಡುಗರಿರುವ ಈ ದಕ್ಷಿಣ ಕೊರಿಯಾದ ಬ್ಯಾಂಡ್‌ ತಂಡದ ಸಂಗೀತ ಕೇಳುವುದೆಂದರೆ ಇಷ್ಟ. ನಾನು ಈ ಬ್ಯಾಂಡ್‌ನ ಅಭಿಮಾನಿಯೂ ಹೌದು. ಐಸ್‌ಕ್ರೀಮ್‌ ಎಂದರೆ ನನಗಿಷ್ಟ’ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT